ವಿನೋದ್ ರಾಜ್ ತಂದೆ ಯಾರು? ಸರ್ಕಾರಿ ದಾಖಲೆ ಮುಂದಿಟ್ಟ ಎನ್. ಆರ್ ರಮೇಶ್
ನಟಿ ಲೀಲಾವತಿ ಗಂಡ ಯಾರು? ವಿನೋದ್ ರಾಜ್ ಅವರ ತಂದೆ ಯಾರು? ಇದು ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ವಿವಾದವಾಗಿಯೇ ಉಳಿದುಬಿಟ್ಟಿರುವ ಪ್ರಶ್ನೆಗಳು. ಈ ಬಗ್ಗೆ ಮಾತನಾಡಲು ಮಹಾಲಿಂಗ ಭಾಗವತರ್, ಲೀಲಾವತಿ ಅಥವಾ ಡಾ. ರಾಜ್‌ಕುಮಾರ್ ನಮ್ಮೊಂದಿಗೆ ಇಲ್ಲ. ಆದರೂ ಈ ಬಗ್ಗೆ ಪದೇ ಪದೆ ಚರ್ಚೆ ಆಗುತ್ತಲೇ ಇದೆ.
9 ವರ್ಷಗಳ ಹಿಂದೆ ರವಿ ಬೆಳಗೆರೆ ಬರೆದ 'ರಾಜ್ ಲೀಲಾ ವಿನೋದ' ಪುಸ್ತಕ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಲೀಲಾವತಿಯವರು ಹೇಳಿದ್ದ ವಿಚಾರಗಳನ್ನು ಅದರಲ್ಲಿ ಬೆಳಗೆರೆ ದಾಖಲಿಸಿದ್ದರು. ಆದರೆ ನೇರವಾಗಿ ಲೀಲಾವತಿ ಈ ಬಗ್ಗೆ ಮಾತನಾಡಲಿಲ್ಲ. 2 ವರ್ಷಗಳ ಹಿಂದೆ ದಿನಗಳ ಹಿಂದೆ ಅಣ್ಣಾವ್ರಿಗೆ ಆಪ್ತರಾಗಿದ್ದ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಈ ಬಗ್ಗೆ ಪೋಸ್ಟ್ ಮಾಡಿ ಮತ್ತೆ ಚರ್ಚೆ ಹುಟ್ಟುಹಾಕಿದ್ದರು. ಈ ಬಗ್ಗೆ ಯೂಟ್ಯೂಬ್ ಚಾನಲ್‌ಗಳಲ್ಲಿ ಸಹ ಮಾತನಾಡಿದ್ದರು.

ವಿನೋದ್ ರಾಜ್ ತಂದೆ ಯಾರು? ಲೀಲಾವತಿ ಅವರ ಗಂಡ ಯಾರು? ಎಂದು ಅಣ್ಣಾವ್ರ ಕಟ್ಟಾಭಿಮಾನಿ ಎನ್. ಆರ್ ರಮೇಶ್ ಒಂದಷ್ಟು ದಾಖಲೆಗಳನ್ನು ಮುಂದಿಡುತ್ತಿದ್ದಾರೆ. ಟೋಟಲ್ ಕನ್ನಡ ಯೂಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ವಿವರಣೆ ನೀಡುವ ಪ್ರಯತ್ನ ಮಾಡಿದ್ದಾರೆ. ಅಣ್ಣಾವ್ರ ಚಾರಿತ್ರ್ಯವಧೆ ಮಾಡಲಾಗುತ್ತದೆ, ದಾಖಲೆಗಳಿಲ್ಲದೇ ಸುಳ್ಳು ಆರೋಪ ಮಾಡುತ್ತಿದ್ದಾರೆ, ಕೆಲವರು ಇದೆಲ್ಲಾ ಸತ್ಯ ಇದ್ದರೂ ಇರಬಹುದು ಎಂದು ಭಾವಿಸಿದ್ದಾರೆ. ಆದರೆ ಅದೆಲ್ಲಾ ಸುಳ್ಳು, ಅದಕ್ಕೆ ದಾಖಲೆ ಇಲ್ಲಿದೆ ನೋಡಿ ಎಂದು ಹೇಳಿದ್ದಾರೆ.
ಮೇನಕಾ ಪತ್ರಿಕೆಯಲ್ಲಿ ಬಂದ ಲೇಖ, ದ್ವಾರಕೀಶ್ ಮಾಡಿದ ಷಡ್ಯಂತ್ರ, ರವಿ ಬೆಳಗೆರೆ ಫೋಟೊಶಾಪ್ ಮಾಡಿ ಎಡಿಟ್ ಮಾಡಿ ಫೋಟೊ ಸಿದ್ಧಪಡಿಸಿ 'ರಾಜ್ ಲೀಲಾ ವಿನೋದ' ಪುಸ್ತಕದಲ್ಲಿ ಹಾಕಿ ಇಂತಾದೊಂದು ಚರ್ಚೆ ಹುಟ್ಟುವಂತೆ ಮಾಡಿದ್ದರು. ಅಣ್ಣಾವ್ರು ಯಾವತ್ತು ಈ ಬಗ್ಗೆ ಮಾತನಾಡಲಿಲ್ಲ. ಡಾ. ರಾಜ್‌ಕುಮಾರ್ ಅವರನ್ನು ಈ ವಿಚಾರದಲ್ಲಿ ಖಳನಂತೆ ತೋರಿಸುವ ಪ್ರಯತ್ನ ಮಾಡಲಾಗಿತ್ತು. ಈ ಬಗ್ಗೆ ಅಧಿಕೃತ ದಾಖಲೆ ಸಂಗ್ರಹಿಸುವ ಪ್ರಯತ್ನ ಮಾಡಿದ್ದೇವೆ. ಸರ್ಕಾರಿ ದಾಖಲೆಗಳೇ ಸಿಕ್ಕಿದೆ ಎನ್. ಆರ್ ರಮೇಶ್ ಇದನ್ನು ಪ್ರಪಂಚಕ್ಕೆ ತಿಳಿಸುವುದು ಅಣ್ಣಾವ್ರ ಅಭಿಮಾನಿಯಾಗಿ ನನ್ನ ಕರ್ತತ್ಯ ಎಂದು ಸ್ಪಷ್ಟನೆ ನೀಡಿದ್ದಾರೆ.

ದಾಖಲೆಗಳ ಪ್ರಕಾರ ಮಹಾಲಿಂಗ ಭಾಗವತರ್ ಹೆಸರಾಂತ ರಂಗಭೂಮಿ ಕಲಾವಿದ. ಅವರದ್ದೇ ನಾಟಕ ಕಂಪನಿ ನಡೆಸುತ್ತಿದ್ದರು. ಅದರಲ್ಲಿ ಲೀಲಾವತಿ ನಟಿಸುತ್ತಿದ್ದರು. ತಮಿಳುನಾಡಿನಲ್ಲಿ ಲೀಲಾವತಿ ಖರೀದಿಸಿದ್ದ ಆಸ್ತಿಯ ದಾಖಲೆ ಪತ್ರಗಳಲ್ಲಿ ಅವರ ಪತಿ ಮಹಾಲಿಂಗ ಭಾಗವತರ್ ಎಂದು ನಮೂದಿಸಲಾಗಿದೆ. ಆ ದಾಖಲೆಯನ್ನು ನಾನು ಈಗ ಹುಡುಕಿ ತಂದಿದ್ದೀನಿ. ಲೀಲಾವತಿ ಸಾಯುವ ಒಂದು ವರ್ಷದ ಹಿಂದೆ ತೀರುವಳಿ ಪತ್ರ ಮಾಡಿಸಿದ್ದರು. ಅದರಲ್ಲಿ ತಮ್ಮ ನಿಜವಾದ ಹೆಸರು, ಗಂಡನ ಮಾಹಿತಿ ನೀಡಿದ್ದಾರೆ.
ಈ ದಾಖಲೆ ಪತ್ರದಲ್ಲಿ ಲೀಲಾವತಿ ಗಂಡ ಮಹಾಲಿಂಗ ಭಾಗವತರ್, ವಿನೋದ್ ರಾಜ್ ತಂದೆ ಮಹಾಲಿಂಗ ಭಾಗವತರ್ ಎಂದು ನಮೂದಿಸಿರುವುದನ್ನು ಎನ್. ಆರ್ ರಮೇಶ್ ತೋರಿಸಿದ್ದಾರೆ. ಲೀಲಾವತಿಯವರ ತಮಿಳುನಾಡಿನ ಜಮೀನಿನಲ್ಲೇ ಮಹಾಲಿಂಗ ಭಾಗವತರ್ ಸಮಾಆಧಿ ಇದೆ. ಅದರ ಮೇಲೆ ಹಾಕಿರುವ ಕಲ್ಲಿನ ಮೇಲೆ ಅವರ ಹೆಸರು ಇರುವ ಫೋಟೊವನ್ನು ಮುಂದಿಟ್ಟಿದ್ದಾರೆ.
ಲೀಲಾವತಿ ಅವರ ನಿಜವಾದ ಹೆಸರು ಲೀನಾ ಸಿಕ್ವೇರಾ. ಲೀಲಾವತಿ ಹಾಗೂ ಮಹಾಲಿಂಗ ಭಾಗವತರ್ 8 ವರ್ಷಗಳ ಕಾಲ ಒಟ್ಟಿಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. 1962ರಲ್ಲಿ ಇಬ್ಬರ ವಿವಾಹವಾಗಿತ್ತು. ಮಹಾಲಿಂಗ ಭಾಗವತರ್ ಅವರಿಗೆ ಲೀಲಾವತಿ 3ನೇ ಪತ್ನಿ. 1967ರಲ್ಲಿ ದಂಪತಿಗೆ ವಿನೋದ್ ರಾಜ್ ಜನನವಾಯಿತು. ಲೀಲಾವತಿಯವರ ಅದೇ ಮದ್ರಾಸ್ ಜಮೀನಿನ ತೋಟದ ಮನೆಯಲ್ಲಿ ಮಹಾಲಿಂಗ ಭಾಗವತರ್ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅಣ್ಣಾವ್ರ ಜೊತೆ 'ಭೂದಾನ', 'ಮಹಾತ್ಮ ಕಬೀರ್' ಸೇರಿ ಕೆಲ ಸಿನಿಮಾಗಳಲ್ಲಿ ಮಹಾಲಿಂಗ ಭಾಗವತರ್ ನಟಿಸಿದ್ದರು ಎಂದು ಎನ್. ಆರ್ ರಮೇಶ್ ತಿಳಿಸಿದ್ದಾರೆ.
ಬೇರೆ ಬೇರೆ ಕಾರಣಗಳಿಗಾಗಿ ಲೀಲಾವತಿ ಎಲ್ಲೂ ತಮ್ಮ ಪತಿ ಮಹಾಲಿಂಗ ಭಾಗವತರ್ ಎಂದು ಹೇಳಿಲ್ಲ. ಅದನ್ನು ಕೊನೆಗೂ ಒಪ್ಪಿಕೊಳ್ಳಲೇ ಇಲ್ಲ. ವಿನೋದ್ ರಾಜ್ ತಮ್ಮ ದಾಖಲೆಗಳಲ್ಲಿ ತಾಯಿ ಹೆಸರು ನಮೂದಿಸಿದ್ದಾರೆ, ತಂದೆ ಹೆಸರು ಯಾಕೆ ಹಾಕಿಲ್ಲ ಯಾಕೆ? ಲೀಲಾವತಿ ಅವರು ಕೂಡ ಪತಿ ಹೆಸರಿನ ಬದಲು ಸಾಕು ತಂದೆ ಹೆಸರನ್ನು ದಾಖಲೆಗಳಲ್ಲಿ ತೋರಿಸಿದ್ದಾರೆ ಯಾಕೆ? ಎಂದು ಎನ್. ಆರ್ ರಮೇಶ್ ಪ್ರಶ್ನಿಸಿದ್ದಾರೆ.
ಇಷ್ಟೆಲ್ಲಾ ದಾಖಲೆ ಒದಗಿಸಿದ ಮೇಲೆ ಯಾರೂ ಕೂಡ ಅಣ್ಣಾವ್ರು, ಲೀಲಾವತಿ ಹಾಗೂ ಅಣ್ಣಾವ್ರು ವಿನೋದ್ ರಾಜ್‌ಗೆ ಸಂಬಂಧ ಕಲ್ಪಿಸಿ ತಲೆಬುಡ ಇಲ್ಲದಂತೆ ಮಾತನಾಡಬಾರದು. ವಿನೋದ್ ರಾಜ್ ಸಹ ಈ ಬಗ್ಗೆ ಗೊಂದಲದ ಹೇಳಿಕೆ ಕೊಡಬಾರದು. ಅದು ಮುಂದುವರೆದರೆ ಮಾನನಷ್ಟ ಮೊಕದ್ದಮೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದು ಎನ್. ಆರ್ ರಮೇಶ್ ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications











