ದರ್ಶನ್ ಬರ್ತ್‌ಡೇ ದಿನ ನಡೆದ ಘಟನೆ ನೆನೆದು ಬಿದ್ದು ಬಿದ್ದು ನಕ್ಕಿದ್ದ ಕಿಚ್ಚ; ವೀಡಿಯೋ ವೈರಲ್
ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ಕಿಚ್ಚ ಸುದೀಪ್ ಹಾಗೂ ನಟ ದರ್ಶನ್ ಬಳಿಕ ದೂರಾಗಿದ್ದು ಗೊತ್ತೇಯಿದೆ. ಅವರಬ್ಬರೂ ಮತ್ತೆ ಒಂದಾಗಬೇಕು ಎಂದು ಇವತ್ತಿಗೂ ಕಾಯುತ್ತಿರುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ದರ್ಶನ್ ಬಗ್ಗೆ ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಮಾತನಾಡಿದ್ದ ವೀಡಿಯೋ ಈಗ ವೈರಲ್ ಆಗುತ್ತಿದೆ.
ಸೋಶಿಯಲ್ ಮೀಡಿಯಾದ ಶಕ್ತಿಯೇ ಅಂಥಾದ್ದು. ಹಳೆಯದ್ದನೆಲ್ಲಾ ಮತ್ತೆ ಮತ್ತ ನೆನಪಿಸುತ್ತದೆ. ದರ್ಶನ್ ಹಾಗೂ ಸುದೀಪ್ ಸ್ನೇಹ ಹೇಗಿತ್ತು ಎನ್ನುವುದು ಗೊತ್ತೇಯಿದೆ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಆತ್ಮೀಯರಾಗಿದ್ದರು. ಹೆಚ್ಚು ಕಮ್ಮಿ ಒಂದೇ ಅವಧಿಯಲ್ಲಿ ಇಬ್ಬರೂ ಚಿತ್ರರಂಗಕ್ಕೆ ಬಂದಿದ್ದರು. ಒಟ್ಟೊಟ್ಟಿಗೆ ಗೆಲುವಿನ ಅಂಬಾರಿ ಏರಿದ್ದರು. ಹಾಗಾಗಿ ಬಹಳ ಬೇಗ ಉತ್ತಮ ಒಡನಾಟ ಬೆಳೆದಿತ್ತು. ಸಭೆ, ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.

ಅಂಭಿ ಸಂಭ್ರಮ ಕಾರ್ಯಕ್ರಮದಲ್ಲಿ ಇಬ್ಬರೂ ಕುಚಿಕು-ಕುಚಿಕು ಹಾಡಿಗೆ ಎಜ್ಜೆ ಹಾಕಿದ್ದರು. ಕನ್ನಡ ಚಿತ್ರರಂಗದಲ್ಲಿ ವಿಷ್ಣು-ಅಂಬಿ ಬಳಿಕ ದಚ್ಚು- ಕಿಚ್ಚ ಸ್ನೇಹ ಗಾಢವಾದದ್ದು ಎಂದೇ ಎಲ್ಲರೂ ಮಾತನಾಡುತ್ತಿದ್ದಾರೆ. ಆಗಾಗ್ಗೆ ಒಟ್ಟಿಗೆ ಸ್ನೇಹಿತರ ಜೊತೆ ಸುತ್ತಾಟ, ಪಾರ್ಟಿ ಅಂತೆಲ್ಲಾ ಎಂಜಾಯ್ ಮಾಡುತ್ತಿದ್ದರು. ಆದರೆ ದಿಢೀರನೆ ನಾನು, ಸುದೀಪ್ ಇನ್ನು ಮುಂದೆ ಸ್ನೇಹಿತರಲ್ಲ ಎಂದು ಟ್ವೀಟ್ ಮಾಡಿ ದರ್ಶನ್ ಶಾಕ್ ಕೊಟ್ಟಿದ್ದರು.
ಇಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣ ಏನು ಎನ್ನುವುದು ಮಾತ್ರ ಇವತ್ತಿಗೂ ಬಹುತೇಕರಿಗೆ ಗೊತ್ತೇಯಿಲ್ಲ. ಆದರೆ ಟಿವಿ9 ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಸುದೀಪ್ ತಮ್ಮ ಬಗ್ಗೆ ನೀಡಿದ್ದ ಹೇಳಿಕೆ ಬೇಸರ ತಂದಿದ್ದಾಗಿ ದರ್ಶನ್ ಹೇಳಿದ್ದರು. ಅದು 'ಮೆಜೆಸ್ಟಿಕ್' ಸಿನಿಮಾ ಅವಕಾಶದ ವಿಚಾರದಲ್ಲಿ ಆಡಿದ್ದ ಮಾತು. ಅದೆಲ್ಲ ಏನೇ ಇದ್ದರೂ ಇಬ್ಬರೂ ಮತ್ತೆ ಒಂದಾಗಲೇ ಇಲ್ಲ. ನಾನೊಂದು ತೀರ ನೀನೊಂದು ತೀರ ಎಂದು ಇದ್ದುಬಿಟ್ಟರು. ಆದರೆ ಇಬ್ಬರೂ ಒಟ್ಟಿಗೆ ಇದ್ದಾಗ ಬಹಳ ಆತ್ಮೀಯವಾಗಿದ್ದರು.
ದರ್ಶನ್ ಹುಟ್ಟುಹಬ್ಬದ ದಿನ ನಡೆದ ಒಂದು ವಿಚಾರವನ್ನು ಹಿಂದೆ ಬಿಗ್‌ಬಾಸ್ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಅಂದು ನಟ ಶರಣ್ ಅತಿಥಿಯಾಗಿ ವೇದಿಕೆ ಏರಿದ್ದರು. ಅವರೊಟ್ಟಿಗೆ ಮಾತನಾಡುವ ಆ ಘಟನೆ ಬಗ್ಗೆ ಮಾತನಾಡಿ ಸುದೀಪ್ ಬಿದ್ದು ಬಿದ್ದು ನಕ್ಕಿದ್ದರು. ಅದಕ್ಕೆ ಒಂದು ಕಾರಣವೂ ಇದೆ.
ಅವತ್ತು ದರ್ಶನ್ ಹುಟ್ಟುಹಬ್ಬ. ಪಾರ್ಟಿಗೆ ಹೋಗಿದ್ದೆ. ಹೇ, ಮಗಾ ಬಾ ಇಲ್ಲಿ ನಿನಗೊಂದು ಹಾಡು ಹಾಕಿ ಕೇಳಿಸ್ತೀನಿ, ಕೇಳು ಎಕ್ಸ್‌ಸ್ಟ್ರಾಡಿನರಿ ಹಾಡು. ನಾನು ಯಾವ್ದೋ ಅವನ ಸಿನ್ಮಾ ಹಾಡು ಹಾಕ್ತಾನೇ ಅನ್ಕೊಂಡೆ. ಆದ್ರೆ ಇಲ್ಲ ಮಗಾ ಬಹಳ ಚೆನ್ನಾಗಿದೆ, ನಮಗೆಲ್ಲಾ ಬಹಳ ಹತ್ತಿರವಾಗುವಂಥದ್ದು. ನನಗೆ ಅರ್ಥವಾಗಲಿಲ್ಲ. ಹಾಡು ಹಾಕ್ತಿದ್ದಂತೆ ಫಸ್ಟ್ ಲೈನ್ ಕೇಳಿ ಶಾಕ್ ಆಗಿದ್ದೆ. ಇಲ್ಲಾ ಮಗಾ ಇದು ಎಲ್ಲಾ ಗಂಡಸರ ಫ್ಯೂಚರ್ ಇದು ಎಂದು ಹೇಳಿದ್ದ ಎಂದು ಸುದೀಪ್ ಶರಣ್ ಜೊತೆ ನಕ್ಕಿದ್ದರು.
ಅವತ್ತು ಶರಣ್ ನಟನೆಯ 'ವಿಕ್ಟರಿ' ಚಿತ್ರದ 'ಖಾಲಿ ಕ್ವಾಟ್ರು ಬಾಟ್ಲಿ' ಸಾಂಗ್ ಬಗ್ಗೆ ಸುದೀಪ್ ಮಾತನಾಡಿದ್ದರು. ಆಗ ತಾನೇ ಆ ಸಿನಿಮಾ ಬಿಡುಗಡೆ ಆಗಿ ಈ ಸಾಂಗ್ ಸೂಪರ್ ಹಿಟ್ ಆಗಿತ್ತು. ಇದೇ ಹಾಡಿನ ಬಗ್ಗೆ ದರ್ಶನ್ ಹೇಳಿದ್ದು ಕೇಳಿ ಸುದೀಪ್ ನಕ್ಕಿದ್ದರು. ಬಿಗ್‌ಬಾಸ್ ಸೀಸನ್-2ರ ವೇದಿಕೆಯಲ್ಲಿ ಈ ಚರ್ಚೆ ನಡೆದಿತ್ತು. ಅಭಿಮಾನಿಗಳು ಈಗ ವೀಡಿಯೋ ವೈರಲ್ ಮಾಡಿ ದರ್ಶನ್- ಸುದೀಪ್ ಸ್ನೇಹವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ವೀಡಿಯೋ ನೋಡಿ ಛೇ, ಇವರಿಬ್ಬರು ಒಟ್ಟಿಗೆ ಸ್ನೇಹಿತರಾಗಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











