ಕಣ್ಣಿಗೆ ಕಾಣದ ಧೂಳು ಸುಧೀರ್ ಜೀವಕ್ಕೆ ಮುಳುವಾಗಿದ್ದೇಗೆ? ಅವತ್ತು ಶೂಟಿಂಗ್ ವೇಳೆ ಏನಾಯ್ತು?
ರಂಗಭೂಮಿ ಹಿನ್ನೆಲೆಯಿಂದ ಬಂದ ಹಲವು ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಮೆರೆದಿದ್ದಾರೆ. ಖ್ಯಾತ ಖಳನಟ ಸುಧೀರ್ ಅವರು ಕೂಡ ಮೊದಲಿಗೆ ನಾಟಕಗಳಲ್ಲಿ ನಟಿಸುತ್ತಿದ್ದರು. 'ಸಿಂಧೂರ ಲಕ್ಷ್ಮಣ' ಹಾಗೂ 'ಗೌಡ್ರ ಗದ್ದಲ' ನಾಟಕಗಳ ಮೂಲಕ ದಶಕಗಳ ಹಿಂದೆಯೇ ಸುಧೀರ್ ಗಮನ ಸೆಳೆದರು.
ನಾಟಕವೊಂದರಲ್ಲಿ ಸುಧೀರ್ ನಟನೆ ಮೆಚ್ಚಿದ ಎಂ. ಪಿ ಶಂಕರ್ ಕರೆದು 'ರಾಮ-ಲಕ್ಷ್ಮಣ' ಚಿತ್ರದಲ್ಲಿ ಅವಕಾಶ ಕೊಟ್ಟಿದ್ದರು. ಅಲ್ಲಿಂದ ಮುಂದೆ ಖಳನಟರಾಗಿ ಪೋಷಕರ ನಟರಾಗಿ ಸುಧೀರ್ ನಟಿಸುತ್ತಾ ಬಂದರು. ಸುಧೀರ್ ಅವರನ್ನು ಸಾಕಷ್ಟು ಜನ ಉತ್ತರ ಕರ್ನಾಟಕದವರು ಎಂದೇ ಭಾವಿಸಿದ್ದಾರೆ. ಆದರೆ ಅವರು ಶಿವಮೊಗ್ಗದ ಸಾಗರ ಮೂಲದವರು.

ಈಗಿನಂತೆ ಆಗ ಖಳನಟರಿಗೆ ಬಿಲ್ಡಪ್, ಎಲಿವೇಷನ್ ಸೀನ್ಸ್ ಇರುತ್ತಿರಲಿಲ್ಲ. ಸಿಕ್ಸ್‌ಪ್ಯಾಕ್ ಮಾಡಿ ಗಮನ ಸೆಳೆಯುತ್ತಿರಲಿಲ್ಲ. ತಮ್ಮ ಖಡಕ್ ಕಂಠ, ನಟನೆ, ಕಣ್ಣುಗಳ ಚಲನೆಯಲ್ಲೇ ಭಯಹುಟ್ಟಿಸಬೇಕಿತ್ತು. ತೂಗುದೀಪ ಶ್ರೀನಿವಾಸ್, ಸುಂದರ್ ಕೃಷ್ಣ ಅರಸ್, ಟೈಗರ್ ಪ್ರಭಾಕರ್, ವಜ್ರಮುನಿ ಹೀಗೆ ಎಲ್ಲರೂ ತಮ್ಮ ಅದ್ಭುತ ನಟನೆ ಹಾಗೂ ಖಡಕ್ ಧ್ವನಿಯಿಂದಲೇ ಚಿತ್ರಗಳಿಗೆ ಶಕ್ತಿ ತುಂಬುತ್ತಿದ್ದರು.
ಅಂತಹ ಖಡಕ್ ನಟರ ಸಾಲಿಗೆ ಸೇರುವ ಮತ್ತೊಬ್ಬ ಅದ್ಭುತ ಪ್ರತಿಭೆ ಸುಧೀರ್. 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಅವರು ಮುಂದೆ ರಾಜಕೀಯರಂಗದಲ್ಲೂ ಗುರ್ತಿಸಿಕೊಂಡಿದ್ದರು. ಖ್ಯಾತ ನಟಿ ಮಿನುಗುತಾರೆ ಕಲ್ಪನಾ ಅವರ ನಾಟಕ ತಂಡದಲ್ಲಿ ಸುಧೀರ್ ಗುರ್ತಿಸಿಕೊಂಡಿದ್ದರು. ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಬಳಿಕ ಕೂಡ ನಾಟಕಗಳಲ್ಲಿ ನಟಿಸಿದ್ದರು. ಕರ್ನಾಟಕ ಕಲಾ ವೈಭವ ಸಂಘ ಎಂಬ ನಾಟಕ ಕಂಪನಿಯನ್ನು ಸ್ಥಾಪಿಸಿದರು.

'ನೀ ನನ್ನ ಗೆಲ್ಲಲಾರೆ', 'ಕೆರಳಿದ ಸಿಂಹ', 'ಸಾಹಸ ಸಿಂಹ', 'ಅದೇ ಕಣ್ಣು', 'ಸಾಂಗ್ಲಿಯಾನ', 'ಸಿಂಹದ ಮರಿ', 'ವೀರಪ್ಪ ನಾಯ್ಕ' ಸುಧೀರ್ ನಟಿಸಿದ ಕೆಲ ಜನಪ್ರಿಯ ಚಿತ್ರಗಳು. ಅಂಬರೀಶ್ ಹಾಗೂ ಸುಧೀರ್ ಬಾಂಧವ್ಯ ಉತ್ತಮವಾಗಿತ್ತು. ಸುಧೀರ್ ಮನೆ ಕಟ್ಟಿಕೊಟ್ಟಲು ಅಂಬಿ ಸಹಾಯ ಮಾಡಿದ್ದರು. ಹಾಗಾಗಿ ತಮ್ಮ ಮನೆಗೆ 'ಅಂಬರೀಶ್ ನಿಲಯ' ಎಂದೇ ಹೆಸರಿಟ್ಟಿದ್ದರು.
1999ರಲ್ಲಿ ತಮ್ಮ 52ನೇ ವಯಸ್ಸಿನಲ್ಲಿ ಖಳನಟ ಸುಧೀರ್ ಕೊನೆಯುಸಿರೆಳೆದರು. ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಬಳಿಕ ಪತ್ನಿ ಮಾಲತಿ ಸುಧೀರ್ ಆ ನಾಟಕ ಕಂಪೆನಿಯನ್ನು ಮುಂದುವರೆಸಿ ಕುಟುಂಬವನ್ನು ನಿಭಾಯಿಸಿದರು.
ಸುಧೀರ್ ಕೊನೆಯುಸಿರೆಳೆದಾಗ ಮಕ್ಕಳಾದ ತರುಣ್ ಸುಧೀರ್ ಹಾಗೂ ನಂದ ಕಿಶೋರ್ ಇನ್ನು ಕಾಲೇಜಿನಲ್ಲಿ ಓದುತ್ತಿದ್ದರು. ನಿಧಾನವಾಗಿ ತಮ್ಮ ತಾಯಿ ಜೊತೆ ಕೈ ಜೋಡಿಸಿ ನಾಟಕ ಕಂಪೆನಿ ಕಟ್ಟಿ ಬೆಳೆಸಿದರು. ಬಳಿಕ ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದೀಗ ಇಬ್ಬರೂ ಯಶಸ್ವಿ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ತೆರೆಮೇಲೆ ಖಳನಟನಾಗಿ ನಟಿಸುವಾಗ ಸಿಗರೇಟ್ ಸೇದುವುದು, ಮದ್ಯ ಸೇವಿಸುವುದು ರೀತಿಯ ದೃಶ್ಯಗಳಲ್ಲಿ ಸುಧೀರ್ ಕಾಣಿಸಿಕೊಂಡಿದ್ದರು. ಆದರೆ ನಿಜ ಜೀವನದಲ್ಲಿ ಅಂತಹ ಯಾವುದೇ ಅಭ್ಯಾಸ ಸುಧೀರ್ ಅವರಿಗೆ ಇರಲಿಲ್ಲ. ಆದರೂ 52 ವರ್ಷಕ್ಕೆ ಯಾಕೆ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು ಎನ್ನುವ ಪ್ರಶ್ನೆ ಮೂಡುವುದು ಸಹಜ. ಸುಧೀರ್ ಅವರಿಗೆ ಅಸ್ತಮಾ ಕಾರಣಕ್ಕೆ ಡಸ್ಟ್ ಅಲರ್ಜಿ ಆಗುತಿತ್ತು. ಇದೇ ಅವರ ಜೀವಕ್ಕೆ ಕುತ್ತು ತಂದುಬಿಟ್ಟಿತ್ತು.
ಅದು 'ದಂಡನಾಯಕ' ಸಿನಿಮಾ ಚಿತ್ರೀಕರಣದ ಸಮಯ. ಆ ಚಿತ್ರದಲ್ಲಿ ಸುಧೀರ್ ನಟಿಸುತ್ತಿದ್ದರು. ಚಿತ್ರದ ಆಕ್ಷನ್ ಸನ್ನಿವೇಶವೊಂದರಲ್ಲಿ ಮೇಲಿನಿಂದ ಜಿಗಿಯುವ ಸನ್ನಿವೇಶ ಇತ್ತು. ಅದನ್ನು ಡ್ಯೂಪ್ ಹಾಕುವವರು ಮಾಡಬೇಕಿತ್ತು. ಆದರೆ ಆ ದಿನ ಡ್ಯೂಪ್ ಕಲಾವಿದರು ಬಂದಿರಲಿಲ್ಲ. ಸುಮ್ಮನೆ ಚಿತ್ರೀಕರಣಕ್ಕೆ ತೊಂದರೆ ಆಗುವುದು ಬೇಡ ಎಂದು ಮೇಲಿನಿಂದ ಜಿಗಿಯುವ ಸನ್ನಿವೇಶ ಮಾಡಲು ಖುದ್ದು ಸುಧೀರ್ ಮುಂದಾಗಿದ್ದರು.
ಚಿತ್ರೀಕರಣದ ವೇಳೆ ಪೆಟ್ಟಾಗದಂತೆ ದೊಡ್ಡ ದೊಡ್ಡ ಹಾಸಿಗೆ ಹಾಕಲಾಗಿತ್ತಂತೆ. ಕಂಠೀರವ ಸ್ಟುಡಿಯೋದಲ್ಲಿ ಅವತ್ತು ಚಿತ್ರೀಕರಣ. ಸುಧೀರ್ ಅವರು ಒಮ್ಮೆ ಜಿಗಿದ ಕೂಡಲೇ ಹಾಸಿಗೆಯಲ್ಲಿದ್ಧ ಧೂಳು ಮೇಲೆದ್ದಿತ್ತು. ಆ ಧೂಳು ದೇಹದ ಒಳಗೆ ಹೋಗಿ ಇನ್ಸ್‌ಪೆಕ್ಷನ್ ಆಗಿತ್ತು. ಧೂಳು ಶ್ವಾಸಕೋಶಕ್ಕೆ ಸೇರಿ ಉಸಿರಾಟದ ಸಮಸ್ಯೆ ಶುರುವಾಯಿತು.
ಆ ಸಮಸ್ಯೆಗೆ ಆ ಕಾಲದಲ್ಲಿ ಸರಿಯಾದ ಚಿಕಿತ್ಸೆ ಇರಲಿಲ್ಲ. ಚಿಕಿತ್ಸೆ ಕೊಡಿಸಿದೆವು. ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡೇ ಐದಾರು ತಿಂಗಳು ಇದ್ದರು. ನಾಟಕಗಳ ಬಗ್ಗೆ ಸುಧೀರ್ ಅವರಿಗೆ ಎಷ್ಟು ಒಲವಿತ್ತು ಅಂದ್ರೆ ಕೆಲವೊಮ್ಮೆ ಆಕ್ಸಿಜನ್ ಸಿಲಿಂಡರ್ ಸಮೇತ ನಾಟಕಗಳಲ್ಲಿ ನಟಿಸೋಕೆ ಹೋಗುತ್ತಿದ್ದರು. ಆಕ್ಸಿಜನ್ ಮಾಸ್ಕ್ ತೆಗೆದು ನಾಟಕದಲ್ಲಿ ನಟಿಸಿ ಮತ್ತೆ ಅದನ್ನು ಹಾಕಿಕೊಳ್ಳುತ್ತಿದ್ದರು. ಅಷ್ಟರಮಟ್ಟಿಗೆ ನಾಟಕ, ನಾಟಕದ ಕಲಾವಿದರು ಅಂದ್ರೆ ಅವರಿಗೆ ಒಲುವು ಎಂದು ಪತ್ನಿ ಮಾಲತಿ ಹಿಂದೆ ಕನ್ನಡ ಪಿಕ್ಚರ್ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದರು.
ಸುಧೀರ್ ನಟಿಸುತ್ತಿದ್ದ 'ಗೌಡ್ರ ಗದ್ದಲ' ನಾಟಕ ಕ್ರೇಜ್ ಹೇಗಿತ್ತು ಅಂದ್ರೆ ಒಮ್ಮೆ ಒಂದು ಕಹಿ ಘಟನೆ ನಡೆದಿತ್ತು. ಮಂಗಳೂರಿನಲ್ಲಿ ಅವರ ನಾಟಕ ನೋಡಲು ಬಂದಿದ್ದ ಅಭಿಮಾನಿಗಳು ವಾಪಸ್ ಮನೆಗೆ ಹೋಗುವಾಗ ಲಾರಿ ಉರುಳಿ ಕೆಲವರು ಜೀವ ಬಿಟ್ಟಿದ್ದರು. ಅಷ್ಟರ ಮಟ್ಟಿಗೆ ಅವರ ಕ್ರೇಜ್ ಇತ್ತು. ಆ ನೋವು ಬಹಳ ದಿನಗಳ ಕಾಲ ಅವರನ್ನು ಕಾಡಿತ್ತು. ನಾಟಕಗಳಲ್ಲಿ ಅವರ ಅಭಿನಯ ನೋಡಲು ಜನ ಮುಗಿಬೀಳುತ್ತಿದ್ದರು ಎಂದು ಮಾಲತಿ ನೆನಪಿಸಿಕೊಂಡಿದ್ದರು.
ತೆರೆಮೇಲೆ ಖಳನಟನಾಗಿ ಅಬ್ಬರಿಸಿದರೂ ನಿಜ ಜೀವನದಲ್ಲಿ ಬಹಳ ಮೃದು ಸ್ವಭಾವದವರಾಗಿದ್ದರು ಸುಧೀರ್. ಒಮ್ಮೆ ನಾಟಕ ಪ್ರದರ್ಶನದ ವೇಳೆ ಪತ್ನಿ ಮಾಲತಿ ಚಿನ್ನದ ಆಭರಣ ಹಾಕಿಕೊಂಡು ನಟಿಸುತ್ತಿದ್ದರು. ಆಗ ಯಾರೋ ಅದನ್ನು ಕದ್ದು ಬಿಟ್ಟಿದ್ದರು. 40 ಜನರ ತಂಡದಲ್ಲಿ ಯಾರಾದರೂ ತೆಗೆದುಕೊಂಡಿರಬಹುದು ಎಂದು ಪೊಲೀಸರು ವಿಚಾರಣೆ ಮಾಡಲು ಮುಂದಾಗಿದ್ದರು. ಆಗ ಖುದ್ದು ಸುಧೀರ್ ಅವರೇ ಬೇಡ, ಯಾರೋ ಒಬ್ಬರು ಮಾಡಿದ ತಪ್ಪಿಗೆ 40 ಜನರ ವಿಚಾರಣೆ ಎಲ್ಲಾ ಬೇಡ, ಚಿನ್ನ ಹೋದರೆ ಹೋಗಲಿ ಎಂದಿದ್ದರಂತೆ. ಒಟ್ಟಾರೆ ತಮ್ಮ ಅದ್ಭುತ ನಟನೆಯಿಂದ ರಂಜಿಸಿದ ಕುಂಬಿ ಸಿನಿರಸಿಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ.


Click it and Unblock the Notifications











