ಕನ್ನಡದಲ್ಲಿ ಖಂಡಿತ ಸಿನ್ಮಾ ಮಾಡ್ತೀನಿ.. ಒಂದು ಸಿನ್ಮಾ ಮಾಡುವುದಾಗಿ ಮಾತು ಕೊಟ್ಟಿದ್ದೀನಿ
ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕರಲ್ಲಿ ಪ್ರಶಾಂತ್ ನೀಲ್ ಕೂಡ ಒಬ್ಬರು. 'ಉಗ್ರಂ' ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ ನೀಲ್, 'KGF' ಸರಣಿ ಸಿನಿಮಾಗಳಿಂದ ದಾಖಲೆ ಬರೆದರು. ಇತ್ತೀಚೆಗೆ ತೆಲುಗಿನ 'ಸಲಾರ್' ಸಿನಿಮಾ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಿದರು. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಿರ್ದೇಶಕನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.
ಯಶ್ ಹೀರೊ ಆಗಿ ಪ್ರಶಾಂತ್ ನೀಲ್ ಕೊಟ್ಟಿದ್ದ 'KGF' ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಕನ್ನಡ ಸಿನಿಮಾಗಳು 1000 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ಈ ಸಿನಿಮಾ ಸಾಬೀತು ಮಾಡಿತು. ಅಂತಾದೊಂದು ಅದ್ಭುತ ಗೆಲುವಿನಲ್ಲಿ ನೀಲ್ ಪಾಲು ದೊಡ್ಡದಿದೆ. ಆದರೆ 'KGF'-2 ಬಿಡುಗಡೆಗೂ ಮುನ್ನವೇ ಪ್ರಶಾಂತ್ ನೀಲ್ ತೆಲುಗು ಚಿತ್ರರಂಗಕ್ಕೆ ಹೊರಟುನಿಂತರು.

ಕನ್ನಡದಲ್ಲಿ ಸಕ್ಸಸ್ ಸಿಗುತ್ತಿದ್ದಂತೆ ಪ್ರಶಾಂತ್ ನೀಲ್ ಪರಭಾಷೆಗೆ ಹೊರಟಿದ್ದು ಕನ್ನಡ ಸಿನಿರಸಿಕರಿಗೆ ಬೇಸರ ತಂದಿದ್ದು ಸುಳ್ಳಲ್ಲ. 'ಸಲಾರ್' ಬಳಿಕ ಕನ್ನಡ ಚಿತ್ರ ಮಾಡ್ತಾರೆ ಎನ್ನುವ ವೇಳೆಗೆ ಜ್ಯೂ. ಎನ್‌ಟಿಆರ್ ಜೊತೆ ಮತ್ತೊಂದು ಸಿನಿಮಾ ಘೋಷಿಸಿದ್ದರು. ಇದೀಗ ಸಹಜವಾಗಿಯೇ ಕೆಲವರು ಆಕ್ರೋಶಕ್ಕೆ ಕಾರಣವಾಗಿತ್ತು. 'KGF' ಸರಣಿ ಸಿನಿಮಾಗಳಿಂದ ಕನ್ನಡದಲ್ಲೇ ಎಲ್ಲವೂ ಸಾಧ್ಯ ಎಂದು ತೋರಿಸಿದ್ದ ನೀಲ್ ಯಾಕೆ ಪರಭಾಷೆಗೆ ಹೋದರು ಎನ್ನುವ ಪ್ರಶ್ನೆ ಮೂಡಿತ್ತು.
ಕನ್ನಡದಲ್ಲಿ ಸ್ಟಾರ್ ನಟರು ಇರಲಿಲ್ಲವೇ? ಹಣ ಹೂಡುವವರು ಇರಲಿಲ್ಲವೇ? ತಮ್ಮನ್ನು ಕನ್ನಡಿಗ ಎಂದು ಹೇಳಿಕೊಳ್ಳುವ ಪ್ರಶಾಂತ್ ನೀಲ್ ತೆಲುಗು ಸಿನಿಮಾಗಳನ್ನು ಮಾಡುತ್ತಿರುವುದು ಯಾಕೆ? ಎಂದು ಈಗಲೂ ಕೇಳುವವರು ಇದ್ದಾರೆ. ಆದರೆ ಕೆಲ ಸಂದರ್ಶನಗಳಲ್ಲಿ ಈ ಬಗ್ಗೆ ನಿರ್ದೇಶಕರು ಮಾತನಾಡಿದ್ದರು. ಮತ್ತೆ ಕನ್ನಡ ಸಿನಿಮಾ ಮಾಡುವ ಬಗ್ಗೆಯೂ ಹೇಳಿದ್ದರು.
'ಉಗ್ರಂ' ಸಿನಿಮಾವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದರು. ಆದರೆ ಚಿತ್ರೀಕರಣಕ್ಕಾಗಿ ಮನೆ ಕೂಡ ಮಾರಿ ಹಣ ಹೊಂದಿಸಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಆ ಚಿತ್ರ ಗೆಲ್ಲಲಿಲ್ಲ. ವಿತರಣೆಗೂ ಯಾರು ಮುಂದೆ ಬರಲಿಲ್ಲ. ಬಿಡುಗಡೆ ಬಳಿಕ ಪೈರಸಿ ಆಗಿ ಮೊಬೈಲ್‌ನಲ್ಲಿ ಸಿನಿಮಾ ನೋಡಿದ್ದರು. ಅದು ಬೇಸರವಾಗಿತ್ತು. ಆ ಕಥೆಯನ್ನು ದೊಡ್ಡದಾಗಿ ಹೇಳಬೇಕು ಎಂದು 'ಸಲಾರ್' ಸಿನಿಮಾ ಮಾಡಿದೆ ಎಂದಿದ್ದರು.

"ಸಿನಿಮಾ ಈಗ ನನಗೆ ಬ್ಯುಸಿನೆಸ್. ಅದರಲ್ಲಿ ನನ್ನ ಬೆಸ್ಟ್ ನಾನು ಮಾಡ್ತೀನಿ. ನಾನು ಇಲ್ಲಿ ರಂಜಿಸೋಕೆ ಇದ್ದೀನಿ ಅಷ್ಟೆ. ಸೇವೆ ಮಾಡುವುದಕ್ಕೆ ಅಲ್ಲ. ನಾನು ಇವತ್ತು ಏನೇ ಆಗಿದ್ದರೂ ಕನ್ನಡ ಚಿತ್ರರಂಗದಿಂದ. ಆದ್ರೆ ನನ್ನಿಂದಲೇ ಕನ್ನಡ ಚಿತ್ರರಂಗ ಅಲ್ಲ. ಅದು ಸಾಧ್ಯವೂ ಇಲ್ಲ. ಮತ್ಯಾರಿಂದಲೂ ಅಲ್ಲ. ಪ್ಯಾಷನ್ ಬಹಳ ಹಿಂದೆ ಸತ್ತು ಹೋಯ್ತು. ನಾನು ಉಗ್ರಂ ಚಿತ್ರದಿಂದ ಸಾಕಷ್ಟು ಕಲಿತೆ"
ಹಿಂದೆ ಸಂದರ್ಶನವೊಂದರಲ್ಲಿ ಮತ್ತೆ ಕನ್ನಡ ಸಿನಿಮಾ ಮಾಡ್ತೀರಾ ಅಲ್ವಾ? ಎನ್ನುವ ಪ್ರಶ್ನೆ ಎದುರಾಗಿತ್ತು. ಆಗ ಪ್ರಶಾಂತ್ ನೀಲ್ "ಕಂಡಿತ ಮಾಡ್ತೀನಿ. ನಾನು ಕನ್ನಡ ಸಿನಿಮಾ ಮಾಡ್ತೀನಿ ಅಂದ್ರೆ ಯಾವುದೇ ಫೇವರ್ ಮಾಡ್ತಿಲ್ಲ. ನಾನು ಕನ್ನಡಿಗ. ನಾನು ಎಲ್ಲೇ ಹೋದರೂ ಕನ್ನಡಿಗನೇ. ನಾನು ವಾಪಸ್ ಬಂದು ಕನ್ನಡ ಸಿನಿಮಾ ಮಾಡಬೇಕು. 'KGF'-1 ಸಕ್ಸಸ್ ಬಳಿಕ ಯಾರು ಬಂದು ಪ್ರೀತಿ ತೋರಿಸಿದರೋ ಅವರಿಗೆ ಸೈ ಎಂದೆ"
"ನಾನು ನನ್ನ ಕರಿಯರ್ ಕಟ್ಟಿಕೊಳ್ಳಬೇಕು. ಇದು ಹೀಗೆ ಮುಂದುವರೆಯಬೇಕು. ಮುಂದೊಂದು ದಿನ ಕನ್ನಡ ಸಿನಿಮಾ ಮಾಡ್ತೀನಿ. ಮುರಳಿ ಅವರೊಟ್ಟಿಗೆ ಒಂದು ಸಿನಿಮಾ ಮಾಡಲೇಬೇಕು ನಾನು. ನಾನು ಮಾತು ಕೊಟ್ಟಿದ್ದೀನಿ" ಎಂದು ನೀಲ್ ಹೇಳಿದ್ದರು. ಕನ್ನಡ ಸಿನಿರಸಿಕರು ಕೂಡ ಆ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಆಗಸ್ಟ್‌ನಲ್ಲಿ ನೀಲ್-ತಾರಕ್ ಕಾಂಬಿನೇಷನ್ ಸಿನಿಮಾ ಶುರುವಾಗಲಿದೆ. ಬಳಿಕ 'ಸಲಾರ್-2' ಬರೋದು ಖಚಿತವಾಗಿದೆ.


Click it and Unblock the Notifications











