''ಮುಂಗಾರು ಮಳೆ'' ಹಾಗೂ ''ಕಾಸ್ಟ್ ಅವೇ'' ಚಿತ್ರಕ್ಕೆ ಇರುವ ನಂಟೇನು ? ದೇವದಾಸ್ ಪಾತ್ರ ಹುಟ್ಟಿದ್ಹೇಗೆ..?
''ಮುಂಗಾರು ಮಳೆ''.. ಕನ್ನಡ ಚಿತ್ರರಂಗದ ಪಥವನ್ನ ಬದಲಿಸಿದ ಸಿನಿಮಾ. ಯೋಗರಾಜ್ ಭಟ್ ಅವರ ಅತ್ಯುತ್ತಮ ಕೃತಿ. ಕಾಮಿಡಿ ಟೈಮ್ ಗಣೇಶ್ ಅವರಿಗೆ ರಾತ್ರೋ ರಾತ್ರಿ ಗೋಲ್ಡನ್ ಸ್ಟಾರ್ ಪಟ್ಟವನ್ನ ತಂದು ಕೊಟ್ಟ ಸಿನಿಮಾ.
ಮನೋಮೂರ್ತಿ ಅವರ ಸಂಗೀತ.. ಜಯಂತ ಕಾಯ್ಕಿಣಿ, ಕವಿರಾಜ್, ಹೃದಯಶಿವ, ಯೋಗರಾಜ್ ಭಟ್ ಸಾಹಿತ್ಯ.. ಸೋನು ನಿಗಮ್, ಶ್ರೇಯಾ ಘೋಷಾಲ್, ಹೇಮಂತ್ ಕುಮಾರ್, ಉದಿತ್ ನಾರಾಯಣ್, ಸುನಿಧಿ ಚವ್ಹಾಣ್, ಅವರ ಚಿನ್ನದ ಕಂಠ.. 'ಅನಿಸುತಿದೆ ಯಾಕೋ ಇಂದು...' ಹಾಡು.. ಹೀಗೆ ಹತ್ತು ಹಲವು ಕಾರಣಗಳಿಂದ ಕನ್ನಡಿಗರ ಹೃದಯ ಗೆದ್ದ ಈ ಚಿತ್ರದಲ್ಲಿ ''ಮೊಲ'' ಕೂಡ ಪ್ರಮುಖವಾದ ಪಾತ್ರವನ್ನ ನಿರ್ವಹಿಸಿತ್ತು. ಕೇವಲ ಪ್ರೀತಂ ಬದುಕಿನ ಭಾಗವಾಗದೇ, ಚಿತ್ರಪ್ರೇಮಿಗಳ ಬದುಕಿನ ಭಾಗವೂ ಆಗಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಮುಂಗಾರು ಮಳೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ''ದೇವದಾಸ'' ಉಸಿರು ಚೆಲ್ಲಿದಾಗ ಚಿತ್ರಮಂದಿರದಲ್ಲಿ ಅನೇಕರು ಬಿಕ್ಕಿದ್ದರು. ಸಂಕಟ ಪಟ್ಟಿದ್ದರು.

ಆದರೆ ಅದೇ ''ಮೊಲ''ದ ಜಾಗದಲ್ಲಿ ವ್ಯಕ್ತಿ ಇದ್ದಿದ್ದರೆ, ಪ್ರೀತಂ ''ಸ್ನೇಹಿತ''ನ ಪಾತ್ರವನ್ನ ನಿರ್ವಹಿಸಿದ್ದರೆ.. ಆ ನೋವಿನ ತೀವೃತೆ ಖಂಡಿತವಾಗಿಯೂ ಇರುತ್ತಿರಲಿಲ್ಲ. ಚಿತ್ರ ಗಾಢವಾದ ಪರಿಣಾಮವನ್ನೂ ಬೀರುತ್ತಿರಲಿಲ್ಲ. ಈ ಮಾತನ್ನ ನಾವು ಅಲ್ಲ. ಖುದ್ದು ''ಯೋಗರಾಜ್ ಭಟ್'' ಅವರೇ ಹೇಳಿದ್ದಾರೆ. ''ದೇವದಾಸ್'' ಪಾತ್ರ.. ಆ ಪಾತ್ರದ ಸುತ್ತ ಮುತ್ತದ ವಿಚಾರಗಳನ್ನ ಹಂಚಿಕೊಂಡಿದ್ದಾರೆ.
'ರ್ಯಾಪಿಡ್ ರಶ್ಮಿ' ಅವರಿಗೆ ನೀಡಿರುವ ''ಸಂದರ್ಶನ''ದಲ್ಲಿ ಮಾತನಾಡಿರುವ ''ಭಟ್ರು'', ''ಪ್ರಾಣಿ''ಗಳ ಮೇಲೆ ತಮಗೆ ಇರುವ ''ಕುತೂಹಲ'' ಎಂಥಹದ್ದು ಎಂದು ಹೇಳಿದ್ದಾರೆ. ಮುಂಗಾರು ಮಳೆಯಲ್ಲಿ ''ಮೊಲ'' ತೀರಿಕೊಂಡಾಗ ನಿಮಗೆ ತುಂಬಾ ನೋವಾಗುತ್ತೆ. ಆದರೆ ಅದೇ ಒಬ್ಬ ''ಫ್ರೆಂಡ್'' ತೀರಿಕೊಂಡ ಅಂದುಕೊಳ್ಳಿ. ''ಮೊಲ''ದ ಬದಲು ಗಣೇಶ್ ನಿಗೆ ಒಬ್ಬ ''ಫ್ರೆಂಡ್'' ನ್ನೇ ಕೊಡಬಹುದಿತ್ತು ಪಕ್ಕದಲ್ಲಿ, ಆದರೆ ''ಮೊಲ''ದ ಬದಲು ಒಬ್ಬ ''ಫ್ರೆಂಡ್'' ಮಾಡಿದರೆ ಮಜಾ ಇರಲ್ಲ ಅದು ಎಂದಿದ್ದಾರೆ. ''ಮುಂಗಾರು ಮಳೆ'' ಚಿತ್ರಕ್ಕೂ ಹಾಗೂ ಹಾಲಿವುಡ್ ನ ''ಕಾಸ್ಟ್ ಅವೇ'' ಚಿತ್ರಕ್ಕೂ ಇರುವ ನಂಟನ್ನೂ ಹಂಚಿಕೊಂಡಿದ್ದಾರೆ.
ಹೌದು. ಅಸಲಿಗೆ ''ಕಾಸ್ಟ್ ಅವೇ'' ಸಿನಿಮಾದಲ್ಲಿ, ವಿಮಾನ ಅಪಘಾತಕ್ಕೀಡಾಗುತ್ತೆ. ಆದರೆ ಆ ಅಪಘಾತದಲ್ಲಿ ಕೇವಲ ಒಬ್ಬ ವ್ಯಕ್ತಿ ಬದುಕುಳಿಯುತ್ತಾನೆ. ಕಣ್ಣಾಯಿಸಿದರೆ ಸುತ್ತ ಮುತ್ತ ''ದ್ವೀಪ''ವೇ ಇರುತ್ತೆ. ''ಮಾತನಾಡಲು'' ಅಲ್ಲಿ ಒಂದು ''ನರಪಿಳ್ಳೆ'' ಸಹ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಯದ ಆವರಣಗಳನ್ನು ದಾಟಿ, ''ನಾಡನ್ನ ತಲುಪಬೇಕೆಂಬ ಆತಂಕ'' ಒಂದಡೆಯಾದರೆ, ಮಾತನಾಡಲು ಯಾರು ಇಲ್ಲದ ಕಾರಣ ''ಮಾತು ಮರೆತು ಹೋಗುವ'' ಆತಂಕ ಇನ್ನೊಂದು ಕಡೆ ಇರುತ್ತೆ.
ಈ ಕಾರಣಕ್ಕೆ ಅಲ್ಲಿಯೇ ಸಿಕ್ಕ ''ವಾಲಿಬಾಲ್'' ವೊಂದನ್ನ ನಾಯಕ ತನ್ನ ''ಸ್ನೇಹಿತ.. ಗುರು.. ಮಾರ್ಗದರ್ಶಿ'' ಎಂದುಕೊಳ್ಳುತ್ತಾನೆ.''ವಾಲಿಬಾಲ್'' ಜೊತೆ ''ಮಾತನಾಡುತ್ತಾ'' ದಿನ ಕಳೆಯುತ್ತಾನೆ. ಕೊನೆಗೆ ಹಾಗೂ ಹೀಗೂ ತನ್ನೂರಿನ ಬಳಿ ಬರುತ್ತಾನೆ ಕೂಡ. ಆದರೆ ದಾರಿಯಲ್ಲಿ ಒಂಟಿತನಕ್ಕೆ ಆಸರೆಯಾಗಿದ್ದ ''ವಾಲಿಬಾಲ್'' ನನ್ನ ನಾಯಕ ನೀರಿನಲ್ಲಿ ಕಳೆದುಕೊಳ್ಳುತ್ತಾನೆ. ಜೀವದ ಹಂಗು ತೊರೆದು ಆ ''ವಾಲಿಬಾಲ್'' ನ ಬೆನ್ನತ್ತಿಯೂ ಹೋಗುತ್ತಾನೆ. ಆದರೆ ಅಗಾದ ಸಮುದ್ರದಲ್ಲಿ ''ವಾಲಿಬಾಲ್ ಕಣ್ಮರೆ''ಯಾಗಿ ಬಿಡುತ್ತೆ.

ಬೆಳ್ಳಿ ಪರದೆಯಲ್ಲಿ ಅನಾವರಣಗೊಂಡ ''ಕಾಸ್ಟ್ ಅವೇ'' ಚಿತ್ರದ ಈ ಕಥೆ, ಯೋಗರಾಜ್ ಭಟ್ ಅವರನ್ನ ಎಷ್ಟರ ಮಟ್ಟಿಗೆ ''ವಿಚಲಿತ''ಗೊಳಿಸಿತ್ತು ಅಂದರೆ ಚಿತ್ರದ ಕಥಾನಾಯಕನ ಸಂಕಟ.. ತಳಮಳಗಳನ್ನ ಕಂಡು ''ಭಟ್ರು ಕಣ್ಣೀರು'' ಹಾಕಿದ್ದರು. ''ಅದೊಂದು ವಸ್ತು, ನಾಯಕನಿಗೆ ಅದು ಸಿಗಬೇಕಿತ್ತು. ಅಷ್ಟು ದಿನ ಜೊತೆಯಲ್ಲಿತ್ತು'' ಎಂದು ಬಿಕ್ಕಿದ್ದರು. ಅಂದಿನಿಂದ ಮುಂಗಾರು ಮಳೆಯವರೆಗೆ ಆ ''ವಾಲಿಬಾಲ್'' ಭಟ್ರ ತಲೆಯಲ್ಲಿ ಆಗಾಗ ಗಿರಕಿ ಹೊಡೆಯುತ್ತಾನೇ ಇತ್ತು. ಹೀಗಾಗಿಯೇ ಅಲ್ಲಿ ''ವಾಲಿಬಾಲ್'' ಇರುವಂತೆ, ಇಲ್ಲಿ ''ಮೊಲ'' ಇದ್ದರೆ ಚೆಂದ ಇರುತ್ತೆ ಎಂದು ಭಾವಿಸಿದ ಯೋಗರಾಜ್ ಭಟ್ರು ಮುಂಗಾರು ಮಳೆಯಲ್ಲಿ ''ದೇವದಾಸ''ನ ಪಾತ್ರವನ್ನ ಸೃಷ್ಟಿಸಿದರು.
ಹೀಗೆ ''ಮುಂಗಾರು ಮಳೆ'' ಚಿತ್ರಕ್ಕೆ ''ಕಾಸ್ಟ್ ಅವೇ'' ಪ್ರೇರಣೆಯಾದ ಕಥೆಯನ್ನ, ಯೋಗರಾಜ್ ಭಟ್ ಹಂಚಿಕೊಂಡಿದ್ದಾರೆ. ಮೊಲದ ಬದಲು ವ್ಯಕ್ತಿ ಆ ''ದೇವದಾಸ''ನ ಪಾತ್ರವನ್ನ ಮಾಡಿದ್ದರೆ ಮುಂಗಾರು ಮಳೆ ಪ್ರೇಕ್ಷಕರಿಗೆ ಕಾಡುತ್ತಿರಲಿಲ್ಲ ಅಂದಿದ್ದಾರೆ. ಭಟ್ರ ಈ ''ಮಾತು-ಮಂಥನ''ಕ್ಕೆ ಸಿಕ್ಕಾಪಟ್ಟೆ ಮೆಚ್ಚುಗೆಯ ಮಹಾಪೂರ ಸದ್ಯಕ್ಕೆ ಹರಿದು ಬರುತ್ತಿದೆ.


Click it and Unblock the Notifications











