ಕನ್ನಡಿಗರು 'ಚಪ್ಪಾಳೆ' ತಟ್ಟಿ ಸ್ವಾಗತಿಸಿದ್ದ ಈ ನಟಿ ಕಣ್ಮರೆಯಾಗಿದ್ದೇಕೆ..? ಎಲ್ಲಿದ್ದಾರೆ, ಹೇಗಿದ್ದಾರೆ 'ಜೂಟಾಟ' ನಾಯಕಿ..?
ಈ ಅದೃಷ್ಟ ಅನ್ನುವುದೇ ಹಾಗೇ .. ಒಲಿದರೆ ಕಸದಲ್ಲಿಯೂ ವಜ್ರ ಸಿಗುತ್ತೆ. ಕೈ ಕೊಟ್ಟರೆ ಹಗ್ಗವು ಹಾವಾಗುತ್ತೆ. ಇನ್ನೂ ಬಣ್ಣದ ಲೋಕದಲ್ಲಿ ಅದೃಷ್ಟದ ಈ ಹಾವು ಏಣಿಯಾಟದಲ್ಲಿ ಯಾರು, ಯಾವಾಗ, ಎಲ್ಲಿ ತಲುಪುತ್ತಾರೆ ಎಂದು ಹೇಳುವುದು ಕಷ್ಟ. ಮೆರೆದಾಡಿ ಯಾವಾಗ ಕಣ್ಮರೆಯಾಗ್ತಾರೆ ಎಂದು ಭವಿಷ್ಯ ಹೇಳುವುದು ಕಷ್ಟ. ಇದಕ್ಕೆ ಇನ್ನೊಂದು ಉದಾಹರಣೆ ರಿಚಾ ಪಲ್ಲೋಡ್.
ಹೌದು, ರಿಚಾ ಪಲ್ಲೋಡ್.. ತೆಲುಗು ಸಿನಿರಸಿಕರ ಪಾಲಿನ ನೆಚ್ಚಿನ ಮಧು. ನುವ್ವೇ ಕಾವಾಲಿಯ ಮೂಲಕ ಆ ಕಾಲಕ್ಕೆ ಆಂಧ್ರದ ಹೃದಯ ಗೆದ್ದವರು ಇವರು. ಇನ್ನೂ ಇದೇ ರಿಚಾ ಬಚ್ಚಿಕೋ ನಿನ್ನಲ್ಲಿ.. ನಿನ್ನ ಎದೆ ಗೂಡಲ್ಲಿ.. ಎಂದು ಕನ್ನಡದಲ್ಲಿ ಹಾಡು ಹಾಡಿ ಕುಣಿದಾಗ ಕನ್ನಡಿಗರು ಚಪ್ಪಾಳೆ ತಟ್ಟಿ ಸ್ವಾಗತ ಕೋರಿದರು. ಮನೆ ಮಗಳಷ್ಟೇ ಪ್ರಧಾನ್ಯತೆಯನ್ನೂ ಕೊಟ್ಟರು. ಆದರೆ ರಿಚಾ ಜೂಟಾಟ ಆಡಿ ಕನ್ನಡ ಚಿತ್ರರಂಗದಿಂದ ಕಾಣೆಯಾದರು.

ಆದರೆ, ಕನ್ನಡ ಚಿತ್ರರಂಗ ರಿಚಾ ಹೆಸರಿನಲ್ಲಿ ಕಾಣೆಯಾದವರ ಬಗ್ಗೆ ಪ್ರಕಟಣೆ ಹೊರಡಿಸಲಿಲ್ಲ. ಯಾಕೆಂದರೆ.. ರಿಚಾ ಬಿಟ್ಟು ಹೋದ ಜಾಗವನ್ನ ಬೇರೆ ಅವರು ಆಕ್ರಮಿಸಿಕೊಂಡಿದ್ದರು. ವಿಪರ್ಯಾಸ ಹೆಚ್ಚಿನ ಬೆಲ್ಲಕ್ಕೆ ಆಸೆ ಬಿದ್ದು ಬೆಲೆ ಕೊಡ್ತಿದ್ದ ಮನೆಯನ್ನ ಬಿಟ್ಟು ಹೋದ ರಿಚಾ, ಆ ನಂತರ ಅಲ್ಲಿಯೂ ಉಳಿಯಲಿಲ್ಲ. ಮರಳಿ ಇಲ್ಲಿಯೂ ಬರಲಿಲ್ಲ. ಬದಲಿಗೆ 2011ರಲ್ಲಿ ಹಿಮಾಂಶು ಬಜಾಜ್ ಜೊತೆ ಸಪ್ತಪದಿಯನ್ನ ತುಳಿದರು.
ಇಂಥ ರಿಚಾ ಸದ್ಯಕ್ಕೆ ಮನೆ.. ಗಂಡ.. ಮಗ.. ಸಂಸಾರ ಎಂದು ತಮ್ಮ ಬದುಕಿನಲ್ಲಿ ನೆಮ್ಮದಿಯಾಗಿದ್ದಾರೆ. ಬಣ್ಣದ ಮೇಲಿನ ವ್ಯಾಮೋಹ ಇನ್ನೂ ಹಾಗೇ ಇರುವುದಕ್ಕೆ ರೀಲ್ಸ್ ಮಾಡುವ ಹವ್ಯಾಸವನ್ನ ಬೆಳೆಸಿಕೊಂಡಿದ್ದಾರೆ.
ಇನ್ನೂ ರಿಚಾಗೆ ಈಗ 43ರ ಪ್ರಾಯ. ಸಹಜವಾಗಿ ರೂಪ ಬದಲಾಗಿದೆ. ಆಗ ತನ್ನ ಅಭಿನಯದಿಂದ..ಅಂದ ಚೆಂದದಿಂದ.. ಮೋಡಿ ಮಾಡಿದ್ದ ರಿಚಾ ಬೇರೆ. ಕಾಲದ ಜೊತೆ ಹೆಜ್ಜೆ ಹಾಕಿ ಬದಲಾದ ಈ ರಿಚಾ ಬೇರೆ. ಈ ಕಾರಣಕ್ಕೆ .. ರಿಚಾ ಎದುರು ಬಂದರು ಗುರುತು ಹಿಡಿಯುವುದು ಕಷ್ಟ.

ಸದ್ಯಕ್ಕೆ ರಿಚಾ ಇನ್ಸ್ಟಾ ಗ್ರಾಂನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ತಮ್ಮ ದಿನನಿತ್ಯದ ದಿನಚರಿಯನ್ನ ಅಪ್ ಡೇಟ್ ಮಾಡ್ತಿರ್ತಾರೆ. ಆಗಾಗ ಹಳೆಯ ದಿನಗಳನ್ನೂ ನೆನಪು ಮಾಡಿಕೊಳ್ಳುತ್ತಿರುತ್ತಾರೆ ರಿಚಾ ಪಲ್ಲೋಡ್,
ಒಟ್ನಲ್ಲಿ ನಾಯಕಿಯರಿಗೆ ಬಣ್ಣದ ಲೋಕದಲ್ಲಿ ಆಯಸ್ಸು ಕಡಿಮೆ ಅನ್ನುವ ಮಾತು, ಅನೇಕ ನಾಯಕಿಯರ ವಿಚಾರದಲ್ಲಿ ನಿಜವಾಗಿದೆ. ಅವರಿಗೆ ಇದ್ದ ಜವಾಬ್ದಾರಿನಾ ಅಥವಾ ಅವಕಾಶಗಳ ಕೊರತೆನಾ.. ಅನೇಕರನ್ನ ಬಣ್ಣದ ಲೋಕ ತನ್ನಿಂದ ದೂರ ಮಾಡಿದೆ. ರಿಚಾ ಪಲ್ಲೋಡ್ ಇದಕ್ಕೆ ಮತ್ತೊಂದು ಉದಾಹರಣೆ


Click it and Unblock the Notifications











