ಯುವ ಮನೆಗೆ ಭೇಟಿ ನೀಡಿದ್ದ ಆ ದಿನವನ್ನು ಸಪ್ತಮಿ ಗೌಡ ಇನ್ನು ಮರೆತಿಲ್ಲ!
ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಚೊಚ್ಚಲ ಚಿತ್ರದಲ್ಲೇ ರಾಘಣ್ಣನ ಕಿರಿಮಗ ಯುವ ರಾಜ್‌ಕುಮಾರ್ ಮೋಡಿ ಮಾಡಿದ್ದಾರೆ. ಡ್ಯಾನ್ಸ್, ಫೈಟ್ಸ್ ಮೂಲಕ ಗಮನ ಸೆಳೆದಿದ್ದಾರೆ. ಇದೆಲ್ಲದರ ನಡುವೆ ಪತ್ನಿಯಿಂದ ವಿಚ್ಛೇದನ ಕೋರಿ ಯುವ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಪಡೆಯಲು ಯುವ ರಾಜ್‌ಕುಮಾರ್ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ನಟಿ ಸಪ್ತಮಿ ಗೌಡ ವಿರುದ್ಧ ಶ್ರೀದೇವಿ ಗಂಭಿರ ಆರೋಪ ಮಾಡಿದ್ದಾರೆ. ಶ್ರೀದೇವಿ ನನ್ನ ಹೆಸರನ್ನು ಹಾಳು ಮಾಡುತ್ತಿದ್ದಾರೆ, ನನ್ನ ಚಾರಿತ್ರ್ಯವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಸಪ್ತಮಿ ಗೌಡ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇನ್ನು ಯುವ ರಾಜ್‌ಕುಮಾರ್ ಬಗ್ಗೆ ಸಪ್ತಮಿ ಗೌಡ ಮಾತನಾಡಿರುವ ಹಳೇ ವಿಡಿಯೋವೊಂದು ವೈರಲ್ ಆಗುತ್ತಿದೆ. ಮೊದಲ ಬಾರಿಗೆ ರಾಘಣ್ಣನ ಮನೆಗೆ ಭೇಟಿ ನೀಡಿದ್ದ ಸಂದರ್ಭವನ್ನು ಹಿಂದೆ ಮಿರ್ಚಿ ಕನ್ನಡ ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಸಪ್ತಮಿ ಮಾತನಾಡಿದ್ದರು. ಅಂದು ಯುವ ಮನೆಯಲ್ಲಿ ಏನೆಲ್ಲಾ ನೋಡಿದರು, ಬಳಿಕ ಇಡೀ ದಿನ ಆ ಬಗ್ಗೆ ಎಲ್ಲರ ಬಳಿ ಹೇಳಿಕೊಂಡಿದ್ದಾಗಿ ವಿವರಿಸಿದ್ದರು.
"ಡಾ. ರಾಜ್‌ಕುಮಾರ್ ಹುಟ್ಟುಹಬ್ಬ ಏಪ್ರಿಲ್ 24. ಯುವ ಹುಟ್ಟುಹಬ್ಬ ಏಪ್ರಿಲ್ 23. ಯುವ ಕೂಡ 24ರಂದೇ ಹುಟ್ಟಬೇಕಿತ್ತು ಎಂದು ತಾಯಿ ಮಂಗಳಮ್ಮ ಹೇಳುತ್ತಿರುತ್ತಾರೆ. ಕಳೆದ ವರ್ಷ ಏಪ್ರಿಲ್ 23ರಂದು ನಾನು ಅವರ ಮನೆಗೆ ಭೇಟಿ ನೀಡಿದ್ದೆ. ಅವರ ಮನೆಯ ಮೊದಲ ಮಹಡಿಯಲ್ಲಿ ಸಣ್ಣ ಮ್ಯೂಸಿಯಂ ರೀತಿ ಇದೆ"
"ಆ ಮ್ಯೂಸಿಎಂನಲ್ಲಿ ಅಣ್ಣಾವ್ರು ಬಳಸುತ್ತಿದ್ದ ಸಾಕಷ್ಟು ವಸ್ತುಗಳನ್ನು ಇಟ್ಟಿದ್ದಾರೆ. ಚಿತ್ರೀಕರಣಕ್ಕೆ ಬಳಸಿದ್ದ ಕಿರೀಟ, ಹಾರ್ಮೋನಿಯಂ, ಮೇಕಪ್ ಕಿಟ್, ತೊಡುತ್ತಿದ್ದ ಬಟ್ಟೆ, ಕೊನೆಯದಾಗಿ ಓದಿದ ಪುಸ್ತಕ, ದಾದಾ ಸಾಹೇಬ್ ಪಾಲ್ಕೆ ಅವಾರ್ಡ್, ಪಾಂಡ್ಸ್ ಕ್ರೀಮ್ ಇನ್ನು ಹಾಗೆ ಇದೆ"

"ಇದುವರೆಗೂ ಮಡಚ್ಚಿಟ್ಟ ಅಣ್ಣಾವ್ರ ಬಟ್ಟೆಯನ್ನು ಒಮ್ಮೆಯೂ ಒಗೆದಿಲ್ಲವಂತೆ. ಮಂಗಳಮ್ಮ ಹೇಳುತ್ತಿದ್ದರು, ಅಣ್ಣಾವ್ರ ಮನಸ್ಸು ಎಷ್ಟು ಸ್ವಚ್ಛವಾಗಿತ್ತು ಅಂದ್ರೆ, ಅವರ ಬಟ್ಟೆ ಸಹ ಈವರೆಗೆ ವಾಸನೆ ಬಂದಿಲ್ಲ ಅಂದ್ರು. ಅದನ್ನೆಲ್ಲಾ ಕೈಯಲ್ಲಿ ಹಿಡಿದುಕೊಳ್ಳಲು ಕೊಟ್ಟರು. ನನಗೆ ಬಹಳ ಖುಷಿಯಾಯಿತು. ಇಡೀ ದಿನ ಅದನ್ನೇ ಎಲ್ಲರಿಗೂ ಹೇಳಿಕೊಂಡು ಸುತ್ತಾಡುತ್ತಿದ್ದೆ. ಅದಂತೂ ನಿಜಕ್ಕೂ ಬ್ಯೂಟಿಫುಲ್" ಎಂದು ಸಪ್ತಮಿ ಗೌಡ ಹೇಳಿದ್ದರು.
'ಯುವ' ಬಳಿಕ ಸಪ್ತಮಿ ಗೌಡ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತೆಲುಗಿನ 'ತಮ್ಮುಡು' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ದಿಲ್ ರಾಜು ನಿರ್ಮಾಣದ ಈ ಚಿತ್ರದಲ್ಲಿ ನಿತಿನ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಅಭಿಷೇಕ್ ಅಂಬರೀಶ್ ಜೊತೆ 'ಕಾಳಿ' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಕಾರಣಾಂತರಗಳಿಂದ ಈ ಸಿನಿಮಾ ತಡವಾಗುತ್ತಿದೆ.
'ಪಾಪ್‌ಕಾರ್ನ್ ಮಂಕಿಟೈಗರ್' ಸಿನಿಮಾ ಮೂಲಕ ಸಪ್ತಮಿ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೂವರು ನಾಯಕಿಯರಲ್ಲಿ ಒಬ್ಬರಾಗಿ ಮಿಂಚಿದರು. ಬಳಿಕ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಚಿತ್ರದಲ್ಲಿ ಮೋಡಿ ಮಾಡಿದರು. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದರು. ಅದರ ಬೆನ್ನಲ್ಲೇ ಬಾಲಿವುಡ್‌ನ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ಅವಕಾಶ ಸಿಕ್ಕಿತ್ತು. ಬಳಿಯ 'ಯುವ' ಸಿನಿಮಾದಲ್ಲಿ ನಟಿಸಿದರು.


Click it and Unblock the Notifications











