"ನಿನ್ನ ಮುಖ ನಟಿಯಾಗೋಕೆ ಲಾಯಕ್ಕಿಲ್ಲ ಎನ್ನುತ್ತಿದ್ದರು, ಬಹಳ ಅಳುತ್ತಿದ್ದೆ"; ರಶ್ಮಿಕಾ ಕಾಮೆಂಟ್ಸ್ ವೈರಲ್
ಟಾಲಿವುಡ್‌ನಿಂದ ಬಾಲಿವುಡ್‌ವರೆಗೂ ರಶ್ಮಿಕಾ ಮಂದಣ್ಣ ಕ್ರೇಜ್ ಜೋರಾಗಿದೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ಆಕೆ ನಾಯಕಿಯಾಗಿ ಆಯ್ಕೆ ಆಗಿ ನಟಿಸುತ್ತಿದ್ದಾರೆ. 'ಅನಿಮಲ್' ಸಿನಿಮಾ ಬಳಿ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಸುಳಿವು ಸಿಕ್ಕಿದೆ. ಆದರೆ ಆರಂಭದ ದಿನಗಳಲ್ಲಿ ಕೊಡಗಿನ ಬೆಡಗಿಗೆ ಚಿತ್ರರಂಗದಲ್ಲಿ ಕಹಿ ಅನುಭವಗಳು ಎದುರಾಗಿತ್ತು.
ಪರಿಶ್ರಮ ಮಾತ್ರ ಸಾಕಾಗಲ್ಲ, ಚಿತ್ರರಂಗದಲ್ಲಿ ಅದೃಷ್ಟವೂ ಬೇಕು ಎನ್ನುವವರಿದ್ದಾರೆ. ಇದೇ ಅದೃಷ್ಟ ಬಹಳ ಜನರ ಲೈಫ್ ಬದಲಿಸಿಬಿಟ್ಟಿದೆ. ಇನ್ನು ಅದಕ್ಕೆ ಪರಿಶ್ರಮವೂ ಜೊತೆಯಾದರೆ ಸಕ್ಸಸ್ ಕಟ್ಟಿಟ್ಟ ಬುತ್ತಿ. 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ರಶ್ಮಿಕಾ ಚಿತ್ರರಂಗಕ್ಕೆ ಬಂದರು. ಆದರೆ ಅದಕ್ಕೂ ಮುನ್ನ ಹಲವು ಆಡಿಷನ್ ಕೊಟ್ಟಿದ್ದರು. ನಟಿಸುವ ಅವಕಾಶ ಮಾತ್ರ ಸಿಕ್ಕಿರಲಿಲ್ಲ.

'ಕಿರಿಕ್ ಪಾರ್ಟಿ' ಬಳಿಕ ರಶ್ಮಿಕಾ ಮಂದಣ್ಣ ತಿರುಗಿ ನೋಡಲಿಲ್ಲ. ಸಾಲು ಸಾಲು ಸಿನಿಮಾಗಳನ್ನು ನಟಿಸಿ ಗೆದ್ದರು. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್, ದರ್ಶನ್ ಜೊತೆಗೂ ತೆರೆ ಹಂಚಿಕೊಂಡರು. ಬಳಿಕ 'ಚಲೋ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದರು. ಆ ಸಿನಿಮಾ ಓಕೆ ಓಕೆ ಎನಿಸಿಕೊಂಡರೂ ಬಳಿಕ ಬಂದ 'ಗೀತಾ ಗೋವಿಂದಂ' ಸಿನಿಮಾ ಕೊಡಗಿನ ಚೆಲುವೆ ನಸೀಬು ಬದಲಿಸಿತು.
ವಿಜಯ್ ದೇವರಕೊಂಡ ಜೋಡಿಯಾಗಿ ನಟಿಸಿದ 'ಗೀತಾ ಗೋವಿಂದಂ' ಸಿನಿಮಾ ಹಿಟ್ ಆಗಿತ್ತು. ಬಳಿಕ ಒಂದರ ಹಿಂದೆ ಒಂದರಂತೆ ಅವಕಾಶಗಳು ಹುಡುಕಿ ಬಂದವು. ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ರಶ್ಮಿಕಾ ಗೆಲ್ಲುತ್ತಾ ಹೋದರು. ತೆಲುಗು ಬಳಿಕ ಒಂದು ತಮಿಳು ಚಿತ್ರದಲ್ಲೂ ನಟಿಸಿದರು. 'ಮಿಷನ್ ಮಜ್ನು' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದರು. ಆ ಸಿನಿಮಾ ಬಿಡುಗಡೆಗೂ ಮುನ್ನ ಬಿಗ್‌ಬಿ ಜೊತೆ ನಟಿಸೋ ಅವಕಾಶ ಒಲಿದುಬಂತು.
ಅಮಿತಾಬ್ ಬಚ್ಚನ್ ಮಗಳಾಗಿ 'ಗುಡ್‌ಬೈ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಆ ಸಿನಿಮಾ ಅಷ್ಟೇನು ಸದ್ದು ಮಾಡಲಿಲ್ಲ. ಆದರೆ ಬಾಲಿವುಡ್ ಬೆಡಗಿಯರನ್ನೆಲ್ಲಾ ಹಿಂದಿಕ್ಕಿ ಬಿಗ್ ಬಿ ಜೊತೆ ಒಂದು ದೊಡ್ಡ ಪಾತ್ರದಲ್ಲಿ ನಟಿಸಿ ರಶ್ಮಿಕಾ ಸೈ ಎನಿಸಿಕೊಂಡಿದ್ದರು. ಅಷ್ಟರಲ್ಲೇ ತೆಲುಗಿನಲ್ಲಿ ಒಂದಷ್ಟು ಸಿನಿಮಾಗಳು ಚೆಲುವೆ ಕೈ ಹಿಡಿದವು. ನ್ಯಾಷನಲ್ ಕ್ರಶ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದರು.
'ಪುಷ್ಪ' ಚಿತ್ರದ ಶ್ರೀವಲ್ಲಿ ಪಾತ್ರ ರಶ್ಮಿಕಾ ಮಂದಣ್ಣಗೆ ಮತ್ತೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಒಂದಷ್ಟು ವಿವಾದಗಳಿಂದಲೂ ಆಕೆ ಸುದ್ದಿಯಾಗುತ್ತಾ ಹೋದರು. ಕೆಲವೊಮ್ಮೆ ಆಕೆ ನೀಡಿದ ಹೇಳಿಕೆಗಳು ಮುಳುವಾಗಿತ್ತು. ಸುಖಾಸುಮ್ಮನೆ ರಶ್ಮಿಕಾ ಟ್ರೋಲ್ ಆಗಿದ್ದು ಇದೆ. ಅದಕ್ಕಾಗಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಆ ಬಗ್ಗೆ ಕೂಡ ಬೇಸರ ಹೊರ ಹಾಕಿದ ದಿನಗಳಿವೆ. ಇನ್ನು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಎದುರಿಸಿದ ಕಹಿ ಅನುಭವದ ಬಗ್ಗೆಯೂ ಮಾತನಾಡಿದ್ದು ಇದೆ.

'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಟಿಸುವುದಕ್ಕೂ ಮುನ್ನ 20 ರಿಂದ 25 ಆಡಿಷನ್ ಕೊಟ್ಟಿದ್ದು. ಎಲ್ಲದರಲ್ಲೂ ರಿಜೆಕ್ಟ್ ಆಗಿದ್ದರ ಬಗ್ಗೆ ರಶ್ಮಿಕಾ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ರಶ್ಮಿಕಾ ಮಂದಣ್ಣ ಕಾಲೇಜಿನಲ್ಲಿದ್ದಾಗಲೇ ಟೈಮ್ಸ್ ಫ್ರೆಶ್ ಫೇಸ್ ಕಾಂಟೆಸ್ಟ್‌ನಲ್ಲಿ ಭಾಗಿ ಆಗಿ ಮೆಚ್ಚುಗೆ ಪಡೆದುಕೊಂಡಿದ್ದರು. ಅದೇ ಫೋಟೊ ನೋಡಿ ರಿಷಬ್ ಶೆಟ್ಟಿ ಆಕೆಯನ್ನು 'ಕಿರಿಕ್ ಪಾರ್ಟಿ' ಆಡಿಷನ್‌ಗೆ ಕರೆದಿದ್ದರು ಎನ್ನುವುದು ಗೊತ್ತು.
ರಶ್ಮಿಕಾ ಮಾತನಾಡಿ "2014ರಲ್ಲಿ ನಾನು ಫ್ರೆಶ್ ಫೇಸ್ ಕಾಂಟೆಸ್ಟ್‌ನಲ್ಲಿ ಭಾಗವಹಿಸಿದ ಬಳಿಕ ಹಲವು ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಿಗೆ ಆಡಿಷನ್ ಕೊಟ್ಟಿದ್ದೆ. ನನಗೆ ಇನ್ನು ನೆನಪಿದೆ ಸಾಕಷ್ಟು ಬಾರಿ ರಿಜೆಕ್ಟ್ ಆಗಿದ್ದೆ. ಅದನ್ನು ಸಹಿಸಲು ಆಗುತ್ತಿರಲಿಲ್ಲ. ಸುಮಾರು 20-25 ಆಡಿಷನ್ ಕೊಟ್ಟಿದ್ದೆ. ಎಲ್ಲರದರಲ್ಲೀ ರಿಜೆಕ್ಟ್ ಆಗಿದ್ದೆ. ನಿನ್ನ ಮುಖ ನಟಿಯಾಗಲು ಲಾಯಕ್ಕಿಲ್ಲ ಎಂದೇ ಹೇಳುತ್ತಿದ್ದರು. ಮನೆಗೆ ಬಂದು ಸಾಕಷ್ಟು ಅಳುತ್ತಿದ್ದೆ" ಎಂದಿದ್ದರು.
"ಕೊನೆಯದಾಗಿ ನಾನು 'ಗೆಳೆಯರೇ ಗೆಳೆತಿಯರೇ' ಎನ್ನುವ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದೆ. ಆ ಚಿತ್ರಕ್ಕಾಗಿ 2 ತಿಂಗಳ ಕಾಲ ತರಬೇತಿ ನೀಡಲಾಯಿತು. ಆದರೆ ಆ ಸಿನಿಮಾ ನಿಂತೇ ಹೋಯಿತು" ಎಂದು ರಶ್ಮಿಕಾ ಮಂದಣ್ಣ ನೆನಪಿಸಿಕೊಂಡಿದ್ದರು. ಆ ಬಳಿಕವೇ ಆಕೆ ರಿಷಬ್ ಶೆಟ್ಟಿ ಕಣ್ಣಿಗೆ ಬಿದ್ದು 'ಕಿರಿಕ್ ಪಾರ್ಟಿ' ಚಿತ್ರದ ಸಾನ್ವಿ ಪಾತ್ರಕ್ಕೆ ಆಯ್ಕೆ ಆಗಿದ್ದರು.


Click it and Unblock the Notifications











