ಸ್ವಭಾವದಲ್ಲಿ ಉತ್ತರ ಧ್ರುವ, ದಕ್ಷಿಣ ಧ್ರುವದಂತಿದ್ದ ಅಂಬಿ-ವಿಷ್ಣು ಮಧ್ಯೆ ಜಗಳ, ಕಾಳಜಿ ಹೇಗಿರ್ತಿತ್ತು?
ಕನ್ನಡ ಚಿತ್ರರಂಗದಲ್ಲಿ ಸ್ನೇಹ ಎಂದಾಕ್ಷಣ ನೆನಪಾಗುವುದು ವಿಷ್ಣುವರ್ಧನ್ ಹಾಗೂ ಅಂಬರೀಶ್. ಇವತ್ತು ಅವರಿಬ್ಬರು ನಮ್ಮೊಂದಿಗಿಲ್ಲ. ಆದರೆ ತಮ್ಮ ಸಿನಿಮಾಗಳು ಹಾಗೂ ಸರಳ, ಸಜ್ಜನ ವ್ಯಕ್ತಿತ್ವದಿಂದ ಸದಾ ನೆನಪಿನಲ್ಲಿ ಉಳಿಯುತ್ತಾರೆ. 'ನಾಗರಹಾವು' ಸಿನಿಮಾ ಸಮಯದಿಂದ ಶುರುವಾದ ಇಬ್ಬರ ಸ್ನೇಹ ಇಹಲೋಕ ತ್ಯಜಿಸುವರೆಗೂ ಮುಂದುವರೆದಿತ್ತು.
ಮೊದಲ ಚಿತ್ರದಲ್ಲಿ ಇಬ್ಬರು ಹೀರೊ- ವಿಲನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಜೀವನದುದ್ದಕ್ಕೂ ಇಬ್ಬರೂ ಒಂದೇ ತಾಯಿಯ ಮಕ್ಕಳಂತೆ ಬಹಳ ಆತ್ಮೀಯವಾಗಿ ಬಾಳಿ ಬದುಕಿದರು. ಸ್ನೇಹಕ್ಕೆ ಮತ್ತೊಂದು ಹೆಸರು ಎನ್ನುವಂತಿದ್ದರು. ಹಾಗ್ ನೋಡಿದ್ದರೆ ವಿಷ್ಣು- ಅಂಬಿ ಒಬ್ಬರು ಗುಣ ಸ್ವಭಾವಗಳು ಬೇರೆ ಬೇರೆಯಾಗಿತ್ತು. ಆದರೆ ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದರು.

ಸಾಮಾನ್ಯವಾಗಿ ಸಮಾನ ಮನಸ್ಕರ ನಡುವೆ ಆತ್ಮೀಯ ಸ್ನೇಹ ಸಾಧ್ಯ ಎನ್ನುತ್ತಾರೆ. ಉತ್ತರ ಧ್ರುವ, ದಕ್ಷಿಣ ಧ್ರುವದಂತಿದ್ದ ಇವರಿಬ್ಬರೂ ಆಪ್ತಮಿತ್ರರಾಗಿದ್ದರು. ಹಾಗಂತ ಇಬ್ಬರೂ ಒಬ್ಬರನ್ನೊಬ್ಬರು ಬದಲಾಯಿಸುವ ಗೋಜಿಗೆ ಹೋಗಲಿಲ್ಲ. ತಾವು ಇದ್ದಂತೆಯೇ ಇಬ್ಬರೂ ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರು. ಅಂಬರೀಶ್ ಬಗ್ಗೆ ವಿಷ್ಣುವರ್ಧನ್‌ಗೆ ಬಹಳ ಕೇರಿಂಗ್ ಇತ್ತು. ರೆಬಲ್ ಸ್ಟಾರ್ ಬೆಳವಣಿಗೆಯನ್ನು ಸಾಹಸಸಿಂಹ ಆನಂದಿಸುತ್ತಿದ್ದರು.
ಒಂದ್ಕಡೆ ಒರಟು, ಮಾಂಸಾಹಾರಿ, ಜಾಲಿ, ಉಡಾಫೆ, ಪಬ್ಬು ಪಾರ್ಟಿ, ಕುದುರೆ ರೇಸ್ ಎನ್ನುತ್ತಿದ್ದ ಅಂಬಿ. ಮತ್ತೊಂದು ಕಡೆ ಸಸ್ಯಹಾರಿ, ಆಧ್ಯಾತ್ಮ, ಶಾಂತ ಸ್ವಭಾವದ ವಿಷ್ಣು. ಅವರಿಬ್ಬರ ನಡುವೆ ಸ್ನೇಹ ಎನ್ನುವ ಬಂಧ ಬಹಳ ಹತ್ತಿರವಾಗಿಸಿಬಿಟ್ಟಿತ್ತು. ಒಬ್ಬರನ್ನೊಬ್ಬರು ಬಿಟ್ಟುಕೊಡುತ್ತಿರಲಿಲ್ಲ. ವಿಷ್ಣುಗಾಗಿ ಏನು ಮಾಡಲು ಸಿದ್ಧ ಎನ್ನುವಂತಿದ್ದರು ಅಂಬರೀಶ್. ಸ್ನೇಹಿತನ ಬಗ್ಗೆ ಅಷ್ಟೇ ಕಾಳಜಿ ದಾದಾಗೆ ಇರುತ್ತಿತ್ತು.
ಅಂಬಿ- ವಿಷ್ಣು ಸ್ನೇಹ ಒಡನಾಟದ ಬಗ್ಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಟಿವಿ9 ಸಂದರ್ಶದನಲ್ಲಿ ಒಮ್ಮೆ ಮಾತನಾಡಿದ್ದರು. "ವಿಷ್ಣು - ಅಂಬಿ ಜಗಳ ಚೆನ್ನಾಗಿ ಇರುತ್ತಿತ್ತು. ಪೇಪರ್ ಓದೋ, ಇವತ್ತು ಡೆಲ್ಲಿಯಲ್ಲಿ ಏನಾಗಿದೆ ನೋಡ್ಕೊಳೋ ಎಂದು ವಿಷ್ಣು ಪೇಪರ್ ತಂದು ಕೊಡುತ್ತಿದ್ದರು. ಆಗ ಅಂಬರೀಶ್ ಏಯ್ ಹೋಗೊ ಎಂದುಬಿಡುತ್ತಿದ್ದರು"

"ಒಮ್ಮೆ ಅಂಬರೀಶ್ ಕೇಂದ್ರ ಸಚಿವರಾಗಿ ದೆಹಲಿಗೆ ಹೋಗಿ ಬಂದಿದ್ದರು. ಇನ್ನು ಆಫೀಸ್ ಕೂಡ ತಗೊಂಡಿರಲಿಲ್ಲ. ಆಗ ವಿಷ್ಣು ಸಲಹೆ ಕೊಡುತ್ತಿದ್ದರು. ಒಳ್ಳೆ ಆಫೀಸ್ ತಗೋ. ಇಬ್ಬರನ್ನು ಜೊತೆಗಿಟ್ಟುಕೋ, ಒಬ್ಬರು ಎಲ್ಲಾ ಪೇಪರ್ ಓದಿ ಏನೆಲ್ಲಾ ಆಗಿದೆ ಎಂದು ಹೇಳಬೇಕು. ಅದನ್ನು ಕೇಳಿಸಿಕೊಂಡು ಹೋಗಿ ಲೋಕಭೆಯಲ್ಲಿ ಮಾತಾಡು" ಎಂದು ಕಾಳಜಿಯಿಂದ ವಿಷ್ಣು ಹೇಳುತ್ತಿದ್ದರು.
"ಅದ್ಯಾವುದೋ ಪಬ್‌ಗೆ ಚಡ್ಡಿ ಹಾಕ್ಕೊಂಡು ಹೋಗ್ಬಿಟ್ಟಿದ್ದೆ ಅಂತೆ. ನೀನು ಮಿನಿಸ್ಟರ್ ಹಂಗೆಲ್ಲಾ ಹೋಗಬಾರದು ಎಂದು ಪ್ರೀತಿಯಿಂದ ವಿಷ್ಣು ಗದರಿದ್ದರು. ಅದಕ್ಕೆ ಶುರುವಾಯ್ತಪ್ಪ ಇವ್ನುಂದು ಒಳ್ಳೆ ಕಥೆ ಎಂದು ಅಂಬಿ ಅಂದಿದ್ದರು. ಅಂಬರೀಶ್ ಅವರ ಸ್ವೇಚ್ಛಾ ಪ್ರವೃತ್ತಿಯಿಂದ ಆತನಿಗೆ ತೊಂದರೆ ಆಗಬಾರದು. ಸುದ್ದಿ ಆಗಬಾರದು ಎಂದು ವಿಷ್ಣು ಕಾಳಜಿ ಆಗಿತ್ತು. ಅಂಬಿ ಮಂತ್ರಿ ಆದಾಗ ವಿಷ್ಣು ಬಹಳ ಸಂತಸಪಟ್ಟಿದ್ದರು. ಆಗಾಗ್ಗೆ ಭೇಟಿ ಮಾಡುತ್ತಿದ್ದರು" ಎಂದು ನಾಗತಿಹಳ್ಳಿ ಹೇಳಿದ್ದರು.
ಇನ್ನು ಹಿರಿಯ ನಟ ದೊಡ್ಡಣ್ಣ ಸಹ ಅಂಬಿ-ವಿಷ್ಣು ಇಬ್ಬರನ್ನು ಹತ್ತಿರದಿಂದ ನೋಡಿದವರು. ದೊಡ್ಡಣ್ಣ ಮಾತನಾಡಿ "ಸಮುದ್ರದ ಉಪ್ಪು, ಬೆಟ್ಟದ ನೆಲ್ಲಿನಕಾಯಿ ಎತ್ತಣದಿಂದ ಎತ್ತಣ ಸಂಬಂಧ, ಅವೆರಡು ಸೇರಿದರೆ ಒಳ್ಳೆ ಉಪ್ಪಿನಕಾಯಿ ಆಗುತ್ತದೆ. ಅಂಬಿ- ವಿಷ್ಣು ಸೇರಿದರೆ ಅನ್ಯೋನ್ಯತೆ ಮೂಡುತ್ತಿತ್ತು. ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ವಿಷ್ಣು ಮಾತಿಗೆ ಅಂಬಿ ಹೆಚ್ಚು ಬೆಲೆ ಕೊಡುತ್ತಿದ್ದರು. ವಿಷ್ಣು ನನ್ನನ್ನು ಕರೆದು ದೊಡ್ಡು, ಗೌಡ ಉದಾಸೀನ ಜಾಸ್ತಿ ನೀನು ಕರೆಕ್ಟ್ ಆಗಿ ನೋಡ್ಕೊಬೇಕು ಎಂದು ನನಗೆ ಹೇಳುತ್ತಿದ್ದರು" ಎಂದು ದೊಡ್ಡಣ್ಣ ಹೇಳಿದ್ದರು.


Click it and Unblock the Notifications











