ನಾಗಚೈತನ್ಯಾ ಜೊತೆ ಅನುಷ್ಕಾ ಶೆಟ್ಟಿ ಮದುವೆ? ನಾಗಾರ್ಜುನ ಏನಂದಿದ್ರು?
ವಯಸ್ಸು 40 ದಾಟಿದ್ರು ನಟಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ತಲೆ ಕೆಡಸಿಕೊಂಡಂತೆ ಕಾಣುತ್ತಿಲ್ಲ. ಸಾಕಷ್ಟು ಬಾರಿ ಸ್ವೀಟಿ ಮದುವೆ ಬಗ್ಗೆ ಗಾಳಿ ಸುದ್ದಿ ಹರಿದಾಡಿತ್ತು. ಪ್ರಭಾಸ್ ಹಾಗೂ ಅನುಷ್ಕಾ ಡೇಟಿಂಗ್ ನಡೆಸುತ್ತಿದ್ದಾರೆ, ಮದುವೆ ಆಗುತ್ತಾರೆ, ಅಂತೆಲ್ಲಾ ಸಾಕಷ್ಟು ಬಾರಿ ವದಂತಿ ಹರಡಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಇಬ್ಬರೂ ಹೇಳುತ್ತಾ ಬರ್ತಿದ್ದಾರೆ.
ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆ ಆಗಿರುವಂತೆ ಒಂದಷ್ಟು AI ಫೋಟೊಗಳು ಸಹ ವೈರಲ್ ಆಗುತ್ತಲೇ ಇದೆ. ಅಭಿಮಾನಿಗಳು ಇಬ್ಬರು ಮದುವೆ ಆಗಬೇಕು ಎಂದು ಬಯಸುತ್ತಲೇ ಇದ್ದಾರೆ. ಇನ್ನು ಸ್ವೀಟಿ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ನಟ ನಾಗಾರ್ಜುನ ಜೊತೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಹಾಗಾಗಿ ಇಬ್ಬರ ನಡುವೆ ಅಫೇರ್ ಇದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇನ್ನು ಚೈತು-ಅನುಷ್ಕಾ ಎಂಗೇಜ್‌ಮೆಂಟ್ ನಡೆದಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು.

ದಶಕದ ಹಿಂದೆಯೇ ಅನುಷ್ಕಾ ಶೆಟ್ಟಿ ಹಾಗೂ ನಾಗಚೈತನ್ಯಾ ಎಂಗೇಜ್‌ಮೆಂಟ್ ನಡೆದಿದೆ ಎನ್ನುವ ವದಂತಿ ಹರಡಿತ್ತು. ಆ ಸಮಯದಲ್ಲಿ ನಾಗಾರ್ಜುನಾ ಜೊತೆ ಮಾತ್ರ ಸ್ವೀಟಿ ನಟಿಸಿದ್ದರು. ಆದರೂ ಅದು ಹೇಗೆ ನಾಗ ಚೈತನ್ಯಾ ಜೊತೆ ಎಂಗೇಜ್‌ಮೆಂಟ್ ಸುದ್ದಿ ಹುಟ್ಟಿಕೊಳ್ತು? ಎನ್ನುವುದು ಗೊತ್ತಾಗಲಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ನಾಗಾರ್ಜುನ ಪ್ರತಿಕ್ರಿಯಿಸಿದ್ದರು.
"ಅವನು (ನಾಗ ಚೈತನ್ಯ) ಸ್ವಿಟ್ಜರ್ಲೆಂಡ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ಆ ವದಂತಿ ಹರಡಿತು. ನಾನು ಮುಂಜಾನೆ ಅವನಿಗೆ ಫೋನ್ ಮಾಡಿ 'ಏನೋ ನೀನು, ಅನುಷ್ಕಾ ಶೆಟ್ಟಿ ನಿನ್ನೆ ರಾತ್ರಿ ನಿಶ್ಚಿತಾರ್ಥ ಮಾಡಿಕೊಂಡಿದ್ದೀರಂತೆ, ನನಗೆ ಹೇಳಲಿಲ್ಲ" ಎಂದೆ. ಅದಕ್ಕೆ ಅವನು "ವಾಹ್, ನಿಜಾನಾ? ಎಂದು ಜೋರಾಗಿ ನಕ್ಕಿದ್ದ. ಬಳಿಕ ಅನುಷ್ಕಾಗೂ ಫೋನ್ ಮಾಡಿ ಈ ಬಗ್ಗೆ ಮಾತನಾಡಿ ಬಹಳ ಹೊತ್ತು ನಕ್ಕಿದ್ದೆವು" ಎಂದು ಹೇಳಿ ಅದೆಲ್ಲಾ ಬರೀ ಗಾಳಿಸುದ್ದಿ ಎಂದು ಸ್ಪಷ್ಟನೆ ನೀಡಿದ್ದರು.
ಸದ್ಯ ಸಮಂತಾಗೆ ಡಿವೋರ್ಸ್ ನೀಡಿ ನಾಗಚೈತನ್ಯಾ ದೂರಾಗಿದ್ದಾರೆ. ಸದ್ಯ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಐದಾರು ವರ್ಷ ಪ್ರೀತಿಸಿ ಮದುವೆ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯಾ ಡಿವೋರ್ಸ್ ಪಡೆದು ದೂರಾಗಿದ್ದು ಅಭಿಮಾನಿಗಳಿಗೆ ಶಾಕ್ ತಂದಿತ್ತು. ಆ ಬಳಿಕ ನಾಗಚೈತನ್ಯಾ ಜೊತೆ ನಟಿ ಶೋಭಿತಾ ಧುಲಿಪಾಲ ಹೆಸರು ತಳುಕು ಹಾಕಿಕೊಂಡಿತ್ತು. ವಿದೇಶದಲ್ಲಿ ಇಬ್ಬರೂ ಒಂದೇ ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದ ಫೋಟೋ ವೈರಲ್ ಆಗಿ ಭಾರೀ ಚರ್ಚೆ ನಡೆದಿತ್ತು. ಸಮಂತಾ ಸಹ ಈ ಬಗ್ಗೆ ಪರೋಕ್ಷವಾಗಿ ಕಾಮೆಂಟ್ ಮಾಡಿದ್ದರು ಎನ್ನಲಾಗಿತ್ತು.

ಇದೀಗ ಮತ್ತೆ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಗುಸುಗುಸು ಶುರುವಾಗಿದೆ. ಕ್ರಿಕೆಟಿಗನ ಜೊತೆ ಸ್ವೀಟಿ ಮದುವೆ ಆಗುತ್ತಾರಂತೆ, ಇದಕ್ಕೆ ಮನೆಯಲ್ಲಿ ಪೋಷಕರು ಒಪ್ಪಿದ್ದಾರಂತೆ ಎನ್ನುವ ಅಂತೆ ಕಂತೆ ಸುದ್ದಿ ವೈರಲ್ ಆಗುತ್ತಿದೆ. ಸಿನಿಮಾಗಳ ವಿಚಾರಕ್ಕೆ ಬಂದರೆ ಕರಾವಳಿ ಚೆಲುವೆ ಕೊನೆಯದಾಗಿ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.
'ಬಾಹುಬಲಿ' ಸರಣಿ ಬಳಿಕ ಅನುಷ್ಕಾ ಶೆಟ್ಟಿ ತೂಕ ಹೆಚ್ಚಿಸಿಕೊಂಡಿದ್ದರು. ಅದೇ ಕಾರಣಕ್ಕೆ ಆಕೆಗೆ ಅವಕಾಶಗಳು ಕಮ್ಮಿ ಆಯಿತು ಎನ್ನುವ ಮಾತುಗಳು ಕೇಳಿಬಂದಿತ್ತು. ಇತ್ತೀಚೆಗೆ ಸಂದರ್ಶವೊಂದರಲ್ಲಿ ಮಾತನಾಡಿದ್ದ ಸ್ವೀಟಿ ತಾವಾಗಿಯೇ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದಾಗಿ ಹೇಳಿದ್ದರು.
ಮದುವೆ ಮಾಡಿಕೊಳ್ಳುವ ಬಗ್ಗೆಯೂ ಸ್ವೀಟಿ ಪ್ರತಿಕ್ರಿಯಿಸಿದ್ದರು. ನನಗೆ ಮದುವೆಯಲ್ಲಿ ನಂಬಿಕೆ ಇಲ್ಲ ಅಂತ ಅಲ್ಲ. ನಿಜಕ್ಕೂ ನಂಬಿಕೆ ಇದೆ. ಆದರೆ ಯಾವಾಗ ಮದುವೆ ಆಗುತ್ತದೆ ಎನ್ನುವುದು ಗೊತ್ತಿಲ್ಲ. ನೋಡೊಣ ಸಮಯ ಬಂದಾಗ ಎಲ್ಲಾ ಆಗುತ್ತದೆ ಎಂದಿದ್ದರು.
ಅನುಷ್ಕಾ ಶೆಟ್ಟಿ ಹೊಸದಾಗಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. 'ಭಾಗಮತಿ'-2 ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ವದಂತಿ ಹೇಳಿ ಬಂದಿದ್ದಾದರೂ ಅದು ನಿಜವಾಗಲಿಲ್ಲ. ಅಭಿಮಾನಿಗಳು ಮಾತ್ರ ನೆಚ್ಚಿನ ನಟಿಯನ್ನು ತೆರೆಮೇಲೆ ನೋಡಲು ಕಾಯುತ್ತಲೇ ಇದ್ದಾರೆ.


Click it and Unblock the Notifications











