'ಕೆಜಿಎಫ್ 2' ಸಿನಿಮಾದಿಂದ ಕನ್ನಡ ಚಿತ್ರರಂಗ ಕಲಿಯಬೇಕಾದ ಪಾಠಗಳೇನು?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಭಾರಿ ದೊಡ್ಡ ಹಿಟ್ ಆಗಿದೆ. ವಿಶ್ವದೆಲ್ಲೆಡೆ ಮನ್ನಣೆಗಳಿಸುತ್ತಿರುವ ಈ ಸಿನಿಮಾ ದೊಡ್ಡ ಮೊತ್ತದ ಹಣವನ್ನು ಗಳಿಸುತ್ತಿದೆ.
'ಕೆಜಿಎಫ್ 2' ಸಿನಿಮಾ ಕರ್ನಾಟಕ ಮಾತ್ರವೇ ಅಲ್ಲ, ಬೇರೆ ರಾಜ್ಯಗಳಲ್ಲಿಯೂ ದೊಡ್ಡ ಹಿಟ್ ಎನಿಸಿಕೊಂಡಿದೆ. ತಮಿಳುನಾಡಿನಲ್ಲಿ ಅಂತೂ ಸತತ ಮೂರನೇ ದಿನವೂ ನೈಟ್ ಶೋಗಳು ನಡೆಯುತ್ತಿವೆ. ತಮಿಳಿನ ಸ್ಟಾರ್ ನಟರ ಸಿನಿಮಾಕ್ಕೂ ಹೀಗೆ ಸತತ ಮೂರನೇ ದಿನ ನೈಟ್ ಶೋ ನಡೆದಿದ್ದಿಲ್ಲ.
ಕನ್ನಡ ಚಿತ್ರರಂಗವನ್ನು ಲೆಕ್ಕಕ್ಕೆ ಇರಿಸದಿದ್ದ ಭಾರತದ ಇತರೆ ಚಿತ್ರರಂಗಗಳೆಲ್ಲ ಇಂದು 'ಕೆಜಿಎಫ್ 2'ನ ಯಶಸ್ಸನ್ನು ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಿದ್ದಾರೆ. 'ಕೆಜಿಎಫ್ 2' ಸಿನಿಮಾ ಅಂಥಹದ್ದೇನು ವಿಶೇಷವಾಗಿ ಮಾಡಿತು, 'ಕೆಜಿಎಫ್ 2' ಸಿನಿಮಾದಿಂದ ಕನ್ನಡ ಚಿತ್ರರಂಗ ಕಲಿಯಬೇಕಾದುದು ಏನು? ಇಲ್ಲಿದೆ ವಿಶ್ಲೇಷಣೆ...

ಕನ್ನಡ ಮಾರುಕಟ್ಟೆ ಬಗ್ಗೆ ಗೊಣಗೋದು ಬಿಡಿ
ಕನ್ನಡ ಚಿತ್ರರಂಗದ ಮಾರುಕಟ್ಟೆ ಬಹಳ ಕಿರಿದು, ಇಲ್ಲಿ ಐದು ಕೋಟಿ ಹಾಕಿ ಸಿನಿಮಾ ಮಾಡಿ ಸ್ಯಾಟಲೈಟ್ ರೈಟು, ಒಟಿಟಿ ರೈಟು, ಚಿತ್ರಮಂದಿರದ ಷೇರುಗಳೆಲ್ಲ ಸೇರಿ ಆರು ಕೋಟಿ ಬಂದರೆ ಸಾಕು ಎಂಬ ಸಿದ್ಧ ಸೂತ್ರ ಇಲ್ಲಿನ ನಿರ್ಮಾಪಕರಿಗಿತ್ತು. ಅದನ್ನು ಮೊದಲು ಮುರಿದು, ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಇದೆ ಎಂಬುದನ್ನು 'ಕೆಜಿಎಫ್ 2' ಸಿನಿಮಾ ಸಾಬೀತು ಮಾಡಿದೆ. ಹಾಗಾಗಿ ಮೊದಲಿಗೆ, 'ಕನ್ನಡದ್ದು ಸೀಮಿತ ಮಾರುಕಟ್ಟೆ' ಎಂಬ ಸುಳ್ಳು ಭ್ರಮೆಯಿಂದ ನಿರ್ಮಾಪಕರು, ನಿರ್ದೇಶಕರು ಮೊದಲಿಗೆ ಹೊರಗೆ ಬರಬೇಕಿದೆ.

ಸಿನಿಮಾದ ಮೇಕಿಂಗ್ ಬಗ್ಗೆ ಹೆಚ್ಚು ಗಮನವಹಿಸಬೇಕಿದೆ
'ಕೆಜಿಎಫ್ 2' ಸಿನಿಮಾವನ್ನು ನೋಡಿದವರೆಲ್ಲ ಮೊದಲು ಮೆಚ್ಚಿಕೊಳ್ಳುತ್ತಿರುವುದು ಸಿನಿಮಾದ ಮೇಕಿಂಗ್ ಅನ್ನು. ಸಿನಿಮಾದ ಮೇಕಿಂಗ್‌ಗೆ ದೊಡ್ಡ ಮೊತ್ತದ ಹಣವನ್ನು ಚಿತ್ರರಂಗ ಖರ್ಚು ಮಾಡಿದೆ, ಮೇಕಿಂಗ್‌ನಲ್ಲಿ ಫರ್ಫೆಕ್ಷನ್ ಸಾಧಿಸಲು ಪ್ರಶಾಂತ್ ನೀಲ್ ಪಟ್ಟಿರುವ ಶ್ರಮ ಚಿತ್ರದುದ್ದಕ್ಕೂ ಕಾಣ ಸಿಗುತ್ತದೆ. ಕನ್ನಡದ ನಿರ್ದೇಶಕರು ಮೊದಲಿನಿಂದಲೂ ಹಿಂದೆ ಬಿದ್ದಿರುವುದೇ ಮೇಕಿಂಗ್ ವಿಷಯದಲ್ಲಿ, ಒಳ್ಳೆಯ ಕತೆ, ನಟರನ್ನು ಹೊಂದಿದ್ದಾಗ್ಯೂ ಕಳಪೆ ಮೇಕಿಂಗ್‌ನಿಂದ ನಮ್ಮ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಪರ್ಧೆ ನೀಡಲಾಗದೆ ಹೋದ ಹಲವು ಉದಾಹರಣೆಗಳು ಇವೆ. ಹಾಗಾಗಿ ನಿರ್ದೇಶಕರು ಇನ್ನು ಮುಂದೆ ಮೇಕಿಂಗ್ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಲೇ ಬೇಕಿದೆ.

ಹಳೆಯ ಸೂತ್ರಕ್ಕೆ ತಿಲಾಂಜಲಿ ಇಡಿ
ಹಳೆಯ ಸೂತ್ರಕ್ಕೆ ತಿಲಾಂಜಲಿ ಇಡಬೇಕಾದ ಸಮಯ ಬಂದುಬಿಟ್ಟಿದೆ. ನಾಲ್ಕು ಫೈಟು, ನಾಲ್ಕು ಸಾಂಗು, ಒಂದು ಐಟಮ್ ಸಾಂಗು, ತಾಯಿ ಸೆಂಟಿಮೆಂಟ್, ಪ್ರೀತಿ, ರೊಮ್ಯಾನ್ಸ್ ಹಾಸ್ಯ ಒಂದಿಷ್ಟು ಇಷ್ಟಿದ್ದರೆ ಸಿನಿಮಾ ಆಗಿಬಿಡುತ್ತದೆ ಎಂಬ ಹಳೆಯ ಸಿದ್ಧ ಸೂತ್ರಕ್ಕೆ ತಿಲಾಂಜಲಿ ಇಡಬೇಕಾದ ಸಮಯ ಇದು. ನಮ್ಮ ನಿರ್ದೇಶಕರು ಔಟ್ ಆಫ್ ದಿ ಬಾಕ್ಸ್ ಯೋಚನೆ ಮಾಡಲೇ ಬೇಕಿದೆ. ರಿಷಬ್ ಶೆಟ್ಟಿ, ರಾಜ್ ಶೆಟ್ಟಿ, ಅನುಪ್ ಭಂಡಾರಿ ಅಂಥಹಾ ಇನ್ನೂ ಕೆಲವರು ಈ ನಿಟ್ಟಿನಲ್ಲಿ ಈಗಾಗಲೇ ಪ್ರಗತಿಯಲ್ಲಿದ್ದಾರೆ. ಉಳಿದವರು ಸಹ ತಮ್ಮ ಮಂಡೆಗೆ ಈಗಲಾದರೂ ಕೆಲಸ ಕೊಡಬೇಕಿದೆ.

ದೊಡ್ಡದಾಗಿ ಯೋಚಿಸಿ
ಈ ಹಿಂದೆಯೂ ಕನ್ನಡದಲ್ಲಿ ಗ್ಯಾಂಗ್‌ಸ್ಟರ್ ಸಿನಿಮಾಗಳು ಬಂದಿವೆ. ಆದರೆ 'ಕೆಜಿಎಫ್'ನಷ್ಟು ಅವು ಯಶಸ್ವಿಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ನಿರ್ದೇಶಕರು ದೊಡ್ಡದಾಗಿ ಯೋಚಿಸುವ ಉತ್ಸಾಹವೇ ಹೊಂದಿಲ್ಲ. ಕತೆಯೊಂದು ಹೊಳೆದರೆ ಅದನ್ನು ದೊಡ್ಡದಾಗಿ, ದೊಡ್ಡ ಕ್ಯಾನ್‌ವಾಸ್‌ನಲ್ಲಿ, ಬಹುಜನರಿಗೆ ಸಲ್ಲುವಂತೆ ಹೇಗೆ ಪ್ರೆಸೆಂಟ್ ಮಾಡಬಹುದು ಯೋಚಿಸಬೇಕಾಗಿದೆ. 'ಕೆಜಿಎಫ್' ಮಾಡಿದ್ದು ಸಹ ಅದೇ. ಗ್ಯಾಂಗ್‌ಸ್ಟರ್ ಕತೆಯನ್ನು ಅವರು ಬಹು ದೊಡ್ಡ ಕ್ಯಾನ್‌ವಾಸ್‌ನಲ್ಲಿ ಕಟ್ಟಿಕೊಟ್ಟಿದ್ದಾರೆ.

ಕತೆ ಗಟ್ಟಿಯಿರಿ, ಕತೆಯ ಬಗ್ಗೆ ನಂಬಿಕೆ ಇರಲಿ
ಕೇವಲ ಸ್ಟಾರ್ ನಟರನ್ನು ಹೊಂದಿದ ಕೂಡಲೆ ಸಿನಿಮಾ ಒಂದು ಹಿಟ್ ಆಗಿಬಿಡುವುದಿಲ್ಲ. ಕನ್ನಡದ ಸ್ಟಾರ್ ನಟರ ಸಿನಿಮಾಗಳು ಸಹ ಮಕಾಡೆ ಮಲಗಿರುವ ಹಲವು ಉದಾಹರಣೆಗಳು ಇವೆ. ಸ್ಟಾರ್ ನಟ-ನಟಿಯರು ಇದ್ದಾಗ್ಯೂ ಕೂಡ ಸಿನಿಮಾದ ಕತೆ ಗಟ್ಟಿಯಾಗಿರಲಿ. ನಟರ ಡೇಟ್ಸ್ ಮೊದಲು ಪಡೆದು ನಂತರ ಸಿನಿಮಾದ ಕತೆ ಹೆಣೆಯುವ ಹುಚ್ಚಾಟ ಬೇಡ. ಮೊದಲಿಗೆ ಕತೆ ಗಟ್ಟಿಯಾಗಲಿ, ಗಟ್ಟಿಯಾದ ಕತೆಯ ಬಗ್ಗೆ ನಿರ್ದೇಶಕರಿಗೆ ನಂಬಿಕೆ ಬರಲಿ ಆ ಬಳಿಕವಷ್ಟೆ ಕತೆಯನ್ನು ಸೆರೆಹಿಡಿಯುವ ಕಾರ್ಯ ಆರಂಭವಾಗಬೇಕಿದೆ. ಕತೆ ಇಲ್ಲದೆ, ಅಥವಾ ಜೊಳ್ಳಾದ ಕತೆ ಇಟ್ಟುಕೊಂಡು ಸಿನಿಮಾ ಮಾಡಿದರೆ ಹಳ್ಳ ಹಿಡಿವುದು ಗ್ಯಾರೆಂಟಿ.

ಪ್ರಚಾರವನ್ನು ಅಸ್ತ್ರವನ್ನಾಗಿ ಬಳಸಬೇಕಿದೆ
ಸಿನಿಮಾದ ಪ್ರಚಾರ ಸಹ ಸಿನಿಮಾದ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. 'ಕೆಜಿಎಫ್' ಚಿತ್ರತಂಡ ಪ್ರಚಾರವನ್ನು ಅದ್ಭುತವಾಗಿ ಮಾಡಿದೆ. ನೆರೆ ರಾಜ್ಯಗಳ ಚಿತ್ರರಂಗ, ನಟರೊಟ್ಟಿಗೆ ಉತ್ತಮ ಬಾಂಧವ್ಯ ಏರ್ಪಡಿಸಿಕೊಂಡು ಪ್ರಮುಖ ರಾಜ್ಯಗಳಲ್ಲಿ ಸಿನಿಮಾದ ಪ್ರಚಾರವನ್ನು ಅದ್ಭುತವಾಗಿ ಮಾಡಿತು. 'ಕೆಜಿಎಫ್' ಯಶಸ್ವಿಯಾಗಲು ಇದು ಮುಖ್ಯ ಕಾರಣ. ಕನ್ನಡದ ಇತರೆ ಸಿನಿಮಾಗಳು ಸಹ ಪ್ರಚಾರವನ್ನು ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕಿದೆ.

ಸ್ಟಾರ್ ನಟರೂ ಬದಲಾಗಬೇಕಿದೆ
ಕನ್ನಡದ ಸ್ಟಾರ್ ನಟರು ಬದಲಾಗಬೇಕಿದೆ. ನಿರ್ದೇಶಕ ನನ್ನ ಗೆಳೆಯ, ನಿರ್ಮಾಪಕ ನನ್ನ ಗೆಳೆಯ ಎಂದೆಲ್ಲ ಸುಮ್ಮನೆ ಡೇಟ್‌ಗಳನ್ನು ಕೊಡುವ ಬದಲಿಗೆ, ನಿರ್ದೇಶಕನಿಗೆ ಕತೆ ಏನು, ಚಿತ್ರಕತೆ ಏನು ಎಂದು ಕೇಳಿ, ಚರ್ಚೆಗಳನ್ನು ನಡೆಸಿ ಬಳಿಕ ಸಿನಿಮಾವನ್ನು ಒಪ್ಪಿಕೊಳ್ಳಬೇಕಿದೆ. ಕನ್ನಡದ ಹಲವು ನಟರು, ಕತೆಯನ್ನೇ ಕೇಳದೆ ಕೇವಲ ಸಂಭಾವನೆ ಮಾತನಾಡಿ ಸಿನಿಮಾ ಒಪ್ಪಿಕೊಳ್ಳುವ ಪರಿಪಾಠವೂ ಇದೆ. ಇದರಿಂದ ಇನ್ನಷ್ಟು ಕಳಪೆ ಸಿನಿಮಾಗಳು ಬರುತ್ತವೆ, ನಟರ ಸ್ಟಾರ್ ಗಿರಿಯೂ ಕಡಿಮೆ ಆಗುತ್ತದೆ ಅಷ್ಟೆ.


Click it and Unblock the Notifications











