ಮೋಹಕವಾಗಿ ಮೋಸಗೊಳಿಸುವ ತಂತ್ರ; ಕನಕವತಿಗೂ ಮುನ್ನ ಶಾಕ್ ಕೊಟ್ಟಿದ್ದ ಪಾತ್ರಗಳಿವು
ಒಂದು ಸಿನಿಮಾ ಅಂದ್ರೆ ನಾಯಕ, ನಾಯಕಿ, ಖಳ, ಹಾಸ್ಯ ನಟ, ಪೋಷಕ ಪಾತ್ರಧಾರಿಗಳು ಹೀಗೆ ಸಾಕಷ್ಟು ಪಾತ್ರಗಳು ಬಂದು ಹೋಗುತ್ತವೆ. ಎಲ್ಲಾ ಸಿನಿಮಾಗಳಲ್ಲಿ ವಿಲನ್ ಇರಲೇ ಬೇಕಂತ ಇಲ್ಲ. ಕೆಲವೊಮ್ಮೆ ಸಂದರ್ಭಗಳ ವಿಲನ್ ಆಗಿಬಿಡುತ್ತದೆ. ಇನ್ನು ಕೆಲವೊಮ್ಮೆ ಪ್ರೇಕ್ಷಕರನ್ನು ನಯವಾಗಿ ಮೋಸಗೊಳಿಸಿ ಸರ್‌ಪ್ರೈಸ್, ಟ್ವಿಸ್ಟ್, ಶಾಕ್ ಕೊಡುವ ಪ್ರಯತ್ನಗಳು ನಡೆಯುತ್ತದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಓಟಿಟಿಗೆ ಬಂದರೂ ಜನ ಚಿತ್ರಮಂದಿರಕ್ಕೆ ಹೋಗಿ ಆ ದೃಶ್ಯವೈಭವ ಕಣ್ತುಂಬಿಕೊಳ್ಳುತ್ತಿದ್ದಾರೆ. ರಿಷಬ್ ಶೆಟ್ಟಿ ಪರಿಶ್ರಮದ ಬಗ್ಗೆ ಮಾತನಾಡುತ್ತಿದ್ದಾರೆ. ಅವರೊಟ್ಟಿಗೆ ಕುಲಶೇಖರನಾಗಿ ಗುಲ್ಷನ್ ದೇವಯ್ಯ ಹಾಗೂ ಕನಕವತಿಯಾಗಿ ರುಕ್ಮಿಣಿ ವಸಂತ್ ನಟನೆಗೂ ಒಳ್ಳೆ ಅಂಕ ಸಿಕ್ಕಿದೆ.

ಆರಂಭದಲ್ಲಿ ಚಿತ್ರದ ಮೇನ್ ವಿಲನ್ ಕನಕವತಿ(ರುಕ್ಮಿಣಿ ವಸಂತ್) ಆಗಿರ್ತಾಳೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಟೀಸರ್, ಟ್ರೈಲರ್‌ನಲ್ಲಿ ಕೂಡ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸಿನಿಮಾ ನೋಡ್ತಾ ನೋಡ್ತಾ ಕೊನೆಗೆ ಆಕೆ ಬೆರ್ಮೆ ವಿರುದ್ಧ ತಿರುಗಿ ನಿಂತಾಗ ಪ್ರೇಕ್ಷಕರಿಗೆ ಅಚ್ಚರಿ ಕಾದಿತ್ತು. ಕನಕವತಿ ಯಾಕೆ ಈಶ್ವರನ ಹೂದೋಟಕ್ಕಾಗಿ ಅಷ್ಟೆಲ್ಲಾ ಮಾಡ್ತಾಳೆ ಎನ್ನುವುದಕ್ಕೂ ಚಿತ್ರದಲ್ಲಿ ಉತ್ತರ ಸಿಕ್ಕಿದೆ. ಹೀಗೆ ನಾಯಕಿಯೇ ವಿಲನ್ ಆಗಿ ಕಾಣಿಸಿಕೊಂಡಿರುವ ಸಿನಿಮಾ ಇದೇ ಮೊದಲಲ್ಲ. ಈ ಹಿಂದೆ ಕೂಡ ಅಂತಹ ಪ್ರಯತ್ನಗಳು ನಡೆದಿದೆ.
ಸಿನಿಮಾಗಳಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಅಂತಿಮವಾಗಿ ಸಿನಿಮಾ ನೋಡುಗರಿಗೆ ಮಜಾ ಕೊಡಬೇಕು, ಎಂಜಾಯ್ ಮಾಡುವಂತಿರಬೇಕು. ಅದಕ್ಕೆ ನಿರ್ದೇಶಕ ಕಥೆಯಲ್ಲಿ ಪಾತ್ರಗಳಲ್ಲಿ ಪ್ರಯೋಗ ಮಾಡುತ್ತಾನೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಲ್ಲಿ ಇಂತಹ ಸಾಕಷ್ಟು ಟ್ವಿಸ್ಟ್‌ಗಳು ಸಿಗುತ್ತದೆ. ಆರಂಭದಿಂದ ಯಾವುದೋ ಒಂದು ಪಾತ್ರವನ್ನು ಅಮಾಯಕ, ಮುಗ್ಧನಂತೆ ತೋರಿಸಿ ಕೊನೆಗೆ ಆತನೇ ನಿಜವಾದ ಮೋಸಗಾರ, ಕೊಲೆಗಾರ ಎಂದು ಪ್ರೇಕ್ಷಕರಿಗೆ ಸರ್‌ಪ್ರೈಸ್ ಕೊಡುತ್ತಾರೆ. 'ಕಾಂತಾರ- 1' ಚಿತ್ರದಲ್ಲೂ ಇದೇ ಆಗಿದೆ.

'ಕಾಂತಾರ- 1' ಟ್ರೈಲರ್ ಬಂದಾಗ ಕುಲಶೇಖರನೇ ವಿಲನ್ ಎನ್ನುವಂತೆ ಬಿಂಬಿಸಲಾಗಿತ್ತು. ಒಂದು ಹಂತದವರೆಗೆ ಅದೇ ನಿಜ. ಆತನ ಮರಣದ ನಂತರ ಮುಂದೇನು ಎಂದುಕೊಳ್ಳುತ್ತಿದ್ದಂತೆ ಕನಕವತಿ ಪಾತ್ರದ ಅಸಲಿ ಕಥೆ ತೆರೆದುಕೊಂಡಿತ್ತು. ಕಡಪ ದಿಕ್ಕಿನವರ ಲಾಲನೆ ಪಾಲನೆಯಲ್ಲಿ ಬೆಳೆದ ಆಕೆ ಕೂಡ ಈಶ್ವರನ ಹೂದೋಟ(ಕಾಂತಾರ)ಕ್ಕಾಗಿ ಆಸೆ ಬೀಳುತ್ತಾಳೆ. ಅದಕ್ಕಾಗಿ ಅಡ್ಡ ಬಂದವರನ್ನು ಮಟ್ಟ ಹಾಕಲು ಮುಂದಾಗುತ್ತಾಳೆ. ಚಾವುಂಡಿಯಾಗಿ ಕೋಳಿಮರಿಯಂತೆ ಆಕೆಯ ಕಥೆಯನ್ನು ಬೆರ್ಮೆ ಮುಗಿಸುತ್ತಾನೆ.
ಇತ್ತೀಚೆಗೆ ಬಂದಿದ್ದ 'ಕೂಲಿ' ಚಿತ್ರದಲ್ಲಿ ರಚಿತಾ ರಾಮ್ ಪಾತ್ರಕ್ಕೆ ಕೂಡ ಇಂಥದ್ದೇ ಟ್ವಿಸ್ಟ್ ಇತ್ತು. ಆ ಚಿತ್ರದಲ್ಲಿ ದಯಾಳ್(ಸೌಬಿನ್ ಸಾಹಿರ್) ಜೊತೆ ಸೇರಿ ಕಲ್ಯಾಣಿ(ರಚಿತಾ) ಹಣಕ್ಕಾಗಿ ಏನೆಲ್ಲಾ ಮಾಡ್ತಾಳೆ ಎನ್ನುವುದನ್ನು ತೋರಿಸಲಾಗಿತ್ತು. ಪದೇ ಪದೆ ನಾಟಕ ಮಾಡಿ ಎಲ್ಲರನ್ನು ಇಬ್ಬರೂ ಯಾಮಾರಿಸುವ ಸನ್ನಿವೇಶಗಳು ಮಜಾ ಕೊಟ್ಟಿತ್ತು. ರಚಿತಾ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು.
ಈ ಹಿಂದೆ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಹೀಗೆ ನಾಯಕಿ ಅಥವಾ ಮಹಿಳಾ ಪಾತ್ರಗಳನ್ನು ಕೊನೆಗೆ ಕೊನೆಗೆ ವಿಲನ್ ಆಗಿ ತೋರಿಸಿರುವ ಉದಾಹರಣೆಯಿದೆ. ವಿಲನ್ ಅಲ್ಲದೇ ಇದ್ದರೂ ಇಡೀ ಪಾತ್ರಕ್ಕೆ ದೊಡ್ಡ ತಿರುವು ಕೊಟ್ಟು ತೋರಿಸಿದ್ದನ್ನು ನೋಡಿದ್ದೇವೆ. 'ಗುಪ್ತ್' ಚಿತ್ರದಲ್ಲಿ ಕಾಜೋಲ್, 'ಅಂದಾದೂನ್' ಚಿತ್ರದಲ್ಲಿ ತಬು ಹಾಗೂ 'ಐತ್ರಾಜ್' ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಇಂಥದ್ದೇ ಪಾತ್ರಗಳಲ್ಲಿ ನೋಡುಗರಿಗೆ ಅಚ್ಚರಿ ಉಂಟು ಮಾಡಿದ್ದರು.
'ಕಾಂತಾರ- 1' ಚಿತ್ರದಂತೆ ತಮಿಳಿನ 'ಆಯಿರತ್ತಿಲ್ ಒರುವನ್' ಚಿತ್ರದಲ್ಲಿ ರೀಮಾ ಸೇನ್ ಪಾತ್ರಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿತ್ತು. ಫ್ಯಾಂಟಸಿ, ವಾಮಾಚಾರ ಅಂಶಗಳು ಆ ಚಿತ್ರದಲ್ಲಿತ್ತು. ಚೋಳ, ಪಾಂಡ್ಯರ ಕಥೆಗಳು ಚಿತ್ರದಲ್ಲಿದೆ. 15 ವರ್ಷಗಳ ಹಿಂದೆ ಬಂದ ಈ ಸಿನಿಮಾ ಗೆಲ್ಲಲಿಲ್ಲ. 'ಕಾಂತಾರ- 1' ಸಿನಿಮಾ ನೋಡಿದ ಕೆಲ ತಮಿಳು ಪ್ರೇಕ್ಷಕರು ನಮ್ಮದೇ ಸಿನಿಮಾವನ್ನು ನಾವು ಆಗ ಗೆಲ್ಲಿಸಲಿಲ್ಲ ಎಂದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
'ಆಪ್ತಮಿತ್ರ' ಚಿತ್ರದಲ್ಲಿ ಕೂಡ ಆರಂಭದಲ್ಲಿ ಸೌಮ್ಯ(ಪ್ರೇಮಾ) ಪಾತ್ರವೇ ಮನೆಯ ಎಲ್ಲಾ ಸಮಸ್ಯೆಗಳಿಗೆ ಕಾರಣ ಎಂದು ತೋರಿಸಿ ಕೊನೆಗೆ ಗಂಗಾ(ಸೌಂದರ್ಯ) ಅಸಲಿ ಮುಖ ಅನಾವರಣವಾಗಿತ್ತು.


Click it and Unblock the Notifications











