ಅವತ್ತು ಮದುವೆ ಮಾಡ್ಕೊಬೇಡಿ ಎಂದು ಮಹಿಳಾ ಮಣಿಯರ ಕಾಟ; ಕಡ್ಡಿ ಮುರಿದಂತೆ ಪ್ರತಿಕ್ರಿಯಿಸಿದ್ದ ದರ್ಶನ್
ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ವಿಶೇಷ ಅನುಮತಿ ಪಡೆದು ಜೈಲಿನಲ್ಲಿ ಪತ್ನಿ ಹಾಗೂ ಮಗನನ್ನು ದರ್ಶನ್ ಭೇಟಿ ಮಾಡಿದ್ದಾರೆ. ಆಗಾಗ್ಗೆ ವಿಜಯಲಕ್ಷ್ಮಿ ಜೈಲಿಗೆ ಹೋಗಿ ಬರುತ್ತಿದ್ದರು. ಆದರೆ ಸರಳುಗಳ ಅತ್ತ- ಇತ್ತ ಹಿಂದೆ ದರ್ಶನ್ ಅವರನ್ನು ಮಾತನಾಡಿಸಿ ಬರುವಂತಾಗಿತ್ತು. ಮುಖಾಮುಖಿ ಸಂದರ್ಶನಕ್ಕೆ ಅನುಮತಿ ಪಡೆದಿದ್ದರು.
23 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಮದುವೆ ನಡೆದಿತ್ತು. ಧರ್ಮಸ್ಥಳ ದೇವಸ್ಥಾನದ ಬಳಿ ಇರುವ ವಸಂತ ಮಹಲ್ ಕಲ್ಯಾಣ ಮಂಟಪದಲ್ಲಿ ಇಬ್ಬರೂ ಹಸೆಮಣೆ ಏರಿದ್ದರು. ದರ್ಶನ್ ಹೀರೊ ಆಗಿ ಅಂಬೆಗಾಲು ಇಡುತ್ತಿದ್ದ ಸಮಯ ಅದು. 'ಕರಿಯ' ಸಿನಿಮಾ ಬಿಡುಗಡೆ ಆಗಿತ್ತು. ಈಗ ಇರುವಂತೆ ಹೆಚ್ಚು ಮಾಧ್ಯಮಗಳು, ಸೋಶಿಯಲ್ ಮೀಡಿಯಾ ಇರಲಿಲ್ಲ. 'ಮೆಜೆಸ್ಟಿಕ್', 'ಧ್ರುವ', 'ದಿಲ್' ಸಿನಿಮಾಗಳಲ್ಲಿ ನಟಿಸಿ ದರ್ಶನ್ ಗೆದ್ದಿದ್ದರು.

'ಮೆಜೆಸ್ಟಿಕ್' ಸಿನಿಮಾ ಹಿಟ್ ಆಗುತ್ತಿದ್ದಂತೆ ದರ್ಶನ್ ಅಭಿಮಾನಿಗಳನ್ನು ಸಂಪಾದಿಸಿಬಿಟ್ಟಿದ್ದರು. 'ಕರಿಯ' ಚಿತ್ರದಿಂದ ಆ ಸಂಖ್ಯೆ ಹೆಚ್ಚಾಗಿತ್ತು. ಸಾಕಷ್ಟು ಮಹಿಳಾ ಅಭಿಮಾನಿಗಳು ಇದ್ದರು. ನಗರದ ಬಿಟಿಎಂ ಬಡಾವಣೆಯಲ್ಲಿದ್ದ ಮನೆಗೆ ಅಭಿಮಾನಿಗಳು ಕರೆ ಮಾಡಿ ನೆಚ್ಚಿನ ನಟನ ಜೊತೆ ಮಾತನಾಡುತ್ತಿದ್ದರು. ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಕೆಲ ಮಹಿಳಾ ಅಭಿಮಾನಿಗಳು ಬಹಳ ಪೊಸೆಸಿವ್‌ನೆಸ್ ತೋರಿಸುತ್ತಿದ್ದರು. ಈ ಬಗ್ಗೆ ಚಂದನ ವಾಹಿನಿ ಸಂದರ್ಶನದಲ್ಲಿ ಸ್ವತಃ ದರ್ಶನ್ ಮಾತನಾಡಿದ್ದರು.
ದರ್ಶನ್ ಮದುವೆಗೆ ಇನ್ನೊಂದು ತಿಂಗಳು ಬಾಕಿಯಿತ್ತು. 'ಕರಿಯ' ಸಿನಿಮಾ ಬಿಡುಗಡೆ ಆಗಿ ಗೆದ್ದಿತ್ತು. ಚಂದನ ವಾಹಿನಿಯ 'ಬೆಳಗು' ಕಾರ್ಯಕ್ರಮದ ಅತಿಥಿಯಾಗಿ ದರ್ಶನ್ ಭಾಗ ವಹಿಸಿದ್ದರು. ಕೆಲ ಅಭಿಮಾನಿಗಳು ಫೋನ್ ಮಾಡಿ ಮಾತನಾಡಿದ್ದರು. ಇದೇ ಸಮಯದಲ್ಲಿ ಅಭಿಮಾನಿಗಳ ಅಭಿಮಾನ, ಪ್ರೀತಿ ಬಗ್ಗೆ ದರ್ಶನ್ ತಮ್ಮ ಅಭಿಪ್ರಾಯ ತಿಳಿಸಿದ್ದರು. ಅಭಿಮಾನಿಗಳಿಗೆ ಆಸೆ ಜಾಸ್ತಿ. 10-15 ಜನ ಅಭಿಮಾನಿಗಳು ಪದೇ ಪದೆ ಫೋನ್ ಮಾಡಿ ನನ್ನ ಸಿನಿಮಾಗಳ ನೆಗೆಟಿವ್ ಪಾಯಿಂಟ್ಸ್ ಬಗ್ಗೆ ಹೇಳುತ್ತಾರೆ. ಇವತ್ತು ಇಂಟರ್‌ವ್ಯೂ ನೋಡಿ ಮತ್ತೆ ಸಂಜೆ ಫೋನ್ ಮಾಡಿ ಹೀಗೆ ಮಾತಾಡಿದ್ರಿ, ಅದು ಸರಿ, ಸರಿಯಿಲ್ಲ ಎನ್ನುತ್ತಾರೆ. ಅವ್ರು ಹೇಳಿದ್ದನ್ನು ಅಳವಡಿಸಿಕೊಳ್ತೀನಿ ಎಂದಿದ್ದರು.

ದರ್ಶನ್ ಚಿತ್ರರಂಗಕ್ಕೆ ಬರುವ ವೇಳೆಗೆ ತಂದೆ ತೂಗುದೀಪ ಶ್ರೀನಿವಾಸ್ ಅವರನ್ನು ಕಳೆದುಕೊಂಡಿದ್ದರು. ಹಾಗಾಗಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವವರು ಇರಲಿಲ್ಲ. ಇದೇ ವಿಚಾರವನ್ನು ದರ್ಶನ್ ಹೇಳಿದ್ದರು. "ಈಗ ನಮ್ಮ ತಂದೆ ಇಲ್ಲ, ಹೇಳಿಕೊಡುವವರು ಇಲ್ಲ. ನಾನು ಆಡಿದ್ದೇ ಆಟ ಆಗಿಬಿಟ್ಟಿದೆ. ಅಪ್ಪನ ಅನುಭವಕ್ಕೆ ಸರಿ, ತಪ್ಪು ಗೊತ್ತಿರುತ್ತೆ. ಆದ್ರೆ ಹೇಳುವುದಕ್ಕೆ ಯಾರು ಇಲ್ಲ. ಆದ್ರೆ ಅಭಿಮಾನಿಗಳು ಮಾರ್ಗದರ್ಶನ ಕೊಡುತ್ತಾರೆ. ಅದಕ್ಕೆ ಹ್ಯಾಟ್ಸಪ್" ಎಂದಿದ್ದರು.
ಕೆಲ ಅಭಿಮಾನಿಗಳು ಫೋನ್ ಮಾಡ್ತಾರೆ.. ಈಗ ನನ್ನ ಮದುವೆ ಬರ್ತಿದೆ.. ಮದುವೆ ಮಾಡ್ಕೊಬೇಡಿ, ನೀವ್ಯಾಕೆ ಮದುವೆ ಮಾಡ್ಕೊತ್ತೀರಾ. ನೀವು ಮದುವೆ ಮಾಡ್ಕೊಂಡ್ರೆ ನಮಗೆ ಬೇಜಾರು ಅಂತಾರೆ. ನಾನು ಎಲ್ಲಾ ಅಭಿಮಾನಿಗಳಿಗೆ ಹೇಳುವುದು ಒಂದೇ.. ಒಬ್ಬ ನಟನಾಗಿ ಪ್ರೀತಿ ಮಾಡಿ. ಅದು ಬಿಟ್ಟು ಮುಂದೆ ಹೋಗಬೇಡಿ.. ನಿಮ್ಮನ್ನು ರಂಜಿಸ್ತೀನಿ.. ಅಷ್ಟು ಸಾಕು.. ಅದು ಬಿಟ್ಟು ಪೊಸೆಸಿವ್‌ನೆಸ್ ಬೇಡ.. ಇವರೊಟ್ಟಿಗೆ ನಟಿಸಿ, ಅವರೊಟ್ಟಿಗೆ ನಟಿಸ್ಬೇಡಿ. ಅವರ ಜೊತೆ ಮಾತನಾಡಬೇಡಿ, ನಿಮಗೆ ನಾನೊಬ್ಬಳೆ ಅಭಿಮಾನಿ ಎನ್ನುವುದು ಸರಿಯಲ್ಲ. ಅಂತಹವರನ್ನು ನಾನೇ ಅವಾಯ್ಡ್ ಮಾಡ್ತೀನಿ ಎಂದಿದ್ದರು. ಆ ವೀಡಿಯೋ ಈಗ ವೈರಲ್ ಆಗ್ತಿದೆ.
ಮದುವೆ ಬಗ್ಗೆ ಕೇಳಿದ್ದಕ್ಕೆ ವಿಜಯಲಕ್ಷ್ಮಿ ಅಂತ.. ಹೊಸ ಸಂಬಂಧ.. ಸದ್ಯ ಇಂಜಿನಿಯರಿಂಗ್ ಮಾಡ್ತಿದ್ದಾರೆ ಎಂದು ದರ್ಶನ್ ಹೇಳಿದ್ದರು.


Click it and Unblock the Notifications