'ನವಗ್ರಹ' ಕ್ಲೈಮ್ಯಾಕ್ಸ್‌ನಲ್ಲಿ ಏನೋ ಹೇಳ್ದೆ, ಏನೋ ಅರ್ಥ ಮಾಡ್ಕೊಂಡ್ಬಿಟ್ರು, ಸೀಕ್ವೆಲ್ ಬಗ್ಗೆ ಹೀಗ್ಯಾಕಂದ್ರು ದಿನಕರ್?
ಚಿತ್ರರಂಗದಲ್ಲೀಗ ಸೀಕ್ವೆಲ್ ಟ್ರೆಂಡ್ ಜೋರಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಸಾಧ್ಯವಾದಷ್ಟು ಎರಡೆರಡು ಭಾಗಗಳಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಹಳೇ ಸೂಪರ್ ಹಿಟ್ ಸಿನಿಮಾಗಳ ಕಥೆಯನ್ನು ಮುಂದುವರೆಸಿ ಹೊಸ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ದಿನಕರ್ ನಿರ್ದೇಶನದ 'ನವಗ್ರಹ' ಚಿತ್ರ ದಶಕದ ಹಿಂದೆ ಸೂಪರ್ ಹಿಟ್ ಆಗಿತ್ತು. ಸೀಕ್ವೆಲ್ ಮಾಡುವಂತೆ ಫ್ಯಾನ್ಸ್ ಕೇಳುತ್ತಲೇ ಇದ್ದಾರೆ.
ಆಕ್ಷನ್ ಥ್ರಿಲ್ಲರ್ 'ನವಗ್ರಹ' ಸಿನಿಮಾ 2008ರಲ್ಲಿ ಬಿಡುಗಡೆ ಆಗಿತ್ತು. ದರ್ಶನ್ ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಿ ನಟಿಸಿದ್ದರು. ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಮಕ್ಕಳು ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ತೂಗುದೀಪ ಶ್ರೀನಿವಾಸ್ ಮಗ ದರ್ಶನ್, ಟೈಗರ್ ಪ್ರಭಾಕರ್ ಮಗ ವಿನೋದ್, ಸುಧೀರ್ ಮಗ ತರುಣ್, ಸುಂದರ್‌ಕೃಷ್ಣ ಅರಸ್ ಮಗ ನಾಗೇಂದ್ರ, ಲೋಕೇಶ್ ಮಗ ಸೃಜನ್, ದಿನೇಶ್ ಮಗ ಗಿರಿ ಹಾಗೂ ಕೀರ್ತಿರಾಜ್ ಪುತ್ರ ಧರ್ಮ ನಟಿಸಿದ್ದರು.

ವಿ. ಹರಿಕೃಷ್ಣ ಸಂಗೀತದಲ್ಲಿ 'ನವಗ್ರಹ' ಆಲ್ಬಮ್ ಹಿಟ್ ಆಗಿ ಚಿತ್ರಕ್ಕೆ ಪ್ಲಸ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ಚಿತ್ರ ದೊಡ್ಡಮಟ್ಟದಲ್ಲಿ ಗೆಲ್ಲದಿದ್ದರೂ ವಿಭಿನ್ನ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇವತ್ತಿಗೂ ದರ್ಶನ್ ಅಭಿಮಾನಿಗಳ ನೆಚ್ಚಿನ ಸಿನಿಮಾಗಳ ಲಿಸ್ಟ್‌ನಲ್ಲಿ ಇದೂ ಒಂದು. ಹಣಕ್ಕಾಗಿ ಮೈಸೂರಿನ ಅಂಬಾರಿಯನ್ನು ಕದಿಯಲು ಹೊಂಚು ಹಾಕುವ ಒಂದು ತಂಡ, ಅವರ ಪ್ರಯತ್ನ ಸಫಲ ಆಯ್ತಾ? ಇಲ್ವಾ? ಎನ್ನುವುದು ಸಿನಿಮಾ ಕಥೆ.
'ನವಗ್ರಹ' ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ವರ್ಷಾ ಸಹ ನಟಿಸಿದ್ದರು. ಕಳ್ಳತನದ ಕಥೆಯಲ್ಲಿ ಸಣ್ಣ ಲವ್ ಸ್ಟೋರಿಯನ್ನು ಹೇಳಲಾಗಿತ್ತು. ಇನ್ನು ಸೀಕ್ವೆಲ್ ಬಗ್ಗೆ ಬಹಳ ದಿನಗಳಿಂದ ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ದಿನಕರ್ ಕೂಡ ಒಳ್ಳೆ ಕಥೆ ಸಿಕ್ಕರೆ ಕಂಡಿತ ಮಾಡ್ತೀನಿ ಎಂದು ಹೇಳುತ್ತಾ ಬರ್ತಿದ್ದಾರೆ. ಆದರೆ ನಟ ದರ್ಶನ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಮಗೆ ಸೀಕ್ವೆಲ್ ಸಿನಿಮಾಗಳ ಬಗ್ಗೆ ಆಸಕ್ತಿ ಇಲ್ಲ ಎಂದಿದ್ದರು.

ಅಭಿಮಾನಿಗಳು ಮಾತ್ರ 'ನವಗ್ರಹ'-2 ಬಗ್ಗೆ ಪದೇ ಪದೆ ಕೇಳುತ್ತಲೇ ಇರುತ್ತಾರೆ. ಕ್ಲೈಮ್ಯಾಕ್ಸ್ ನೋಡಿದಾಗಲೇ ಸೀಕ್ವೆಲ್ ಬರುತ್ತದೆ ಎಂದು ಸಾಕಷ್ಟು ಜನ ಅಂದುಕೊಂಡಿದ್ದರು. ಆದರೆ ಸಿನಿಮಾ ಮಾಡುವಾಗ ತಮಗೆ ಪಾರ್ಟ್-2 ಮಾಡುವ ಆಲೋಚನೆ ಇರಲಿಲ್ಲ. ಆ ರೀತಿ ಕ್ಲೈಮ್ಯಾಕ್ಸ್‌ನಲ್ಲಿ ತೋರಿಸುವುದಕ್ಕೆ ಕಾರಣ ಬೇರೆನೆ ಇತ್ತು. ಜನ ಅದನ್ನು ಸೀಕ್ವೆಲ್ ಬರುತ್ತದೆ ಎಂದು ಅರ್ಥಮಾಡಿಕೊಂಡಿದ್ದರು. ಅದಕ್ಕಾಗಿ ಈಗ ಸೀಕ್ವೆಲ್ ಬಗ್ಗೆ ಯೋಚಿಸುವಂತಾಗಿದೆ ಎಂದು ದಿನಕರ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲರೂ ಸತ್ತು ಎಲ್ಲವೂ ಮುಗಿದ ಮೇಲೆ ಜಗ್ಗು(ದರ್ಶನ್) ಕಣ್ಣು ಬಿಡುವ ದೃಶ್ಯ ಇದೆ. ಆ ಶಾಟ್ ತೆಗೆಯಲು ಕಾರಣ ಏನಂದ್ರೆ, ಪ್ರಪಂಚದಲ್ಲಿ ಒಳ್ಳೆಯದು ಎಲ್ಲಿಯವರೆಗೂ ಇರುತ್ತೋ ಅಲ್ಲಿಯವರೆಗೆ ಕೆಟ್ಟದು ಇರುತ್ತದೆ. ಎಲ್ಲರೂ ಸತ್ತರೂ ಕೆಟ್ಟ ಕ್ಯಾರೆಕ್ಟರ್ ದರ್ಶನ್‌ದು ಅದು ಇನ್ನು ಸತ್ತಿಲ್ಲ ಎನ್ನುವುದನ್ನು ತೋರಿಸಬೇಕು ಎಂದುಕೊಂಡೆ. ಆದರೆ ಜನ ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡರು. ದರ್ಶನ್ ಕಣ್ಣು ಬಿಟ್ಟಿದ್ದಾರೆ ಪಾರ್ಟ್-2 ಬರುತ್ತೆ ಅಂತ. ಆ ಪಾಯಿಂಟ್ ಇಟ್ಕೊಂಡು ನಾನು ಸೀಕ್ವೆಲ್ ಬಗ್ಗೆ ಯೋಚಿಸುವಂತಾಗಿದೆ ಎಂದು ದಿನಕರ್ ಹೇಳಿದ್ದರು.
'ಜೊತೆ ಜೊತೆಯಲಿ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ದಿನಕರ್ ಬಳಿಕ 'ನವಗ್ರಹ' ಚಿತ್ರ ಕಟ್ಟಿಕೊಟ್ಟಿದ್ದರು. ಬಳಿಕ 'ಸಾರಥಿ' ಹಾಗೂ 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರಗಳನ್ನು ನಿರ್ದೇಶಿಸಿ ಗೆದ್ದರು. ಸದ್ಯ 'ರಾಯಲ್' ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆದರೆ 'ನವಗ್ರಹ'-2 ಯಾವಾಗ ಬರುತ್ತದೆ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ.


Click it and Unblock the Notifications











