ಕಥೆ ಕೇಳಿ 'ಮುಂಗಾರು ಮಳೆ' ಚಿತ್ರದಲ್ಲಿ ನಟಿಸಲು ಪುನೀತ್ ರಾಜ್‌ಕುಮಾರ್ ಒಲ್ಲೆ ಅಂದಿದ್ದೇಕೆ?
ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಣೇಶ್ ನಟನೆಯ 'ಮುಂಗಾರುಮಳೆ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದು ಗೊತ್ತೇಯಿದೆ. ಅಸಲಿಗೆ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಬೇಕಿತ್ತು. ರಾಘಣ್ಣ- ಅಪ್ಪು ಕತೆ ಕೂಡ ಕೇಳಿದ್ದರು. ಆದರೆ ಬಳಿಕ ಚಿತ್ರದಲ್ಲಿ ನಟಿಸದಿರಲು ಪುನೀತ್ ನಿರ್ಧರಿಸಿದ್ದರು. ಅದಕ್ಕೆ ಕಾರಣವೂ ಇದೆ.
ಯಾರಿಗೆ ಏನ್ ಸಿಗಬೇಕೋ ಅದು ಸಿಕ್ಕೇ ಸಿಗುತ್ತದೆ. ಬಹುಶಃ ಗಣೇಶ್ 'ಮುಂಗಾರುಮಳೆ' ಚಿತ್ರದಲ್ಲಿ ಇದ್ದಿದ್ದರೆ ಆ ಮಟ್ಟಿಗಿನ ಸಕ್ಸಸ್ ಚಿತ್ರರಂಗದಲ್ಲಿ ಸಿಗುತ್ತಿರಲಿಲ್ಲ ಅನ್ಸತ್ತೆ. ಅದೊಂದು ಚಿತ್ರದಿಂದ ಗಣಿ ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಈ ಕಥೆ ಪುನೀತ್ ಸರ್‌ಗೆ ಹೇಳಿದ್ದೆ ಎಂದು ಯೋಗರಾಜ್ ಭಟ್ ಸಾಕಷ್ಟು ಬಾರಿ ಹೇಳಿದ್ದಾರೆ. ಗಣೇಶ್ ಕೂಡ ಅಪ್ಪು ಸರ್ ಆ ಚಿತ್ರ ಕೈಬಿಟ್ಟಿದ್ದಕ್ಕೆ ನನಗೆ ಆ ಅವಕಾಶ ಸಿಕ್ತು ಎಂದು ಹೇಳಿಕೊಂಡಿದ್ದಾರೆ.

ಅಂದಾಜು ಎರಡ್ಮೂರು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಮುಂಗಾರುಮಳೆ' ಸಿನಿಮಾ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಯೋಗರಾಜ್ ಭಟ್ ನಿರ್ದೇಶನ ಗಣೇಶ್ ನಟನೆಯನ್ನು ಕನ್ನಡ ಸಿನಿರಸಿಕರು ಇನ್ನು ಮರೆತ್ತಿಲ್ಲ. ಮನೋಮೂರ್ತಿ ಸಂಗೀತದಲ್ಲಿ ಮೂಡಿ ಬಂದಿದ್ದ ಹಾಡುಗಳು ಇವತ್ತಿಗೂ ಅಭಿಮಾನಿಗಳ ಹಾಟ್ ಫೇವರಿಟ್.
ಅದಾಗಲೇ ಎಂಗೇಜ್‌ಮೆಂಟ್ ಆಗಿರುವ ಹುಡುಗಿ ಮತ್ತೊಬ್ಬ ಹುಡುಗ ಪ್ರೀತಿಯಲ್ಲಿ ಬೀಳುವುದು 'ಮುಂಗಾರುಮಳೆ' ಒನ್‌ಲೈನ್ ಸ್ಟೋರಿ. ಸಿಂಪಲ್ ಕಥೆಗೆ ಯೋಗರಾಜ್ ಭಟ್ ಹಾಗೂ ಪ್ರೀತಂ ಗುಬ್ಬಿ ಟ್ರೀಟ್‌ಮೆಂಟ್ ಚೆನ್ನಾಗಿತ್ತು. ಪ್ರೀತಂ ಪಾತ್ರದಲ್ಲಿ ಗಣೇಶ್ ಅಭಿನಯ ಮೋಡಿ ಮಾಡಿತ್ತು. ನಾಯಕಿಯಾಗಿ ಪೂಜಾ ಗಾಂಧಿ ಗಮನ ಸೆಳೆದಿದ್ದಾರೆ. ಎಸ್. ಕೃಷ್ಣ ಛಾಯಾಗ್ರಹಣ ಜಾದೂ ಮಾಡಿತ್ತು. ಇ. ಕೃಷ್ಣಪ್ಪ ಸಿನಿಮಾ ನಿರ್ಮಿಸಿ ಗೆದ್ದಿದ್ದರು.
ಕನ್ನಡ ಚಿತ್ರರಂಗದಲ್ಲಿ 'ಮುಂಗಾರುಮಳೆ' ಬಂಗಾರದ ಬೆಳೆ ತೆಗೆದಿತ್ತು. ಅಪ್ಪು ಸರ್ ನಟಿಸಿದ್ದರೆ ಸಖತ್ತಾಗಿ ಇರ್ತಿತ್ತು ಎಂದು ಅವರ ಅಭಿಮಾನಿಗಳು ಇವತ್ತಿಗೂ ಅಂದುಕೊಳ್ಳುತ್ತಾರೆ. ಅಷ್ಟಕ್ಕೂ ಕಥೆ ಕೇಳಿ ಅಪ್ಪು, ರಾಘಣ್ಣ ಹೇಳಿದ್ದೇನು? ಇಂತಹ ಒಳ್ಳೆಯ ಕಥೆಯನ್ನು ಪುನೀತ್ ಯಾಕೆ ನಟಿಸಲು ಒಪ್ಪಿಕೊಳ್ಳಲಿಲ್ಲ ಎನ್ನುವ ಪ್ರಶ್ನೆ ಕೂಡ ಕೆಲವರನ್ನು ಕಾಡುತ್ತಲೇ ಇದೆ.
ಹಿಂದೆ ಕಿರುತೆರೆಯಲ್ಲಿ 'ಗೋಲ್ಡನ್ ಗ್ಯಾಂಗ್' ಎನ್ನುವ ಶೋ ಬರ್ತಿತ್ತು. ಒಮ್ಮೆ ನಿರ್ದೇಶಕರಾದ ಯೋಗರಾಜ್ ಭಟ್ ಹಾಗೂ ಪ್ರೀತಂ ಗುಬ್ಬಿ ಅತಿಥಿಗಳಾಗಿ ಬಂದಿದ್ದರು. ಈ ವೇಳೆ 'ಮುಂಗಾರುಮಳೆ' ಕಥೆ ಹೇಳಿದ ದಿನ ಅಪ್ಪು, ರಾಘಣ್ಣ ಏನು ಹೇಳಿದ್ದರು ಎಂದು ಯೋಗರಾಜ್ ಭಟ್ ನೆನಪಿಸಿಕೊಂಡಿದ್ದರು. ಅಂದು ಕಥೆ ಹೇಳಲು ಪ್ರೀತಂ ಗುಬ್ಬಿ ಕೂಡ ಗಾಂಧಿನಗರದಲ್ಲಿರುವ ವಜ್ರೇಶ್ವರಿ ಸಂಸ್ಥೆ ಕಛೇರಿಗೆ ಹೋಗಿದ್ದರಂತೆ.
ನಾವು 'ಮುಂಗಾರುಮಳೆ' ಕಥೆಯನ್ನು ಆರೇಳು ನಿರ್ಮಾಪಕರಿಗೆ ಹೇಳಿದ್ದೆವು. ಆದರೆ ನಮಗೆ ಸರಿಯಾಗಿ ಸಲಹೆ ಕೊಟ್ಟವರು ಅಪ್ಪು ಸರ್ ಮತ್ತು ರಾಘಣ್ಣ. ಒಂದು ಒಳ್ಳೆ ಚಿತ್ರಕ್ಕೆ ಏನು ಬೇಕೋ ಅದು ಚಿತ್ರದಲ್ಲಿದೆ. ಅಪ್ಪು ಸರ್ ಅದಾಗಲೇ ಹೀರೊ ಆಗಿ ಚಿತ್ರರಂಗಕ್ಕೆ ಬಂದಿದ್ದರು. ಅವರ ಇಮೇಜ್‌ಗೆ ತಕ್ಕಂತೆ ಮತ್ತೆ ಏನೇನೋ ಬರೆದು ಗಬ್ಬು ಎಬ್ಬಿಸಬೇಡಿ ಎಂದು ಅವರಿಬ್ಬರು ಅಂದು ಹೇಳಿದ್ದಾಗಿ ನೆನಪಿಸಿಕೊಂಡಿದ್ದರು.
ಈ ಕಥೆ ತುಂಬಾ ಚೆನ್ನಾಗಿದೆ. ಒಳ್ಳೆ ಸಿನಿಮಾ ಆಗುತ್ತದೆ. ಒಬ್ಬ ಹೊಸ ನಟನನ್ನು ಹಾಕಿಕೊಳ್ಳಿ ಎಂದು ಮೊದಲು ಹೇಳಿದ್ದು ರಾಘಣ್ಣ ಮತ್ತು ಅಪ್ಪು ಸರ್. ನಾನು ಹಾಗೂ ಪ್ರೀತಂ ಇಬ್ಬರೂ ಅವತ್ತು ಹೋಗಿದ್ದೆವು. ಅವತ್ತು ಅವರಿಬ್ಬರು ಕೊಟ್ಟಿದ್ದು ಎಷ್ಟು ಒಳ್ಳೆಯ ಸಲಹೆ ಅಂದ್ರೆ, ಅದು ದೊಡ್ಮನೆ ಅಂತ ಸುಮ್ಮನೆ ಹೇಳುವುದಲ್ಲ. ತುಂಬಾ ಅನುಭವ ಇರುವ ಮನೆ ಅದು ಎಂದು ಯೋಗರಾಜ್ ಭಟ್ ನೆನಪಿಸಿಕೊಂಡಿದ್ದರು.
ಭಟ್ರ ಮಾತು ಕೇಳಿ ಗಣೇಶ್ ಕೂಡ ಅವತ್ತು ಅವರು ಹೊಸಬರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಆ ಸಿನಿಮಾ ನನಗೆ ಸಿಕ್ತು. ಆಗ ಇನ್ನು ಚಿತ್ರಕಥೆಗೆ ಡೈಲಾಗ್ಸ್ ಕೂಡ ಬರೆದಿರಲಿಲ್ಲ ಎಂದು ಯೋಗರಾಜ್ ಭಟ್ ವಿವರಿಸಿದ್ದರು. ಸದ್ಯ ದೊಡ್ಮನೆ ಅಭಿಮಾನಿಗಳು ಈ ವೀಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.


Click it and Unblock the Notifications











