ಹಣ, ಹೆಂಡ, ಹೆಂಡ್ತಿ.. ದರ್ಶನ್ ಬಗ್ಗೆ ಅವತ್ತು ಏನ್ ಹೇಳಿದ್ರು ರವಿ ಬೆಳಗೆರೆ?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ದರ್ಶನ್ ಹೆಸರು ಕೇಳಿಬಂದಿದ್ದರೂ ಈ ಬಾರಿ ಕೊಲೆ ಪ್ರಕರಣದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು ಪ್ರಕರಣದಲ್ಲಿ ನಟ ದರ್ಶನ್‌ಗೆ ಕಠಿಣ ಶಿಕ್ಷೆ ಆಗಬಹುದು ಎನ್ನುವ ಚರ್ಚೆ ನಡೆಯುತ್ತಿದೆ.
ನಟ ದರ್ಶನ್ ವರ್ತನೆಯ ಬಗ್ಗೆ ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡಿದ್ದರು. ಬೆಳ್ ಬೆಳಗ್ಗೆ ಬೆಳಗೆರೆ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಕೂಡ ಪ್ರಸ್ತಾಪಿಸಿದ್ದರು. ಹಿಂದೆ ಪತ್ನಿಯ ಮೇಲೆ ಹಲ್ಲೆ ನಡೆಸಿ ಜೈಲಿಗೆ ಹೋಗಿದ್ದು, ಪವಿತ್ರಾ ಗೌಡ ಜೊತೆಗಿನ ರಿಲೇಷನ್‌ಶಿಪ್‌ನಿಂದ ಏನೆಲ್ಲಾ ಆಯಿತು ಎನ್ನುವ ಬಗ್ಗೆ ಬೆಳಗೆರೆ ಮಾತನಾಡಿದ್ದರು. "ಬರಬಾರದ ಕಾಲದಲ್ಲಿ ಬರಬಾರದ ರೀತಿಯಲ್ಲಿ ಬರಬಾರದ ದುಡ್ಡು ಬಂದ್ರೆ ಹಿಂಗಾಗುತ್ತೆ" ಎಂದಿದ್ದರು.

ಹಾಯ್ ಬೆಂಗಳೂರು ಯೂಟ್ಯೂಬ್ ಚಾನಲ್‌ನಲ್ಲಿ ಮತ್ತೆ ಆ ವೀಡಿಯೋ ಅಪ್‌ಲೋಡ್ ಆಗಿದ್ದು ಸಖತ್ ವೈರಲ್ ಆಗುತ್ತಿದೆ. ಬೆಳಗೆರೆ ಈ ಕಾರ್ಯಕ್ರಮದಲ್ಲಿ ವಾರಕ್ಕೊಂದು ವಿಚಾರದ ಬಗ್ಗೆ ಮಾತನಾಡುತ್ತಿದ್ದರು. ಅದೇ ರೀತಿ ಒಮ್ಮೆ ದರ್ಶನ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದರು. "ದರ್ಶನ್ ನೋಡಲು ಸ್ಪುರದ್ರೂಪಿ, ಒಳ್ಳೆ ನಟ, ಆದರೆ ಆತನಿಗೆ ಯಾಕೆ ಹೆಂಡತಿಯನ್ನು ಹೊಡೆಯುವ ಚಟ"? ಎಂದು ಬೆಳಗೆರೆ ನೆನಪಿಸಿಕೊಂಡಿದ್ದರು.
"ನಾನು ದರ್ಶನ್ ನಟನೆಯ ಯಾವುದೇ ಸಿನಿಮಾ ನೋಡಿಲ್ಲ, ನಮ್ಮ ಪ್ರೀತಿಯ ರಾಮು ಚಿತ್ರವನ್ನು ಒಂಚೂರು ನೋಡಿದ್ದೆ. ಒಳ್ಳೆ ನಟ, ಏನಾದರೂ ಕಮೀಟ್ ಆದರೆ ಅದನ್ನು ಮಾಡಿ ಮುಗಿಸುವ ಹುಮ್ಮಸ್ಸು ಆತನಿಗಿದೆ. ಆದರೆ ಅದ್ಯಾಕೋ ಆತನಿಗೆ ಹೆಂಡತಿಗೆ ಹೊಡೆಯುವ ಚಟವಿದೆ. ಆ ಹುಡುಗಿ ಕೈಯನ್ನು ಕಾರ್ ಡೋರ್‌ಗೆ ಇಟ್ಟು ಹೊಡೆದು ಕೈ ಮುರಿದು ಹಾಕಿದ್ದ. ಜೈಲಿಗೂ ಹೋಗುವಂತಾಯಿತು. ಬುದ್ಧಿವಂತ, ಆದರೆ ಕಾಮನ್ ಸೆನ್ಸ್ ಇಲ್ಲ, ಬರಬಾರದ ಸಮಯದಲ್ಲಿ ಹಣ ಬಂದರೆ ಹಿಂಗಾಗುತ್ತದೆ"

"ಅಣ್ಣಾವ್ರು ಅಷ್ಟು ವರ್ಷ ಇಂಡಸ್ಟ್ರಿಯಲ್ಲಿ ಇದ್ರು. ಎಷ್ಟು ಸಿನಿಮಾಗಳಲ್ಲಿ ನಟಿಸಿದರು, ಯಾರಿಗಾದರೂ ಕಪಾಳಕ್ಕೆ ಹೊಡೆದ್ರಾ? ಒಂದು ಘನತೆ ಇತ್ತು. ಅವರ ಸಿನ್ಮಾ ನೋಡಿದ್ರೆ, ನಾವು ಅವರಂತೆ ಆಗಬೇಕು ಎನಿಸುತ್ತಿತ್ತು. ಉದಯ್ ಕುಮಾರ್, ಕಲ್ಯಾಣ್, ನರಸಿಂಹರಾಜು ಹೆಂಗಿದ್ದರು? ಅವರೆಲ್ಲಾ ಒಳ್ಳೆಯವ್ರು, ಅವರ್ಯಾರು ಹೆಂಡತಿಯನ್ನು ಹೊಡೆಯುತ್ತಿರಲಿಲ್ಲ."
"ದರ್ಶನ್‌ಗೆ ಏನಾಗಿದೆ. ಒಳ್ಳೆ ಮಾರ್ಕೆಟ್ ಇದೆ. ಆದಾಯ ಇದೆ. ಒಳ್ಳೆ ಜೀವನ ಇದೆ. ಅದೆಲ್ಲಾ ಬಿಟ್ಟು ಅದ್ಯಾರೋ ಪವಿತ್ರಾ ಗೌಡ ಅಂತೆ, ಆಯಮ್ಮನ ಜೊತೆಗಿರ್ತಾನೆ. ಸೆಲೆಬ್ರೆಟಿಗಳು ವೈಯಕ್ತಿಕ ಜೀವನವನ್ನು ಚೆನ್ನಾಗಿ ಇಟ್ಕೊಳ್ಬೇಕು. ಮೊನ್ನೆ ಕುಡಿದು ಬಂದು ಮತ್ತೆ ವಿಜಯಲಕ್ಷ್ಮಿಯನ್ನು ಹಿಡಿದು ಹೊಡೆದಿದ್ದಾನೆ. ಆಕೆ ಕೂಡ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಆಕೆ ಯಾರ ಬಳಿಯೂ ಈ ವಿಚಾರ ಹೇಳಲ್ಲ. ಆಪ್ತರ ಬಳಿ ಗಂಡ-ಹೆಂಡತಿ ಜಗಳ ಎಂದು ಹೇಳಿಕೊಂಡಿದ್ದಳಂತೆ. ಗಂಡ-ಹೆಂಡತಿ ಜಗಳ ಯಾಕೆ ಬೀದಿಗೆ ಬರಬೇಕು ಹೇಳಿ"
"ಕುಡಿದು ಹೋಗಿ ಅಪಾರ್ಟ್‌ಮೆಂಟ್‌ನಲ್ಲಿ ವಿಜಯಲಕ್ಷ್ಮಿಗೆ ಹೊಡೆದು, ತಡೆಯಲು ಹೋದ ನಟ ರವಿಶಂಕರ್‌ಗೂ ಹೊಡೆದು ಏನಿದೆಲ್ಲಾ. ಇದನ್ನೆಲ್ಲಾ ಬಿಟ್ಟು ದರ್ಶನ್ ಚೆನ್ನಾಗಿರಪ್ಪಾ. ದರ್ಶನ್ ಪ್ರಾಬ್ಲಂ ಏನಂದ್ರೆ ವಿಜಯಲಕ್ಷ್ಮಿ ಹೆಸರಲ್ಲಿ ಕೋಟ್ಯಂತರ ರೂ. ಆಸ್ತಿ ಮಾಡಿಟ್ಟಿದ್ದಾನೆ. ಅದು ಎಲ್ಲಾ ಚೆನ್ನಾಗಿದ್ದಾಗ ಮಾಡಿಟ್ಟಿರುವ ಆಸ್ತಿ. ಅದನ್ನು ಕೊಡು ಎಂದು ದರ್ಶನ್, ಕೊಡಲ್ಲ ಹೋಗು ಎಂದು ಆಕೆ ಜಗಳ ಆಡುತ್ತಾರೆ."
"ನಟ ದರ್ಶನ್‌ಗೆ ಎಲ್ಲಾ ಇದೆ, ಅಭಿಮಾನಿಗಳಿದ್ದಾರೆ. ಇವತ್ತು ಬೀದಿಗೊಬ್ಬ ಹೀರೊ, ಬೀದಿಗೊಬ್ಬ ಅಭಿಮಾನಿ. ಡಾ. ರಾಜ್‌ಕುಮಾರ್ ಸೇರಿದಂತೆ ಸಾಕಷ್ಟು ಒಳ್ಳೆ ನಟರಿದ್ದರು. ಅವರನ್ನು ನೋಡಿ ಬೆಳದವರು ನಾವು. ಆದರೆ ಇವರೆಲ್ಲಾ ಯಾಕೆ ಹೀಗಾಡುತ್ತಾರೆ?" ಎಂದು ರವಿ ಬೆಳಗೆರೆ ಹೇಳಿದ್ದರು.


Click it and Unblock the Notifications











