ಅವತ್ತು ಪೋಲಿ ಜೋಕ್ಸ್ ಹೇಳುವಂತೆ ವಿಷ್ಣುವರ್ಧನ್ ಪಟ್ಟು ಹಿಡಿದಿದ್ದು ಯಾಕೆ?
ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್ ಬಳಿಕ ಬಹಳ ಜನಪ್ರಿಯತೆ ಪಡೆದ ನಟ ಸಾಹಸಸಿಂಹ ವಿಷ್ಣುವರ್ಧನ್. 200ಕ್ಕೂ ಅಧಿಕ ಸಿನಿಮಾಗಳ ಮೂಲಕ ಇವತ್ತಿಗೂ ದಾದಾ ಅಜರಾಮರ. ನಿಜ ಜೀವನದಲ್ಲಿ ಸರಳ ಸಜ್ಜನ ವ್ಯಕ್ತಿತ್ವದ ವಿಷ್ಣು ಅಜಾತ ಶತ್ರು ಎಂದೇ ಗುರ್ತಿಸಿಕೊಂಡಿದ್ದವರು.
ವಿಷ್ಣು ನೋಡಲು ಬಹಳ ಗಂಭೀರವಾಗಿ ಕಂಡರೂ ಬಹಳ ಜಾಲಿ ಸ್ವಭಾವದವರು. ಅವರನ್ನು ಹತ್ತಿರದಿಂದ ಬಲ್ಲವರಿಗೆ ಅದು ಚೆನ್ನಾಗಿ ಗೊತ್ತು. ಸಾಕಷ್ಟು ಜನ ಆಪ್ತರು ವಿಷ್ಣುವರ್ಧನ್ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಖ್ಯಾತ ಹಾಸ್ಯನಟ ಸಿಹಿ ಕಹಿ ಚಂದ್ರು ಸುದ್ದಿಮನೆ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಡಾ. ರಾಜ್, ವಿಷ್ಣು ಸೇರಿ ಹಲವರ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

"ಹೃದಯಗೀತೆ ಚಿತ್ರದಲ್ಲಿ ಮೊದಲಿಗೆ ನಾನು ಡಾ. ವಿಷ್ಣುವರ್ಧನ್ ಜೊತೆ ನಟಿಸಿದ್ದೆ. ವಿಲನ್ ರೋಲ್. ಒಮ್ಮೆ ಚಿತ್ರೀಕರಣಕ್ಕೆ ಹೋಗಿದ್ದೆ. ನಾನು ಸೆಟ್‌ನಲ್ಲಿ ನಮ್ಮ ಸಮಾನ ಮನಸ್ಕರ ಜೊತೆ ಕೂತು ಪೋಲಿ ಜೋಕ್ಸ್ ಹೇಳುತ್ತಿದ್ದೆ. ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದರು. ಅದನ್ನು ವಿಷ್ಣುವರ್ಧನ್ ಗಮನಿಸಿದ್ದಾರೆ. ಬಳಿಕ ನನ್ನನ್ನು ಹತ್ತಿರಕ್ಕೆ ಕರೆದರು. ಹೋದೆ" ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.
"ಯಾಕೆ ಅಷ್ಟು ಎಲ್ಲರೂ ನಗುತ್ತಿದ್ದೀರಾ ಎಂದು ಕೇಳಿದರು. ಪೋಲಿ ಜೋಕ್ಸ್ ಹೇಳ್ತಿದ್ದೆ ಸರ್ ಎಂದೆ. ನನಗೂ ಹೇಳಿ ಅಂದ್ರು. ನಾನು ಬೇಡ ಸರ್ ಪೋಲಿ ಜೋಕ್ಸ್ ಅಂದೆ. ಪರವಾಗಿಲ್ಲ, ಹೇಳಿ, ನನಗೆ ಪೋಲಿ ಜೋಕ್ಸ್ ಹೇಳಬಾರದಾ? ಎಂದು ಬಲವಂತ ಮಾಡಿದರು. ನಾನು ಬೇರೆ ವಿಧಿಯಿಲ್ಲದೇ ಹೇಳುವಂತಾಯಿತು. ಒಂದು ಪೋಲಿ ಜೋಕ್ ಹೇಳ್ದೆ. ಬಿದ್ದು ಬಿದ್ದು ನಕ್ಕರು. ಅಲ್ಲಿಂದ ಮುಂದೆ ಹೀಗೆ ಬೇಜಾನ್ ಜೋಕ್ಸ್ ಸೆಷನ್ ನಡೀತು. ಒಳ್ಳೆ ಸ್ನೇಹ ಶುರುವಾಯಿತು" ಎಂದು ಸಿಹಿ ಕಹಿ ಚಂದ್ರು ವಿವರಿಸಿದ್ದಾರೆ.
ತಾವು ಒಮ್ಮೆ ಅನಾರೋಗ್ಯಕ್ಕೆ ತುತ್ತಾದಾಗ ನನಗಾಗಿ ವಿಷ್ಣುವರ್ಧನ್ ತಿರುಪತಿಗೆ ಹರಕೆ ಹೊತ್ತಿಕೊಂಡಿದ್ದ ವಿಚಾರವನ್ನು ನೆನಪಿಸಿಕೊಂಡಿದ್ದಾರೆ. ಕೆಲವರ್ಷಗಳ ಹಿಂದೆ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದೆ. ವೈದ್ಯರು ನಾನು ಬದುಕುವುದೇ ಕಷ್ಟ ಎನ್ನುವಂತೆ ಹೇಳಿದ್ದರು. ನನಗೂ ಭಯವಾಗಿತ್ತು. ಆಗ ಉಮಾಶ್ರೀ ಅವರು ಫೋನ್ ಮಾಡಿ ಬರುವಂತೆ ಕರೆದರು. ನನಗೆ 30 ಸಾವಿರ ಕೊಟ್ಟರು. ಸಿಎಂ ಪರಿಹಾರ ನಿಧಿಯಿಂದ ಹಣ ಕೇಳುವಂತೆ ಸಲಹೆ ನೀಡಿದ್ದರು.

ನಾನು ವಿಷ್ಣುವರ್ಧನ್ ಮೂಲಕ ಸಿಎಂ ಪರಿಹಾರ ನಿಧಿಯಿಂದ ಹಣ ಕೇಳಲು ನಿರ್ಧರಿಸಿದೆ. ಆದರೆ ವಿಷ್ಣುವರ್ಧನ್ ಬಳಿ ಈ ವಿಚಾರ ಹೇಳಿದಾಗ ಅವರು ಬೇರೆ ವೈದ್ಯರಿಂದ ತಪಾಸಣೆ ನಡೆಸಿ ನನಗೆ ಬಂದಿರುವುದು ಬೇರೆ ಕಾಯಿಲೆ ಎನ್ನುವುದು ಗೊತ್ತಾಯಿತು. ಅದಕ್ಕೆ ಬೇಕಾದ ಔಷಧಿ, ತಪಾಸಣೆಯ ಶುಲ್ಕ ಎಲ್ಲವನ್ನು ವಿಷ್ಣುವರ್ಧನ್ ಪಾವತಿಸಿದ್ದರು. ನಾನು ಚೇತರಿಸಿಕೊಳ್ಳಬೇಕು ಎಂದು ತಿರುಪತಿಗೆ ಹರಕೆ ಕಟ್ಟಿಕೊಂಡಿದ್ದರು. ಈ ಬಗ್ಗೆ ಹೇಳಿ ಪ್ರಸಾದ ತಂದುಕೊಟ್ಟಿದ್ದರು ಎಂದು ವಿಷ್ಣುವರ್ಧನ್ ಬಗ್ಗೆ ಸಿಹಿಕಹಿ ಚಂದ್ರು ಮಾತನಾಡಿದ್ದಾರೆ.
ಡಾ. ರಾಜ್‌ಕುಮಾರ್ ಜೊತೆಗಿನ ಒಡನಾಟವನ್ನು ಇದೇ ಸಂದರ್ಶನದಲ್ಲಿ ಸಿಹಿ ಕಹಿ ಚಂದ್ರು ಮೆಲುಕು ಹಾಕಿದ್ದಾರೆ. ಚಂದ್ರು ಒಳ್ಳೆ ಬಾಣಸಿಗ ಕೂಡ. ಆದರೆ ಮಾಂಸಾಹಾರದಿಮದ ದೂರಾದೂರ. ಮಾಂಸಾಹಾರ ತಿನ್ನುವುದು ಇಲ್ಲ, ಮಾಂಸದೂಟ ತಯಾರಿಸುವುದು ಇಲ್ಲ. ವೆಜಿಟೇರಿಯನ್ ಆಗಿ ಹುಟ್ಟಿದ್ದು. ಆ ಬಳಿಕ ಎಲ್ಲೂ ನಾನ್ ವೆಜ್ ತಿನ್ನುವ ಅವಕಾಶ, ಸಂದರ್ಭ ಸಿಗಲಿಲ್ಲ. ಹಾಗಾಗಿ ಇವತ್ತಿಗೂ ಮುಟ್ಟಿಲ್ಲ. ತಿನ್ನುವುದೇ ಇಲ್ಲ ಎಂದೇ ಮೇಲೆ ಮುಟ್ಟುವುದು ಎಲ್ಲಿಂದ ಬಂತು ಎಂದು ಚಂದ್ರು ಹೇಳಿದ್ದಾರೆ.
ಅಣ್ಣಾವ್ರು ಕೂಡ ನನ್ನ ಕೈರುಚಿ ನೋಡಿದ್ದಾರೆ. ಒಮ್ಮೆ ಕಾರ್ಯಕ್ರಮವೊಂದರಲ್ಲಿ ಊಟಕ್ಕೆ ಹೋಗಿದ್ದೆ. ಪ್ಲೇಟ್‌ಗೆ ಊಟ ಹಾಕಿಕೊಳ್ಳುತ್ತಿದ್ದೆ. ಹಿಂದಿನಿಂದ ಅಣ್ಣಾವ್ರ ಧ್ವನಿ. ಮಟನ್ ಚಾಪ್ಸ್ ಮಾಡಿ ಚೆನ್ನಾಗಿರುತ್ತದೆ ಎಂದರು. ನಾನು ಹಿಂದೆ ತಿರುಗಿ ಅಣ್ಣಾವ್ರನ್ನು ನೋಡಿ ಶಾಕ್ ಆಗಿದ್ದೆ. ಇಲ್ಲ ಸರ್ ಮಾಡೋಕೆ ಬರಲ್ಲ ಅಂದೆ, ನಾನು ಹೇಳಿಕೊಡ್ತೀನಿ ಮಾಡಿ ಎಂದಿದ್ದರು ಎಂದು ಸಿಹಿ ಕಹಿ ಚಂದ್ರು ವಿವರಿಸಿದ್ದಾರೆ.


Click it and Unblock the Notifications











