ಡಾ.ರಾಜ್ ಕುಮಾರ್ ಪಾಲಿಗೆ ಗುರು ಆಗಿದ್ಹೇಗೆ ಕುರಿ ಕಾಯುವ ಹುಡುಗ ? ಅಣ್ಣಾವ್ರಿಗೆ ಗದರಿದ್ದೇಕೆ ಆ ಕುರಿಗಾಹಿ..?
ಡಾ.ರಾಜ್ ಕುಮಾರ್ ಮತ್ತು ತಿಪಟೂರು ರಾಮಸ್ವಾಮಿಯರದ್ದು ಗಳಸ್ಯ ..ಕಂಠಸ್ಯ..ಸ್ನೇಹ. ರಂಗಭೂಮಿಯಲ್ಲಿ ಜೊತೆಯಾದ ತಮ್ಮ ಈ ಗೆಳೆಯನನ್ನ ನೋಡಬೇಕೆನ್ನಿಸಿದಾಗ ರಾಜಕುಮಾರ್ ಅವರು ತಾವೇ ತಿಪಟೂರಿಗೆ ಹೋಗಿದ್ದು ಇದೆ. ರಾಮಸ್ವಾಮಿಯವರು ಬೆಂಗಳೂರಿಗೆ ಬಂದಾಗ ಕೆಲವೊಮ್ಮೆ ತಾವೇ ತಿಪಟೂರಿನವರೆಗೆ ಹೋಗಿ ಬಿಟ್ಟು ಬಂದದ್ದೂ ಇದೆ.
ಹೀಗೆ ಒಮ್ಮೆ ಸ್ನೇಹಿತರಿಬ್ಬರು ಪ್ರಯಾಣ ಮಾಡುತ್ತಿದ್ದಾಗ ಡಾ.ರಾಜ್ ಕುಮಾರ್ ಅವರಿಗೆ ಬಾಯಾರಿಕೆ ಆಯಿತು. ಇನ್ನೇನು ಮಾಡುವುದು ಎಂದು ಅಕ್ಕ-ಪಕ್ಕ ರಾಜ್ ಕಣ್ಣಾಡಿಸುವಾಗ ಅಲ್ಲಿಯೇ ರಸ್ತೆ ಪಕ್ಕದ ಒಂದು ಹೊಲದಲ್ಲಿ ಬಾವಿ ರಾಜ್ ಕುಮಾರ್ ಅವರ ಕಣ್ಣಿಗೆ ಬಿತ್ತು. ಕೂಡಲೇ ಕಾರು ನಿಲ್ಲಿಸಿ ಡಾ. ರಾಜಕುಮಾರ್ ಬಾವಿಯ ಒಳಗೆ ಇಳಿದರು. ಆದರೆ ಅಷ್ಟರಲ್ಲಿಯೇ ಅಲ್ಲಿ ಕುರಿ ಕಾಯುತ್ತಿದ್ದ ಹುಡುಗನೊಬ್ಬ ಬಂದ. ವಿಶೇಷ ಅಂದರೆ ಕಣ್ಣೇದುರು ಇರುವ ವ್ಯಕ್ತಿ ಡಾ.ರಾಜ್ ಕುಮಾರ್ ಅನ್ನುವ ವಿಚಾರ ಆ ಹುಡುಗನಿಗೆ ಗೊತ್ತೇ ಆಗಲಿಲ್ಲ. ಹೀಗಾಗಿಯೇ ರಾಜ್ ಅವರ ಬಳಿ ಬಂದ ಆ ಹುಡುಗ ಅಣ್ಣಾವ್ರ ಮೇಲೆ ಹರಿಹಾಯಲು ಶುರು ಮಾಡಿದ.

ಡಾ.ರಾಜ್ ಬಳಿ ಬಂದವನೇ ನಿಮಗೇನ್ ಮೈಮ್ಯಾಗೆ ಗ್ಯಾನ ಇಲ್ವ ..? ಮೆಟ್ಟು ಆಕ್ಕಂಡೇ ಬಾವೀಗೆ ಇಳೀತಾರ ಯಾರಾದರೂ ? ಮದ್ಲು ಮ್ಯಾಲ್ ಮೆಟ್ ಬಿಟ್ಟು ಬಾವೀನಾಗ್ ವೋಗಿ. ಗಂಗಮ್ಮ ತಾಯಿಗೆ ಇಂಗೆಲ್ಲ ಮಾಡ್‌ಬಾರ‍್ದು ಎಂದು ಗದರಿದ. ಆ ಕ್ಷಣಕ್ಕೆ ಡಾ.ರಾಜ್ ಕುಮಾರ್ ಅವರು ಏನು ಮಾತನಾಡಲು ಹೋಗಿಲ್ಲವಾದರೂ ರಾಮಸ್ವಾಮಿಯವರು ರಾಜಕುಮಾರ್ ಅವರ ಬಗ್ಗೆ ಆ ಹುಡುಗನಿಗೆ ಹೇಳುವ ಪ್ರಯತ್ನ ಮಾಡಿದಾಗ, ಕನ್ನಡದ ಕಣ್ಮಣಿ ರಾಜ್ ಅವರು ಸನ್ನೆ ಮಾಡಿ ರಾಮಸ್ವಾಮಿಯವರಿಗೆ ಸುಮ್ಮನೆ ಇರುವಂತೆ ಹೇಳಿದರು. ಆ ನಂತರ ಬಾವಿ ಮೆಟ್ಟಲು ಹತ್ತಿ ಮೇಲೆ ಬಂದರು. ಬಂದವರೇ ತಪ್ಪಾಯ್ತು ಕಂದ ಎಂದು ಆ ಹುಡುಗನಿಗೆ ಹೇಳಿ, ಚಪ್ಪಲಿ ಬಿಟ್ಟರು. ಮತ್ತೆ ಬರಿಗಾಲಲ್ಲಿಯೇ ಬಾವಿಗೆ ಇಳಿದರು. ನೀರು ಕುಡಿದು ಮೇಲೆ ಬಂದು ಹುಡುಗನಿಗೆ ಕೈ ಮುಗಿದು ಹೊರಟರು.
ಈ ಪ್ರಸಂಗವನ್ನು ಹಿಂದೊಮ್ಮೆ ಡಾ.ಬರಗೂರು ರಾಮಚಂದ್ರಪ್ಪ ಅವರ ಮುಂದೆ ನೆನಪು ಮಾಡಿಕೊಂಡಿದ್ದ ಅಣ್ಣಾವ್ರು, ಆ ಕುರಿ ಕಾಯೋ ಹುಡುಗ ಅವತ್ತು ನನಗೆ ಗುರು ಆದ ಎಂದು ಹೇಳಿದ್ದರು. ಗುರುವಿನ ಸ್ಥಾನವನ್ನ ಆ ಹುಡುಗನಿಗೆ ಕೊಡಲು ಎರಡು ಪ್ರಮುಖವಾದ ಕಾರಣವನ್ನೂ ಕೂಡ ಬರಗೂರು ಅವರ ಬಳಿ ಡಾ.ರಾಜ್ ಕೊಟ್ಟಿದ್ದರು. ಆ ಎರಡು ಕಾರಣಗಳಲ್ಲಿ ಒಂದು ಅ ಬಾವಿ ನೀರಿನಿಂದ ಬೇಸಾಯ ನಡ್ಯುತ್ತೆ, ಅದ್ರಿಂದ ಆ ನೀರು ಬೇಸಾಯಗಾರರಿಗೆ ಬರೀ ನೀರಲ್ಲ ಸಾರ್ ತಾಯಿ ಇದ್ದಂಗೆ. ಆ ತಾಯೀಗೆ ಗೌರವ ಕೊಡಬೇಕು ಅನ್ನೋದನ್ನ ಆ ಹುಡುಗ ಹೇಳ್ಕೊಟ್ಟ ಅನ್ನುವುದು ಒಂದಾದರೆ, ನಾವು ಸಿನಿಮಾ ನಟರು ಪ್ರಸಿದ್ಧಿಗ್ ಬಂದ್ ಮೇಲೆ ಎಲ್ರಿಗೂ ಗೊತ್ತಿರ‍್ತೇವೆ ಅಂತ ಭ್ರಮೇಲಿರ‍್ತೇವೆ. ಆ ಹುಡುಗನಿಗೆ ನಾನ್ಯಾರು ಅಂತಾನೇ ಗೊತ್ತಿರಲಿಲ್ಲ. ಅದ್ರಿಂದ ನಮ್ಮ ಭ್ರಮೆ ಬಿಡಿಸ್ದ ಅನ್ನುವುದು ಇನ್ನೊಂದು ಕಾರಣ.

ಈ ಎರಡು ಕಾರಣಕ್ಕೆ ಆ ಹುಡುಗ ನನ್ನ ಪಾಲಿಗೆ ಗುರುವಾಗಿಬಿಟ್ಟ ಎಂದು ಡಾ.ರಾಜ್ ಕುಮಾರ್ ಅವರು ವಿವರಿಸಿದಾಗ ಬರಗೂರು ರಾಮಚಂದ್ರಪ್ಪ ಅವರಿಗೆ ಮಾತೇ ಹೊರಡಲಿಲ್ಲ. ಯಾಕೆಂದರೆ ಅಲ್ಲಿ ಮಾತಿಗೆ ಕೆಲಸವಿರಲಿಲ್ಲ. ಮನಸ್ಸು ತುಂಬಿ ಮೌನವೇ ಸದ್ದಿಲ್ಲದ ಮಾತಾಗಿತ್ತು. ಡಾ.ರಾಜ್ ಕುಮಾರ್ ಅವರ ಬಗ್ಗೆ ಈ ತರಹದ ಹತ್ತಾರು ಪ್ರಸಂಗ ಮತ್ತು ವಿಶೇಷತೆಗಳು ಬರಗೂರು ಅವರು ಬರೆದಿರುವ ಜನಪದ ನಾಯಕ ಡಾ. ರಾಜ್ ಕುಮಾರ್ ಎಂಬ ಅಮೂಲ್ಯ ಕೃತಿಯಲ್ಲಿವೆ. ಜನ ಪ್ರಕಾಶನ ಈ ಕೃತಿಯನ್ನ ಹೊರತಂದಿದೆ


Click it and Unblock the Notifications










