ಅಂದು ಅಣ್ಣಾವ್ರ ಕೈ ಹಿಡಿದು ಕ್ಷಮೆ ಕೇಳಿದ್ದರು ಪ್ರಧಾನಿ ಇಂದಿರಾ ಗಾಂಧಿ!
ಕನ್ನಡ ನಾಡು ನುಡಿ ಚಿತ್ರರಂಗದಕ್ಕೆ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಕೊಡುಗೆ ಅಪಾರ. ರಾಜಕೀಯರಂಗಕ್ಕೆ ಧುಮುಕಿ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ಅಣ್ಣಾವ್ರಿಗೆ ಇತ್ತು. ಆದರೆ ಅವರು ಪಾಲಿಟಿಕ್ಸ್‌ನಿಂದ ದೂರವೇ ಉಳಿದುಬಿಟ್ಟಿದ್ದರು.
1978ರ ಲೋಕಸಭಾ ಉಪಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ಪರ್ಧಿಸಿದ್ದರು. ಆಗ ಅವರ ವಿರುದ್ಧ ಡಾ. ರಾಜ್‌ಕುಮಾರ್ ಅವರನ್ನು ಕಣಕ್ಕಿಳಿಸಲು ಜನತಾ ಪಕ್ಷ ಬಯಸಿತು. ಆದರೆ ಅಣ್ಣಾವ್ರು ಅದಕ್ಕೆ ಒಪ್ಪಲೇ ಇಲ್ಲ. ಮುಂದೆ ಇಂದಿರಾಗಾಂಧಿ ಗೆಲುವು ಸಾಧಿಸಿದ್ದರು. ಅಂದು ಡಾ. ರಾಜ್ ಸ್ಪರ್ಧಿಸಿದ್ದರೆ ಅನಾಯಾಸವಾಗಿ ಗೆಲ್ಲುತ್ತಿದ್ದರು ಎಂದು ರಾಜಕೀಯ ಪಂಡಿತರು ಹೇಳುತ್ತಾರೆ. ಆ ಸಮಯದಲ್ಲಿ ಅಣ್ಣಾವ್ರ ಜನಪ್ರಿಯತೆ ಆ ರೀತಿ ಇತ್ತು.

ಹೀಗೆ ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಎದುರು ಚುನಾವಣೆಯಲ್ಲಿ ಡಾ. ರಾಜ್ ಸ್ಪರ್ಧಿಸಲು ಒಪ್ಪಿರಲಿಲ್ಲ. ಮುಂದೆ ಅವರು ಪ್ರಧಾನಿಯಾದಾಗ ಅಣ್ಣಾವ್ರು ಭೇಟಿ ಮಾಡುವ ಸಂದರ್ಭ ಬಂದಿತ್ತು. ಈ ವೇಳೆ ಇಂದಿರಾ ಗಾಂಧಿ ಅಣ್ಣಾವ್ರ ಕ್ಷಮೆ ಕೇಳುವ ಸನ್ನಿವೇಶ ಎದುರಾಗಿತ್ತು. ಆ ವಿಚಾರವನ್ನು ಪಾರ್ವತಮ್ಮ ರಾಜ್‌ಕುಮಾರ್ ಸಹೋದರ ಚಿನ್ನೇಗೌಡ್ರು ಡೈಲಿ ಮಾಧ್ಯಮ ಯೂಟ್ಯೂಬ್ ಸಂದರ್ಶದಲ್ಲಿ ನೆನಪಿಸಿಕೊಂಡಿದ್ದಾರೆ. ಅಂದು ಆ ಘಟನೆಗೆ ಅವ್ರು ಪ್ರತ್ಯಕ್ಷ ಸಾಕ್ಷಿ ಆಗಿದ್ದರು. ಡಾ. ರಾಜ್ ಅವರನ್ನು ರಾಜಕೀಯರಂಗಕ್ಕೆ ಸೆಳೆಯಲು ನಡೆದ 2 ಘಟನೆಗಳನ್ನು ಅವರು ವಿವರಿಸಿದ್ದಾರೆ.
ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ತಮಿಳು ನಟ ಎಂಜಿಆರ್ ಹಾಗೂ ತೆಲುಗು ನಟ ಎನ್‌ಟಿಆರ್ ಚಿತ್ರರಂಗಕ್ಕೆ ಬಂದು ಗೆದ್ದಿದ್ದರು. ಇಬ್ಬರೂ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿದ್ದರು. ಒಮ್ಮೆ ಅನಾರೋಗ್ಯದಿಂದ ಬಳಲುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಎಂಜಿಆರ್ ಅವರನ್ನು ಭೇಟಿ ಮಾಡಲು ಹೋಗಿದ್ದಾಗ ಅಲ್ಲಿಗೆ ಆಂಧ್ರ ಸಿಎಂ ಎಂಟಿಆರ್ ಸಹ ಬಂದಿದ್ದರು. ಮೂವರು ಮಾತನಾಡುವಾಗ ಅಣ್ಣಾವ್ರು ರಾಜಕೀಯಕ್ಕೆ ಬರುವ ಬಗ್ಗೆ ಚರ್ಚೆ ಆಗಿತ್ತು ಎಂದು ಚಿನ್ನೇಗೌಡ್ರು ಮೆಲುಕು ಹಾಕಿದ್ದಾರೆ.

"ಎಂಜಿಆರ್ ಅವರಿಗೆ ಹುಷಾರಿಲ್ಲ ಅಂದಾಗ ಅಣ್ಣಾವ್ರು ಭೇಟಿ ಮಾಡಲು ಹೋಗಬೇಕು ಎಂದರು. ಪಾರ್ವತಮ್ಮ ಅದಕ್ಕೆ ವ್ಯವಸ್ಥೆ ಮಾಡಿದ್ದರು. ನಾನು, ನಮ್ಮ ಅಕ್ಕ ಹಾಗೂ ನಮ್ಮ ಭಾವ ಮೂವರು ಹೋಗಿದ್ದೆವು. ಅದೇ ಸಮಯಕ್ಕೆ ಎನ್‌ಟಿಆರ್ ಸಹ ಬಂದಿದ್ದರು. ಮೂವರು ಬಹಳ ಖುಷಿಯಾಗಿ ಮಾತನಾಡಿದ್ದರು. ಈ ವೇಳೆ ಎನ್‌ಟಿಆರ್, ತಮ್ಮಡು ನುವ್ವು ರಾಜಕೀಯಂಕ್ಕೆ ರಾವಾಲ. ನಾನು ಆಂಧ್ರ ಸಿಎಂ, ಎಂಜಿಆರ್ ಇಲ್ಲಿ ಸಿಎಂ ಆಗಿದ್ದಾರೆ. ಆಗ ಎಂಜಿಆರ್ ಸುಮ್ಮನಿಪ್ಪ, ರಾಜಕೀಯ ನಮಗೆ ಸಾಕು. ರಾಜ್‌ಕುಮಾರ್ ದೇವರ ರೀತಿ, ಅವರಿಗೆ ರಾಜಕೀಯ ಎಲ್ಲಾ ಬೇಡ ಎಂದರು. ಅಣ್ಣಾವ್ರು ಕೂಡ ನನಗೆ ರಾಜಕೀಯ ಎಲ್ಲಾ ಬೇಡ ಎಂದರು" ಅಂತ ಚಿನ್ನೇಗೌಡ್ರು ಹೇಳಿದ್ದಾರೆ.
ಮಾತು ಮುಂದುವರೆಸಿರುವ ಚಿನ್ನೇಗೌಡ್ರು ಚಿಕ್ಕಮಗಳೂರು ಉಪಚುನಾವಣೆಯನ್ನು ನೆನಪಿಸಿಕೊಂಡಿದ್ದಾರೆ. "ಅಂದು ಚುನಾವಣೆಯಲ್ಲಿ ಇಂದಿರಾ ಗಾಂಧಿ ಎದುರು ರಾಜ್‌ಕುಮಾರ್ ಅವರನ್ನು ನಿಲ್ಲಿಸಬೇಕೆಂದು ಜಾರ್ಜ್ ಫರ್ನಾಂಡಿಸ್ ಪ್ರಯತ್ನಿಸಿದ್ದರು. ಆದರೆ ಅಣ್ಣಾವ್ರು ಒಪ್ಪಲಿಲ್ಲ. 8 ದಿನ ಯಾರ ಸಂಪರ್ಕ ಇಲ್ಲದೇ ಅವರೊಟ್ಟಿಗೆ ನಾವು ಅಜ್ಞಾತದಲ್ಲಿ ತಿರುಗಾಡುತ್ತಿದ್ದೆವು. ಬೇರೆಯವರು ನಾಮಪತ್ರ ಸಲ್ಲಿಸಿದ ಬಳಿಕ ವಾಪಸ್ ಬಂದೆವು. ಅಣ್ಣಾವ್ರಿಗೆ ಪದ್ಮಭೂಷಣ ಪ್ರಶಸ್ತಿ ಬಂದಾಗ ಅವರ ಮನೆಗೆ ಇಂದಿರಾ ಗಾಂಧಿ ಆಹ್ವಾನಿಸಿದ್ದರು" ಎಂದು ಮತ್ತೊಂದು ಘಟನೆ ತೆರೆದಿಟ್ಟಿದ್ದಾರೆ.
"ಅವತ್ತು ಪ್ರಧಾನಿ ಭೇಟಿ ನಾನು, ನಮ್ಮಕ್ಕ, ನಿರ್ದೇಶಕ ಭಗವಾನ್ ಹಾಗೂ ಅಣ್ಣಾವ್ರು ಹೋಗಿದ್ದೆವು. ಅವರು ಬರುವುದು 10 ನಿಮಿಷ ತಡವಾಗುತ್ತಿತ್ತು. ಮತ್ತೊಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೂ ಕಾದೆವು. ಕೊನೆಗೆ ಬಂದರು, ಒಳಗ ಹೋದ ಕೂಡಲೇ ಇಂದಿರಾಗಾಂಧಿ ಬಂದು ಕೈಹಿಡಿದು "ರಾಜ್‌ಕುಮಾರ್ ಜೀ, ಆಪ್‌ಕೆ ಕ್ಷಮಾ ಕರೊ" ಎಂದು ಕ್ಷಮೆ ಕೇಳಿದ್ದರು. ಬಳಿಕ ಕೂರಿಸಿ ಮಾತನಾಡಿದರು. ಏನು ಬೇಕು ಕೇಳಿ, ಪಾಲಿಟಿಕ್ಸ್‌ಗೆ ಬರ್ತೀರಾ? ಎಂದು ಕೇಳಿದ್ದರು. ಇಲ್ಲ ಏನು ಬೇಡ. ನಾನು ಕಲಾವಿದನಾಗಿಯೇ ಇರ್ತೀನಿ ಎಂದು ರಾಜ್‌ಕುಮಾರ್ ಹೇಳಿದ್ರು" ಎಂದು ಚಿನ್ನೇಗೌಡ್ರು ತಿಳಿಸಿದ್ದಾರೆ.


Click it and Unblock the Notifications











