Darshan: ಜೈಲಿನಲ್ಲಿದಾಗ ನೆಲದ ಮೇಲೆ ಮಲಗುತ್ತಿದ್ದ ದಾಸ ಕಾಲಿಲ್ಲದ ಅಭಿಮಾನಿಗೆ ಸಹಾಯ ಮಾಡಿದ್ಹೇಗೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸಿನಿಮಾಗಳು ಹಾಗೂ ವಿಭಿನ್ನ ವ್ಯಕ್ತಿತ್ವದಿಂದ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲೂ ನಟ ದರ್ಶನ್ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 11 ವರ್ಷಗಳ ಹಿಂದೆ ಸೆರೆವಾಸವನ್ನು ಅನುಭವಿಸಬೇಕಾಯಿತು.
2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ ಆರೋಪದಿಂದ ದರ್ಶನ್ 28 ದಿನಗಳ ಕಾಲ ಸೆರೆಮನೆವಾಸಿಯಾಗಿ ಇರಬೇಕಾಯಿತು. ಮತ್ತೊಂದು ವಿಶೇಷ ಏನು ಅಂದ್ರೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗಲೇ 'ಸಾರಥಿ' ಸಿನಿಮಾ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತ್ತು. ಅಲ್ಲಿಂದ ಮುಂದೆ ದರ್ಶನ್ ದರ್ಬಾರ್ ಮತ್ತಷ್ಟು ಹೆಚ್ಚಾಯಿತು. ಅಂದಹಾಗೆ ದಾಸ ಜೈಲಿನಲ್ಲಿದ್ದ ದಿನಗಳನ್ನು ಅಂದಿನ ಜೈಲರ್ ತಿಮ್ಮಯ್ಯ ನೆನಪಿಸಿಕೊಂಡಿದ್ದಾರೆ.

ಪರಪ್ಪನ ಅಗ್ರಹಾರದ ನಿವೃತ್ತ ಜೈಲರ್ ತಿಮ್ಮಯ್ಯ ದಶಕದ ಹಿಂದೆ ತಾವು ಜೈಲರ್ ಆಗಿದ್ದಾಗ ಸೆರೆಮನೆಯಲ್ಲಿದ್ದವರ ಕತೆಗಳನ್ನು ಜನಜಾಗೃತಿ ಮಾಧ್ಯಮ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಅವಧಿಯಲ್ಲೇ ನಟ ದರ್ಶನ್ ಸಹ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ದರ್ಶನ್ ಜೊತೆಗೆ ಮಾತನಾಡಿದ್ದನ್ನು ಮೆಲುಕು ಹಾಕಿದ್ದಾರೆ.
ದರ್ಶನ್ ಬಹಳ ಮುಗ್ಧರು
"ದರ್ಶನ್, ಕಟ್ಟಾ ಜಗದೀಶ್ ಸೇರಿದಂತೆ 4 ಜನ ಒಂದು ಕೋಣೆಯಲ್ಲಿ ಇದ್ದರು. ದರ್ಶನ್ ಬಹಳ ಮುಗ್ಧರು. ಅವರಿಗೆ ತೆಲುಗು ಮಾತನಾಡಲು ಬರುತ್ತಿತ್ತು. ನಾನು ಹೋಗಿ ದರ್ಶನ್ ಯಾಕೆ ಹೀಗೆಲ್ಲಾ ಮಾಡಿದ್ರಿ ಎಂದು ಕೇಳಿದ್ದೆ. ನಿಮಗೆ ಸಮಾಜದಲ್ಲಿ ಒಳ್ಳೆ ಹೆಸರಿದೆ ಎಂದೆ. ಏನೋ ಸರ್, ಮಾಡಿಬಿಟ್ಟೆ. ನನಗೂ ಬಹಳ ಬೇಸರವಾಯಿತು. ಈಗ ನಮ್ಮ ಮಿಸ್ಸೆಸ್ ಜಾಮೀನು ಮಾಡಿಸುತ್ತಿದ್ದಾರೆ ಅಂದ್ರು"
ಚಾಪೆ ಹಾಸಿ ಮಲಗುತ್ತಿದ್ದರು
"ಯಾವುದೇ ಆಡಂಬರ ಇರಲಿಲ್ಲ. ನೆಲದ ಮೇಲೆ ಚಾಪೆ ಹಾಸಿ ಮಲಗುತ್ತಿದ್ದರು. ಸೆಲೆಬ್ರೆಟಿ ಎನ್ನುವ ಕಾರಣಕ್ಕೆ ಹೆಚ್ಚು ಕೋಣೆ ಒಳಗೆ ಇರುತ್ತಿದ್ದರು. ಒಮ್ಮೆ ನಾನು ಹೋದೆ. ಏನ್ ದರ್ಶನ್ ಚೆನ್ನಾಗಿದ್ದೀರಾ ಅಂದೆ? ಚೆನ್ನಾಗಿದ್ದೀನಿ ಸರ್, ನೀವು ಚೆನ್ನಾಗಿದ್ದೀರಾ? ಎಂದು ಕೇಳಿದ್ರು. ನಾನು ಚೆನ್ನಾಗಿದ್ದೀನಿ ಎಂದೆ. ಯಾಕೆ ಹೀಗೆ ಮಾಡ್ದೆ ಎಂದು ಕೇಳ್ದೆ. ಏನೋ ಸರ್ ಬ್ಯಾಡ್‌ಲಕ್. ಆ ರೀತಿ ಆಗೋಯ್ತು ಅಂದ್ರು. ನಾನು ಇನ್ಮೇಲೆ ಆ ರೀತಿ ಮಾಡ್ಬೇಡ ಅಂದೆ. ಇಲ್ಲ ಸರ್ ಮಾಡಲ್ಲ ಅಂದ್ರು"
ವಿಶೇಷ ಚೇತನ ಅಭಿಮಾನಿ ಬಂದಿದ್ದ
"ದರ್ಶನ್ ಜೈಲಿನಿಂದ ರಿಲೀಸ್ ಆಗುವ ದಿನ ಒಬ್ಬ ಹುಡುಗ ಚಾಮರಾಜನಗರದಿಂದ ಬಂದು ಜೈಲಿನ ಮುಂದೆ ಕೂತಿದ್ದ. ಎರಡೂ ಕಾಲಿರಲಿಲ್ಲ. ದರ್ಶನ್ ಅಭಿಮಾನಿ ಅಂತ ಚಾಮರಾಜನಗದಿಂದ ಟ್ರೈನ್‌ನಲ್ಲಿ ಬಂದಿದ್ದ. ಮೆಜೆಸ್ಟಿಕ್‌ನಲ್ಲಿ ಇಳಿದು ಅದು ಹೇಗೋ ಪರಪ್ಪನ ಅಗ್ರಹಾರ ಜೈಲು ಬಳಿ ಬಂದಿದ್ದ. ನಾನು ಹೊರಗೆ ಬಂದು ಯಾರಪ್ಪಾ ನೀನು ಎಂದೆ. ನಾನು ದರ್ಶನ್ ಅಭಿಮಾನಿ, ಚಾಮರಾಜನಗರದಿಂದ ಬಂದಿದ್ದೀನಿ ಎಂದ. ನನಗೆ ಅಯ್ಯೋ ಎನಿಸಿಬಿಡ್ತು. 2 ಕಾಲು ಇರಲಿಲ್ಲ. ಈ ರೀತಿ ಬಂದಿದ್ದಾನೆ. ಹೇಗಾದರೂ ಮಾಡಿ ದರ್ಶನ್ ಬಳಿ ಮಾತನಾಡಿಸಬೇಕು ಎನಿಸಿತು"
ಅಭಿಮಾನಿಗೆ ದರ್ಶನ್ 5 ಸಾವಿರ ಕೊಟ್ರು
"ದರ್ಶನ್ ಬಳಿ ಹೋಗಿ, ಈ ರೀತಿ 2 ವಿಶೇಷ ಚೇತನ ವ್ಯಕ್ತಿ, ಚಾಮರಾಜನಗರದಿಂದ ನಿಮ್ಮ ಅಭಿಮಾನಿ ಎಂದು ಬಂದಿದ್ದಾನೆ. ನಿಮ್ಮನ್ನು ನೋಡಬೇಕಂತೆ. ಒಳಗೆ ಕರ್ಕೊಂಡು ಬರ್ತೀನಿ ಎಂದೆ. ಖಂಡಿತ ಸರ್, ಕರ್ಕೊಂಡ್ ಬನ್ನಿ ಎಂದರು. ಒಳಗೆ ಕರ್ಕೊಂಡು ಹೋದೆ. ಅವರ ಕೈಲಿದ್ದ 5 ಸಾವಿರ ರೂ. ಆತನಿಗೆ ಕೊಟ್ಟರು. ನಾವು ಐನೂರು, ಸಾವಿರ ಕಲೆಕ್ಷನ್ ಮಾಡಿ ಕೊಟ್ವಿ. ದರ್ಶನ್ ಆತನನ್ನು ನೋಡಿ ಯಾಕಪ್ಪಾ ಇಷ್ಟು ದೂರ ಬಂದೆ ಎಂದ್ರು. ಅದಕ್ಕೆ ಆತ ನಾನು ನಿಮ್ಮ ಅಭಿಮಾನಿ. ನಿಮ್ಮನ್ನು ನೋಡ್ಲೇಬೇಕು ಎಂದು ಬಂದೆ. ಆದ್ರು ಕಾಲಿಲ್ಲದೇ ಇಷ್ಟು ದೂರ ಯಾಕೆ ಬರೋಕೆ ಹೋದೆ ಅಂದ್ರು. ಅಲ್ಲಿದ್ದವರೆಲ್ಲಾ ಒಂದಷ್ಟು ಹಣವನ್ನು ಆ ಹುಡುಗನಿಗೆ ಕೊಟ್ಟು ಕಳುಹಿದರು" ಎಂದು ತಿಮ್ಮಯ್ಯ ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ.
'ಕಾಟೇರ' ಚಿತ್ರಕ್ಕಾಗಿ ಕಾತರ
ಸದ್ಯ ಮಾಜಿ ಜೈಲರ್ ತಿಮ್ಮಯ್ಯ ದರ್ಶನ್ ಬಗ್ಗೆ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಭಿಮಾನಿಗಳು ಆ ತುಣುಕನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಅಂದಹಾಗೆ ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











