ಅಭಿಮಾನಿ ಜೊತೆ ರಸ್ತೆಯಲ್ಲಿ ಸಿಗರೇಟ್ ಹಂಚಿಕೊಂಡು ಸೇದಿದ್ದ ಕಿಚ್ಚ; ವೀಡಿಯೋ ವೈರಲ್
ಚಂದನವನದಲ್ಲಿ ಬಹಳ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ ಕಿಚ್ಚ ಸುದೀಪ್. ಪರಭಾಷಾ ಸಿನಿಮಾಗಳಲ್ಲಿ ಕೂಡ ನಟಿಸಿ ದೇಶ ವಿದೇಶಗಳಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ನೆಚ್ಚಿನ ನಟನನ್ನು ಅಭಿಮಾನಿಗಳು ಮೆರೆಸುತ್ತಾರೆ. ಕಿಚ್ಚ ಕೂಡ ಅಭಿಮಾನಿಗಳನ್ನು ಬಹಳ ಪ್ರೀತಿಸುತ್ತಾರೆ.
ಅಭಿಮಾನಿಗಳ ಜೊತೆ ಕೆಲವೊಮ್ಮೆ ತಾರೆಯರು ಅಥವಾ ಅವರ ಜೊತೆಗಿರುವ ಬಾಡಿಗಾರ್ಡ್ಸ್ ಕೆಟ್ಟದಾಗಿ ವರ್ತಿಸಿರುವ ಘಟನೆಗಳನ್ನು ನೋಡಿದ್ದೇವೆ. ತೆಲುಗು ನಟ ಬಾಲಕೃಷ್ಣ ಅಭಿಮಾನಿಗಳ ಕಪಾಳಕ್ಕೆ ಹೊಡೆದಿರೋದು ಮಲಯಾಳಂ ನಟ ಉಣ್ಣಿ ಮುಕುಂದನ್ ಅಭಿಮಾನಿಯ ಮೊಬೈಲ್ ಕಸಿದುಕೊಂಡಿದ್ದು ಗೊತ್ತೇಯಿದೆ. ಇನ್ನು ಕೆಲವೊಮ್ಮೆ ನಟ, ನಟಿಯರ ಜೊತೆಗಿರುವ ಬೌನ್ಸರ್ಸ್, ಬಾಡಿಗಾರ್ಡ್ ಅಭಿಮಾನಿಗಳನ್ನು ತಳ್ಳಿರುವ ಘಟನೆಗಳು ನಡೆದಿದೆ.

ನಿಮಗೆ ಗೊತ್ತಾ ಒಮ್ಮೆ ರಸ್ತೆಯಲ್ಲಿ ಪ್ರಯಾಣಿಸುವ ವೇಳೆ ನಟ ಸುದೀಪ್ ಅಭಿಮಾನಿಯ ಜೊತೆ ಸಿಗರೇಟ್ ಹಂಚಿಕೊಂಡು ಸೇದಿದ್ದರು. ಅದು 'ಕೆಂಪೇಗೌಡ' ಸಿನಿಮಾ ಭರ್ಜರಿ ಯಶಸ್ಸು ಕಂಡು ಚಿತ್ರತಂಡ ವಿಜಯಯಾತ್ರೆ ಕೈಗೊಂಡಿದ್ದ ಸಂದರ್ಭ. ದಾವಣಗೆರೆ ಹಾಗೂ ಚಿತ್ರದುರ್ಗಕ್ಕೆ ಚಿತ್ರತಂಡ ಭೇಟಿ ಕೊಟ್ಟಿತ್ತು. ಈ ವೇಳೆ ಸುದೀಪ್ ಸಿಗರೇಟ್ ಸೇದುತ್ತಾ ಕಾರಿನ ಹಿಂಬದಿ ಸೀಟ್‌ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು.
ನಟ ಸುದೀಪ್ ಪ್ರಯಾಣಿಸುತ್ತಿದ್ದ ಕಾರ್ ಅನ್ನು ಅಭಿಮಾನಿಗಳಿಬ್ಬರು ಬೈಕ್‌ನಲ್ಲಿ ಚೇಸ್ ಮಾಡಿದ್ದರು. ಕಿಚ್ಚನನ್ನು ನೋಡಿ ಇಬ್ಬರೂ ಖುಷಿಯಾಗಿ ಜೈಕಾರ ಹಾಕಿದ್ದಾರೆ. ಬೈಕ್‌ನಲ್ಲಿ ಹಿಂದೆ ಕೂತಿದ್ದ ಅಭಿಮಾನಿ ಏಕಾಏಕಿ ಸುದೀಪ್ ಅವರು ಸೇದುತ್ತಿದ್ದ ಸಿಗರೇಟ್ ಕೊಡುವಂತೆ ಮನವಿ ಮಾಡಿದ್ದಾನೆ. ಕೂಡಲೇ ಸುದೀಪ್ ಕಾರಿನ ಗ್ಲಾಸ್ ಇಳಿಸಿ ಕೊಟ್ಟಿದ್ದಾರೆ. ಅಭಿಮಾನಿ ಒಂದು ಧಮ್ ಎಳೆದ ಬಳಿ ಸುದೀಪ್ ಮರಳಿ ಕೇಳಿ ಪಡೆದು ಅದೇ ಸಿಗರೇಟ್ ಸೇದಿದ್ದಾರೆ.
ಕಾರಿನ ಒಳಗಿಂದಲೇ ಇದನ್ನು ವೀಡಿಯೋ ಮಾಡಲಾಗಿತ್ತು. ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಈ ವೀಡಿಯೋ ಪ್ರಸಾರವಾಗಿತ್ತು. ಅದರ ತುಣುಕನ್ನು ಅಭಿಮಾನಿಗಳು ಈಗ ವೈರಲ್ ಮಾಡುತ್ತಿದ್ದಾರೆ. ಕೆಲ ಅಭಿಮಾನಿಗಳು ವೀಡಿಯೋ ನೋಡಿ ಹುಬ್ಬೇರಿಸಿದ್ದಾರೆ. ಅಭಿಮಾನಿಗಳ ಜೊತೆ ಸುದೀಪ್ ಎಷ್ಟು ಸರಳವಾಗಿ ನಡೆದುಕೊಳ್ಳುತ್ತಾರೆ, ನಿಜಕ್ಕೂ ಗ್ರೇಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸುದೀಪ್ ಮಗಳಿಗಾಗಿ ಸಿಗರೇಟ್ ಸೇದುವುದನ್ನು ಬಿಟ್ಟಿದ್ದಾರೆ. ಮಗಳು ಸಾನ್ವಿ ಸಿಗರೇಟ್ ಸೇದಬೇಡ ಪಪ್ಪಾ ಎಂದು ಪದೇ ಪದೆ ಹೇಳಿದ್ದಕ್ಕೆ ಸುದೀಪ್ ಈ ನಿರ್ಧಾರಕ್ಕೆ ಬಂದಿದ್ದರು. ಸಿನಿಮಾಗಳಲ್ಲಿ ಸಿಗರೇಟ್ ಸೇದುವ ದೃಶ್ಯಗಳಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಾರೆ. ಆದರೆ ನಿಜ ಜೀವನದಲ್ಲಿ ಅವರು ಸಿಗರೇಟ್ ಚಟವನ್ನು ಬಿಟ್ಟಿದ್ದಾರೆ.
ತಮಿಳಿನ 'ಸಿಂಗಂ' ಸಿನಿಮಾ ರೀಮೆಕ್ 'ಕೆಂಪೇಗೌಡ' ಚಿತ್ರಕ್ಕೆ ಸುದೀಪ್ ಆಕ್ಷನ್ ಕಟ್ ಹೇಳಿ ನಟಿಸಿದ್ದರು. ಶಂಕರೇಗೌಡ ಹಾಗೂ ಹಾಲಪ್ಪ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಟೈಟಲ್ ರೋಲ್‌ನಲ್ಲಿ ಸುದೀಪ್ ಅಬ್ಬರಿಸಿದ್ದರು. ಕೃಷ್ಣ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿತ್ತು.
ಸದ್ಯ ಸುದೀಪ್ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅನೂಪ್ ಭಂಡಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಚಿತ್ರದಲ್ಲಿ 100 ವರ್ಷ ಭವಿಷ್ಯದ ಕಥೆ ಹೇಳಲಾಗುತ್ತಿದೆ. ಅದಕ್ಕಾಗಿ ಭರ್ಜರಿ ಸೆಟ್ ಹಾಕಿ ಚಿತ್ರೀಕರಣ ನಡೆಸುತ್ತಿದ್ದಾರೆ. ಇತ್ತೀಚೆಗೆ ಸುದೀಪ್ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿತ್ತು. ಸಿನಿಮಾ ಸೆಟ್ ಹಾಕಿರುವ ಬಗ್ಗೆಯೂ ಒಂದು ವಿಡಿಯೋ ರಿಲೀಸ್ ಆಗಿತ್ತು.
ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಕಳೆದ ವರ್ಷ ಸೂಪರ್ ಹಿಟ್ ಆಗಿತ್ತು. ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಕಿಚ್ಚ 'ಬಿಲ್ಲ ರಂಗ ಬಾಷ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷದ ಕೊನೆಗೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.


Click it and Unblock the Notifications











