ಚಿಕ್ಕಂದಿನಲ್ಲಿ ಯಶ್‌ಗೆ ಅಪ್ಪ ಅಂದ್ರೆ ಟೈಗರ್; ಅವತ್ತು ಅಪ್ಪನ ಕೈಲಿ ಲಾಠಿ ಏಟು ತಿಂದಿದ್ಯಾಕೆ?
ಊರಿಗೇ ರಾಜನಾದರೂ, ತಂದೆ-ತಾಯಿಗೆ ಮಗನೇ ಎನ್ನುತ್ತಾರೆ. ಮಕ್ಕಳಿಕೆ ಆಟ, ಪಾಠ. ಪೋಷಕರಿಗೆ ಮಕ್ಕಳು ದಾರಿ ತಪ್ಪಿಬಿಡುತ್ತಾರೆ ಎನ್ನುವ ಭಯ. ನಟ ಯಶ್ ಇವತ್ತು ರಾಕಿಂಗ್ ಸ್ಟಾರ್ ಆಗಿ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬಂದ ಈ 16 ವರ್ಷದಲ್ಲಿ ಯಶ್ ಸಾಧನೆ ಎಲ್ಲರಿಗೂ ಮಾದರಿ.
ಏನಾದರೂ ಸಾಧಿಸಬೇಕು ಎನ್ನುವ ಛಲ, ದೊಡ್ಡ ದೊಡ್ಡ ಕನಸು ಕಾಣಬೇಕು, ಅದನ್ನು ನನಸು ಮಾಡಿಕೊಳ್ಳಲು ಪರಿಶ್ರಮ ಅಗತ್ಯ ಎಂದು ನಂಬಿದವರು ಯಶ್. ಹಾಸನದ ಹುಟ್ಟಿದ ನವೀನ್ ಕುಮಾರ್ ಗೌಡ ಮುಂದೆ ಮಂಡ್ಯದಲ್ಲಿ ಓದಿ ಬೆಳೆದು ಚಿತ್ರರಂಗಕ್ಕೆ ಬಂದು ಹೀರೊ ಆದವರು. ಚಿಕ್ಕಂದಿನಲ್ಲಿ ಎಲ್ಲಾ ಮಕ್ಕಳಂತೆ ಆಟ ಆಡುವುದು, ತಂದೆಯಿಂದ ಬೈಸಿಕೊಳ್ಳುವುದು, ಒದೆ ತಿಂದಿದ್ದಾರೆ.

ವೀಕೆಂಡ್ ವಿತ್ ರಮೇಶ್ ಶೋನಲ್ಲಿ ನಟ ಯಶ್ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದರು. ವೇದಿಕೆಗೆ ಬಂದಿದ್ದ ತಂದೆ ಅರುಣ್ ಕುಮಾರ್, ತಾಯಿ ಪುಷ್ಪಾ ಮಗನ ಬಾಲ್ಯದ ದಿನಗಳ ಬಗ್ಗೆ ಸಾಕಷ್ಟು ಸಂಗತಿಯನ್ನು ಹಂಚಿಕೊಂಡಿದ್ದರು. ಒಮ್ಮೆ ಲಾಠಿ ಏಟು ಕೂಡ ಬಿದ್ದಿತ್ತಂತೆ. ಯಶ್ ತಂದೆ ಬಸ್ ಡ್ರೈವರ್. ಆದರೆ ಲಾಠಿ ಏಟು ಯಾಕೆ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಅದನ್ನು ಯಶ್ ವಿವರಿಸಿದ್ದರು.
"ನಮ್ಮ ತಂದೆ ಬಸ್ ಡ್ರೈವರ್ ಆಗಿದ್ದವರು. ಬಸ್ ಅಲ್ಲಿ ಸಾಮಾನ್ಯವಾಗಿ ಪ್ರಯಾಣಿಕರು ಯಾವುದಾದರೂ ವಸ್ತುಗಳನ್ನು ಮರೆತು ಬಿಟ್ಟು ಹೋಗುತ್ತಿದ್ದರು. ಒಮ್ಮೆ ಯಾರೋ ಲಾಠಿ ಮರೆತು ಹೋಗಿದ್ದರಂತೆ. ಅದನ್ನು ಮನೆಗೆ ತಂದಿಟ್ಟಿದ್ದರು. ಅವತ್ತು ನಾನು ಗೋಲಿ ಆಡೋಕೆ ಹೋಗಿದ್ದೆ. ಚೆನ್ನಾಗಿ ಗೋಲಿ ಆಡಿ ಜೇಬಿನ ತುಂಬಾ ತುಂಬಿಕೊಂಡು ಆಡುತ್ತಿದ್ದೆ. ನಾನು ಕುಳಿತು ಆಡುತ್ತಿದ್ದಾಗ ಹಿಂದಿನಿಂದ ಯಾರೋ ತಲೆಗೆ ಹೊಡೆದರು. ಯಾರೋ ಅದು ಅಂತ ತಿರುಗಿದರೆ ನಮ್ಮಪ್ಪ"

"ಕೂಡಲೇ ಅಲ್ಲಿಂದ ನನ್ನನ್ನು ಮನೆಗೆ ಕರೆದುಕೊಂಡು ಹೋದರು. ಮನೆಯಲ್ಲಿ ಲಾಠಿಯಲ್ಲಿ ಚೆನ್ನಾಗಿ ಹೊಡೆದರು. ಯಾವಾಗಲೂ ಅಪ್ಪ ಹೊಡೆಯುವಾಗ ಅಮ್ಮ ಅಡ್ಡ ಬಂದು ಸಮಾಧಾನ ಮಾಡುತ್ತಿದ್ದರು. ಅವತ್ತು ನನ್ನ ಬ್ಯಾಡ್‌ಲಕ್. ಅಮ್ಮ ಮನೆಯಲ್ಲಿ ಇರಲಿಲ್ಲ. ಚೆನ್ನಾಗಿ ಒದೆ ತಿಂದೆ. ಕೊನೆಗೆ ಅಮ್ಮ ಬಂದು ಸೆಂಟಿಮೆಂಟ್ ಸೀನ್ ಕ್ರಿಯೇಟ್ ಆಗಿ ಸಮಾಧಾನ ಮಾಡಿ ಆ ಲಾಠಿ ಮುರಿದು ಹಾಕಿದರು" ಎಂದು ಆ ದಿನವನ್ನು ಯಶ್ ವಿವರಿಸಿದ್ದರು.
"ನಮ್ಮಪ್ಪ ಅಂದ್ರೆ ಆಗ ಟೈಗರ್. ಅಷ್ಟು ಖಡಕ್ ಆಗಿದ್ದರು. ನಾನು ಮಾತ್ರವಲ್ಲ ನಮ್ಮ ಸ್ನೇಹಿತರು ಅವರನ್ನು ನೋಡಿದರೆ ಹೆದರುತ್ತಿದ್ದರು. ನಾವು ಆಡುವಾಗ ನಮ್ಮಪ್ಪ ಬಂದ್ರೆ, ಟೈಗರ್ ಬಂದ್ರು ಅಂತ ಎಲ್ಲರೂ ಓಡಿ ಹೋಗುತ್ತಿದ್ದರು. ಅಷ್ಟು ಕಟ್ಟುನಿಟ್ಟಾಗಿದ್ದ ಅಪ್ಪ, ನಾನು ಪಿಯುಸಿಗೆ ಬರುವ ವೇಳೆಗೆ ಸ್ನೇಹಿತನಂತೆ ಆಗಿಬಿಟ್ಟರು. ಇವತ್ತಿಗೂ ಅದು ಆಶ್ಚರ್ಯ. ನಮ್ಮ ಸ್ನೇಹಿತರಿಗೂ ಅಷ್ಟೆ" ಎಂದು ಯಶ್ ಹೇಳಿಕೊಂಡಿದ್ದರು.
ಚಿಕ್ಕಂದಿನಿಂದಲೂ ಹೀರೊ ಆಗಬೇಕು ಎನ್ನುವುದು ಯಶ್ ಕನಸಾಗಿತ್ತು. ತಂದೆಗೆ ಮಗನನ್ನು ಏನಾದರೂ ಅಧಿಕಾರಿ ಮಾಡಬೇಕು ಎನ್ನುವ ಆಸೆ ಇತ್ತು. ಆದರೆ ನವೀನ್ ಕುಮಾರ್ ಗೌಡ ಚಿತ್ರರಂಗದಲ್ಲಿ ಸಾಧಿಸಬೇಕು ಎನ್ನುವುದು ಮೊದಲೇ ನಿರ್ಧಾರವಾಗಿತ್ತು ಎನಿಸುತ್ತದೆ. ಅದರಿಂದ ಹಂತ ಹಂತವಾಗಿ ಬೆಳೆದು ಬಂದು ಮುಂದೆ ಹೀರೊ ಆಗಿದ್ದರು. ಯಶ್ ಹೀರೊ ಆಗಿ ನಟಿಸಿದ 'ಮೊಗ್ಗಿನ ಮೊನಸು' ಸಿನಿಮಾ ತೆರೆಕಂಡು 16 ವರ್ಷ ಪೂರೈಸಿದೆ.


Click it and Unblock the Notifications











