Darshan: ವೈದ್ಯರ ನಿರ್ಲಕ್ಷ್ಯದಿಂದ ಎಡವಟ್ಟು.. ತಂದೆಯ ಸಾವಿನ ನಿಗೂಢ ಸತ್ಯ ಬಿಚ್ಚಿಟ್ಟಿದ್ದ ದರ್ಶನ್: ವಿಡಿಯೋ ವೈರಲ್
ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದರೂ ಚಿತ್ರರಂಗದಲ್ಲಿ ನೆಲೆ ನಿಲ್ಲಲು ದರ್ಶನ್ ಸಾಕಷ್ಟು ಶ್ರಮಿಸಬೇಕಾಯಿತು. ಲೈಟ್‌ಬಾಯ್ ಆಗಿ ಚಿತ್ರರಂಗ ಪ್ರವೇಶಿಸಿ ಮುಂದೆ ಹೀರೋ ಆಗಿ ಗೆದ್ದು ಬೀಗಿದರು. ಮಕ್ಕಳಿಗೆ ಚಿತ್ರರಂಗದ ಸಹವಾಸವೇ ಬೇಡ ಎಂದು ತೂಗುದೀಪ ಶ್ರೀನಿವಾಸ್ ಹೇಳುತ್ತಿದ್ದರಂತೆ. ಆದರೆ ಇಂದು ದರ್ಶನ್ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.
ನೂರಾರು ಸಿನಿಮಾಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ತೂಗುದೀಪ ಶ್ರೀನಿವಾಸ್ ಪ್ರೇಕ್ಷಕರ ಮನಗೆದ್ದಿದ್ದರು. ಇನ್ನು ತೂಗುದೀಪ ಶ್ರೀನಿವಾಸ್ ಅವರ ಎರಡೂ ಕಿಡ್ನಿ ವೈಫಲ್ಯವಾದಾಗ ಪತ್ನಿ ಮೀನಾ ಅವರು ಒಂದು ಕಿಡ್ನಿ ನೀಡಿದ್ದರು. ಆ ಘಟನೆಯ ಬಗ್ಗೆಯೂ ಮೀನಾ ಅವರು ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡಿದ್ದರು. ಕಿಡ್ನಿ ಕೊಟ್ಟ ಮೇಲೆ ಒಂದು ವರ್ಷ ತೂಗುದೀಪ ಶ್ರೀನಿವಾಸ್ ಚೆನ್ನಾಗಿ ಇದ್ದರು ಎಂದು ಹೇಳಿದ್ದರು. ಇನ್ನು ತಮ್ಮ ತಂದೆ ಸಾವಿನ ಬಗ್ಗೆ ನಟ ದರ್ಶನ್ ಈ ಹಿಂದೆ ಹೇಳಿದ್ದ ವಿಡಿಯೋ ಈಗ ವೈರಲ್ ಆಗ್ತಿದೆ.

ಏಳೆಂಟು ವರ್ಷಗಳ ಹಿಂದೆ ಪುಟ್ಟ ಅಭಿಮಾನಿಯೊಬ್ಬರು ನಟ ದರ್ಶನೆ ಭೇಟಿ ಮಾಡಲು ಬಂದಿದ್ದರು. ವೈದ್ಯರ ನಿರ್ಲಕ್ಷ್ಯದಿಂದ ತಮ್ಮ ಮಗನಿಗೆ ಆರೋಗ್ಯ ಸಮಸ್ಯೆ ಆಗಿದೆ ಎಂದು ಆ ಬಾಲಕನ ತಾಯಿ, ನಟ ದರ್ಶನ್ ಬಳಿ ನೋವು ತೋಡಿಕೊಂಡು ಕಣ್ಣೀರಾಗಿದ್ದರು. ಅದೇ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಏನೆಲ್ಲಾ ಆಗುತ್ತದೆ ಎನ್ನುವುದನ್ನು ದರ್ಶನ್ ವಿವರಿಸಿದ್ದರು. ತಮ್ಮ ತಂದೆಯ ನಿಧನದ ಸಂದರ್ಭದಲ್ಲಿ ಏನೆಲ್ಲಾ ಆಯಿತು ಎಂದು ಹೇಳಿದ್ದರು.
"ಈ ಆಸ್ಪತ್ರೆಗಳಲ್ಲಿ ಏನಾಗುತ್ತೆ? ಪ್ರಾಕ್ಟೀಸ್‌ಗೆ ಅಂತ ಬರ್ತಾರೆ. ನುರಿತ ವೈದ್ಯರು ಮುಂದೆ ನಿಂತು ಅವರಿಗೆ ಹೇಳಿಕೊಡಲ್ಲ. ಜನ ಇವತ್ತು ಕಷ್ಟಪಟ್ಟು ಯಾರೂ ಉದ್ಧಾರ ಆಗುತ್ತಿಲ್ಲ. ಇಲ್ಲ ಸ್ಕೂಲ್ ಕಟ್ಟಿಸ್ಬೇಕು. ಇಲ್ಲ ಆಸ್ಪತ್ರೆ ಕಟ್ಟಿಸ್ಬೇಕು ಅಥವಾ ದೇವಸ್ಥಾನ ಕಟ್ಟಿಸ್ಬೇಕು. ಈ ಮೂರರಲ್ಲೇ ದುಡ್ಡು ಇರೋದು. ಇನ್ನು ಯಾವುದರಲ್ಲೂ ಇಲ್ಲ."

"ನಮ್ಮ ತಂದೆ ವಿಚಾರವನ್ನೇ ಹೇಳುತ್ತೇನೆ ಕೇಳಿ. ಅವರಿಗೆ ಕಿಡ್ನಿ ಸಮಸ್ಯೆ ಇರಲಿಲ್ಲ. ಹಾರ್ಟ್ ಆಪರೇಷನ್ ಅಂತ ಬೆಂಗಳೂರು ಆಸ್ಪತ್ರೆಗೆ ಕರ್ಕೊಂಡ್ ಹೋದರು. ಹಾರ್ಟ್ ಅಲ್ಲಿ ಏನೋ ಬ್ಲಾಕ್ ಇದೆ ಅಂತ. ಅವರಿಗೆ ಹೆಚ್ಚು ಕಮ್ಮಿ 30 ವರ್ಷ ಡಯಾಬಿಟೀಸ್ ಇತ್ತು. ದೇಹದ ಒಳಕ್ಕೆ ಒಂದು ಡೈ ಹಾಕುತ್ತಾರೆ. ಕ್ಯಾಮರಾ ಕಳಿಸೋಕೆ. ಡೈ ಹಾಕಿದ್ರು ಅದನ್ನೂ ಅನಾಲೈಸ್ ಕೂಡ ಮಾಡಲಿಲ್ಲ."
"ಸೀದಾ ಡೈ ಹೋಗಿ ನಮ್ಮ ತಂದೆ ಕಿಡ್ನಿ ಮೇಲೆ ಕೂತಿತ್ತು. ಕಿಡ್ನಿ ಇದ್ದಕ್ಕಿದಂತೆ ಮುದುಡಿಕೊಂಡುಬಿಟ್ಟಿತ್ತು. ಅಷ್ಟೇ. ನಾವು ತೋರಿಸೋಕೆ ಹೋಗಿದ್ದೇ ಏನೋ? ಈ ಟ್ರೈನಿ ಡಾಕ್ಟರ್‌ಗಳನ್ನು ಬಿಡ್ತಾರೆ. ಯಾರೋ ಕಲಿತ್ತಿರ್ತಾರೆ. ಜೊತೆಗೆ ಒಬ್ಬ ಡಾಕ್ಟರ್ ನಿಂತುಕೊಳ್ಳಲ್ಲ. ಆಗ ಹೀಗೆ ಆಗುತ್ತದೆ" ಎಂದು ದರ್ಶನ್ ಹೇಳಿದ್ದರು.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ನಟ ದರ್ಶನ್ ತಮ್ಮ ತಂದೆ ಬಗ್ಗೆ ಮಾತನಾಡಿದ್ದರು. ತಂದೆಯ ಕೊನೆ ದಿನಗಳಲ್ಲಿ ಮನೆಯ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ವಿವರಿಸಿದ್ದರು. ಮತ್ತೊಂದು ಸಂದರ್ಶನದಲ್ಲಿ ತಮ್ಮ ತಂದೆಯ ಜೊತೆಗಿನ ಒಡನಾಟವನ್ನು ದರ್ಶನ್ ನೆನಪಿಸಿಕೊಂಡಿದ್ದರು.
"ನಮ್ಮ ತಂದೆ ಅಲ್ಪ ತೃಪ್ತ ವ್ಯಕ್ತಿ. ಅವರಿಗೆ ಸ್ನೇಹಿತರ ಬಳಗ ದೊಡ್ಡದು. ಎಲ್ಲಾ ಮೈಸೂರಿನವರು. ಅವರದ್ದು ಒಂದು ನಾಟಕದ ತಂಡ ಇತ್ತು. ನಮ್ಮ ತಂದೆ ಹಿನ್ನೆಲೆ ಬೇರೆ ರೀತಿಯದ್ದು. ನಮ್ಮ ದೊಡ್ಡಪ್ಪನ ಬೇಕರಿ ಇತ್ತು. ಆ ಬೇಕರಿಯಲ್ಲಿ ಬ್ರೆಡ್ಡು ಗಿಡ್ಡು ಮಾಡ್ಕೊಂಡು ಕೆಲಸ ಮಾಡುತ್ತಿದ್ದರು. ಆದರೆ ನಾಟಕದ ಗೀಳು ಇತ್ತು. ಅಲ್ಲಿಂದ ಅವರು ಚಿತ್ರರಂಗಕ್ಕೆ ಬರುವಂತಾಯಿತು. ಅವರು ಸುಲಭವಾಗಿ ಏನು ಚಿತ್ರರಂಗಕ್ಕೆ ಬರಲಿಲ್ಲ."
"ನಾನು ಹುಟ್ಟಿದ ಬಳಿಕ 17 ವರ್ಷಗಳಲ್ಲಿ ಅಬ್ಬಬ್ಬಾ ಅಂದರೆ ಒಂದು ವರ್ಷ ಹೆಚ್ಚು ಸಮಯ ಅವರೊಟ್ಟಿಗೆ ಕಳೆದಿರಬಹುದು. ಉಳಿದಂತೆ ಸದಾ ಅವರು ಸಿನಿಮಾ ಶೂಟಿಂಗ್ ಅಂತ ಬೆಂಗಳೂರಿನಲ್ಲಿ ಇರುತ್ತಿದ್ದರು. ತಿಂಗಳಿಗೆ ಅಬ್ಬಬ್ಬಾ ಅಂದರೆ ಎರಡ್ಮೂರು ದಿನ ಮೈಸೂರಿಗೆ ಬರುತ್ತಿದ್ದರು. ನಾವು ಬೆಳಗ್ಗೆ ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ಏನಾದರೂ ಬೇಕಿದ್ದರೆ ಹೇಳಿ ಅಮ್ಮನ ಬಳಿ ಅನುಮತಿ ಪಡೆದುಕೊಳ್ಳುತ್ತಿದ್ದೆವು ಅಷ್ಟೆ. ಆದರೆ ಆರೋಗ್ಯ ಸಮಸ್ಯೆ ಆಗಿ ಒಂದು ವರ್ಷ ಮನೆಯಲ್ಲಿ ಇದ್ದರು. ಆ ಒಂದು ವರ್ಷ ತಂದೆಯವರೊಟ್ಟಿಗೆ ಒಡನಾಟ ಹೆಚ್ಚಾಗಿತ್ತು" ಎಂದಿದ್ದರು.


Click it and Unblock the Notifications











