ವಿಷ್ಣು ಕೈಯಲ್ಲಿದ್ದ ಕಡಗ ಕೊಟ್ಟಿದ್ಯಾರು? ಅದನ್ನು ಯಾಕೆ ಕೊನೆವರೆಗೂ ತೆಗೆಯಲಿಲ್ಲ ದಾದಾ?
ಸಾಹಸಸಿಂಹ ವಿಷ್ಣುವರ್ಧನ್. ಅಭಿಮಾನಿಗಳ ಆರಾಧ್ಯ ದೈವ. ನೋಡಲು ಸ್ಪುರದ್ರೂಪಿ, ಯಾವುದೇ ಪಾತ್ರ ಆದರೂ ಲೀಲಾಜಾಲವಾಗಿ ನಟಿಸುತ್ತಿದ್ದ ಕಲಾವಿದ. ಪುಟ್ಟಣ್ಣ ಗರಡಿಯಲ್ಲಿ ಪಳಗಿದ ಪ್ರತಿಭೆ. ವಿಭಿನ್ನ ಮ್ಯಾನರಿಸಂ, ಸ್ಟೈಲ್, ನಟನೆಯಿಂದ ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ಇನ್ನೂ ಕೂಡ ಜೀವಂತವಾಗಿದ್ದಾರೆ.
ದಾದಾ ಕೈಯಲ್ಲಿ ಕಡಗವೊಂದು ಸದಾ ಇರುತ್ತಿತ್ತು. 29 ವರ್ಷಗಳ ಕಾಲ ವಿಷ್ಣು ಕೈಯಲ್ಲಿ ಅದು ಉಳಿದುಕೊಂಡಿತ್ತು. ಸಿನಿಮಾಗಳಲ್ಲಿ ಬಲಗೈಯಲ್ಲಿ ತೊಟ್ಟ ಕಡಗವನ್ನು ತಿರುಗಿಸಿ ನಿಂತರೆ ಎದುರಿಗೆ ಇರುವ ಪುಂಡ ಪೋಕಿರಿ ಕಥೆ ಮುಗೀತು ಎಂದು ಪ್ರೇಕ್ಷಕರು ನಿರ್ಧರಿಸಿಬಿಟ್ಟಿದ್ದರು. ಆ ರೀತಿ ಕೈ ಕಡಗವನ್ನು ತಮ್ಮ ಸ್ಟೈಲ್ ಆಗಿಯೂ ಬಳಸುತ್ತಿದ್ದರು. ಆದರೆ ಈ ಕಡಗ ವಿಷ್ಣುಗೆ ಸಿಕ್ಕಿದ್ದೇ ಇಂಟ್ರೆಸ್ಟಿಂಗ್ ಸಂಗತಿ.

1980ರಿಂದ ವಿಷ್ಣುವರ್ಧನ್ ಕೈಗೆ ಕಡಗ ಧರಿಸಲು ಆರಂಭಿಸಿದರು. 'ಸಿಂಹ ಜೋಡಿ' ಚಿತ್ರದ ಮೂಲಕ ಮೊದಲ ಬಾರಿಗೆ ತೆರೆಮೇಲೆ ಕೈ ಕಡಗದೊಂದಿಗೆ ಸಾಹಸ ಸಿಂಹ ಬಂದಿದ್ದರು. ಬಳಿಕ ತಮ್ಮ ಎಲ್ಲಾ ಸಿನಿಮಾಗಳಲ್ಲೂ ಕಡಗ ಧರಿಸಯೇ ಕಾಣಿಸಿಕೊಂಡರು. ಆದರೆ ಅದೊಂದು ಚಿತ್ರ ಬಿಟ್ಟು. ಇನ್ನು ಈಗ ಆ ಕಡಗ ಎಲ್ಲಿದೆ. ಯಾರು ಅದನ್ನು ಧರಿಸುತ್ತಾರೆ ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿ ಇದೆ.
ನಟ ದರ್ಶನ್, ಸುದೀಪ್, ಅನಿರುದ್ಧ್ ತೆರೆಮೇಲೆ ಕಡಗ ಧರಿಸಿ ಕಾಣಿಸಿಕೊಂಡಿದ್ದಾರೆ. ಆದರೆ ಅದು ದಾದಾ ಕೈಲಿದ್ದ ಕಡಗ ಅಲ್ಲ. ಅಷ್ಟಕ್ಕೂ ಆ ಬಳೆ ಹೇಗೆ ತಮಗೆ ಸಿಕ್ಕಿತು ಎನ್ನುವುದರ ಬಗ್ಗೆ ವಿಷ್ಣುವರ್ಧನ್ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕಡಗ ಮಾತ್ರವಲ್ಲ ಕೊರಳಿಗೆ ನವರತ್ನದ ಸರವನ್ನು ಅವರು ತೊಡುತ್ತಿದ್ದರು. ಆ ಬಗ್ಗೆಯೂ ಮಾತನಾಡಿದ್ದರು.
"1980ರಲ್ಲಿ ಬೀದರ್‌ಗೆ ಹೋದಾಗ ಅಲ್ಲಿನ ಗುರುದ್ವಾರಕ್ಕೆ ಹೋಗಿದ್ದೆ. ಒಂದು ಕಾರ್ಯಕ್ರಮ ಇತ್ತು. ಅಲ್ಲಿ ಗುರುಗಳು ನನಗೆ ಈ ಕಡಗ ಕೊಟ್ಟರು. ಇದರ ಜೊತೆಗೆ ಒಂದು ಕತ್ತಿಯನ್ನು ನೀಡಿದ್ದರು. ಅಂದಿನಿಂದ ಅದು ನನ್ನ ಕೈಯಲ್ಲಿದೆ. ನಾನು ಮೂಲತಃ ಎಡಚ. ಹಾಗಾಗಿ ಎಡಗೈ, ಬಲಗೈ ತೂಕ ಬೇರೆ ಬೇರೆ ಇರುತ್ತದೆ. ಅನದ್ನು ಬ್ಯಾಲೆನ್ಸ್ ಮಾಡಲು ಅನಿವಾರ್ಯ, ಹಾಕಿಕೊಳ್ಳಲೇಬೇಕು ನಾನು. ಅದು ಇಲ್ಲದೇ ಕಷ್ಟ ಅನಿಸುತ್ತದೆ" ಎಂದಿದ್ದರು.

"ಅವತ್ತು ನನ್ನ ಕೈಗೆ ಬಂದ ಬಳೆ ನನ್ನ ಜೊತೆಗೆ ಇದೆ. ನನ್ನ ಜೊತೆಗೆ ಹೋಗುತ್ತದೆ ಎಂದು ನಾನು ಹೇಳುತ್ತೇನೆ. ಯಾಕಂದ್ರೆ ಇದು ನನ್ನ ಅವಿಭಾಗ್ಯ ಅಂಗ ಆಗಿದೆ. ಇದಿಲ್ಲದೇ ನಾನು ಮನೆಯಿಂದ ಹೊರಗೆ ಬರಲ್ಲ. ಸಿನಿಮಾಗಳಲ್ಲಿ ಕೂಡ ಇದನ್ನು ತೊಟ್ಟು ನಟಿಸುತ್ತೇನೆ. ಇದು ನನ್ನ ಗುರುತು ಎನ್ನುವಂತಾಗಿದೆ. ಗುರುಗಳು ಆಶೀರ್ವಾದ ಮಾಡಿ ಕೊಟ್ಟಿದ್ದು. ಪಂಜಾಬಿಗಳೇ ಹೇಳ್ತಾರೆ, ಇದು ನಮಗೆ ಸಿಗಲ್ಲ, ನಿಮಗೆ ಎಲ್ಲಿ ಸಿಕ್ತು ಅಂತ. ನನ್ನ ಅದೃಷ್ಟ, ಸಿಕ್ತು ಎನ್ನುತ್ತೇನೆ" ಎಂದು ವಿವರಿಸಿದ್ದರು.
"ಇನ್ನು ನನ್ನ ಕೊರಳಿನಲ್ಲಿರುವುದು ನವರತ್ನ ಸರ. ಆಂಟಿಕ್ ಪೀಸ್. ನಮ್ಮ ಶ್ರೀಮತಿಯವರಿಗೆ ಬಂದಿದ್ದು. ಇದರ ಬೆಲೆ ಗೊತ್ತಿಲ್ಲ. ಆದರೆ ಇದನ್ನು ನಾನೇ ಧರಿಸುತ್ತೇನೆ. ಇದನ್ನು ಧರಿಸಿದರೆ ಅದೇನೋ ವೈಬ್ರೇಷನ್. ನನಗೆ ಮಾತ್ರವಲ್ಲ ನನ್ನೊಟ್ಟಿಗೆ ಇರುವವರಿಗೂ ವೈಬ್ರೇಷನ್. ನಾನು ಚಿನ್ನದ ಒಡವೆ ಇಷ್ಟಪಡಲ್ಲ. ಇವೆರಡು ಮಾತ್ರ ಇಷ್ಟ" ಎಂದು ವಿಷ್ಣುವರ್ಧನ್ ಹೇಳಿದ್ದರು.
ವಿಷ್ಣುವರ್ಧನ್ ತಮ್ಮ ಕೈ ಕಡಗವನ್ನು ಎಲ್ಲಾ ಸಿನಿಮಾಗಳಲ್ಲಿ ಬಳಸಿದ್ದರು. ಆದರೆ 'ಗುರುಶಿಷ್ಯರು' ಚಿತ್ರದಲ್ಲಿ ಬಳಸಿರಲಿಲ್ಲವಂತೆ. ಅದು ಪೌರಾಣಿಕ ಪಾತ್ರ ಆಗಿದ್ದರಿಂದ ಇದಕ್ಕೆ ಚಿತ್ರತಂಡ ಒಪ್ಪಿಸಿತ್ತಂತೆ. ದಾದಾ ಕಾಲಾನಂತರ ಆ ಕಡಗ, ಸರ ಯಾರಿಗೂ ಕೊಡಲಿಲ್ಲ. ಅದನ್ನು ಪುತ್ರಿ ಕೀರ್ತಿ ಭದ್ರವಾಗಿ ಮನೆಯಲ್ಲಿ ಇಟ್ಟಿದ್ದರು. ಅವುಗಳನ್ನು ತಂದೆಯ ಸ್ಮಾರಕದಲ್ಲಿ ಇಡಲು ತೀರ್ಮಾನಿಸಿದ್ದರು.


Click it and Unblock the Notifications











