ಡೈನಾಮಿಕ್ ಸ್ಟಾರ್ ದೇವರಾಜ್ ಭುಜದ ಮೇಲೆ ಕೈ ಇಟ್ಟಿದ್ನಾ ಕಾಡುಗಳ್ಳ ವೀರಪ್ಪನ್? ಆ ದಿನ ಆಗಿದ್ದೇನು?
90ರ ದಶಕದಲ್ಲಿ ಹೀರೊ ಆಗಿ ಮೋಡಿ ಮಾಡಿದ ನಟ ದೇವರಾಜ್ ಈಗ ಪೋಷಕ ಪಾತ್ರಗಳನ್ನು ನಟಿಸುತ್ತಿದ್ದಾರೆ. ಪರಭಾಷಾ ಪ್ರೇಕ್ಷಕರಿಗೂ ಈಗ ಚಿರಪರಿಚಿತ. ಅವರು ಮಾಡುತ್ತಿದ್ದ ರಫ್ ಅಂಡ್ ಟಫ್ ಪಾತ್ರಗಳನ್ನು ನೋಡಿ ಡೈನಾಮಿಕ್ ಸ್ಟಾರ್ ಎಂದೇ ಬಿರುದು ಸಿಕ್ಕಿತ್ತು.
ಇತ್ತೀಚಿನ ವರ್ಷಗಳಲ್ಲಿ ದೇವರಾಜ್ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಮಗ ಪ್ರಜ್ವಲ್ ದೇವರಾಜ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ನೆಗೆಟಿವ್ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಬಂದ ದೇವರಾಜ್ ಬಳಿಕ ಹೀರೊ ಆಗಿ ಬಡ್ತಿ ಪಡೆದಿದ್ದರು. 90ರ ದಶಕದಲ್ಲಿ ಬಹುಬೇಡಿಕೆಯ ನಟನಾಗಿ ಮಿಂಚಿದ್ದರು. ಯಶಸ್ಸಿನ ತುತ್ತ ತುದಿಯಲ್ಲಿ ಇದ್ದಾಗಲೇ 'ವೀರಪ್ಪನ್' ಎಂಬ ಚಿತ್ರದಲ್ಲಿ ದೇವರಾಜ್ ನಟಿಸಿದ್ದರು.

ಕಾಡುಗಳ್ಳ ವೀರಪ್ಪನ್ ಅಟ್ಟಹಾಸದ ಕುರಿತು ನಿರ್ಮಾಣವಾಗಿದ್ದ ಸಿನಿಮಾ ಅದು. ಆಗ ದಂತಚೋರನ ಉಪಟಳ ಜೋರಾಗಿತ್ತು. ಅಂತಹ ಸಮಯದಲ್ಲಿ ಆತನ ಕುರಿತು ಸಿನಿಮಾ ಮಾಡುವ ಸಾಹಸ ಮಾಡಿದ್ದರು. ಕೊಂಚ ಅಳುಕಿನಲ್ಲೇ ದೇವರಾಜ್ ಚಿತ್ರದಲ್ಲಿ ನಟಿಸೋಕೆ ಒಪ್ಪಿದ್ದರು. ವೀರಪ್ಪನ್ ಹುಟ್ಟೂರು ಗೋಪಿನಾಥಂ ಸೇರಿದಂತೆ ಆತನ ಓಡಾಟ ಇದ್ದ ಜಾಗಗಳಲ್ಲೇ ಸಿನಿಮಾ ಚಿತ್ರೀಕರಣ ನಡೆದಿತ್ತು.
'ವೀರಪ್ಪನ್' ಚಿತ್ರದ ಚಿತ್ರೀಕರಣದ ವೇಳೆ ನಡೆದ ಮೈಜುಮ್ ಎನಿಸುವ ಘಟನೆಗಳ ಬಗ್ಗೆ ನಟ ದೇವರಾಜ್ ತೆಲುಗು ಸಂದರ್ಶನದಲ್ಲಿ ಮಾತನಾಡಿದ್ದರು. ತೆಲುಗಿನ ಸುಮನ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದ ವೀಡಿಯೋ ಈಗ ವೈರಲ್ ಆಗುತ್ತಿದೆ. ಆ ಚಿತ್ರದ ಚಿತ್ರೀಕರಣದ ವೇಳೆ ವೀರಪ್ಪನ್ ಸಹಚರರು ಸೆಟ್‌ಗೆ ಬಂದು ಹೋಗಿದ್ದರು ಎನ್ನುವ ಶಾಕಿಂಗ್ ವಿಚಾರಗಳನ್ನು ಅವರು ಬಿಚ್ಚಿಟ್ಟಿದ್ದರು.

"ವೀರಪ್ಪನ್ ಬಹಳ ಆಕ್ಟೀವ್ ಆಗಿದ್ದ ಸಮಯ ಅದು. ಆಗ ಬಂದು ಸಿನಿಮಾ ಮಾಡೋಣ ಎಂದಾಗ ನಾನು ಬೇಡ, ಸುಮ್ಮನೆ ವಿವಾದ ಯಾಕೆ ಎಂದೆ. ನಾವು ಸಿನಿಮಾ ಮಾಡುವ ಬಗ್ಗೆ ವೀರಪ್ಪನ್‌ಗೂ ಗೊತ್ತು. ಪರವಾಗಿಲ್ಲ ಮಾಡಿ ಎಂದರು. ನಮ್ಮ ಪತ್ನಿ ಒಪ್ಪಲಿಲ್ಲ. ಪ್ರಜ್ವಲ್ ಆಗ ಹುಟ್ಟಿದ್ದ. ಸಿನಿಮಾ ಚಿತ್ರೀಕರಣದ ವೇಳೆ ನಾನು, ಪ್ರಜ್ವಲ್ ನಿಮ್ಮ ಜೊತೆಗೆ ಇರ್ತೀವಿ ಎಂದು ಪತ್ನಿ ಷರತ್ತು ಹಾಕಿ ಚಿತ್ರದಲ್ಲಿ ನಾನು ನಟಿಸಲು ಒಪ್ಪಿದ್ದರು" ಎಂದು ದೇವರಾಜ್ ನೆನಪಿಸಿಕೊಂಡಿದ್ದಾರೆ.
ವೀರಪ್ಪನ್ ಉಪಟಳ ಹೆಚ್ಚಾಗಿ ಇದ್ದಿದ್ದರಿಂದ ಪೊಲೀಸ್ ಕಾರ್ಯಚರಣೆ ಕೂಡ ನಡೀತಿತ್ತು. ಡಿಎಫ್‌ಓ ಶ್ರೀನಿವಾಸ್ ಸಹ ಇದ್ದರು. ನಾವು ಎಲ್ಲಾ ಅನುಮತಿ ಪಡೆದು ವೀರಪ್ಪನ್ ಸಿನಿಮಾ ಚಿತ್ರೀಕರಣ ನಡೆಸಿದೆವು. "ಮೊದಲ ದಿನ ಚಿತ್ರೀಕರಣಕ್ಕೆ ಹೋದಾಗ ನಾನೇ ವೀರಪ್ಪನ್ ಪಾತ್ರ ಮಾಡುವುದು ಎಂದು ಗೊತ್ತಾಗಿ ಅಲ್ಲಿನ ಜನ ವ್ಯಂಗ್ಯವಾಗಿ ನೋಡಿದ್ದರು, ಆದರೆ ಬಳಿಕ ಮೇಕಪ್ ಹಾಕಿ ಬಂದಾಗ ಪಾತ್ರಕ್ಕೆ ಸೂಕ್ತ ಎನ್ನುವಂತೆ ಮಾತಾಡಿಕೊಂಡಿದ್ದರು" ಎಂದಿದ್ದಾರೆ.
ವೀರಪ್ಪನ್ 11 ಜನ ಪೊಲೀಸರನ್ನು ಕೊಂದಿದ್ದ ಸ್ಥಳದಲ್ಲಿ ಕೂಡ ಸಿನಿಮಾ ಚಿತ್ರೀಕರಣ ನಡೆಸಿದೆವು. ಒಮ್ಮೆ ಮಧ್ಯಾಹ್ನ 3 ಗಂಟೆಗೆ ಸಣ್ಣನೆಯ ವ್ಯಕ್ತಿ ಒಬ್ಬ ಬಂದು ಚಿತ್ರೀಕರಣದ ಜಾಗದಲ್ಲಿ ಬಂದು ಕುಳಿತಿದ್ದ. ಯಾರು ಎಂದು ಗೊತ್ತಾಗಲಿಲ್ಲ. ಶೂಟಿಂಗ್ ಮುಗಿಸಿ ಬಂದು ಕಾಸ್ಟ್ಯೂಮ್ ಚೇಂಜ್ ಮಾಡುತ್ತಿದ್ದೆ. ಆಗ ಯಾರೋ ಬಂದು ಹಿಂದಿನಿಂದ ಭುಜ ತಟ್ಟಿದ್ದರು. ಹಿಂದೆ ತಿರುಗಿದರೆ "ಚೆನ್ನಾಗಿ ಮಾಡ್ತಿದ್ದೀಯಾ" ಎಂದು ಹೇಳಿದ. ಬಳಿಕ ಸ್ನೇಹಿತ ಅವಿನಾಶ್ ಕರೆದು ತೋರಿಸುವ ವೇಳೆಗೆ ಆ ವ್ಯಕ್ತಿ ಇರಲಿಲ್ಲ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅದು ವೀರಪ್ಪನ್ ಇರಬಹುದು ಎಂದು ಗೊತ್ತಾಗಿ ನಮಗೆಲ್ಲಾ ಶಾಕ್ ಆಗಿತ್ತು. ಬಳಿಕ ಅಲ್ಲಿಂದ 11 ಕಿಲೋ ಮೀಟರ್ ನಡೆದು ಗೋಪಿನಾಥಂಗೆ ಬಂದು ತಲುಪಿದೆವು. ವೀರಪ್ಪನ್ ಅನುಮತಿ ಕೊಟ್ಟಿದ್ದಾರೆ ಎಂದ ಮೇಲೆ ಧೈರ್ಯದಿಂದಲೇ ನಟಿಸುತ್ತಿದ್ದೆ. ಆದರೆ ಚಿತ್ರೀಕರಣ ವೇಳೆ ಕೊಂಚ ಭಯವಾಗುತ್ತಿತ್ತು. "ಒಮ್ಮೆ ರಾತ್ರಿ ಸಾಂಗ್ ಶೂಟಿಂಗ್ ವೇಳೆ ಬಂದೂಕಿನಿಂದ ಗುಂಡು ಆರಿಸಿದ ಶಬ್ಧವಾಯಿತು. ಇದ್ದಕ್ಕಿದಂತೆ ಎಲ್ಲರೂ ಸೈಲೆಂಟ್ ಆಗಿಬಿಟ್ಟರು. ಯಾಕೆ ಎಂದು ಗೊತ್ತಾಗಲಿಲ್ಲ, ಬಳಿಕ ವೀರಪ್ಪನ್ ಬಂದು ನೋಡಿ ಹೋಗಿದ್ದಾನೆ ಎಂದಾಗ ಶಾಕ್ ಆಗಿತ್ತು" ಎಂದು ದೇವರಾಜ್ ವಿವರಿಸಿದ್ದಾರೆ.


Click it and Unblock the Notifications