17 ವರ್ಷಗಳ ಹಿಂದೆ 'ಮುಸ್ಸಂಜೆ ಮಾತು' ಚಿತ್ರದ ಬಜೆಟ್ ಎಷ್ಟು? ಕಲೆಕ್ಷನ್ ಎಷ್ಟಾಗಿತ್ತು?
ಕಿಚ್ಚ ಸುದೀಪ್ ಹಾಗೂ ರಮ್ಯಾ ನಟನೆಯ ರೊಮ್ಯಾಂಟಿಕ್ ಲವ್ ಸ್ಟೋರಿ 'ಮುಸ್ಸಂಜೆ ಮಾತು'. ಸುರೇಶ್ ಜೈನ್ ನಿರ್ಮಾಣದ ಈ ಚಿತ್ರವನ್ನು ಮುಸ್ಸಂಜೆ ಮಹೇಶ್ ನಿರ್ದೇಶನ ಮಾಡಿದ್ದರು. ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಿಂದ ಬಹಳ ಭಿನ್ನವಾಗಿ ಚಿತ್ರವನ್ನು ಕಟ್ಟಿ ಕೊಡಲಾಗಿತ್ತು.
'ಗೂಳಿ' ಚಿತ್ರದಲ್ಲಿ ಖಡಕ್ ಅವತಾರದಲ್ಲಿ ಅಬ್ಬರಿಸಿದ್ದ ಸುದೀಪ್ ತೂಕ ಇಳಿಸಿಕೊಂಡು ಲವರ್ ಬಾಯ್ ಆಗಿ ಈ ಚಿತ್ರದಲ್ಲಿ ಮಿಂಚಿದ್ದರು. ರೇಡಿಯೋ ಜಾಕಿ ಪ್ರದೀಪ್ ಆಗಿ ಮೋಡಿ ಮಾಡಿದ್ದರು. ಶ್ರೀಧರ್ ವಿ. ಸಂಭ್ರಮ್ ಸಂಗೀತದಲ್ಲಿ ಆಲ್ಬಮ್ ಹಿಟ್ ಆಗಿ 'ಮುಸ್ಸಂಜೆ ಮಾತು' ಚಿತ್ರಕ್ಕೆ ಆನೆ ಬಲ ತುಂಬಿತ್ತು. ಇತ್ತೀಚೆಗೆ ಸಿನಿಮಾ 17 ವರ್ಷ ಪೂರೈಸಿತ್ತು. ಈ ಬಗ್ಗೆ ನಟ ಸುದೀಪ್ ನೆನಪು ಮಾಡಿಕೊಂಡಿದ್ದರು.

'ಮುಸ್ಸಂಜೆ ಮಾತು' ಸಿನಿಮಾ ತಮಗೆ ಎಷ್ಟು ವಿಶೇಷ, ಆ ರೇಡಿಯೋ ಜಾಕಿ ಪಾತ್ರ, ಚಿತ್ರದ ಹಾಡುಗಳು ಎಲ್ಲದರ ಬಗ್ಗೆ ಸುದೀಪ್ ಹೇಳಿದ್ದರು. ಪಾತ್ರಕ್ಕಾಗಿ ತೂಕ ಇಳಿಸಿಕೊಂಡು ಉದ್ದ ಕೂದಲಿಗೆ ಕತ್ತರಿ ಹಾಕಿ ಕಾಣಿಸಿಕೊಂಡಿದ್ದನ್ನು ಮೆಲುಕು ಹಾಕಿದ್ದರು. ಮುಖ್ಯವಾಗಿ 'ಏನಾಗಲಿ ಮುಂದೆ ಸಾಗು ನೀ' ಹಾಡಿನ ಬಗ್ಗೆ ಮಾತನಾಡಿದ್ದರು. ಆ ಹಾಡು ತಮ್ಮ ತಾಯಿಗೆ ಬಹಳ ಇಷ್ಟವಾಗಿತ್ತು. ಅವರ ಫೋನ್ ಕಾಲರ್ ಟ್ಯೂನ್ ಅದೇ ಆಗಿತ್ತು ಎಂದಿದ್ದರು.
ಆತ ರೇಡಿಯೋ ಜಾಕಿ ಪ್ರದೀಪ್(ಸುದೀಪ್). ಪ್ರತಿದಿನ ಸಂಜೆ 'ಮುಸ್ಸಂಜೆ ಮಾತು' ಫೋನ್ ಇನ್ ಕಾರ್ಯಕ್ರಮದಲ್ಲಿ ನೊಂದ ಮನಸ್ಸುಗಳಿಗೆ ಭರವಸೆ ನೀಡುವ ಜಾದೂಗಾರ. ಆಕೆ ತನು(ರಮ್ಯಾ). ತಾಯಿಯನ್ನು ಕಳೆದುಕೊಂಡು ಕುಡುಕ ತಂದೆಯಿಂದ ದೂರಾಗಿ ಕಣ್ಣೀರಲ್ಲೇ ಕೈ ತೊಳೆಯುತ್ತಿರುತ್ತಾಳೆ. ಅಂತಹ ತನುಗೆ ಪ್ರದೀಪ್ ಭರವಸೆಯ ಮಾತುಗಳು ಜೀವನದಲ್ಲಿ ಉತ್ಸಾಹ ತುಂಬುತ್ತದೆ.
ಇಬ್ಬರೂ ಒಬ್ಬರಿಗೊಬ್ಬರು ಹತ್ತಿರವಾಗುತ್ತಾರೆ ಎಂದುಕೊಳ್ಳುವ ವೇಳೆಗೆ ತನುಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಿಯವಾಗಿಬಿಡುತ್ತದೆ. ಮುಂದೇನು ಎನ್ನುವುದು 'ಮುಸ್ಸಂಜೆ ಮಾತು' ಚಿತ್ರದ ಇನ್ನುಳಿದ ಕಥೆ. ಇವತ್ತಿಗೂ ಈ ಚಿತ್ರದ ಹಾಡುಗಳನ್ನು ಕನ್ನಡ ಸಿನಿರಸಿಕರು ಮರೆತ್ತಿಲ್ಲ.
'ಕದ್ದಲು ಮನಸ್ಸನ್ನ', 'ನಿನ್ನ ನೋಡಲೆಂತೋ', 'ಮುಸ್ಸಂಜೆ ಮಾತಲಿ' ಹೀಗೆ ಚಿತ್ರದ ಎಲ್ಲಾ ಹಾಡುಗಲೂ ಸೂಪರ್ ಹಿಟ್ ಆಗಿತ್ತು. ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಚಿತ್ರದ 3 ಹಾಡುಗಳಿಗೆ ಸಾಹಿತ್ಯ ಬರೆದಿದ್ದರು. 'ಅನುರಾಗ ಅರಳೋ ಸಮಯ' ಹಾಡಿಗೆ ಕವಿರಾಜ್ ಲೇಖನಿ ಹಿಡಿದಿದ್ದರು. ರೇವಣ್ಣ, ಭಾಸ್ಕರ್ ಗುಬ್ಬಿ, ರಾಮ್ ನಾರಾಯಣ್ ಕೂಡ ತಲಾ ಒಂದೊಂದು ಹಾಡಿಗೆ ಸಾಹಿತ್ಯ ಪೋಣಿಸಿದ್ದರು.
ತನು ಸ್ನೇಹಿತೆ ಸ್ನೇಹಾ ಪಾತ್ರದಲ್ಲಿ ಅನು ಪ್ರಭಾಕರ್ ನಟಿಸಿದ್ದರು. ರಮೇಶ್ ಭಟ್, ಸುಮಿತ್ರಾ, ಪದ್ಮಾ ವಾಸಂತಿ, ಮಂಡ್ಯ ರಮೇಶ್, ಗಂಗಾವತಿ ಪ್ರಾಣೇಶ್, ಹೊನ್ನವಳ್ಳಿ ಕೃಷ್ಣ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಸುಂದರ್‌ನಾಥ್ ಸುವರ್ಣ ಛಾಯಾಗ್ರಹಣ 'ಮುಸ್ಸಂಜೆ ಮಾತು' ಚಿತ್ರದ ಮತ್ತೊಂದು ಹೈಲೆಟ್.
ಅವತ್ತಿನ ಕಾಲಕ್ಕೆ ಅಂದಾಜು 3 ಕೋಟಿ 20 ಲಕ್ಷ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಸ್ಯಾಟಲೈಟ್ ಹಾಗೂ ಥ್ರಿಯೇಟ್ರಿಕಲ್ ರೈಟ್ಸ್ ಸೇರಿ 4.50 ಕೋಟಿ ರೂ.ವರೆಗೆ ಸಿನಿಮಾ ಗಳಿಕೆ ಮಾಡಿತ್ತು ಎನ್ನಲಾಗುತ್ತದೆ. ಚಿತ್ರಕ್ಕಾಗಿ ನಟ ಸುದೀಪ್ ಅವರಿಗೆ 75 ಲಕ್ಷ ರೂ. ಸಂಭಾವನೆ ಸಿಕ್ಕಿತ್ತು ಎನ್ನುವ ಊಹಾಪೋಹ ಕೂಡ ಇದೆ. ಅದೆಲ್ಲಾ ಏನೇ ಇದ್ದರೂ 'ಮುಸ್ಸಂಜೆ ಮಾತು' ಚಿತ್ರವನ್ನು ಸುದೀಪಿಯನ್ಸ್ ಮರೆಯೋಕೆ ಸಾಧ್ಯವಿಲ್ಲ. 'ಏನಾಗಲಿ ಮುಂದೆ ಸಾಗು ನೀ' ಹಾಡು ಸದಾ ಹಚ್ಚ ಹಸಿರಾಗಿರುತ್ತದೆ.


Click it and Unblock the Notifications











