ಯಾರದ್ದೋ ಮದುವೆಮನೆ ಊಟ ಇಷ್ಟವಾಗಿ ಭಟ್ಟನನ್ನು ಮನೆಗೆ ಕರೆತಂದ ತಲೈವಾ; ಬಳಿಕ ಜೀವಕ್ಕೆ ಆಪತ್ತು ಎದುರಾಗಿತ್ತು!
ನಟ ರಜನಿಕಾಂತ್ ತೆರೆಮೇಲೆ ಮಾತ್ರವಲ್ಲ ತೆರೆ ಹಿಂದೆ ಕೂಡ ತಮ್ಮ ಸ್ಟೈಲ್, ಮಾತು, ಸರಳ ವ್ಯಕ್ತಿತ್ವದಿಂದ ಮೋಡಿ ಮಾಡುತ್ತಾರೆ. ತಲೈವಾ ಮಾತುಗಳನ್ನು ಕೇಳುವುದಕ್ಕೆ ಸಖತ್ ಇಂಟ್ರೆಸ್ಟಿಂಗ್ ಆಗಿರುತ್ತದೆ. ತಮ್ಮ ಜೀವನದ ನೈಜ ಅನುಭವ ಹಾಗೂ ಘಟನೆಗಳನ್ನೇ ಉದಾಹರಣೆಯಾಗಿ ಕೊಟ್ಟು ಪ್ರೇರಣೆ ಆಗುವಂತಹ ಮಾತುಗಳನ್ನು ಆಡುತ್ತಾರೆ.
ಸೂಪರ್ ಸ್ಟಾರ್ ರಜನಿಕಾಂತ್‌ಗೆ ಒಳ್ಳೆ ಹಾಸ್ಯಪ್ರಜ್ಞೆಯಿದೆ. ತಮ್ಮ ನೋವಿನ ದಿನಗಳನ್ನು ಕೂಡ ರಜನಿಕಾಂತ್ ಹಾಸ್ಯದ ಲೇಪದೊಂದಿಗೆ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಇದೇ ಕಾರಣಕ್ಕೆ ರಜನಿಕಾಂತ್ ತಮ್ಮ ಭಾಷಣಗಳಿಂದ ಸದಾ ಸೆಳೆಯುತ್ತಾರೆ. ರಜನಿಕಾಂತ್ ಅವರನ್ನು ಸಿನಿಮಾ ಕಾರ್ಯಕ್ರಮ ಬಿಟ್ಟು ಬೇರೆ ಸಭೆ ಸಮಾರಂಭಗಳಿಗೆ ಆಹ್ವಾನಿಸಲಾಗುತ್ತದೆ.

ಮುಖ್ಯವಾಗಿ ಆಸ್ಪತ್ರೆ ಉದ್ಘಾಟನೆ ರೀತಿಯ ಕಾರ್ಯಕ್ರಮಗಳಿಗೆ ಆಪ್ತರು ಹೆಚ್ಚು ಕರೆಯುತ್ತಾರೆ. ಈ ವೇಳೆ ತಮ್ಮ ಆರೋಗ್ಯದ ಬಗ್ಗೆ ಮಾತನಾಡುತ್ತಾ ಧೂಮಪಾ, ಮದ್ಯಪಾನದ ಅಪಾಯದ ಬಗ್ಗೆಯೂ ಸೂಪರ್ ಸ್ಟಾರ್ ಮಾತನಾಡುತ್ತಾರೆ. ನಾನು ಮಾಡಿದ ತಪ್ಪನ್ನು ಯಾರು ಮಾಡಬೇಡಿ ಎಂದು ಸಲಹೆ ಕೊಡುತ್ತಿರುತ್ತಾರೆ. ಹಿಂದೆ ಗಂಭೀರ ಆರೋಗ್ಯ ಸಮಸ್ಯೆಯಿಂದ ರಜನಿಕಾಂತ್ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದು ಬಂದಿದ್ದರು.
2011ರಲ್ಲಿ ನಟ ರಜನಿಕಾಂತ್ ಅವರಿಗೆ ಸಿಂಗಾಪುರದಲ್ಲಿ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ಶ್ವಾಸಕೋಶದಲ್ಲಿ ಹೆಚ್ಚುವರಿಯಾಗಿ ಶೇಖರಣೆ ಆಗಿದ್ದ ನೀರನ್ನು ಈ ವೇಳೆ ತೆಗೆಯಲಾಗಿತ್ತು. ನ್ಯುಮೋನಿಯಾ, ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದಲೂ ತಲೈವಾ ಬಳಲಿದ್ದರು. ಬಳಿಕ ಚೇತರಿಸಿಕೊಂಡಿದ್ದರು. ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು. ಕೆಲ ದಿನಗಳ ಹಿಂದೆ ರಾಜಕೀಯರಂಗ ಪ್ರವೇಶಕ್ಕೆ ತಲೈವಾ ಮುಂದಾಗಿದ್ದಾರೆ. ಕೊನೆಗೆ ಆರೋಗ್ಯ ಸಮಸ್ಯೆ ಕಾರಣವೊಡ್ಡಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.

ಉಪ್ಪಿಗಿಂತ ರುಚಿ ಬೇರೆಯಿಲ್ಲ ಎನ್ನುವ ಮಾತಿದೆ. ಆದರೆ ಅದು ಅತಿಯಾದರೆ ಪ್ರಾಣಕ್ಕೆ ಸಂಚಕಾರ. ಉಪ್ಪನ್ನು ಕಡಿಮೆ ಬಳಸುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವೊಂದರಲ್ಲಿ ವರ್ಷದ ಹಿಂದೆ ರಜನಿಕಾಂತ್ ಭಾಗಿ ಆಗಿದ್ದರು. ಸೇಪಿಯನ್ಸ್ ಹೆಲ್ತ್ ಫೌಂಡೇಶನ್ ಸಿಲ್ವರ್ ಜುಬಿಲಿ ಕಾರ್ಯಕ್ರಮ ಆಯೋಜಿಸಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಹಾಜರಾಗಿ ಉಪ್ಪಿ ಬಳಕೆ ಬಗ್ಗೆ ಮಾತನಾಡಿದ್ದರು. ತಮ್ಮ ಮನೆಯಲ್ಲೇ ನಡೆದ ಸಂಗತಿಯನ್ನು ಕಿವಿ ಮಾತು ಹೇಳಿದ್ದರು. ಆ ವಿಡಿಯೋ ಈಗ ವೈರಲ್ ಆಗ್ತಿದೆ.
ರಜನಿಕಾಂತ್ ಮಾತನಾಡಿ "ನನ್ನ ಜೀವನದ ಅನುಭವವನ್ನೇ ಹೇಳಿತ್ತೇನೆ. ಹೆಚ್ಚು ಆಲ್ಕೊಹಾಲ್ ಸೇವಿಸಿದರೆ ಲಿವರ್ ಸಮಸ್ಯೆ ಎದುರಾಗುತ್ತದೆ. ಹೆಚ್ಚು ಸಿಗರೇಟ್ ಸೇದಿದರೆ ಶ್ವಾಸಕೋಶಕ್ಕೆ ತೊಂದರೆ ಆಗುತ್ತದೆ. ಎಣ್ಣೆ, ಕೊಬ್ಬಿನ ಪದಾರ್ಥಗಳನ್ನು ಸೇವಿಸಿದರೆ ಹೃದಯಕ್ಕೆ ಸಮಸ್ಯೆ ಎದುರಾಗಬಹುದು. ಆದರೆ ಉಪ್ಪು ಆ ರೀತಿ ಅಲ್ಲ. ಉಪ್ಪು ಹೆಚ್ಚಾದರೆ ಎಲ್ಲಾ ಅಂಗಗಳಿಗೂ ತೊಂದರೆ ಆಗುತ್ತದೆ" ಎಂದು ರಜನಿಕಾಂತ್ ಹೇಳಿದ್ದರು.
"ಅಡುಗೆಗೆ ಮಸಾಲೆ, ಕಾರ ಅದು ಇದು ಏನೇ ಹಾಕಿದರೂ ಉಪ್ಪು ಹಾಕಿದರೆ ಅದೆಲ್ಲಾ ಹೋಗಿ ಉಪ್ಪು ಮಾತ್ರ, ಗೊತ್ತಾಗುತ್ತದೆ. ಒಮ್ಮೆ ನಮ್ಮ ಪತ್ನಿ ಒಂದು ಮದುವೆ ಸಮಾರಂಭಕ್ಕೆ ಹೋಗಿದ್ದರು. ಮದುವೆ ಊಟ ಸೂಪರ್ ಆಗಿ ಇತ್ತಂತೆ. ಯಾರು ಅಡುಗೆ ಮಾಡಿದ್ದು ಎಂದು ಕೇಳಿದ್ದಾಗ ನಾರಾಯಣ ಅಂತ ಅಡುಗೆ ಭಟ್ಟರನ್ನು ಪರಿಚಯಿಸಿದ್ದಾರೆ. ಆಗ ನಮ್ಮ ಮನೆಯಲ್ಲಿ ಅಡುಗೆ ಭಟ್ಟ ಇರಲಿಲ್ಲ. ಇದ್ದವರು ಕೆಲಸ ಬಿಟ್ಟಿದ್ದರು. ನಮ್ಮ ಮನೆಗೆ ಅಡುವೆ ಭಟ್ಟರಾಗಿ ಬರ್ತೀರಾ ಎಂದು ಕೇಳಿ ಅವರನ್ನು ಕರ್ಕೊಂಡ್ ಬಂದಿದ್ದರು"
"ಸರಿ ಆ ಭಟ್ಟರು ಮನೆಗೆ ಬಂದರು. ಸಖತ್ತಾಗಿ ಅಡುಗೆ ಮಾಡುತ್ತಿದ್ದರು. ಟೇಸ್ಟ್ ಚೆನ್ನಾಗಿತ್ತು. ಹೀಗೆ ತಿನ್ನುತ್ತಿದ್ದೆವು. ಆದರೆ ನನಗೂ ನಮ್ಮ ಪತ್ನಿಗೂ ಬಿಪಿ ಏರುತ್ತಾ ಹೋಯಿತು. ವೈದ್ಯರು ಎಲ್ಲಾ ಪರೀಕ್ಷೆ ಮಾಡಿದರೂ ಆದರೂ ಬಿಪಿ ಹೆಚ್ಚಾಗುತ್ತಲೇ ಇತ್ತು. ಬಳಿಕ ಒಮ್ಮೆ ನಮ್ಮ ಸ್ನೇಹಿತರೊಬ್ಬರು ಮನೆಗೆ ಊಟಕ್ಕೆ ಕರೆದಿದ್ದೆ"
"ಆತ ಬರುವ ಮುನ್ನ ಸಾಕಷ್ಟು ಜನ ನಮ್ಮ ಮನೆಯಲ್ಲಿ ಊಟ ಮಾಡಿದ್ದರು. ಆದರೆ ಯಾರು ಕೂಡ ಉಪ್ಪು ಜಾಸ್ತಿ, ಎಣ್ಣೆ ಜಾಸ್ತಿ ಎಂದು ಹೇಳುವ ಧೈರ್ಯ ಮಾಡಿರಲಿಲ್ಲ. ಸಂತೋಷವಾಗಿ ಚೆನ್ನಾಗಿದೆ ಚೆನ್ನಾಗಿದೆ ಎಂದಿದ್ದರು. ಆದರೆ ನನ್ನ ಆತ್ಮೀಯ ಸ್ನೇಹಿತ ಮುಖಕ್ಕೆ ಹೊಡೆದಂತೆ ಏನೋ ಎಷ್ಟು ಉಪ್ಪು ಇದೆ. ಇಷ್ಟೊಂದು ಎಣ್ಣೆ ಇದೆ. ಹೇಗೆ ತಿಂತೀಯಾ ಎಂದ. ನಾವು ಅದೇ ಊಟವನ್ನು ವರ್ಷಗಳ ಕಾಲ ತಿನ್ನುತ್ತಿದ್ದೆವು. ಬಳಿಕ ಆ ಅಡುಗೆ ಭಟ್ಟರನ್ನು ಬದಲಾಯಿಸಿದ ಮೇಲೆ ನಮ್ಮ ಬಿಪಿ ಕಮ್ಮಿ ಆಗಿತ್ತು" ಎಂದು ರಜನಿಕಾಂತ್ ಹೇಳಿದ್ದರು. ತಮಾಷೆಯಾಗಿಯೇ ಆ ಘಟನೆ ಮೂಲಕ ಉಪ್ಪಿನ ಬಳಕೆ ಬಗ್ಗೆ ಸಲಹೆ ನೀಡಿದ್ದರು.
ಸದ್ಯ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 'ಕೂಲಿ' ಎನ್ನುವ ಮತ್ತೊಂದು ಚಿತ್ರದಲ್ಲಿ ತಲೈವಾ ನಟಿಸುತ್ತಿದ್ದಾರೆ. ಮತ್ತಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಕಳೆದ ವರ್ಷ ತಲೈವಾ ನಟಿಸಿದ 'ಜೈಲರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಚಿತ್ರದ ಸೀಕ್ವೆಲ್ ಬಗ್ಗೆಯೂ ಚರ್ಚೆ ನಡೀತಿದೆ.


Click it and Unblock the Notifications











