ತುಂಡು ಬಟ್ಟೆ ಹಾಕಿದ್ರೆ ತಪ್ಪೇನು, ಎನ್ನುವ ಸಾಯಿ ಪಲ್ಲವಿ ಎಕ್ಸ್‌ಪೋಸ್ ಯಾಕೆ ಮಾಡಲ್ಲ?
ಬಹುಭಾಷಾ ನಟಿ ಸಾಯಿ ಪಲ್ಲವಿ ಯಾವುದೇ ಎಕ್‌ಪೋಸ್ ಇಲ್ಲದೇ ಪಕ್ಕದ್ಮನೆ ಹುಡುಗಿಯಂತಹ ಪಾತ್ರಗಳಲ್ಲಿ ನಟಿಸಿರೋದೇ ಹೆಚ್ಚು. ಅಭಿನಯಕ್ಕೆ ಅವಕಾಶ ಇರುವ ಪಾತ್ರಗಳನ್ನೇ ಸಾಯಿ ಪಲ್ಲವಿ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಮೇಕಪ್ ಅಂದರೆ ಮೂಗು ಮುರಿಯುವ ಚೆಲುವೆ ಸೌಂದರ್ಯವರ್ಧಕ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಇಲ್ಲ. ಇಂತಹ ಉತ್ಪನ್ನಗಳಿಂದ ನಮ್ಮ ಚರ್ಮಕ್ಕೆ ಹಾನಿಯಾಗುತ್ತದೆ ಎಂದು ಆಕೆ ಈ ನಿರ್ಧಾರಕ್ಕೆ ಬಂದಿದ್ದಾರೆ.
ಸಾಯಿ ಪಲ್ಲವಿ ಸಿನಿಮಾಗಳಿಂದ ಮಾತ್ರವಲ್ಲ ವಿವಾದಗಳಿಂದ ಕೂಡ ಸುದ್ದಿ ಆಗಿದ್ದರು. ಕೆಲ ತಿಂಗಳ ಹಿಂದೆ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋ ಸಾಗಿಸುವವರ ಹತ್ಯೆ ಬಗ್ಗೆ ಹೋಲಿಸಿ ನೀಡಿದ್ದ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಆಕೆಯ ಸಿನಿಮಾಗಳನ್ನು ಬಾಯ್ಕಾಟ್ ಮಾಡಬೇಕು ಎಂದು ಸುದ್ದಿ ಆಗಿತ್ತು. ಇತ್ತೀಚೆಗೆ ಆಕೆ ನಟಿಸಿದ ಕೆಲ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ 'ತಂಡೇಲ್' ಸಿನಿಮಾ ಗೆದ್ದಿದೆ.

ಸದ್ಯ ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಸೀತಾಮಾತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಶ್ರೀರಾಮನಾಗಿ ರಣಬೀರ್ ಕಪೂರ್ ಹಾಗೂ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ಡೀಗ್ಲಾಮರಸ್ ಪಾತ್ರಗಳಲ್ಲೇ ಹೆಚ್ಚು ನಟಿಸುತ್ತಾರೆ. ತೆರೆಮೇಲೆ ಮಾಡ್ರನ್ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಸಲ್ವಾರ್, ಸೀರೆಯಲ್ಲೇ ಹೆಚ್ಚು ಕಂಗೊಳಿಸುತ್ತಾರೆ. ಅದೇ ರೀತಿ ಆಕೆಯನ್ನು ಅಭಿಮಾನಿಗಳನ್ನು ಹೆಚ್ಚು ಇಷ್ಟಪಡುತ್ತಾರೆ.
ನಿಮಗೆ ಗೊತ್ತಾ ತುಂಡು ಬಟ್ಟೆ ಧರಿಸುವ ಬಗ್ಗೆ ಸಾಯಿ ಪಲ್ಲವಿಗೆ ಯಾವುದೇ ಆಕ್ಷೇಪ ಇಲ್ಲ. ಅದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ಗ್ಲಾಮರ್ ಅಂದ್ರೆ ಏನು? ಗ್ಲಾಮರಸ್ ಪಾತ್ರಗಳು ಅಂದರೆ ಏನು? ಎಂದು ಆಕೆ ಪ್ರಶ್ನಿಸುತ್ತಾರೆ. ಆದರೂ ತಾವು ಸಿನಿಮಾಗಳಲ್ಲಿ ತುಂಡು ಬಟ್ಟೆ ತೊಡದಿರಲು, ಎಕ್ಸ್‌ಪೋಸ್ ಮಾಡಿದಿರಲು ಕಾರಣ ಏನು ಎನ್ನುವುದನ್ನು ಈ ಹಿಂದೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅದೊಂದು ಘಟನೆ ಇಷ್ಟೆಕ್ಕೆಲ್ಲಾ ಕಾರಣ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು.
'ಪ್ರೇಮಂ' ಚಿತ್ರದ ಮಲರ್ ಪಾತ್ರದಿಂದ ಸಾಯಿ ಪಲ್ಲವಿ ಸಿನಿರಸಿಕರ ಮನಸ್ಸಿಗೆ ಹತ್ತಿರವಾಗಿದ್ದರು. 20 ವರ್ಷಗಳ ಹಿಂದೆ ಬಂದಿದ್ದ ಈ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅದರ ಬೆನ್ನಲ್ಲೇ ಸಾಯಿ ಪಲ್ಲವಿಯ ಡ್ಯಾನ್ಸ್ ವೀಡಿಯೋವೊಂದು ವೈರಲ್ ಆಗಿತ್ತು. ಆದರೆ ಅದನ್ನು ಬೇರೆ ಅರ್ಥದಲ್ಲಿ ಕೆಲವರು ವೈರಲ್ ಮಾಡಿದ್ದರು. ಅದು ನನಗೆ ಇಷ್ಟವಾಗಲಿಲ್ಲ. ಅದೇ ಕಾರಣಕ್ಕೆ ನಾನು ತೆರೆಮೇಲೆ ಗ್ಲಾಮರಸ್ ಆಗಿ ನಟಿಸಲ್ಲ ಎಂದಿದ್ದಾರೆ.

ಜಾರ್ಜಿಯಾಗೆ ಓದಲು ತೆರಳಿದ್ದ ಸಮಯದಲ್ಲಿ ಅಲ್ಲಿ ಟಾಂಗಾ ಡ್ಯಾನ್ಸ್ ಕ್ಲಾಸ್‌ಗೆ ಸೇರಿದ್ದೆ. ಅಲ್ಲಿ ಡ್ಯಾನ್ಸ್ ಮಾಡಲು ಸ್ಲಿಟ್ ಗೌನ್ ಧರಿಸಬೇಕಿತ್ತು. ವಿದೇಶಗಳಲ್ಲಿ ಅದನ್ನು ಯಾರು ವಿಚಿತ್ರವಾಗಿ ನೋಡಲ್ಲ. ತುಂಡು ಬಟ್ಟೆ ಧರಿಸುವುದು ಅಲ್ಲಿ ಸರ್ವೇಸಾಮಾನ್ಯ. ಇಂತಾದೊಂದು ಸ್ಲಿಟ್ ಗೌನ್ ಧರಿಸಬೇಕು ಅಂದಾಗ ಅಮ್ಮ "ಏಯ್ ಅಂತ ಬಟ್ಟೆ ಹಾಕ್ತೀಯಾ, ಅದೆಲ್ಲಾ ಬೇಡ" ಎಂದರು.
ಅಪ್ಪನ ಬಳಿ ಇದೇ ವಿಚಾರವಾಗಿ ಮಾತನಾಡಿದಾಗ ಅವರು ನಿನ್ನಿಷ್ಟ. ವಿದೇಶಿಯರು ಇಲ್ಲಿ ಬಂದಾಗ ದೇಸಿ ಉಡುಗೆ ತೊಡುತ್ತಾರೆ. ನೀನು ಅಲ್ಲಿಗೆ ಹೋಗಿದ್ದೀಯಾ, ಅಲ್ಲಿನ ಡ್ರೆಸ್ ಸ್ಟೈಲ್ ಅನುಸರಿಸಿದರೆ ತಪ್ಪೇನು. ನಿನಗೆ ಕಂಫರ್ಟ್ ಅನ್ನಿಸಿದರೆ ಧರಿಸು ಎಂದಿದ್ದರು. ಸರಿ ನಾನು ಅದೇ ಕಾಸ್ಟ್ಯೂಮ್‌ನಲ್ಲಿ ಡ್ಯಾನ್ಸ್ ಮಾಡಿದ್ದೆ. ಆದರೆ 'ಪ್ರೇಮಂ' ಸಿನಿಮಾ ರಿಲೀಸ್ ಬಳಿಕ ನನ್ನ ಟಾಂಗಾ ಡ್ಯಾನ್ಸ್ ವೀಡಿಯೋ ವೈರಲ್ ಆಗಿತ್ತು.
ಡ್ಯಾನ್ಸ್ ಅನ್ನು ಡ್ಯಾನ್ಸ್ ರೀತಿ ನೋಡದೇ ಕೆಲವರು, ವೀಡಿಯೋ ಕೆಟ್ಟ ಕೋನದಲ್ಲಿ ಬಿಂಬಿಸಿದರು. ನನಗೆ ನಾಚಿಕೆ ಎನಿಸಿತು. ಜನ ಅದನ್ನು ಆ ರೀತಿ ತೋರಿಸಿದಾಗ ನನಗೆ ಒಂದು ಭಾವನೆ ಬಂತು. ಜನ ಆ ರೀತಿ ನನ್ನನ್ನು ನೋಡುವುದು ಸರಿಯಲ್ಲ. ಜನರು ನೋಡುವ ಮನಸ್ಥಿತಿ ಬದಲಾಗಬೇಕು. ಆಗ ಮಾತ್ರ ಆ ರೀತಿ ಕಾಣಿಸಿಕೊಳ್ಳುತ್ತೇನೆ. ನಾನು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುವುದನ್ನು ಜನ ಇಷ್ಟಪಡ್ತಾರೆ. ಅದನ್ನು ಒಪ್ಪಿಕೊಂಡು ಮುಂದೆ ಸಾಗುತ್ತಿದ್ದೇನೆ ಎಂದು ಸಾಯಿ ಪಲ್ಲವಿ ತಿಳಿಸಿದ್ದರು.


Click it and Unblock the Notifications











