ದರ್ಶನ್‌ಗೆ ಮೋಸ ಮಾಡಿದ್ದ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ 7 ವರ್ಷಗಳಿಂದ ನಾಪತ್ತೆ; ಇಂದಿಗೂ ಸುಳಿವೇ ಇಲ್ಲ!
ದರ್ಶನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿ ಬ್ಯುಸಿನೆಸ್ ಮಾಡುತ್ತವೆ. ಕನ್ನಡ ಚಿತ್ರರಂಗದಲ್ಲಿ ಈಗಿರುವ ಸೂಪರ್‌ಸ್ಟಾರ್‌ಗಳ ಪೈಕಿ ಅತೀ ಹೆಚ್ಚು ಪ್ಯಾನ್ ಫಾಲೋವಿಂಗ್ ಇರೋದು ಕೂಡ ದರ್ಶನ್ ಅವರಿಗೇನೆ. ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ದೊಡ್ಡ ಹೆಸರಿರೋದು ಅಷ್ಟೇ ನಿಜ. ಆದರೆ, ದರ್ಶನ್‌ಗೆ ಎಷ್ಟು ಹೆಸರು ಇದೆಯೋ ಅಷ್ಟೇ ವಿವಾದಗಳು ಕೂಡ ಅವರನ್ನು ಸುತ್ತಿಕೊಂಡಿವೆ.
ದರ್ಶನ್ ಸಿನಿಮಾಗಳಿಂದ ಎಷ್ಟು ಸುದ್ದಿಯಾಗುತ್ತಿದ್ದರೋ ಅದಕ್ಕಿಂತ ಹೆಚ್ಚು ಅವರು ವಿವಾದಗಳಿಂದ ಸುದ್ದಿಯಾಗುತ್ತಿದ್ದಾರೆ. ಹಾಗಂತ ದರ್ಶನ್ ಒಬ್ಬರೇ ಅಲ್ಲ. ಅವರ ಜೊತೆಗಿದ್ದ ವ್ಯಕ್ತಿಗಳು ಕೂಡ ಅಷ್ಟೇ ವಿವಾದಗಳಲ್ಲಿ ಸಿಕ್ಕಿಕೊಂಡಿದ್ದಾರೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ನಿರ್ಮಾಪಕರ ಜೊತೆ, ಸಮಕಾಲೀನ ನಟರ ಜೊತೆ, ತಮ್ಮೊಂದಿಗೆ ಇದ್ದ ಆಪ್ತರ ಜೊತೆ ದರ್ಶನ್ ಕಿತ್ತಾಡಿಕೊಂಡಿದ್ದಾರೆ.

ಇತ್ತ ದರ್ಶನ್ ಜೊತೆಗಿದ್ದರೂ ಕೂಡ ಅವರಂತೆಯೇ ವಿವಾದಕ್ಕೂ ಸಿಕ್ಕಿಕೊಂಡಿದ್ದಾರೆ. ಅದರಲ್ಲಿ ಒಬ್ಬರು ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ. ಈ ವ್ಯಕ್ತಿ ಹಲವು ವರ್ಷಗಳ ಕಾಲ ದರ್ಶನ್ ಸಿನಿಮಾ ಡೇಟ್ಸ್ ಅನ್ನು ಮ್ಯಾನೇಜ್ ಮಾಡುತ್ತಿದ್ದರು. ದರ್ಶನ್‌ಗೆ ಸಂಬಂಧಿಸಿದ ಕೆಲವು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಕೆಲವು ಸಿನಿಮಾಗಳನ್ನು ವಿತರಣೆ ಕೂಡ ಮಾಡಿದ್ದಾರೆ. ಅಂದ್ಹಾಗೆ ಇವನ ಪೂರ್ತಿ ಹೆಸರು ಮಲ್ಲಿಕಾರ್ಜುನ್ ಬಿ. ಸಂಕನಗೌಡರ್.
ಸದಾ ದರ್ಶನ್ ಜೊತೆಗೆ ಇರುತ್ತಿದ್ದ ಮಲ್ಲಿಕಾರ್ಜುನ್ 2018, ಜುಲೈ ತಿಂಗಳಲ್ಲಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿದ್ದರು. ಇದು ಪತ್ರಕರ್ತರ ಅನುಮಾನಕ್ಕೆ ಕಾರಣವಾಗಿತ್ತು. ಆ ವೇಳೆಗೆ ಮಲ್ಲಿಕಾರ್ಜುನ್ ದರ್ಶನ್ ಕ್ಯಾಂಪ್‌ನಲ್ಲಿ ಇಲ್ಲ ಅನ್ನೋ ಸುದ್ದಿ ಬಂದಿತ್ತು. ದರ್ಶನ್ ಮ್ಯಾನೇಜರ್ ಕಮ್ ನಿರ್ಮಾಪಕ ಕಮ್ ಡಿಸ್ಟ್ರಿಬ್ಯೂಟರ್ ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದಾರೆ ಅನ್ನೋ ಸುದ್ದಿ ಓಡಾಡುವುದಕ್ಕೆ ಶುರುವಾಗಿತ್ತು. ಒಂದೆರಡು ವಾರ ಜೋರಾಗಿ ಸದ್ದು ಮಾಡಿದ್ದ ಮಲ್ಲಿಕಾರ್ಜುನ್ ನಾಪತ್ತೆ ಸುದ್ದಿ ಕೊನೆಗೆ ನಿಜವಾಗಿತ್ತು.

ಮಲ್ಲಿಕಾರ್ಜುನ್ ದಿಢೀರನೇ ನಾಪತ್ತೆಯಾಗುವುದಕ್ಕೆ ಕಾರಣ ಮಲ್ಲಿಕಾರ್ಜುನ್ ಮಾಡಿದ ಸಾಲ. 2018ರಲ್ಲಿ ಹರಿದಾಡಿದ ಸುದ್ದಿಯ ಪ್ರಕಾರ, ದರ್ಶನ್ ಮ್ಯಾಜಿ ಮ್ಯಾನೇಜರ್ ಬರೋಬ್ಬರಿ 10 ಕೋಟಿ ರೂಪಾಯಿ ಸಾಲ ಮಾಡಿದ್ದ. ದರ್ಶನ್ ಹೆಸರು ಬಳಸಿಕೊಂಡು ಸಿನಿಮಾ ನಿರ್ಮಾಣ ಹಾಗೂ ವಿತರಣೆಗೂ ಕೈ ಹಾಕಿದ್ದ. ಆದರೆ, ದರ್ಶನ್ ಜೊತೆಗಿದ್ದ ಹೊರತಾಗಿಯೂ ಮಲ್ಲಿಕಾರ್ಜುನ್‌ಗೆ ಯಶಸ್ಸು ಕೈ ಹಿಡಿದಿರಲಿಲ್ಲ. ಸಾಕಷ್ಟು ನಿರ್ಮಾಪಕರಿಗೆ ಮೋಸ ಮಾಡಿ ಪರಾರಿಯಾಗಿದ್ದಾರೆಂಬ ಸುದ್ದಿ ಹೊರಬಿದ್ದಿತ್ತು.
ಕೊನೆಯದಾಗಿ ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿದ್ದ 'ಪ್ರೇಮ ಬರಹ'ದ ವಿತರಣೆ ಜವಾಬ್ದಾರಿಯನ್ನು ಕೂಡ ಇವರೇ ಹೊತ್ತುಕೊಂಡಿದ್ದರು. ಆದರೆ, ಈ ಸಿನಿಮಾ ಕೂಡ ಸೋತಿತ್ತು. ಮತ್ತೆ ಮತ್ತೆ ಕೈ ಸುಟ್ಟುಕೊಂಡ ಮಲ್ಲಿಕಾರ್ಜುನ್ ತನ್ನ ಕುಟುಂಬವನ್ನು ಬೆಂಗಳೂರಿನಿಂದ ಶಿಫ್ಟ್ ಮಾಡಿ, ನಾಪತ್ತೆಯಾಗಿದ್ದರು. ಈ ವೇಳೆ ಗೊತ್ತಾಗಿದ್ದರು ಏನಂದ್ರೆ, ಮಲ್ಲಿಕಾರ್ಜುನ್ ಸ್ವತ: ದರ್ಶನ್ ಅವರ ಕೊಟ್ಟಿದ್ದ ಸಾಲವನ್ನೂ ತೀರಿಸದೆ ಕಾಣೆಯಾಗಿದ್ದ. ಅಸಲಿಗೆ ಗೊಂದಲ ಇರೋದು ಇಲ್ಲೇ. ಸುಮಾರು 7 ವರ್ಷಗಳ ಹಿಂದಿನ ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ್ ಇದೂವರೆಗೂ ದರ್ಶನ್ ಕೈಗೆ ಸಿಕ್ಕಿಲ್ಲ.
ಮಲ್ಲಿಕಾರ್ಜುನ್ ಎಲ್ಲಿದ್ದಾನೆ? ಯಾವ ಊರಲ್ಲಿ ಇದ್ದಾನೆ? ಯಾವ ದೇಶದಲ್ಲಿದ್ದಾನೆ? ಇದ್ಯಾವ ಸುಳಿವು ಇದೂವರೆಗೂ ಯಾರಿಗೂ ಗೊತ್ತಿಲ್ಲ. ಮಲ್ಲಿಕಾರ್ಜುನ್ ಬಗ್ಗೆ ಒಂದೇ ಒಂದು ಸುದ್ದಿನೂ ಬಂದಿಲ್ಲ. ಎಲ್ಲೋ ಸೋಶಿಯಲ್ ಮೀಡಿಯಾ ಮೂಲಕ ಮೆಸೇಜ್ ಮಾಡಿದ್ದಕ್ಕೆ ತಲೆಕೆಡಿಸಿಕೊಂಡು ಹುಡುಕಿಸಿದ್ದ ದರ್ಶನ್, ಮ್ಯಾನೇಜರ್ ಅನ್ನು ಹುಡುಕಿಸಲಿಲ್ಲವೇ? ಮಲ್ಲಿಕಾರ್ಜುನ್ ಟ್ರೇಸ್ ಮಾಡೋಕೆ ಆಗದೆ ಇರುವಷ್ಟು ದೂರ ಇದ್ದಾರೆಯೇ? ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಮಲ್ಲಿಕಾರ್ಜುನ್ ಕನ್ನಡ ಚಿತ್ರರಂಗದ ಪಾಲಿಗೆ ಇನ್ನೂ ಕಾಣೆಯಾಗಿಯೇ ಇದ್ದಾರೆ. ಇವರಿಂದ ಹೋದ ನಿರ್ಮಾಪಕರು, ಸಾಲ ಕೊಟ್ಟವರು ಇನ್ನೂ ಮಲ್ಲಿಕಾರ್ಜುನ್ ಅವರನ್ನು ಎದುರು ನೋಡುತ್ತಲೇ ಇದ್ದಾರೆ. ಇತ್ತೀಚೆಗೆ ಮಲ್ಲಿಕಾರ್ಜುನ್ ಕೆನಾಡದಲ್ಲಿ ಇದ್ದಾರೆ ಅನ್ನೋ ಸುದ್ದಿ ಹರಿದಾಡುತ್ತು. ಆದರೆ, ಆ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೊನೆಯಲ್ಲಿ ಹುಟ್ಟುವ ಪ್ರಶ್ನೆ ಅಂದರೆ, ಮಲ್ಲಿಕಾರ್ಜುನ್ ನಾಪತ್ತೆ ಆಗಿ 7 ವರ್ಷಗಳಾದರೂ ಒಂದೇ ಒಂದು ಸುಳಿವು ಸಿಗಲಿಲ್ಲ ಯಾಕೆ?


Click it and Unblock the Notifications











