"ಸದ್ಯಕ್ಕೆ ನಾನಲ್ಲ, ಗಣೇಶ್ ಸೂಪರ್ ಸ್ಟಾರ್" ಎಂದು ಅಪ್ಪು ಅಂದು ಹೇಳಿದ್ದೇಕೆ?
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನಾಗಿ ಮಾತ್ರವಲ್ಲದೇ ಒಳ್ಳೆ ವ್ಯಕ್ತಿಯಾಗಿ ಎಲ್ಲರಿಗೂ ಹತ್ತಿರವಾಗಿದ್ದರು. ದೊಡ್ಮನೆಯಿಂದ ಬಂದರೂ ಯಾವುದೇ ಹಮ್ಮು ಬಿಮ್ಮು ಅವರಿಗೆ ಇರಲಿಲ್ಲ. ಸದಾ ಸರಳ ಸಜ್ಜನ ವ್ಯಕ್ತಿತ್ವದಿಂದ ಅಪ್ಪು ಮಾದರಿ ಆಗಿದ್ದರು. ನಡೆ, ನುಡಿ, ವಿನಯ ಎಲ್ಲದರಲ್ಲೂ ಅಪ್ಪಾಜಿಯನ್ನೇ ಹೋಲುತ್ತಿದ್ದರು.
ಬಾಲನಟನಾಗಿಯೇ ಚಿತ್ರರಂಗಕ್ಕೆ ಬಂದು ರಾಷ್ಟ್ರಪ್ರಶಸ್ತಿ ಪಡೆದು ಚಿಕ್ಕಂದಿನಲ್ಲೇ ಸ್ಟಾರ್ ಆಗಿದ್ದವರು ಪುನೀತ್ ರಾಜ್‌ಕುಮಾರ್. ಬಳಿಕ ಹೀರೊ ಆಗಿ ಬಂದು ಸಕ್ಸಸ್ ಕಂಡಿದ್ದರು. ಸೂಪರ್ ಹಿಟ್ ಚಿತ್ರಗಳ ಮೂಲಕ ದರ್ಬಾರ್ ನಡೆಸಿದ್ದರು. ಮೊದಲ 2 ಸಿನಿಮಾಗಳು ಹೋಂ ಬ್ಯಾನರ್ ಅಡಿಯಲ್ಲೇ ನಿರ್ಮಾಣವಾಗಿತ್ತು. 3ನೇ ಚಿತ್ರಕ್ಕೆ 1 ಕೋಟಿ ರೂ. ಸಂಭಾವನೆ ಪಡೆದು ಅಪ್ಪು ಕಮಾಲ್ ಮಾಡಿದ್ದರು.

20 ವರ್ಷಗಳ ಹಿಂದೆ ಕನ್ನಡದಲ್ಲಿ ನಾಯಕ ನಟನಿಗೆ 1 ಕೋಟಿ ರೂ. ಸಂಭಾವನೆ ಎನ್ನುವುದು ಹೊಸ ದಾಖಲೆ ಆಗಿತ್ತು. ಆ ದಾಖಲೆ ಅಪ್ಪು ಹೆಸರಿನಲ್ಲೇ ದಾಖಲಾಗಿದೆ. ತಾನು ಬೆಳೆದು ಎಲ್ಲರನ್ನು ಬೆಳೆಸುವ ಗುಣ ದೊಡ್ಮನೆಯಲ್ಲಿ ಎಲ್ಲರಿಗೂ ಇದೆ. ಒಬ್ಬರ ಏಳಿಗೆಯನ್ನು ನೋಡಿ ಖುಷಿಪಡುತ್ತಾರೆ. ಎಲ್ಲರಿಗೂ ಸಿಗಬೇಕಾದ ಗೌರವ ಪುರಸ್ಕಾರ ಸಿಗಬೇಕು ಎಂದು ಬಯಸುತ್ತಾರೆ. 17 ವರ್ಷಗಳ ಹಿಂದೆ ಸದ್ಯ ಕನ್ನಡದ ಸೂಪರ್ ಸ್ಟಾರ್ ಗಣೇಶ್ ಎಂದು ಹೇಳಿದ್ದರಂತೆ.
ನಿರ್ದೇಶಕ ರಘುರಾಮ್ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಕನ್ನಡ ಚಿತ್ರರಂಗದ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಡುತ್ತಾರೆ. 'ಬಿಂದಾಸ್' ಚಿತ್ರದ ಸಮಯದಲ್ಲಿ ನಿರ್ಮಾಪಕ ಎಂ. ಚಂದ್ರಶೇಖರ್ ಜೊತೆ ಪುನೀತ್ ನಡೆಸಿದ್ದ ಸಂಭಾಷಣೆಯನ್ನು ರಘುರಾಮ್ ಇದೀಗ ರಿವೀಲ್ ಮಾಡಿದ್ದಾರೆ. ಅಪ್ಪು ದೊಡ್ಡಗುಣ ಎಂಥಾದ್ದು ಎಂದು ವಿವರಿಸಿದ್ದಾರೆ. ಅದು 'ಬಿಂದಾಸ್' ಚಿತ್ರದಲ್ಲಿ ಪುನೀತ್ ನಟಿಸೋಕೆ ನಿರ್ಮಾಪಕರು ಸಂಭಾವನೆ ಕೊಡಲು ಹೋಗಿದ್ದ ಸಂದರ್ಭ.

'ಮಿಲನಾ' ಬಳಿಕ ಡಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಬಿಂದಾಸ್' ಚಿತ್ರಕ್ಕೆ ಪುನೀತ್ ರಾಜ್‌ಕುಮಾರ್ ಸಹಿ ಮಾಡಿದ್ದರು. ಹನ್ಸಿಕಾ ನಾಯಕಿಯಾಗಿ ಮಿಂಚಿದ್ದರು. ಆದರೆ ಸಿನಿಮಾ ದೊಡ್ಡದಾಗಿ ಸದ್ದು ಮಾಡಿರಲಿಲ್ಲ. ಚಿತ್ರಕ್ಕೆ ಅಪ್ಪು ಅವರನ್ನು ಒಪ್ಪಿಸಿ ನಿರ್ಮಾಪಕರು ಸಂಭಾವನೆಯ ಅಡ್ವಾನ್ಸ್ ಹಣ ನೀಡಲು ಪುನೀತ್ ರಾಜ್‌ಕುಮಾರ್ ಮನೆಗೆ ಹೋಗಿದ್ದರು. ಈ ವೇಳೆ ಮಾತುಕತೆ ನಡೆಸಿ, ಅಡ್ವಾನ್ಸ್ ಕೊಟ್ಟು ನಿರ್ಮಾಪಕರು ಎಂ. ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ.
"ನಿಮ್ಮಂತಹ ಸೂಪರ್ ಸ್ಟಾರ್ ಜೊತೆ ಚಿತ್ರ ನಿರ್ಮಾಣ ಮಾಡುವುದು ನನ್ನ ಅದೃಷ್ಟ ಎಂದು ನಿರ್ಮಾಪಕರು ಹೇಳಿದ್ದರಂತೆ. ಕೂಡಲೇ ಅದಕ್ಕೆ ಪ್ರತಿಕ್ರಿಯಿಸಿದ್ದ ಅಪ್ಪು "ನನಗೂ ನಿಮ್ಮ ಬ್ಯಾನರ್ ಚಿತ್ರದಲ್ಲಿ ನಟಿಸುತ್ತಿರುವ ಖುಷಿಯಿದೆ. ಆದರೆ ಸದ್ಯಕ್ಕೆ ಸೂಪರ್ ಸ್ಟಾರ್ ನಾನಲ್ಲ. ಅದು ಗೋಲ್ಡನ್ ಸ್ಟಾರ್ ಗಣೇಶ್. ಕಾರಣ ಗಣೇಶ್ ಸಾಲು ಸಾಲು ಹಿಟ್ ಕೊಡುತ್ತಿದ್ದಾರೆ. ಅವ್ರು ಸದ್ಯದ ಸೂಪರ್ ಸ್ಟಾರ್. ಆ ಪಟ್ಟ ಶಾಶ್ವತ ಅಲ್ಲ. ಈಗ ಗಣೇಶ್ ಅದನ್ನು ಎಂಜಾಯ್ ಮಾಡುತ್ತಿದ್ದಾರೆ. ಅದಕ್ಕೆ ಗೌರವಿಸೋಣ. ಇವತ್ತಿನ ಸ್ಟಾರ್ ಗಣೇಶ್" ಎಂದು ಪುನೀತ್ ರಾಜ್‌ಕುಮಾರ್ ಹೇಳಿದ್ದರಂತೆ.
ಹಾರ, ಜೈಕಾರ, ಪುರಸ್ಕಾರ ಸಿಕ್ಕರೆ ಸಾಕು ಎನ್ನುವ ಪ್ರಪಂಚದಲ್ಲಿ ತಮ್ಮನ್ನು ಸೂಪರ್ ಸ್ಟಾರ್ ಎಂದರೂ, ನಾನಲ್ಲ, ಗಣೇಶ್ ಈಗ ಸೂಪರ್ ಸ್ಟಾರ್ ಎಂದು ಅಪ್ಪು ಹೇಳಿದ್ದು ನಿಜಕ್ಕೂ ವಿಶೇಷ. ಆ ಸಮಯದಲ್ಲಿ ಗಣೇಶ್ 'ಮುಂಗಾರುಮಳೆ', 'ಹುಡುಗಾಟ', 'ಚೆಲುವಿನ ಚಿತ್ತಾರ', 'ಕೃಷ್ಣ' ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಗೋಲ್ಡನ್ ಸ್ಟಾರ್ ಪಟ್ಟ ಕೂಡ ಸಿಕ್ಕಿತ್ತು. 'ಗಾಳಿಪಟ' ಚಿತ್ರದಲ್ಲಿ ನಟಿಸೋಕೆ ಭರ್ಜರಿ ಸಂಭಾವನೆಯನ್ನು ಜೇಬಿಗಿಳಿಸಿದ್ದರು.


Click it and Unblock the Notifications











