ದಿಢೀರ್ ಮದುವೆ, ಸಾಕಷ್ಟು ಊಹಾಪೋಹ, ಮದುವೆನೇ ಬೇಡ ಎಂದುಬಿಟ್ಟಿದ್ರಾ ಶಿಲ್ಪಾ ಗಣೇಶ್?
ನಟ ಗಣೇಶ್ ಹಾಗೂ ಪತ್ನಿ ಶಿಲ್ಪಾ ಗಣೇಶ್ 17ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. 'ಗಾಳಿಪಟ' ಸಿನಿಮಾ ಬಿಡುಗಡೆ ಬೆನ್ನಲ್ಲೇ ಗಡಿಬಿಡಿಯಲ್ಲಿ ಮದುವೆ ನಡೆದಿತ್ತು. ಕೇವಲ ನಾಲ್ಕೈದು ಜನ ಆಪ್ತರ ಸಮ್ಮುಖದಲ್ಲಿ ನಟ ಗಣೇಶ್, ಶಿಲ್ಪಾ ಅವರ ಕೊರಳಿಗೆ ತಾಳಿ ಕಟ್ಟಿದ್ದರು. ತಮ್ಮ ಲವ್ ಸ್ಟೋರಿ ಹಾಗೂ ಮದುವೆ ದಿಢೀರ್ ಮದುವೆ ಬಗ್ಗೆ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ವಿವರವಾಗಿ ಮಾತನಾಡಿದ್ದರು.
'ಮುಂಗಾರುಮಳೆ' ಸಿನಿಮಾ ಬಿಡುಗಡೆಗೂ ಮುನ್ನ ಕಾಮನ್ ಫ್ರೆಂಡ್ಸ್ ಮೂಲಕ ಗಣೇಶ್ ಹಾಗೂ ಶಿಲ್ಪಾ ಅವರ ಪರಿಚಯ ಆಗಿತ್ತು. ಮೊದಲಿಗೆ ಗಣೇಶ್ "ಹಾಯ್.. ದಿಸ್ ಈಸ್ ಕಾಮಿಡಿ ಟೈಂ ಗಣೇಶ್" ಎಂದು ಶಿಲ್ಪಾ ಅವರಿಗೆ ಮೆಸೇಜ್ ಮಾಡಿದ್ದರಂತೆ. ಒಂದು ದಿನವೀಡಿ ಯೋಚಿಸಿ ಅದಕ್ಕೆ ಶಿಲ್ಪಾ ರಿಪ್ಲೇ ಮಾಡಿದ್ದರಂತೆ. ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು. 2 ತಿಂಗಳ ಬಳಿಕ ಸ್ವತಃ ಗಣೇಶ್ ಪ್ರಪೋಸ್ ಮಾಡಿದ್ದರು. 'ಮುಂಗಾರುಮಳೆ' ಸಿನಿಮಾ ಬಳಿಕ ಮದುವೆ ಆಗಬೇಕು ಎಂದುಕೊಂಡು ಅದೇ ರೀತಿ ಆಗಿದ್ದರು.

ಸಿನಿಮಾ ನಟನಿಗೆ ಮಗಳನ್ನು ಕೊಡಲ್ಲ ಎಂದು ಶಿಲ್ಪಾ ಅವರ ತಾಯಿ ಹೇಳಿದ್ದರಂತೆ. ಬಳಿಕ ಗಣೇಶ್ ಅವ್ರು ಮಾತನಾಡಿ ಒಪ್ಪಿಸಿದ್ದರು. ಮದುವೆ ಆಗುವುದು ಎಂದು ನಿರ್ಧರಿಸಿದ್ದಾಗ ತಮ್ಮ ಗ್ಯಾಂಗ್‌ನಲ್ಲಿದ್ದ ನಾಲ್ಕೈದು ಜನರಿಗೆ ಫೋನ್ ಮಾಡಿ ಸಂಜೆ ಮದುವೆ ಆಗಿದ್ದಾಗಿ ಗಣೇಶ್ ವೀಕೆಂಡ್ ಶೋನಲ್ಲಿ ಹೇಳಿಕೊಂಡಿದ್ದರು. ಮದುವೆ ಆದ ಬಳಿಕ ನಾನೆಷ್ಟು ಪಾಪ್ಯೂಲರ್ ಎಂದು ಗೊತ್ತಾಯಿತು ಎಂದು ಗಣೇಶ್ ನೆನಪಿಸಿಕೊಂಡಿದ್ದರು.
"ನನ್ನ ಮದುವೆ ಬಗ್ಗೆ ಮಾಧ್ಯಮಗಳಲ್ಲಿ ಏನೇನೋ ಸುದ್ದಿ ಬಂತು. ಅದನ್ನು ನೋಡಿ ಶಾಕ್ ಜೊತೆಗೆ ಬೇಸರವಾಗಿತ್ತು, ನನ್ನ ಜನಪ್ರಿಯತೆ ಇಷ್ಟಪಟ್ಟ ಹುಡುಗಿಗೆ ಇಷ್ಟು ನೋವು ಕೊಡುತ್ತಿದ್ಯಾ? ಎನಿಸಿತ್ತು. ಮಾಧ್ಯಮಗಳಲ್ಲಿ ಏನೇನೋ ಹಾಕಿದರು, ಅದೆಲ್ಲಾ ಬುಲ್‌ಶಿಟ್. ಆ ರೀತಿ ಏನು ಇರಲಿಲ್ಲ. ಆದರೆ ಅದೇ ಸಮಯದಲ್ಲಿ ನಾನು ಮತ್ತಷ್ಟು ಸ್ಟ್ರಾಂಗ್ ಆಗಿದ್ದು ಎಂದು ಗಣೇಶ್ ವಿವರಿಸಿದ್ದರು.
ಮದುವೆ ಸಮಯದಲ್ಲಿ ಆ ಒತ್ತಡ ಎಲ್ಲಾ ನೋಡಿ ಶಿಲ್ಪಾ ಮದುವೆನೇ ಬೇಡ ಎಂದುಬಿಟ್ಟಿದ್ದರು. ನನ್ನ ಜನಪ್ರಿಯತೆ ಇಷ್ಟು ಸಮಸ್ಯೆ ಎನ್ನುವುದಾದರೆ ನಾನು ಸಿನಿಮಾಗಳಲ್ಲಿ ನಟಿಸುವುದು ಬಿಟ್ಟುಬಿಡುತ್ತೀನಿ ಎಂದು ಹೇಳಿದ್ದೆ. ನಮ್ಮಿಂದ ಯಾರಿಗಾದರೂ ತೊಂದರೆ ಆಗುತ್ತದೆ ಅಂದರೆ ಆ ತೊಂದರೆಯಿಂದ ದೂರ ಇರಬೇಕು, ಹಾಗಾಗಿ ಸಿನಿಮಾ ಬಿಡಲು ಮುಂದಾಗಿದ್ದೆ. ಆದರೆ ಮದುವೆ ಬಳಿಕ ನಿಧಾನವಾಗಿ ಎಲ್ಲಾ ಸರಿ ಹೋಯಿತು. ಇವತ್ತು ನಾನು ಏನಾದರೂ ಹೀಗೆ ಇದ್ದೀನಿ ಅಂದ್ರೆ ಅದಕ್ಕೆ ಶಿಲ್ಪಾ ಕಾರಣ ಎಂದು ಗಣೇಶ್ ತಿಳಿಸಿದ್ದರು.
'ಮುಂಗಾರುಮಳೆ', 'ಗಾಳಿಪಟ', 'ಚೆಲುವಿನ ಚಿತ್ತಾರ' ರೀತಿಯ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಗಣೇಶ್ ಗೋಲ್ಡನ್ ಸ್ಟಾರ್ ಪಟ್ಟ ಅಲಂಕರಿಸಿದರು. ಆ ಬಳಿಕ ಕೂಡ ಚಿತ್ರರಂಗದಲ್ಲಿಸ ಸಾಕಷ್ಟು ಏಳುಬೀಳುಗಳನ್ನು ಕಂಡರು. ಅದನ್ನೆಲ್ಲಾ ಮೀರಿ ಇಂದು ಮತ್ತೆ ಸ್ಟಾರ್ ನಟನಾಗಿ ಮುಂದುವರೆಯುತ್ತಿದ್ದಾರೆ. ಸೋತಾಗಲೆಲ್ಲಾ ಮತ್ತೆ ಮತ್ತೆ ಎದ್ದು ಬಂದಿದ್ದಾರೆ. ಕಳೆದ ವರ್ಷ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.
ಸದ್ಯ Yours Sincerely ರಾಮ್ ಎಂಬ ಚಿತ್ರದಲ್ಲಿ ಗಣೇಶ್ ಬಣ್ಣ ಹಚ್ಚಿದ್ದಾರೆ. ರಮೇಶ್ ಅರವಿಂದ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಾಕಷ್ಟು ಹೊಸ ಕತೆಗಳನ್ನು ಕೇಳುತ್ತಿದ್ದಾರೆ. ಇನ್ನು ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪತ್ನಿಗೆ ವಿಶ್ ಮಾಡಿದ್ದಾರೆ.


Click it and Unblock the Notifications











