ಅಣ್ಣಾವ್ರನ್ನು ತುಂಡು ತುಂಡಾಗಿ ಕತ್ತರಿಸುತ್ತೀನಿ ಎಂದಿದ್ದ ವೀರಪ್ಪನ್‌ಗೆ ಪಾರ್ವತಮ್ಮ ಹಾಕಿದ್ದ ಸವಾಲು ಏನು?
ಭೀಮನ ಅಮಾವಾಸ್ಯೆ ಅಂದಾಕ್ಷಣ ಕನ್ನಡ ಚಿತ್ರರಂಗಕ್ಕೆ ಅಷ್ಟೇ ಅಲ್ಲ ಕನ್ನಡಿಗರಿಗೆ ಆ ಕರಾಳ ನೆನಪು ಮರುಕರುಳಿಸುತ್ತದೆ. 2000ನೇ ಇಸವಿ ಜುಲೈ 30ರಂದು ಭೀಮನ ಅಮಾವಾಸ್ಯೆ ದಿನವೇ ಕಾಡುಗಳ್ಳ ವೀರಪ್ಪನ್ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರನ್ನು ಅಪಹರಿಸಿದ್ದ. ಬಳಿಕ 108 ದಿನಗಳ ಕಾಲ ಅವನೊಟ್ಟಿಗೆ ಅಣ್ಣಾವ್ರು ಕಾಡು ಮೇಡು ಅಲೆಯುವಂತಾಯಿತು.
ಅವತ್ತು ಡಾ. ರಾಜ್‌ಕುಮಾರ್ ಪತ್ನಿ ಪಾರ್ವತಮ್ಮ ಹಾಗೂ ಆಪ್ತರ ಜೊತೆ ತಾಳವಾಡಿಯ ತೋಟದ ಮನೆಯಲ್ಲಿ ತಂಗಿದ್ದರು. ರಾತ್ರಿ 9.30ರ ಸುಮಾರಿಗೆ ಅಣ್ಣಾವ್ರು ಊಟ ಮುಗಿಸಿ ಟಿವಿ ನೋಡುತ್ತಾ ಕುಳಿತ್ತಿದ್ದರು. ಇದ್ದಕ್ಕಿದ್ದಂತೆ ವೀರಪ್ಪನ್ ಸೇರಿ ಶಸ್ತ್ರಸಜ್ಜಿತರಾಗಿದ್ದ 12 ಜನ ಆ ತೋಟದ ಮನೆಗೆ ಮುತ್ತಿಗೆ ಹಾಕಿದ್ದರು. ಅಣ್ಣಾವ್ರ ಜೊತೆಗೆ ಅಳಿಯ ಎಸ್. ಎ ಗೋವಿಂದ ರಾಜ್ ಹಾಗೂ ಸಂಬಂಧಿ ನಾಗೇಶ್ ಮತ್ತು ನಾಗಪ್ಪ ಅವರನ್ನು ಕರೆದುಕೊಂಡು ಹೋಗಿದ್ದರು.

ಅಣ್ಣಾವ್ರನ್ನು ವಶಕ್ಕೆ ಪಡೆಯುವ ಸಮಯದಲ್ಲಿ ಒಂದು ಆಡಿಯೋ ಕ್ಯಾಸೆಟ್ ಕೊಟ್ಟು ಇದನ್ನು ಕರ್ನಾಟಕ ಮುಖ್ಯಮಂತ್ರಿಗೆ ತಲುಪಿಸುವಂತೆ ಹೇಳಿ ಹೋಗಿದ್ದರು. ಕೆಲವೇ ನಿಮಿಷಗಳಲ್ಲಿ ಈ ಘಟನೆ ನಡೆದು ಹೋಗಿತ್ತು. ಆ ಸಮಯದಲ್ಲಿ ಏನಾಯ್ತು ಎನ್ನುವುದನ್ನು ಪಾರ್ವತಮ್ಮ ರಾಜ್‌ಕುಮಾರ್ ಸಂದರ್ಶನವೊಂದರಲ್ಲಿ ವಿವರಿಸಿದ್ದರು. ಡೈಲಿ ನ್ಯೂಸ್ ಕರ್ನಾಟಕ ಯೂಟ್ಯೂಬ್ ಚಾನಲ್‌ನಲ್ಲಿ ಅದನ್ನು ಕೇಳಬಹುದು.
"ನಮ್ಮ ಯಜಮಾನರು ವೀರಪ್ಪನ್ ಜೊತೆ ಹೋಗುವಾಗಲು ಬಹಳ ಧೈರ್ಯವಾಗಿಯೇ ಇದ್ದರು. ನಾನು ಹೋಗ್ತಿದ್ದೀನಿ, ಬರ್ತೀನಿ, ನಿನಗೆ ಧೈರ್ಯವಿದೆ. ಅಭಿಮಾನಿಗಳಿಂದ ಯಾವುದೇ ಗಲಾಟೆಗಳಾಬಾರದು. ನಾನು ಹೇಳಿದಂತೆ ನೀನು ಹೇಳಿದರೆ ಕೇಳುತ್ತಾರೆ ಅವರೆಲ್ಲಾ. ನಾನು ಹೋಗುತ್ತಿದ್ದೇನೆ ಬರ್ತೀನಿ. ನೀನು ಈಗ ಮಾತನಾಡಬೇಡ, ಸನ್ನಿವೇಶ ಸರಿಯಿಲ್ಲ. ನಮಗಲ್ಲ ಬೇರೆ ಯಾರಿಗೂ ಅನಾಹುತ ಆಗಬಾರದು" ಎಂದಿದ್ದರು.
"ವೀರಪ್ಪನ್ ನನ್ನ ಕೈಗೆ ಕ್ಯಾಸೆಟ್ ಕೊಟ್ಟು ಇದನ್ನು ಸಿಎಂಗೆ ಕೊಡು. ನೀನು ಪೊಲೀಸರಿಗೆ ಏನಾದರೂ ದೂರು ಕೊಟ್ಟರೆ ರಾಜ್‌ಕುಮಾರ್‌ನ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಬಿಡ್ತೀವಿ ಎಂದ. ನಾನು "ಏಯ್, ಇವತ್ತು ನಿನ್ನ ಟೈಂ ಚೆನ್ನಾಗಿದೆ. ನೀನು ಹಿಂಗೆ ಕರೆದುಕೊಂಡು ಹೋಗು, ನಾನು ಚಿಟಿಕೆ ಹೊಡೆಯುವಂತೆ ಹಂಗೆ ಕರೆದುಕೊಂಡು ಬರ್ತೀನಿ ಎಂದೆ. ಅಷ್ಟು ಧೈರ್ಯ ನನಗೆ ಆ ಸಮಯದಲ್ಲೇ ಬಂತು"

"ರಾಜ್‌ಕುಮಾರ್ ಅವರನ್ನು ಅವನು ಕರೆದುಕೊಂಡು ಹೋಗುವ ನೋವಿನ ನಡುವೆ ನನಗೆ ಅಷ್ಟೇ ಧೈರ್ಯ ಇತ್ತು. ನಮ್ಮ ಅಭಿಮಾನಿ ದೇವರುಗಳು ಇದ್ದಾರೆ. ಅವರನ್ನು ಕರೆದುಕೊಂಡು ಬರುವುದು ಗೊತ್ತು ಎಂದೆ. ನನ್ನ ತಮ್ಮನ ಬಳಿ ಈ ವಿಚಾರದ ಬಗ್ಗೆ ವೀರಪ್ಪನ್ ಚರ್ಚಿಸಿದ್ದನಂತೆ. ಅಲ್ಲಾ, ನೀನು ಹಿಂಗೆ ಕರ್ಕೊಂಡ್ ಹೋಗು, ನಾನು ಹಂಗೆ ಕರ್ಕೊಂಡ್ ಬರ್ತೀನಿ ಅಂತಾರಲ್ಲ, ನಿಮ್ಮ ಅಕ್ಕ ಎಂದಿದ್ದನಂತೆ"
"ನಮ್ಮ ಮಾವ ಸುಮ್ಮನಿರಲು ಹೇಳಿದ್ದಕ್ಕೆ ಅವಳು ಸುಮ್ಮನಿದ್ದಳು, ಇಲ್ಲದಿದ್ದರೆ ನಿನಗೆ ಎರಡು ಬಿಡುತ್ತಿದ್ದಳು ಎಂದು ನನ್ನ ತಮ್ಮ ಅವನಿಗೆ ಹೇಳಿದ್ದನಂತೆ. ನಾನು ಮೊದಲು ವೀರಪ್ಪನ್‌ನ ಗುರುತು ಹಿಡಿಯಲಿಲ್ಲ. ಸೇತುಕುಳಿ ಗೋವಿಂದನ್‌ನ ಕಂಡು ಹಿಡಿದೆ, ಅವನ ಫೋಟೊವನ್ನೇ ಪೇಪರ್‌ನಲ್ಲಿ ಹೆಚ್ಚು ನೋಡುತ್ತಿದ್ದೆ. ಇಲ್ಲಿನ ತಮಿಳರಿಗೆ ಏನಾದರೂ ತೊಂದರೆ ಆದರೆ ಅಲ್ಲಿ ಯಜಮಾನರಿಗೆ ತೊಂದರೆ ಕೊಡ್ತಾರೆ ಎನ್ನುವ ಭ ಇತ್ತು. ನಾನು ಸೆರಗೊಡ್ಡಿ ಅಭಿಮಾನಿ ದೇವರುಗಳಲ್ಲಿ ಬೇಡುತ್ತಿದ್ದೆ. ಯಾವುದೇ ಕಾರಣಕ್ಕೂ ಅವಸರ ಪಡಬೇಡಿ ಎಂದು"
"ಮುಳ್ಳಿನ ಮೇಲೆ ಬಟ್ಟೆ ಬಿದ್ದಿದೆ. ಅದನ್ನು ನಿಧಾನವಾಗಿ ಬಿಡಿಸಿಕೊಳ್ಳಬೇಕು. ಅದನ್ನು ಬಲವಂತವಾಗಿ ಎಳೆಯಬಾರದು ಎಂದು ಮನವಿ ಮಾಡುತ್ತಿದ್ದೆ. ಎಲ್ಲಾ ಅಭಿಮಾನಿ ದೇವರುಗಳು ಅದೇ ರೀತಿ ಸ್ಪಂದಿಸಿದರು" ಎಂದು ಪಾರ್ವತಮ್ಮ ರಾಜ್‌ಕುಮಾರ್ ಆ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದರು.


Click it and Unblock the Notifications











