ಕನ್ನಡಿಗರ ಕಣ್ಮಣಿ ರಾಜ್‌ಕುಮಾರ್ ಕನ್ನಡಿಗರಿಗೆ ಕೊಟ್ಟಿದ್ದೇನು ? ಕನ್ನಡ ಚಿತ್ರರಂಗಕ್ಕೆ ಮಾಡಿದ್ದೇನು ?
ಡಾ. ರಾಜಕುಮಾರ್ ಅವರು ಶ್ರಮ ಸಂಕಟಗಳಿಲ್ಲದೆ ಎತ್ತರೆತ್ತರಕ್ಕೆ ಬೆಳೆದವರಲ್ಲ.ಸಾಮಾಜಿಕ ಅವಮಾನಗಳನ್ನು ಮೌನದಲ್ಲೇ ಅನುಭವಿಸಿ, ಅರಗಿಸಿ, ಅರಳುತ್ತ ಬಂದವರು. ಅವರು ಕೆರಳಿದ್ದು ಕಡಿಮೆ, ಅರಳಿದ್ದು ಅಧಿಕ. ಇಂತಹ ಡಾ.ರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ, ಕನ್ನಡಿಗರಿಗೆ ಮಾಡಿದ್ದೇನು ? ಕೊಟ್ಟಿದ್ದೇನು ? ಎನ್ನುವ ಪ್ರಶ್ನೆಯನ್ನು ಆಗಾಗ ಕೆಲವರು ಕೇಳುತ್ತಿರುತ್ತಾರೆ. ಯಾಕೆಂದರೆ ಕೆಲವರಿಗೆ ರಾಜಕುಮಾರ್ ಅವರ ಕೊಡುಗೆಯ ಬಗ್ಗೆ ಅನಗತ್ಯ ಅನುಮಾನಗಳಿವೆ.
ಅವರು ದೊಡ್ಡ ಕಲಾವಿದರೆಂಬುದು ನಿಜ. ಆದರೆ ಸಮಾಜಕ್ಕೆ, ಜನರಿಗೆ ಅವರ ಕೊಡುಗೆ ಏನು? ಎಂಬ ಪ್ರಶ್ನೆಯನ್ನು ನಿರಂತರವಾಗಿ ಕೇಳುವವರು ಇದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ರಾಜಕುಮಾರ್ ಅವರ ಕೆಲವು ಸಾಮಾಜಿಕ ಕಾರ್ಯಗಳನ್ನು ಸಾದರಪಡಿಸುವ ಕೆಲಸವವನ್ನು ತುಂಬಾ ಹಿಂದೆಯೇ ಕನ್ನಡದ ಖ್ಯಾತ ನಿರ್ದೇಶಕ ಮತ್ತು ಡಾ.ರಾಜ್ ಕುಮಾರ್ ಅವರನ್ನು ತುಂಬಾ ಹತ್ತಿರದಿಂದ ಬಲ್ಲ ಬರಗೂರು ರಾಮಚಂದ್ರಪ್ಪ ಅವರು ನೀಡಿದ್ದಾರೆ.

ಬಿ. ರಾಜಶೇಖರ್ ಮೂರ್ತಿ ಅವರ ಜನ ಪ್ರಕಾಶನ ಹೊರತಂದಿರುವ ತಮ್ಮ ಜನಪದ ನಾಯಕ ಎಂಬ ಅಮೂಲ್ಯವಾದ ಕೃತಿಯಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಕೃತಿಯಲ್ಲಿ ಉಲ್ಲೇಖವಾದ ಕೆಲ ಆಸಕ್ತಿಕರ ವಿಚಾರಗಳನ್ನು ನಾವು ನಿಮ್ಮ ಮುಂದೆ ಇಲ್ಲಿ ಇಟ್ಟಿದ್ದೇವೆ.
ಬರಗೂರು ರಾಮಚಂದ್ರಪ್ಪ ಅವರ ಜನಪದ ನಾಯಕದ ಆಯ್ದ ಭಾಗ - 01
ಕಲಾವಿದರಾಗಿ ಕಲೆಗೆ ಹಾಗೂ ಸದಭಿರುಚಿಗೆ ಅನ್ಯಾಯ ಮಾಡದಿದ್ದರೆ ಅದೇ ಒಂದು ಸಾಮಾಜಿಕ ಕೊಡುಗೆಯೆಂಬ ತಿಳುವಳಿಕೆ ಅನೇಕರಿಗೆ ಇಲ್ಲದಿರಬಹುದು. ಒಂದು ವೇಳೆ ಈ ತಿಳುವಳಿಕೆಯಿದ್ದರೂ ಜನರಿಂದ ಅಪಾರ ಮನ್ನಣೆ ಗಳಿಸಿದ ರಾಜಕುಮಾರ್ ಅವರಿಂದ ಒಂದಷ್ಟು ಲೌಕಿಕ ಸೇವೆಯ ಅಗತ್ಯವಿದೆಯೆಂದು ಭಾವಿಸಿರಬಹುದು.
ರಾಜಕುಮಾರ್ ಅವರು ಏನೆಲ್ಲ ಮಾಡಿದರೆಂಬ ಮಾಹಿತಿ ಇಲ್ಲದೆ ಇರುವುದೂ ಇಂಥ ತಪ್ಪು ತಿಳುವಳಿಕೆಗೆ ಕಾರಣವಿರಬಹುದು. ಇಂತಹ ಸಕಾರಣಗಳ ಹೊರತಾಗಿ ಅಸಹನೆಯ ಆಕ್ಷೇಪಾನಂದರೂ ಕೆಲವರಿರಬಹುದು. ಈ ಎಲ್ಲ ಹಿನ್ನೆಲೆಯಲ್ಲಿ ರಾಜಕುಮಾರ್ ಅವರ ಕೆಲವು ಸಾಮಾಜಿಕ ಕಾರ್ಯಗಳ ಆಯ್ದ ಉದಾಹರಣೆಗಳು ಇಲ್ಲಿವೆ.
1.ರಾಜಕುಮಾರ್ ಅವರು ಪ್ರಸಿದ್ಧ ಚಲನಚಿತ್ರ ಕಲಾವಿದರಾದ ಮೇಲೆಯೂ ರಂಗಭೂಮಿಯನ್ನು ಮರೆಯಲಿಲ್ಲ. ಕಷ್ಟದಲ್ಲಿರುವ ವೃತ್ತಿ ರಂಗಭೂಮಿ ಸಂಸ್ಥೆಗಳಿಗಾಗಿ ಸಹಾಯಾರ್ಥ ನಾಟಕಗಳನ್ನಾಡಿ ಹೆಚ್ಚು ಹಣ ಸಂಗ್ರಹಕ್ಕೆ ಕಾರಣರಾದರು. ಬಿಡುವಿನ ಸಂದರ್ಭಗಳಲ್ಲಿ ಯಾರು ಕರೆದರೂ ಬಂದು ನಾಟಕಗಳಲ್ಲಿ ಅಭಿನಯಿಸಿದರು. ರಂಗಭೂಮಿ ಕಲಾವಿದರ ಮಕ್ಕಳ ಮದುವೆಗಳಿಗೂ ಸಹಾಯಾರ್ಥ ಪ್ರದರ್ಶನ ಕೊಟ್ಟ ಉದಾಹರಣೆಗಳಿವೆ. ಕರೆದ ಕಡೆಯೆಲ್ಲ ಹೋಗಲು ಸಾಧ್ಯವಾಗದೆ ಇದ್ದಿರಬಹುದಾದರೂ ಈ ಸಹಾಯಾರ್ಥ ನಾಟಕ ಪ್ರದರ್ಶನಗಳನ್ನು ಮರೆಯಲಾಗದು.
2.ಕರ್ನಾಟಕದ ಜನರು 1961ರಲ್ಲಿ ಪ್ರವಾಹ ಪೀಡಿತರಾಗಿ ಕಷ್ಟನಷ್ಟಗಳಿಗೆ ಒಳಗಾದಾಗ ಪ್ರಜಾವಾಣಿ ಪತ್ರಿಕೆಯ ಆಶಯದಂತೆ ರಾಜಕುಮಾರ್ ಅವರು ಕನ್ನಡದ ಎಲ್ಲ ಚಲನಚಿತ್ರ ಕಲಾವಿದರ ನೇತೃತ್ವ ವಹಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂತ್ರಸ್ತ ಜನರಿಗಾಗಿ ನಿಧಿ ಸಂಗ್ರಹ ಮಾಡಿದರು. ಇದೊಂದು ಅಪರೂಪದ ಸಾಮಾಜಿಕ ಕಾರ್ಯವಾಗಿತ್ತು.
3.ಡಬ್ಬಿಂಗ್ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರರಂಗಕ್ಕೆ ಧಕ್ಕೆಯಾದಾಗ ಡಬ್ಬಿಂಗ್ ವಿರೋಧಿ ಚಳವಳಿಗೆ ಬೆಂಬಲವಾಗಿ ನಿಂತರು. ಕಡೇ ಉಸಿರಿರುವವರೆಗೆ ಕನ್ನಡ ಚಿತ್ರಗಳ ಉಳಿವಿಗಾಗಿ ಚಿತ್ರೋದ್ಯಮದ ಹೋರಾಟಗಳಲ್ಲಿ ಭಾಗವಹಿಸಿದರು.
4. ಬಹು ಮುಖ್ಯವಾದ ಅಂಶವೊಂದನ್ನು ಇಲ್ಲಿ ಹೇಳಬೇಕು. ಚಿತ್ರರಂಗದ ಯಾವುದೇ ಕಲಾವಿದರು - ತಂತ್ರಜ್ಞರು ಖಾಯಿಲೆ ಇದ್ದಾಗ ರಾಜಕುಮಾರ್ ಅವರು ಸ್ಪಂದಿಸುತ್ತಿದ್ದ ರೀತಿ ಅಪರೂಪದ್ದು. ತಾವಾಗಿಯೇ ಹೋಗಿ ಅಥವಾ ಶ್ರೀಮತಿ ಪಾರ್ವತಮ್ಮನವರನ್ನು ಕಳುಹಿಸಿ, ಒಂದಿಷ್ಟು ಧನ ಸಹಾಯ ಮಾಡಿ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡುತ್ತಿದ್ದರು. ಆದರೆ ಈ ಕೆಲಸಕ್ಕೆ ಪ್ರಚಾರ ಬಯಸುತ್ತಿರಲಿಲ್ಲ. ನಾನು ಈ ಬಗ್ಗೆ ಅವರಲ್ಲಿ ಕೇಳಿದಾಗ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಇದಕ್ಕೆಲ್ಲ ಪ್ರಚಾರ ಯಾಕೆ ಎಂದು ನಸು ನಕ್ಕರು. ಇವರಿಂದ ನೂರಾರು ಜನರಿಗೆ ಸಹಾಯವಾದದ್ದು ಮಾತ್ರ ಪ್ರಚಾರ ರಹಿತ ಸತ್ಯ. ಈ ರೀತಿಯ ಸಹಾಯ ರಾಜ್ ಕುಟುಂಬದವರಿಂದ ಈಗಲೂ ಮುಂದುವರೆದಿದೆ.
5. ತಮ್ಮ ಅಭಿನಯದ ಚಿತ್ರಗಳು ಸೋತಾಗ ನಿರ್ಮಾಪಕರಿಗೆ ನೆರವಾದ ನಟರ ಬಗ್ಗೆ ಈಗ ಸಾಕಷ್ಟು ಪ್ರಚಾರವಾಗುತ್ತಿದೆ. ಹೀಗೆ ನಿರ್ಮಾಪಕರಿಗೆ ರಾಜಕುಮಾರ್ ಅವರು ಅವತ್ತಿನ ದಿನಗಳಲ್ಲೇ ನೆರವು ನೀಡಿದ ಅಂಶ ಕೆಲವರಿಗೆ ಮಾತ್ರ ಗೊತ್ತಿದೆ. ರಾಜಕುಮಾರ್ ಅವರ ಚಿತ್ರಗಳಿಂದ ತಮಗೆ ಲಾಭವಾಗಲಿಲ್ಲ ಎಂದು ಕೆಲವರು ಗೊಣಗುತ್ತಿದ್ದ ಸುದ್ದಿ ರಾಜ್ ಕಿವಿಗೆ ಬೀಳುತ್ತದೆ. ಆದರಿದು ಪೂರ್ಣಸತ್ಯವಾಗಿರಲಿಲ್ಲ.
ರಾಜಕುಮಾರ್ ಅವರು ಆಗ ಪ್ರಸಿದ್ಧರಾಗಿದ್ದ ಒಬ್ಬ ಪ್ರೊಡಕ್ಷನ್ ಮ್ಯಾನೇಜರ್ ಅವರನ್ನು ಕರೆದು ಯಾರ‍್ಯಾರು ಹೀಗೆ ಮಾತಾಡುತ್ತಿದ್ದಾರೆ ಪತ್ತೆ ಹಚ್ಚಿ ಹೇಳಿ ಎಂದು ಕೇಳಿದರು. ಆ ಪ್ರೊಡಕ್ಷನ್ ಮ್ಯಾನೇಜರ್ ಒಟ್ಟು ಹನ್ನೊಂದು ಜನ ನಿರ್ಮಾಪಕರನ್ನು ಗುರುತಿಸಿದರು. ರಾಜ್ ಅವರು ಒಬ್ಬೊಬ್ಬ ನಿರ್ಮಾಪಕರನ್ನೂ ಕರೆದು ನಿಮಗೆ ಫ್ರೀ ಡೇಟ್ಸ್ ಕೊಡುತ್ತೇನೆ, ಮತ್ತೊಂದು ಸಿನಿಮಾ ಮಾಡಿ ಎಂದು ಸಹಾಯ ಹಸ್ತ ನೀಡಿದರು.
ಈ ನಿರ್ಮಾಪಕರ ಮಾಹಿತಿ ನೀಡಿದ ಪ್ರೊಡಕ್ಷನ್ ಮ್ಯಾನೇಜರ್‌ಗೂ ಫ್ರೀ ಡೇಟ್ಸ್ ಕೊಡುವೆ, ನೀವೇ ಒಂದು ಸಿನಿಮಾ ಮಾಡಿ ಎಂದು ವಾಗ್ದಾನ ಮಾಡಿದರು. ಹೀಗೆ ನಷ್ಟಕ್ಕೊಳಗಾದೆವೆಂದು ಪ್ರಚಾರ ಮಾಡುತ್ತಿದ್ದ ನಿರ್ಮಾಪಕರಿಗೆ ಅಂದಿನ ದಿನಗಳಲ್ಲೇ ಸ್ವಯಂ ಅಪೇಕ್ಷೆಯಿಂದ ನೆರವಿಗೆ ನಿಂತ ರಾಜಕುಮಾರ್ ಅವರು ತಮ್ಮ ಚಿತ್ರಗಳಿಂದ ಬೇರೆಯವರಿಗೇಕೆ ನಷ್ಟವಾಗಬೇಕೆಂದು ಭಾವಿಸಿ ಪಾರ್ವತಮ್ಮನವರಿಗೆ ಪ್ರೇರಣೆ ನೀಡಿದ ಫಲವಾಗಿ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಹುಟ್ಟಿಕೊಂಡಿತು. ವಿತರಣೆ ಮತ್ತು ನಿರ್ಮಾಣಕ್ಕೆ ರಾಜ್ ಕುಟುಂಬ ಕೈ ಹಾಕಿತು.
6. ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣವಾಗಿರುವ ಅನೇಕ ರಂಗಮಂದಿರಗಳಿಗೆ ಸಹಾಯಾರ್ಥ ರಸಮಂಜರಿ ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ರಾಜಕುಮಾರ್ ಅವರಿಗೆ ಸಲ್ಲುತ್ತದೆ. ಆಯಾ ಜಿಲ್ಲೆಗೆ ತಮ್ಮ ತಂಡದೊಂದಿಗೆ ಹೋಗಿ ಪ್ರದರ್ಶನ ನೀಡಿ ಧನಸಂಗ್ರಹ ಮಾಡಿಕೊಟ್ಟದ್ದು ಒಂದು ಮುಖ್ಯ ಸಾಂಸ್ಕೃತಿಕ ಕೆಲಸ.
7.ರಾಜಕುಮಾರ್ ಅವರು ರಸಮಂಜರಿ ಕಾರ್ಯಕ್ರಮಗಳಿಂದ ಬಂದ ಗೌರವಧನ ಹಾಗೂ ಗಾಯನದಿಂದ ಬಂದ ಸಂಭಾವನೆಯ ಬಹುಪಾಲನ್ನು ಶಕ್ತಿಧಾಮ ಸಂಸ್ಥೆಗೆ ನೀಡುತ್ತಾ ಬಂದರು. ಶಕ್ತಿಧಾಮವು ಪಾರ್ವತಮ್ಮನವರ ನೇತೃತ್ವದಲ್ಲಿ ನಡೆಯುತ್ತಿರುವ ಸಂಸ್ಥೆ. ಬೀದಿಗೆ ಬಿದ್ದ ಹೆಣ್ಣುಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಈ ಸಂಸ್ಥೆ ಮೈಸೂರಿನಲ್ಲಿದ್ದು ನೂರಾರು ಮಹಿಳೆಯರಿಗೆ ಆಶ್ರಯ ನೀಡಿದೆ. ನೀಡುತ್ತಿದೆ. ಇದೊಂದು ಶ್ಲಾಘನೀಯ ಸಾಮಾಜಿಕ ಕಾರ್ಯವಾಗಿದೆ.
8.ದಾದಾಫಾಲ್ಕೆ ಪ್ರಶಸ್ತಿಯ ಹಣವನ್ನು ರಾಜಕುಮಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದರು. ಒಂದು ಸಾಹಿತ್ ದತ್ತಿ ಸ್ಥಾಪನೆಗೆ ಕಾರಣರಾದರು.
9. ಗೋಕಾಕ್ ಚಳವಳಿಯೆಂದೇ ಪ್ರಸಿದ್ಧವಾದ ಕನ್ನಡಪರ ಹೋರಾಟದಲ್ಲಿ ಸಕ್ರಿಂiiರಾಗಿ ಪಾಲ್ಗೊಂಡ ರಾಜಕುಮಾರ್ ಅವರು ತಿಂಗಳಾನುಕಾಲ ಕರ್ನಾಟಕದಾದ್ಯಂತ ಸಂಚರಿಸಿ ಕನ್ನಡಪರ ಜಾಗೃತಿ ಮೂಡಿಸಿದ್ದು ಎಂದೂ ಮರೆಯಲಾಗದ ಸನ್ನಿವೇಶವಾಗಿದೆ. ಇಡೀ ಕನ್ನಡ ಚಿತ್ರೋದ್ಯಮದ ತೊಡಗುವಿಕೆಯನ್ನೂ ಇಲ್ಲಿ ನೆನೆಯಬೇಕು. ಅಂತೆಯೇ ಕನ್ನಡ ಹಾಗೂ ಕರ್ನಾಟಕದ ವಿಷಯದಲ್ಲಿ ನಡೆಯುವ ಹೋರಾಟಗಳಿಗೆ ರಾಜಕುಮಾರ್ ಅವರ ಸಕ್ರಿಯ ಬೆಂಬಲ ಸದಾ ಇದ್ದದ್ದು ಇಲ್ಲಿ ಸ್ಮರಣೀಯ.
10. ಅಪಾರ ಕೀರ್ತಿ ಮತ್ತು ಹಣ ಸಂಪಾದಿಸಿದ್ದ ರಾಜಕುಮಾರ್ ಅವರು ಚಿತ್ರೋದ್ಯಮದ ಮೂಲ ಸೌಕರ್ಯಗಳಿಗಾಗಿ ಏನು ಮಾಡಿದರು - ಎಂದು ಹಿಂದಿನಿಂದಲೂ ಕೆಲವರು ಕೇಳುತ್ತಿರುವುದುಂಟು. ರಾಜಕುಮಾರ್ ಅವರು ಕೀರ್ತಿ ಮತ್ತು ಜನರ ಪ್ರೀತಿಯನ್ನು ಸಂಪಾದಿಸಿದಷ್ಟು ಹಣವನ್ನು ಸಂಪಾದಿಸಲಿಲ್ಲ. ತಾವು ಅಭಿನಯಿಸಿದ ಅನೇಕ ಚಿತ್ರಗಳಿಗೆ ಪೂರ್ಣ ಸಂಭಾವನೆಯನ್ನು ಪಡೆಯದೆ ಕೆಲಸ ಮುಗಿಸಿಕೊಟ್ಟರು.
ನೂರಾರು ಚಿತ್ರಗಳಲ್ಲಿ ನಟಿಸಿದ ನಂತರವೂ ಅವರು ಬೆಂಗಳೂರಲ್ಲಿ ಮನೆಯನ್ನು ಖರೀದಿಸಿದಾಗ 2 ಲಕ್ಷ ರೂಪಾಯಿಯ ಕೊರತೆಯುಂಟಾಗಿ ನಿರ್ಮಾಪಕರೊಬ್ಬರಿಂದ ಸಾಲ ಮಾಡಿದ್ದನ್ನು ಅವರೇ ನನಗೆ ಹೇಳಿದ್ದರು. ವೃತ್ತಿ ರಂಗಭೂಮಿ ಸಂಸ್ಥೆಗಳ ಮಾಲೀಕರು ಮತ್ತು ಚಿತ್ರ ನಿರ್ಮಾಪಕರನ್ನು ಅನ್ನದಾತರೆಂದು ಭಾವಿಸಿದ ರಾಜಕುಮಾರ್, ಅವರಿಗೆಂದೂ ಹಣಕ್ಕಾಗಿ ತೊಂದರೆ ಕೊಡಲಿಲ್ಲ.


Click it and Unblock the Notifications











