ಮಂತ್ರಾಲಯದಲ್ಲಿ ಬ್ರಾಹ್ಮಣರಿಗೆ ಮತ್ತು ಶೂದ್ರರಿಗೆ ಬೇರೆ ಜಾಗದಲ್ಲಿ ಊಟ ಹಾಕುವುದು ನಿಜವೇ ? ಡಾ.ರಾಜ್ ಹೇಳಿದ್ದೇನು ?

ಡಾ.ರಾಜ್ ಕುಮಾರ್.. ಕನ್ನಡ ಚಲನಚಿತ್ರ ರಂಗದ ಶಿಖರ ಪ್ರಾಯ. ಅಭಿಮಾನಿಗಳಲ್ಲಿ ದೇವರನ್ನ ಕಂಡ ದೇವತಾ ಮನುಷ್ಯ.ಗೋಕಾಕ್ ಚಳುವಳಿಯನ್ನು ಒಳಗೊಂಡಂತೆ ಕನ್ನಡನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಬಂದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಂಬಲವಾಗುತ್ತಲೇ ಕೇಂದ್ರಶಕ್ತಿಯಾದವರು ಡಾ.ರಾಜ್ ಕುಮಾರ್. ಇಂಥಾ ಡಾ.ರಾಜ್‌ಕುಮಾರ್ ಕನ್ನಡಿಗರನ್ನು ಅಗಲಿ 19 ವರ್ಷಗಳಾಗಿವೆ.ಆದರೆ ಇವತ್ತು ಕೂಡ ಡಾ.ರಾಜ್ ಕುಮಾರ್ ಜನಮಾನಸದಲ್ಲಿ ಇದ್ದಾರೆ. ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ

ಇಂಥಾ ರಾಜ್‌ಕುಮಾರ್ 'ಮಂತ್ರಾಲಯ ಮಹಾತ್ಮೆ' ಚಿತ್ರದಲ್ಲಿ ರಾಘವೇಂದ್ರಸ್ವಾಮಿಯ ಪಾತ್ರ ಮಾಡಿದಾಗ ಕೆಲವು ಜಾತಿವಾದಿಗಳು ಬಹಿರಂಗವಾಗಿಯೇ ವಿರೋಧಿಸಿದರು. ಜಾತಿವ್ಯವಸ್ಥೆಯ ಬಿಸಿಗೆ ಆಗಾಗ್ಗೆ ತುತ್ತಾಗುತ್ತಲೇ ಅದನ್ನು ಅನಿವಾರ್ಯ ತುತ್ತು ಎಂದು ನುಂಗಿಕೊಂಡು ನಗುತ್ತ ವೃತ್ತಿ ಬದುಕನ್ನು ಸಾಗಿಸುತ್ತಿದ್ದ ರಾಜಕುಮಾರ್ ಅವರಿಗೆ ಬಹಿರಂಗವಾಗಿ ಎದುರಾದ ಜಾತಿವಾದಿಗಳ ಬಿರುನುಡಿಗಳು ಸಾಕಷ್ಟು ನೋಯಿಸಿದವು.

Dr Rajkumar on criticism for Raghavendra Mahatme what he told P Lankesh

ಹಿಂದುಳಿದ ಜಾತಿಗೆ ಸೇರಿದ ಇವರಿಗೆ ರಾಘವೇಂದ್ರಸ್ವಾಮಿಯ ಪಾತ್ರ ಮಾಡಲು ಯಾವ ಅರ್ಹತೆಯಿದೆ ಎಂಬಂಥ ಟೀಕೆ ಎದುರಾದಾಗ, ಯಾವತ್ತೂ ಜಾತಿಯ ಬಗ್ಗೆ ಯೋಚಿಸದೆ ಇದ್ದ ಮತ್ತು ಹಿಂದುಳಿದ ಜಾತಿ-ವರ್ಗಗಳನ್ನು ಸ್ವಹಿತಕ್ಕೆ ಬಳಸದೇ ಇದ್ದ ರಾಜಕುಮಾರ್ ಪ್ರತಿಭೆಯಿಂದಲೇ ಉತ್ತರ ಕೊಡಲು ಮುಂದಾದರು.

ಮಂತ್ರಾಲಯ ಮಹಾತ್ಮೆ ಚಿತ್ರ ಮುಗಿಯುವವರೆಗೆ ತಮಗೆ ತುಂಬ ಪ್ರಿಯವಾದ ಮಾಂಸಾಹಾರ ಬಿಟ್ಟರು. ಕಾಲಿಗೆ ಚಪ್ಪಲಿ ಹಾಕಲಿಲ್ಲ. ಕಾಲಕಾಲಕ್ಕೆ ಉಪವಾಸ ವ್ರತ ಕೈಗೊಂಡರು. ಜಾತಿವಾದದ ನಿಲುವುಗಳನ್ನು ನಿರರ್ಥಕಗೊಳಿಸಲು ಅವರದೇ ವಿಧಾನ ಮತ್ತು ತಮ್ಮ ಅನನ್ಯ ಪ್ರತಿಭೆಯನ್ನು ಬಳಸಕೊಂಡರು, ಗೆದ್ದರು.

ಇದೇ ಸಂದರ್ಭದಲ್ಲಿ ಡಾ ರಾಜ್‌ಕುಮಾರ್ ಅವರು ಲಂಕೇಶ ಪತ್ರಿಕೆಗೆ ನೀಡಿದ ಸಂದರ್ಶನವನ್ನು ಡಾ.ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಮತ್ತು ನಿರ್ದೇಶಕ ಪ್ರಕಾಶ್ ರಾಜ್ ಮೇಹು ಹಂಚಿಕೊಂಡಿದ್ದಾರೆ. ಜಿ.ಟಿ. ನರೇಂದ್ರ ಸಮಾಜವಾದಿ ಅಧ್ಯಯನ ಕೇಂದ್ರ ಎಂಬ ಹೆಸರಿನಲ್ಲಿ ಹಂಚಿಕೊಳ್ಳಲಾದ ಡಾ.ರಾಜ್‌ಕುಮಾರ್ ಮತ್ತು ಲಂಕೇಶ್ ಅವರ ನಡುವಿನ ಸಂದರ್ಶನದ ವಿವರ ಕೆಳಗಿದೆ.

ಲಂಕೇಶ್ : ತಾಂತ್ರಿಕವಾಗಿ ನಾನು ನಿಮ್ಮ ಹಾಡುಗಳನ್ನು ಇಷ್ಟಪಡ್ತೇನೆ. ಆದರೆ ರಾಘವೇಂದ್ರ ಜನರಲ್ಲಿ ಅಗತ್ಯವಲ್ಲದಷ್ಟು ಭಕ್ತಿ ಉಕ್ಕಿಸಿದರೆ ಕೆಟ್ಟದಲ್ಲವೇ?

ರಾಜ್ ಕುಮಾರ್: ಹಾಗಲ್ಲ, ಭಕ್ತಿಯ ಹಾಡನ್ನು ಭಕ್ತಿಯಿಂದ ಹಾಡ್ತೇನೆ ಎಂದರು.

ಲಂಕೇಶ್: ಸರಿ, ಒಂದು ಪ್ರಶ್ನೆ ಕೇಳ್ತೇನೆ, ನಿಮ್ಮನ್ನು ಹೀಯಾಳಿಸುವುದು ನನ್ನ ಉದ್ದೇಶವಲ್ಲ. ನಿಮ್ಮ ಉತ್ತರ ಜನಕ್ಕೆ ಉಪಯುಕ್ತವಾಗುತ್ತೆ. ನಾನು ಮಂತ್ರಾಲಯಕ್ಕೆ ಹೋಗಿಲ್ಲ, ಕೇಳಿದ್ದೇನೆ ಅಲ್ಲಿ ಬ್ರಾಹ್ಮಣರಿಗೆ ಬೇರೆ ಜಾಗದಲ್ಲಿ ಶೂದ್ರರಿಗೆ ಬೇರೆ ಜಾಗದಲ್ಲಿ ಊಟ ಹಾಕುವುದು ನಿಜವೇ? ನಿಮಗೆಲ್ಲಿ ಊಟ ಹಾಕ್ತಾರೆ?

ರಾಜ್ ಕುಮಾರ್: ನಾನು ಅದನ್ನು ಗಮನಿಸಿಲ್ಲ. ಒಂದು ದೊಡ್ಡ ಹಾಲ್‌ನಲ್ಲಿ ಊಟ ಹಾಕ್ತಾರೆ, ಅವರು ಹಾಗೆ ಮಾಡಿದರೆ ಅದು ಅವರ ಕರ್ಮ. "ನೋಡಿ, ಈಡಿಗ ಜಾತಿಯ ನಾನು ರಾಘವೇಂದ್ರ ಸ್ವಾಮಿಯ ಪಾತ್ರ ಮಾಡಬೇಕಾಗಿ ಬಂದದ್ದು ಏನನ್ನು ತೋರಿಸುತ್ತದೆ? ಕಲೆ ಅಹಂಕಾರಗಳನ್ನೆಲ್ಲಾ ಮೀರಿದ್ದು ಅನ್ನೋದಲ್ಲವೇ?" ನಿಮಗೊಂದು ವಿಷಯ ಹೇಳ್ತೇನೆ. ರಾಘವೇಂದ್ರರ ಪಾತ್ರ ಮಾಡಲು ನನಗೆ ಕೇಳಿದಾಗ ನಾನು ವಿನಯದಿಂದ ಹಿಂಜರಿದೆ.

ಆದರೆ ನಾಲ್ಕು ಜನ ನಟರ ಹೆಸರಿನ ಚೀಟಿ ಬರೆದು ಎತ್ತಿದಾಗ ನನ್ನ ಹೆಸರು ಬಂತು. ಆಗ ನಾನು 'ನಾನೇ ಮಾಡ್ತೇನೆ' ಎಂದು ದೃಢವಾಗಿ ಹೇಳಿದೆ‌. ಜಾತಿಯ ಪ್ರಶ್ನೆಯನ್ನು ನೆನೆಯುತ್ತಾ ಡಾ. ರಾಜ್ "ಕೆದಕುತ್ತಾ ಹೋದರೆ ಅದು ತಿಪ್ಪೆಗುಂಡಿಯಂತೆ ಆಳ'' ಎಂದರು.

ಸಿನಿಮಾ ಬಗ್ಗೆಯೇ ಮಾತಾಡೋಣ. 1960ರಲ್ಲೆಂದು ಕಾಣುತ್ತೆ, ನಾನು ಮತ್ತು ತೇಜಸ್ವಿ ನೀವು ನಟಿಸಿದ್ದ 'ಭೂದಾನ' ಚಿತ್ರವನ್ನು ಶಿವಮೊಗ್ಗದಲ್ಲಿ ನೋಡುತ್ತಿದ್ದಾಗ, ನೀವು ಆ ಚಿತ್ರದಲ್ಲಿ ಹೆಚ್ಚು ಮಾತಾಡದಿದ್ದರೂ, 'ನೋಡಿ, ಈ ಚಿತ್ರದಲ್ಲಿ ಇವನೇ ನಟ' ಎಂದರು ತೇಜಸ್ವಿ ಎಂದೆ. ರಾಜ್ ಉಲ್ಲಾಸಗೊಂಡು ನಕ್ಕರು.

ಅಂದ್ಹಾಗೇ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಡಾ. ರಾಜ್ ಕುಮಾರ್ ಅವರನ್ನು ತೀರ ಹತ್ತಿರದಿಂದ ಬಲ್ಲವರಲ್ಲಿ ಒಬ್ಬರಾಗಿರುವ ಕನ್ನಡದ ಖ್ಯಾತ ಸಾಹಿತಿ ಸಿನಿಮಾ ನಿರ್ದೇಶಕ ಬರಗೂರು ರಾಮಚಂದ್ರಪ್ಪನವರು ತಮ್ಮ ಜನಪದ ನಾಯಕ ಡಾ. ರಾಜ್ ಕುಮಾರ್ ಎಂಬ ಕೃತಿಯಲ್ಲಿ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಜನ ಪ್ರಕಾಶನ ಹೊರತಂದಿರುವ ಈ ಕೃತಿಯಲ್ಲಿ ಡಾ. ರಾಜಕುಮಾರ್ ಅವರು ರಾಘವೇಂದ್ರ ಸ್ವಾಮಿಯ ಪಾತ್ರ ಮಾಡಬಾರದೆಂದು ಹೇಳಿದ್ದವರು ಆಮೇಲೆ ಬಾಯಿಮುಚ್ಚಿಕೊಂಡದ್ದು ನಿಜವಾದರೂ ಇನ್ನೊಬ್ಬರು ಮತ್ತೆ ರಾಘವೇಂದ್ರ ವೈಭವ ಎಂಬ ಚಿತ್ರ ಮಾಡಿದರು. ಶ್ರೀನಾಥ್ ಅವರು ಮುಖ್ಯ ಪಾತ್ರ ವಹಿಸಿದ್ದರು. ರಾಜಕುಮಾರ್ ಅವರ ಅಭಿನಯದ ಭಕ್ತಿ ಪುರಂದರ ದಾಸ ಚಿತ್ರ ತೆರೆಕಂಡ ಮೇಲೆ ಮತ್ತೊಬ್ಬರು ಕೆ.ಎಸ್.ಅಶ್ವತ್ಥ್ ಅವರನ್ನು ಹಾಕಿಕೊಂಡು ಶ್ರೀ ಪುರಂದರದಾಸರು ಚಿತ್ರ ತೆಗೆದರು. ಈ ಎರಡೂ ಚಿತ್ರಗಳು ಯಶಸ್ವಿಯಾಗಲಿಲ್ಲ. ಯಶಸ್ವಿಯಾದದ್ದು ಜಾತಿಯನ್ನು ಮೀರಿ ಬೆಳೆದ ರಾಜಕುಮಾರ್ ಅವರ ಅಭಿನಯದ ಚಿತ್ರಗಳು ಮಾತ್ರ ಎಂದು ಉಲ್ಲೇಖಿಸಿದ್ದಾರೆ.

ಚಿತ್ರರಂಗಕ್ಕೆ ಪ್ರವೇಶ ಮಾಡುವುದಕ್ಕೆ ಮುಂಚೆ ನಾಟಕರಂಗದಲ್ಲೂ ಜಾತಿಪ್ರೇರಿತ ಅವಮಾನವನ್ನು ರಾಜಕುಮಾರ್ ಅವರು ಅನುಭವಿಸಿದ್ದರು. ಚಿತ್ರದುರ್ಗ, ದಾವಣಗೆರೆ ಕ್ಯಾಂಪ್‌ನಲ್ಲಿ ಇವರು ನಾಟಕದಲ್ಲಿ ಬಸವಣ್ಣನವರ ಪಾತ್ರ ಮಾಡುವುದನ್ನು ಕೆಲವು ಜಡ ಸಂಪ್ರದಾಯಸ್ಥ ಜಾತಿವಾದಿಗಳು ವಿರೋಧಿಸಿದರು. ಹಿರಿಯ ಮುರುಘರಾಜೇಂದ್ರ ಸ್ವಾಮಿಗಳಿಗೆ ದೂರುಕೊಟ್ಟರು. ಸ್ವಾಮಿಗಳು ಸ್ವತಃ ನಾಟಕವನ್ನು ನೋಡಿದರು. ಮುತ್ತುರಾಜ್ (ರಾಜ್‌ಕುಮಾರ್) ಅವರ ಅಭಿನಯವನ್ನು ಮೆಚ್ಚಿ ದೂರಿತ್ತವರಿಗೆ ಬುದ್ಧಿ ಹೇಳಿ ಕಳಿಸಿದರು. ಸ್ವಾಮೀಜಿಗಳ ಮಧ್ಯಪ್ರವೇಶಕ್ಕೆ ಮುಂಚೆ ನೇರವಾಗಿ ಕೆಲವರು ಅವಮಾನದ ಮಾತಾಡಿದ್ದರು. ಆದರೆ ಸ್ವಾಮಿಗಳ ಸಮಯೋಚಿತ ಹಾಗೂ ಮೌಲ್ಯಬದ್ಧ ಮಧ್ಯಪ್ರವೇಶದಿಂದ ಮುತ್ತುರಾಜ್ ಬಸವಣ್ಣನವರ ಪಾತ್ರದಲ್ಲಿ ಮುಂದುವರೆದರು. ಈ ಪ್ರಸಂಗವನ್ನು ನಾನು ಡಾ.ರಾಜಕುಮಾರ್ ಅವರಿಂದಲೇ ಕೇಳಿ ತಿಳಿದಿದ್ದೆ ಎಂದು ಕೂಡ ಬರಗೂರು ರಾಮಚಂದ್ರಪ್ಪನವರು ತಮ್ಮ ಈ ಕೃತಿಯಲ್ಲಿ ಬರೆದಿದ್ದಾರೆ.

ಈ ಹಿನ್ನೆಲೆಯಲ್ಲೇ ರಾಜಕುಮಾರ್ ಅವರನ್ನು ಮೆಚ್ಚಿಕೊಳ್ಳಲು ಇನ್ನಷ್ಟು ಕಾರಣಗಳಿವೆ. ರಾಜಕುಮಾರ್ ಅವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದ ವಲಯದಿಂದ ಬಂದವರು. ಶೈಕ್ಷಣಿಕವಾಗಿಯೂ ಹಿಂದುಳಿದವರು. ಮೂರನೇ ತರಗತಿಯನ್ನೂ ಪೂರೈಸದ ಇವರು ಕಲಿತದ್ದು ಕಲೆಯ ಮೂಲಕ ಬದುಕಿನ ಮೂಲಕ. ಜಾತಿ ಮತ್ತು ವರ್ಗ ವ್ಯವಸ್ಥೆಯ ಕರಾಳತೆ ಪ್ರಖರವಾಗಿರುವ ನಮ್ಮ ಸಾಮಾಜಿಕ ಸಂದರ್ಭದಲ್ಲಿ ನಿರ್ಲಕ್ಷಿತ ಸಾಮಾಜಿಕ-ಆರ್ಥಿಕ ವಲಯದಿಂದ ಬಂದವರೂ ಮೂರನೇ ತರಗತಿಯನ್ನು ಮುಗಿಸದೆ ಇರುವವರೂ ಆದ ರಾಜಕುಮಾರ್ ದೇಶದ ದೊಡ್ಡ ಪ್ರತಿಭೆಯಾಗಿ ಬೆಳೆದದ್ದೇ ಒಂದು ಅನನ್ಯ ಸಾಧನೆ ಎಂದು ಬರಗೂರ್ ರಾಮಚಂದ್ರಪ್ಪ ಹೇಳಿದ್ದಾರೆ.

ಮುಂದುವರೆದು ದೊಡ್ಡ ಜಾತಿಯ ಹಿನ್ನೆಲೆಯಿಲ್ಲ; ಶ್ರೀಮಂತಿಕೆಯ ಬೆಂಬಲವಿಲ್ಲ, ಶಿಕ್ಷಣದ ಒತ್ತಾಸೆಯಿಲ್ಲ, ಪ್ರತಿಭೆ, ಕೇವಲ ಪ್ರತಿಭೆ. ಅದಕ್ಕೆ ತಕ್ಕುದಾದ ಶ್ರದ್ಧೆ, ಶ್ರಮ ಸಂಕಲ್ಪ, ಇವುಗಳಿಂದ ಸಾಮಾಜಿಕ ಆರ್ಥಿಕ ವ್ಯವಸ್ಥೆಯ ಕರಾಳ ಕಟ್ಟಳೆಗಳನ್ನು ಮೀರಿ ಬೆಳೆದದ್ದು ರಾಜಕುಮಾರ್ ಅವರ ಅಸಾಧಾರಣ ಸಾಧನೆ. ರಾಜಕುಮಾರ್ ಕಲೆಯನ್ನು ಕಸುಬು ಎಂದುಕೊಂಡರು. ಕಲಾ ಸೇವೆ ಮಾಡ್ತೇನೆ ಅನ್ನೋದೆಲ್ಲ ಬರೀ ಮಾತು, ಹೊಟ್ಟೆಪಾಡಿಗಾಗಿ ಅಭಿನಯ ಮಾಡ್ತಾ ಬಂದೆ. ಅಭಿನಯ ಕಲೆ ನನ್ನ ಕಸುಬು. ಆಮೇಲೆ ಹಾಡಿದೆ. ಅದೂ ನನ್ನ ಕಸುಬು.

ಹೀಗಾಗಿ ಕಲೆ ಅನ್ನೋದು ನನ್ನ ಪಾಲಿಗೆ ಕಸುಬು. ನನಗೆ ಗೊತ್ತಿರೋದು ಅದೊಂದೇ. ಅದನ್ನ ಮಾಡ್ತಾ ಬಂದೆ. ಮೊದಲು ರಂಗಭೂಮೀಲಿ, ಆಮೇಲೆ ಚಿತ್ರರಂಗದಲ್ಲಿ - ಇದು ಡಾ.ರಾಜಕುಮಾರ್ ಅವರ ಅಂತರಾಳದ ಮಾತು. ಕಲೆಯನ್ನು ಕಸುಬು ಎಂದುಕೊಂಡು ಬಾಳಿದವರು ಶ್ರಮಜೀವಿ ವಲಯದಿಂದ ಬಂದ ಜನಪದ ಕಲಾವಿದರು. ರಾಜಕುಮಾರ್ ಅವರು ಸಹ ಶ್ರಮಜೀವಿ ವಲಯದಿಂದ ಬಂದವರು, ಒಪ್ಪೊತ್ತಿನ ಊಟಕ್ಕಾಗಿ ಕಡುಕಷ್ಟಗಳನ್ನು ಅನುಭವಿಸಿದವರು, ಕಲೆಯನ್ನು ನಂಬಿ ಹಸಿವಿಗೆ ಉತ್ತರ ಹುಡುಕಿದವರು. ಕಲೆಯನ್ನು ಕಸುಬು ಎಂದು ಭಾವಿಸಿದವರು. ಕಸುಬು ಎನ್ನುವುದು ಶ್ರಮಜೀವಿಗಳ ಪರಿಭಾಷೆ.

ಈ ಎಲ್ಲ ಕಾರಣಗಳಿಂದ ಅವರನ್ನು ನಾನು ಬಂಗಾರದ ಮನುಷ್ಯ ಎನ್ನುವ ಬದಲು ಬೆವರಿನ ಮನುಷ್ಯ ಎಂದು ಕರೆಯುತ್ತಾ ಬಂದಿದ್ದೇನೆ. ಅವರಿಗೆ ಬೆವರಿನ ಬೆಲೆ ಗೊತ್ತಿತ್ತು. ಬಡತನದ ಬೇಗೆಯು ಅವರ ಭಾವನೆಗಳ ಭಾಗವಾಗಿತ್ತು. ಹೀಗಾಗಿ ಅವರಲ್ಲಿದ್ದ ಭಕ್ತಿಗೂ ಬೆವರಿನ ಆಯಾಮ ಲಭ್ಯವಾಗಿತ್ತು ಎಂದು ಡಾ.ಬರಗೂರು ರಾಮಚಂದ್ರಪ್ಪ ಅವರು ತಮ್ಮ ಅಭಿಪ್ರಾಯವನ್ನು ಜನಪದ ನಾಯಕ ಎಂಬ ಕೃತಿಯ ಮೂಲಕ ವ್ಯಕ್ತಪಡಿಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X