Pan-Indian films : ಪ್ಯಾನ್ ಇಂಡಿಯಾ ಸಿನಿಮಾಗಳೆಂದರೆ ಯಾವುದು? ಎಲ್ಲಾ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲ!
ಇದುವರೆಗೆ ಭಾರತೀಯ ಸಿನಿಮಾರಂಗವನ್ನು ಬಾಲಿವುಡ್ ವರ್ಸಸ್ ಇತರರು ಎಂಬಂತೆ ನೋಡಲಾಗುತ್ತಿತ್ತು. ಆದರೆ ಪ್ಯಾನ್ ಇಂಡಿಯಾ ಸಿನಿಮಾಗಳ ಭಾರಿ ಯಶಸ್ಸು ಸಿನಿಮಾರಂಗದ ಆಲೋಚನಾ ದಿಕ್ಕನ್ನು ಬದಲಾಯಿಸಿತು. ಭಾರತೀಯ ಸಿನಿಮಾ ರಂಗ ಎಂದರೆ ಅದನ್ನು ಬಾಲಿವುಡ್ ಅಂತಲೇ ಪರಿಗಣಿಸಲಾಗುತ್ತಿತ್ತು. ಆದರೆ ಈಗ ಬಾಲಿವುಡ್ ಸಿನಿಮಾರಂಗವನ್ನು ಭಾರತೀಯ ಸಿನಿಮಾ ರಂಗದ ಒಂದು ಭಾಗ ಮಾತ್ರ ಅದೊಂದೇ ಭಾರತೀಯ ಸಿನಿಮಾರಂಗ ಅಲ್ಲ ಎಂಬ ಸ್ಥಿತಿಗೆ ಪ್ಯಾನ್ ಇಂಡಿಯಾ ಸಿನಿಮಾಗಳು ತಂದು ನಿಲ್ಲಿಸಿದೆ.
ಈಗ ಬಾಲಿವುಡ್ ಎಂಬ ಆಕರ್ಷಣೆ ಉಳಿದಿಲ್ಲ ಬದಲಾಗಿ ಉಳಿದಿರುವುದು ಪ್ಯಾನ್ ಇಂಡಿಯಾ ಸಿನಿಮಾ ಎಂಬ ಆಕರ್ಷಣೆ. ಹೀಗಾಗಿ ಮುಂದಿನ ಸೂಪರ್ ಸ್ಟಾರ್ ಗಳು ಕೇವಲ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಗಳು ಮಾತ್ರ ಆಗಿರುತ್ತಾರೆ. ಈಗ ಭಾರತೀಯ ಸಿನಿಮಾ ರಂಗದಲ್ಲಿ ಕೂಡ ಬಾಲಿವುಡ್ ವರ್ಸಸ್ ಸೌತ್ ಎಂಬುದು ಮುಗಿದು ಇಂಡಿಯನ್ ಸಿನಿಮಾ ಎಂಬ ದೃಷ್ಟಿಕೋನದಲ್ಲಿ ಸಿನಿಮಾಗಳನ್ನು ನೋಡಲಾಗುತ್ತಿದೆ.
ಕಳೆದ ಐದಾರು ವರ್ಷಗಳಿಂದ ಭಾರತೀಯ ಸಿನಿಮಾ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಹೆಸರು ಪ್ಯಾನ್ ಇಂಡಿಯಾ ಸಿನಿಮಾ. ಇಷ್ಟಕ್ಕೂ ಪ್ಯಾನ್ ಇಂಡಿಯಾ ಸಿನಿಮಾ ಅಂದ್ರೆ ಏನು? ಪ್ಯಾನ್ ಇಂಡಿಯಾ ಸಿನಿಮಾ ಆಗಲು ನಿಜಕ್ಕೂ ಕೂಡ ಆ ಸಿನಿಮಾದಲ್ಲಿ ಏನಿರಬೇಕು? ಮೊದಲನೇದಾಗಿ ಸಿನಿಮಾದ ಕಂಟೆಂಟ್ ಯಾವುದೋ ಒಂದು ರೀಜನಲ್ ಅಥವಾ ಭಾಷೆಗೆ ಸೀಮಿತವಾಗಿರಬಾರದು. ಕನ್ನಡದಲ್ಲೇ ಮಾಡಿದರು ತೆಲುಗಿನಲ್ಲಿ ಸಿನಿಮಾ ಮಾಡಿದರು ಕೂಡ ಅದು ಭಾರತದಲ್ಲಿನ ಎಲ್ಲಾ ಸಿನಿ ರಸಿಕರನ್ನು ತಲುಪುವಂತೆ ಇರಬೇಕು. ಕಥೆ ಹೇಳುವ ವಿಧಾನ ಹೊಸತನದಿಂದ ಕೂಡಿರಬೇಕು. ಮೇಕಿಂಗ್ ಅದ್ದೂರಿತನದಿಂದ ಕೂಡಿರಬೇಕು. ಜೊತೆಗೆ ಅದನ್ನು ದೊಡ್ಡಮಟ್ಟದಲ್ಲಿ ಹಣ ಹೂಡಿ ಪಬ್ಲಿಸಿಟಿ ಮಾಡುವ ಕೆಪ್ಯಾಸಿಟಿ ಕೂಡ ಚಿತ್ರತಂಡ ಹೊಂದಿರಬೇಕು. ಜೊತೆಗೆ ಎಲ್ಲಾ ಭಾಷೆಗಳಿಗೂ ರೀಚ್ ಆಗುವ ದೃಷ್ಟಿಯಿಂದ ಅಲ್ಲಿನ ಪ್ರಮುಖ ಕಲಾವಿದರು ಕೂಡ ಈ ಚಿತ್ರದ ಒಂದು ಭಾಗವಾದ ಬೇಕಾಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಚಿತ್ರದ ಮೇಕಿಂಗ್ 'ನಾ ಭೂತೋ ನ ಭವಿಷ್ಯತಿ' ಎಂಬಂತೆ ಇರಬೇಕು.

ದುಡ್ಡು ಹಾಕಿದ ಎಲ್ಲಾ ಸಿನಿಮಾಗಳು ಪ್ಯಾನ್ ಇಂಡಿಯಾ ಆಗಲ್ಲ
ನೂರಾರು ಕೋಟಿ ಹಣ ಹೂಡಿ ಸಿನಿಮಾ ಮಾಡಿದ ತಕ್ಷಣಕ್ಕೆ ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಅಂತ ಪರಿಗಣಿಸಲು ಸಾಧ್ಯವಿಲ್ಲ. ಮೊದಲೇ ಹೇಳಿದಂತೆ ಸಿನಿಮಾಗೆ ಒಂದು ಯುನಿವರ್ಸಲ್ ಅಪೀಲ್ ಇರಬೇಕು. ಚಿತ್ರಕ್ಕಾಗಿ ಚಿತ್ರದ ನಿರ್ದೇಶಕ ಮತ್ತು ನಟ-ನಟಿಯರು ತಾಂತ್ರಿಕ ವರ್ಗದವರು ಪೂರ್ತಿಯಾಗಿ ಡೆಡಿಕೇಟ್ ಆಗಬೇಕು ಮತ್ತು ಹೆಚ್ಚು ಸಮಯ ಕೂಡ ಇಂತಹ ಚಿತ್ರಗಳನ್ನು ಮಾಡಲು ತೆಗೆದುಕೊಳ್ಳುತ್ತದೆ. ಹೀಗಾಗಿ ಮೇಕಿಂಗ್ ವಿಚಾರದಲ್ಲಿ ಯಾವುದೇ ತರದ ಕಾಂಪ್ರಮೈಸ್ ಮಾಡಿಕೊಳ್ಳಲು ಸಾಧ್ಯವಿಲ್ಲ. 'ಬಾಹುಬಲಿ' ಸಿನಿಮಾಗಾಗಿ ಪ್ರಭಾಸ್ ಐದು ವರ್ಷ ಮೀಸಲಿಟ್ಟರು ಅದೇ ರೀತಿಯಲ್ಲಿ ಯಶ್ 'ಕೆಜಿಎಫ್ 'ಚಿತ್ರಕ್ಕಾಗಿ ಕಳೆದ ನಾಲ್ಕು ವರ್ಷದಿಂದ ಮತ್ತೊಂದು ಚಿತ್ರವನ್ನು ಕೂಡ ಒಪ್ಪಿಕೊಂಡಿಲ್ಲ. 'ಬಾಹುಬಲಿ'ಗಾಗಿ ಪ್ರಭಾಸ್ ತನ್ನ ದೇಹದ ತೂಕವನ್ನು ಕೂಡ ಸಾಕಷ್ಟು ಹುರಿತಗಳಿಸಿಕೊಂಡರು. ಯಶ್ ರಾಕಿ ಬಾಯ್ ಆಗಿ ಕಾಣಿಸಿಕೊಳ್ಳುವುದಗೋಸ್ಕರ ಸಾಕಷ್ಟು ಡೆಡಿಕೇಟ್ ಮಾಡಿದ್ದಾರೆ. ರಾಜಮೌಳಿ 'ಬಾಹುಬಲಿ' ಸರಣಿ ಮಾಡುವುದಕ್ಕೆ 5 ವರ್ಷ ತೆಗೆದುಕೊಂಡರು ಆನಂತರ RRR ಚಿತ್ರ ಮಾಡುವುದಕ್ಕೆ 5 ವರ್ಷ ಸಮಯ ತೆಗೆದುಕೊಂಡಿದ್ದಾರೆ. ಕೆಜಿಎಫ್ ಮುಗಿಯುವವರೆಗೂ ಪ್ರಶಾಂತ್ ನೀಲ್ ಮತ್ತೊಂದು ಪ್ರಾಜೆಕ್ಟ್ ಕೂಡ ಕೈಗೆ ತೆಗೆದುಕೊಂಡಿಲ್ಲ. ಹೀಗೆ ಪ್ರತಿ ನಿರ್ದೇಶಕರು ಮತ್ತು ನಟರು ತಮ್ಮನ್ನ ತಾವು ಪೂರ್ತಿಯಾಗಿ ಡೆಡಿಕೇಟ್ ಮಾಡಿಕೊಳ್ಳದೆ ಪ್ಯಾನ್ ಇಂಡಿಯಾ ಸಿನಿಮಾಗಳು ತಯಾರಾಗುವುದಿಲ್ಲ.

ಸಿನಿಮಾಗೊಂದು ಬ್ರ್ಯಾಂಡ್ ವ್ಯಾಲ್ಯೂ ಇರಬೇಕು
ಮೊದಲನೇಯದಾಗಿ ಪ್ಯಾನ್ ಇಂಡಿಯಾ ಸಿನಿಮಾ ಅನಿಸಿಕೊಳ್ಳಲು ಅತಿ ಮುಖ್ಯವಾಗಿ ಬೇಕಾದದ್ದು ಬ್ರ್ಯಾಂಡ್ ವ್ಯಾಲ್ಯೂ. ಜೊತೆಗೆ ಅದನ್ನು ಬೇರೆ ಪ್ರದೇಶಗಳಿಗೆ ಹೋಗಿ ಮಾರಾಟ ಮಾಡುವಂತಹ ತಾಕತ್ತು ಅಂದರೆ ಸಿನಿಮಾದ ಮೇಕಿಂಗ್ ಅಷ್ಟೇ ಮುಖ್ಯವಾಗಿ ಅದರ ಮಾರ್ಕೆಟಿಂಗ್ ಕೂಡ ಬೇಕಾಗುತ್ತದೆ. ಸಿನಿಮಾದ ಡೈರೆಕ್ಟರ್ ಚಿತ್ರದ ನಾಯಕನಟ ಹೀಗೆ ಪ್ರತಿಯೊಬ್ಬರೂ ಕೂಡ ಅದರ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಬೇಕಾಗುತ್ತದೆ. ಸಿನಿಮಾ ಕೊನೆಯ ಹಂತಕ್ಕೆ ಬಂದಾಗ ಮಾರ್ಕೆಟಿಂಗ್ ಮಾಡುವುದಲ್ಲ ಬದಲಾಗಿ ಚಿತ್ರೀಕರಣ ಆರಂಭವಾದಾಗಲೇ ಅದನ್ನು ಎಲ್ಲಾ ಪ್ರದೇಶಗಳಲ್ಲಿ ಕೂಡ ತೆಗೆದುಕೊಂಡು ಹೋಗಿ ಮಾರ್ಕೆಟಿಂಗ್ ಶುರು ಮಾಡಬೇಕಾಗುತ್ತದೆ. ಆ ಸಿನಿಮಾದ ಬಗ್ಗೆ ಒಂದು ಕ್ರೇಜ್ ಅಲ್ಲಿ ಕೂಡ ಹುಟ್ಟಿ ಹಾಕಬೇಕಾಗುತ್ತದೆ.

ಪ್ಯಾನ್ ಇಂಡಿಯಾ ಸಕ್ಸಸ್ ಗೆ ಮಾನದಂಡವೇನು?
ಸಿನಿಮಾವೊಂದನ್ನು ಪ್ಯಾನ್ ಇಂಡಿಯಾ ಸಿನಿಮಾ ಅಂತ ಕರೆದು ಅದೊಂದು ಯಶಸ್ವಿಯಾದ ಚಿತ್ರವಾಗಿ ಪ್ಯಾನ್ ಇಂಡಿಯಾ ಸಕ್ಸಸ್ ಅಂತ ಹೇಳಬೇಕಾದರೆ ಚಿತ್ರ ಮೂಲ ಅವತರಣಿಕೆಯಲ್ಲಿ ಕನಿಷ್ಠ 150-200 ಕೋಟಿ ಗಳಿಕೆ ಮಾಡಬೇಕು. ಜೊತೆಗೆ ಇತರ ಭಾಷೆಗಳಲ್ಲಿ ಕೂಡ ಕನಿಷ್ಠ 30 ರಿಂದ 50 ಕೋಟಿ ಹಣ ಮಾಡಬೇಕು ಅತಿಮುಖ್ಯವಾಗಿ ಹಿಂದಿ ಮಾರ್ಕೆಟ್ ನಲ್ಲಿ ಅದು ಕನಿಷ್ಠ 100 ಕೋಟಿ ಹಣ ಕಾಣಬೇಕು. ವಿದೇಶಗಳಲ್ಲಿ ಚಿತ್ರ ಕನಿಷ್ಠ 30 ರಿಂದ 50 ಕೋಟಿ ಹಣ ಮಾಡಬೇಕಾಗುತ್ತದೆ. ಅಂದರೆ ಎಲ್ಲಾ ಭಾಷೆಗಳಲ್ಲಿ ಸೇರಿ ಕನಿಷ್ಠ 300 ಕೋಟಿ ಗಳಿಕೆಯನ್ನು ಮಾಡಿದಾಗ ಮಾತ್ರ ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಅಂತ ಪರಿಗಣಿಸಬಹುದು. ಬ್ರ್ಯಾಂಡ್ ವ್ಯಾಲ್ಯೂ ದೊಡ್ಡದಾದಷ್ಟು ಅದರ ಗಳಿಕೆ ಕೂಡ ದೊಡ್ಡದಾಗಿರುತ್ತದೆ.

ಪ್ಯಾನ್ ಇಂಡಿಯಾ ಸಿನಿಮಾ ಹೆಸರಿನಲ್ಲಿ ಕೈಸುಟ್ಟುಕೊಂಡವರು ಇದ್ದಾರೆ!
ಎಲ್ಲಾ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳು ಆಗಲು ಸಾಧ್ಯವಿಲ್ಲ, ಎಲ್ಲಾ ಸಿನಿಮಾಗಳಲ್ಲೂ ಯುನಿವರ್ಸಲ್ ಸಿನಿಮಾಗಳು ಅನಿಸಿಕೊಳ್ಳುವುದಿಲ್ಲ. ಯಶ್ ಅವರ ಮುಂದಿನ ಚಿತ್ರ 'ಕೆಜಿಎಫ್-2' ಅಷ್ಟೇ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರಶಾಂತ್ ನೀಲ್ ಅವರ 'ಸಲಾರ್' ಚಿತ್ರ 'ಕೆಜಿಎಫ್-2' ನಷ್ಟು ದೊಡ್ಡ ಕ್ಯಾನ್ವಾಸ್ ನಲ್ಲಿ ನೋಡುವುದಕ್ಕೆ ಸಾಧ್ಯವಾಗದೇ ಇರಬಹುದು. ಆದರೆ ಒಂದು ಸಲ ಪ್ಯಾನ್ ಇಂಡಿಯಾ ನಟ ಅಥವಾ ನಿರ್ದೇಶಕ ಅಂದುಕೊಂಡ ಮೇಲೆ ಅವರ ಚಿತ್ರಗಳ ಮೇಲೆ ನಿರೀಕ್ಷೆಗಳು ದೊಡ್ಡದಾಗುತ್ತದೆ ಮತ್ತು ಅವರ ಚಿತ್ರಗಳಿಗೆ ಕೂಡ ದೊಡ್ಡ ಮಟ್ಟದ ಮಾರ್ಕೆಟ್ ಇರುತ್ತದೆ. ಹೀಗಾಗಿಯೇ ಸಿನಿಮಾರಂಗದ ಬಹುತೇಕ ನಿರ್ಮಾಪಕರು- ನಿರ್ದೇಶಕರು ಮತ್ತು ನಟರು ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದಿದ್ದಾರೆ. ಹಾಗಂತ ಪ್ರತಿ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗೋದಿಲ್ಲ ಪ್ರತಿ ಸಿನಿಮಾ ಕೂಡ 'ಬಾಹುಬಲಿ', 'ಕೆಜಿಎಫ್,' 'ಪುಷ್ಪ', ಸರಣಿಗಳಂತೆ 'RRR' ಸಿನಿಮಾದಂತೆ ದೊಡ್ಡ ಮಟ್ಟದ ಯಶಸ್ಸನ್ನು ಕೂಡ ಕಾಣುವುದಿಲ್ಲ. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಎಂಬ ಹೆಗ್ಗಳಿಕೆ ಹೊರತಾಗಿ ಕೂಡ ಪ್ರಭಾಸ್ 'ಸಾಹೋ' ಆವರೇಜ್ ಸಿನಿಮಾ ಆಯ್ತು. ಇತ್ತೀಚಿಗೆ ಬಿಡುಗಡೆಗೊಂಡ 'ರಾಧೇಶ್ಯಾಮ್' ಇನ್ನಿಲ್ಲದಂತೆ ನೆಲಕಚ್ಚಿತು. 'ಆರ್ ಆರ್ ಆರ್' ಚಿತ್ರದ ಮೂಲಕ ಸಾಕಷ್ಟು ಕ್ರೇಜ್ ಗಳಿಸಿಕೊಂಡಿರುವ ರಾಮ್ ಚರಣ್ ತೇಜ ಅವರ ತಂದೆ ಚಿರಂಜೀವಿ ಅವರ ಜೊತೆ ಅಭಿನಯಿಸುತ್ತಿರುವ 'ಆಚಾರ್ಯ' ಚಿತ್ರಕ್ಕೆ 'ಆರ್ ಆರ್ ಆರ್' ಚಿತ್ರದ ಕ್ರೇಜ್ ಹೊರತಾಗಿಯೂ ಕೂಡ ಪ್ಯಾನ್ ಇಂಡಿಯಾ ಕ್ರೇಜ್ ಸಿಕ್ಕಿಲ್ಲ. ಅದೂ ಅಲ್ಲದೆ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ', ವಿಜಯ್ ಅಭಿನಯದ 'ಪುಲಿ' ಇದೆಲ್ಲವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಇನ್ನಿಲ್ಲದಂತೆ ನೆಲಕಚ್ಚಿರುವ ಕೆಲವು ಉದಾಹರಣೆಗಳು. ಇತ್ತೀಚೆಗೆ ಅಜಿತ್ ಅಭಿನಯದ 'ವಾಲಿಮೈೈ', ವಿಜಯ್ ಅಭಿನಯದ 'ಬೀಸ್ಟ್ಟ್' ಚಿತ್ರಗಳನ್ನು ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳು ಅಂತಲೇ ಲೇಬಲ್ ಹಾಕಿ ಬಿಡುಗಡೆ ಮಾಡಲಾಯಿತು ಆದರೆ ಎರಡು ಚಿತ್ರಗಳು ತಮಿಳು ಹೊರತಾಗಿ ಇತರ ಭಾಷೆಗಳಲ್ಲಿ ಜನಸಾಮಾನ್ಯರನ್ನು ಯಾವುದೇ ತರದಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ.

ಬಹು ನಿರೀಕ್ಷಿತ ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾಗಳು ಯಾವುದು?
'ಕೆಜಿಎಫ್ -2' ಚಿತ್ರ ಬಿಡುಗಡೆಯ ನಂತರ ಉಳಿಯುವ ಪ್ರಶ್ನೆ ಇಷ್ಟೊಂದು ನಿರೀಕ್ಷೆ ಹೊಂದಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಯಾವುದಾದರೂ ಇದೆಯೇ? ಭಾರತೀಯ ಸಿನಿಮಾರಂಗ ಅತ್ಯಂತ ಕಾತರದಿಂದ ಎದುರು ನೋಡುತ್ತಿದ್ದ ಎರಡು ದೊಡ್ಡ ಚಿತ್ರಗಳಾದ ಎಸ್. ಎಸ್. ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್-2' ಚಿತ್ರ ಬಿಡುಗಡೆಯಾಗಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿವೆ. ಈಗಿರುವ ಪ್ರಶ್ನೆ ಇವುಗಳ ನಂತರ ಮುಂದೆ ಯಾವುದಾದರೂ ಅಂತಹ ದೊಡ್ಡ ಚಿತ್ರ ಕಣ್ಣಮುಂದೆ ಇದೆಯೇ? ಸದ್ಯಕ್ಕೆ ತಯಾರಾಗುತ್ತಿರುವ ಚಿತ್ರಗಳು ಪಟ್ಟಿ ನೋಡಿದರೆ ಖಂಡಿತ ಇಲ್ಲ ಅಂತ ಹೇಳಬಹುದು.

ಹೊಸ ಪ್ಯಾನ್ ಇಂಡಿಯಾ ಸಿನಿಮಾಗಳು ತಡವಾಗಬಹುದು
ಪ್ರಶಾಂತ್ ನೀಲ್ ಅವರ 'ಸಲಾರ್' ಚಿತ್ರದ ಚಿತ್ರೀಕರಣ ಶೇಕಡ 40ರಷ್ಟು ಮುಗಿದಿದೆ ಇನ್ನೂ 60ರಷ್ಟು ಬಾಕಿ ಇದೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಬಹುದು ಆದರೆ ಇದನ್ನು 'ಕೆಜಿಎಫ್-2' ಜೊತೆಗೆ ಹೋಲಿಕೆ ಮಾಡಲಾಗದು. ಇನ್ನು ದೇಶದ ನಂಬರ್ ವನ್ ನಿರ್ದೇಶಕ ಅಂತಲೇ ಕರೆಸಿಕೊಳ್ಳುವ ಎಸ್ಎಸ್ ರಾಜಮೌಳಿ ಅವರ ಮುಂದಿನ ಚಿತ್ರದ ಚಿತ್ರೀಕರಣ ಕೂಡ ಈ ವರ್ಷ ನಡೆಯುವುದಿಲ್ಲ, ಚಿತ್ರೀಕರಣಕ್ಕೆ ಬರುವುದೇ ಮುಂದಿನ ವರ್ಷ. ಅದು ಬಿಡುಗಡೆ ಆಗುವುದ್ದಕ್ಕೆ ಮತ್ತೆ ಮೂರು ವರ್ಷ ಬೇಕಾಗುತ್ತದೆ. ಶಂಕರ್ ರಾಮ್ ಚರಣ್ ಕಾಂಬಿನೇಷನ್ ಚಿತ್ರ ಕೂಡ ಮುಂದಿನ ವರ್ಷ ಬಿಡುಗಡೆಯಾಗಬಹುದು. ನಾಗ್ ಅಶ್ವಿನ್- ಪ್ರಭಾಸ್ ಚಿತ್ರ 'ಪ್ರಾಜೆಕ್ಟ್ -ಕೆ' ಬಿಡುಗಡೆಯಾಗಲು ಸುಮಾರು ಎರಡು ವರ್ಷ ಇನ್ನೂ ಸಮಯ ಹಿಡಿಯುತ್ತದೆ.

'ಪುಷ್ಪ-2' ಚಿತ್ರೀಕರಣ ಕೂಡ ಆರಂಭಗೊಂಡಿಲ್ಲ- ವಿಕ್ರಾಂತ್ ರೋಣ ಬಿಡುಗಡೆಗೆ ಸಿದ್ಧವಾಗಿದೆ
ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಇದನ್ನು 'ಆರ್ ಆರ್ ಆರ್', 'ಕೆಜಿಎಫ್' ಜೊತೆಯಲ್ಲಿ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಲ್ಲು ಅರ್ಜುನ್ ಅಭಿನಯದ ಪುಷ್ಪ ಭಾಗ-1 ಸಾಕಷ್ಟು ಯಶಸ್ಸನ್ನು ಕಂಡಿದೆ ಹೀಗಾಗಿ 'ಪುಷ್ಪ-2' ಮೇಲೆ ನಿರೀಕ್ಷೆಗಳು ದೊಡ್ಡದಾಗಿದೆ. ಅಲ್ಲದೆ ಚಿತ್ರತಂಡದ ಮೇಲೆ ಈಗ ಸಾಕಷ್ಟು ಒತ್ತಡ ಕೂಡ ಇದೆ. 'ಕೆಜಿಎಫ್ -2' ಚಿತ್ರದ ಭರ್ಜರಿ ಯಶಸ್ಸಿನ ನಂತರ 'ಪುಷ್ಪ- 2' ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ಮಾಣ ವಿಚಾರದಲ್ಲಿ ಸಾಕಷ್ಟು ಬದಲಾವಣೆ ಮಾಡಲು ಚಿತ್ರತಂಡ ಮುಂದಾಗಿದೆ. 'ಪುಷ್ಪ-2' ಚಿತ್ರೀಕರಣ ಆರಂಭವಾಗಿಲ್ಲ ಇದು ಮುಂದಿನ ವರ್ಷದವರೆಗೂ ಸಿದ್ಧವಾಗುವ ಲಕ್ಷಣಗಳು ಇಲ್ಲ. ಇನ್ನು ಬಹುತೇಕರ ನಿರೀಕ್ಷೆ ಇರುವ 'KGF-3' ಚಿತ್ರದ ಚಿತ್ರೀಕರಣ ಸದ್ಯಕ್ಕಂತೂ ಕಾಣುವುದಿಲ್ಲ. ಅಲ್ಲಿಗೆ ಮುಂಬರುವ ಒಂದಷ್ಟು ಸಮಯ ಯಾವುದೇ ಒಂದು ದೊಡ್ಡಮಟ್ಟದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್' ಅಥವಾ 'ಆರ್ ಆರ್ ಆರ್' ಮಟ್ಟದಲ್ಲಿ ಬಿಡುಗಡೆಯಾಗಲು ಸಾಧ್ಯವೇ ಇಲ್ಲ. ಕೋಟಿಗಟ್ಟಲೆ ಹಣ ಹೂಡಿದ ಸಿನಿಮಾಗಳ ನಿರ್ಮಾಣ ನಡೆಯುತ್ತಿದೆ. ಹಾಗಂತ ಎಲ್ಲಾ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳ ಆಗುವುದಿಲ್ಲ. ಸದ್ಯಕ್ಕೆ ಒಂದಷ್ಟು ಕಾಲ ಯಾವುದೇ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ನಮ್ಮ ಮುಂದೆ ಬರುವುದಿಲ್ಲ.


Click it and Unblock the Notifications











