For Quick Alerts
  ALLOW NOTIFICATIONS  
  For Daily Alerts

  ಮರೆಯಬಾರದ ಸಿನಿಮಾ ಗಾರುಡಿಗ ಅಕಿರಾ ಕುರೊಸೋವಾ ನೆನಪು

  By ಫಿಲ್ಮಿಬೀಟ್ ಡೆಸ್ಕ್
  |

  ವಿಶ್ವಶ್ರೇಷ್ಟ್ರ ಸಿನಿಮಾ ನಿರ್ದೇಶಕ ಅಕಿರಾ ಕುರೊಸೋವಾ ವ್ಯಕ್ತಿತ್ವ, ಅವರ ಸಿನಿಮಾ ಶೈಲಿಯನ್ನು ಕೆಲವು ನೂರು-ಸಾವಿರ ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ಕುರುಡನೊಬ್ಬ ಆನೆಯನ್ನು ವರ್ಣಿಸಿದಂತಾಗುತ್ತದೆ ಅದು.

  ಅಕಿರಾ ಕುರೊಸೋವಾ ಕುರಿತು ಮಾತನಾಡದ ಸಿನಿಮಾ ಶಾಲೆಗಳಿಲ್ಲ. ಅತ್ಯುತ್ತಮ ಸಿನಿಮಾ ಕರ್ಮಿಗಳಿಲ್ಲ. ಇಂದಿಗೂ ಅಕಿರಾ ಕುರೊಸೋವಾ ಅಸಂಖ್ಯ ಸಿನಿಮಾ ನಿರ್ದೇಶಕರ ದಾರಿದೀಪವಾಗಿದ್ದಾರೆ. ಸ್ಟೀಫನ್ ಸ್ಪೀಲ್‌ಬರ್ಗ್, ಮಾರ್ಟಿನ್ ಸ್ಕೊರ್ಸೆಸಿ ಅಂಥಹಾ ಈ ಕಾಲದ ಮಹಾನ್ ನಿರ್ದೇಶಕರು ಸಹ ಅಕಿರಾ ಕುರೊಸೋವಾನ ಆರಾಧಕರು.

  ಅಕಿರಾ ಕುರೊಸೋವಾ ಸಿನಿಮಾಗಳ ವಿಮರ್ಶೆ, ವಿಶ್ಲೇಷಣೆಗೆ ಉಚ್ಛ ಸಿನಿಮಾ ತಿಳವಳಿಕೆ ಬೇಕು. ಅದು ಸುಲಭ ಸಾಧ್ಯವಲ್ಲ. ಹಾಗಾಗಿ ಇಲ್ಲಿ ಅಕಿರಾ ಕುರೊಸೋವಾ, ವಿಶ್ವ ಶ್ರೇಷ್ಟ ಸಿನಿಮಾಗಳನ್ನು ನಿರ್ದೇಶಿಸುವ ಹಂತಕ್ಕೆ ತಲುಪಿದ್ದು ಹೇಗೆ? ಅವರೊಬ್ಬ ಶ್ರೇಷ್ಟ ಸಿನಿಮಾಕರ್ಮಿಯಾಗಲು ಅನುವು ಮಾಡಿಕೊಟ್ಟ ಅಂಶಗಳು ಯಾವುವಾಗಿರಬಹುದೆಂಬ ವಿಷಯಗಳ ಬಗ್ಗೆಯಷ್ಟೆ ಗಮನಹರಿಸುವ.

  ಪ್ರಯೋಗಗಳು ಮತ್ತು ಸುದೀಪ್: ಪ್ರೇಕ್ಷಕರ ಆದರದ ನಿರೀಕ್ಷೆಯಲ್ಲಿಪ್ರಯೋಗಗಳು ಮತ್ತು ಸುದೀಪ್: ಪ್ರೇಕ್ಷಕರ ಆದರದ ನಿರೀಕ್ಷೆಯಲ್ಲಿ

  ಅಕಿರಾ ಕುರೊಸೋವಾ ಮೂಲತಃ ಒಬ್ಬ ಕಲಾವಿದ. ಜಪಾನಿನ ಇತಿಹಾಸ ಹಾಗೂ ಸಂಸ್ಕೃತಿಯ ಮುಖ್ಯ ಭಾಗವಾಗಿರುವ ಸಮುರಾಯ್ ಕುಟುಂಬದವರಾದ ಅಕಿರಾ ತಮ್ಮ ಕುಟುಂಬದಲ್ಲಿಯೇ ಅತ್ಯಂತ ಕಿರಿಯರು. ಮಧ್ಯಮ ವರ್ಗದ ಕುಟುಂಬದ ಅಕಿರಾ ಮೇಲೆ ಅವರ ಅಣ್ಣ ಹ್ಯೂಗೊ ಪ್ರಭಾವ ಬಹಳ ದೊಡ್ಡದು. ಹೀಗೆಂದು ಸ್ವತಃ ಅವರೇ ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರೆ.

  ಅಣ್ಣನಿಂದ ಪ್ರಭಾವಿತರಾದ ಅಕಿರಾ

  ಅಣ್ಣನಿಂದ ಪ್ರಭಾವಿತರಾದ ಅಕಿರಾ

  ಅಕಿರಾಗೆ ಆಗ ಹದಿಮೂರು ವರ್ಷ. ಅಣ್ಣ ಹ್ಯೂಗೊ ತಮ್ಮನನ್ನು ಒಂದು ಸ್ಥಳಕ್ಕೆ ರಕೆದುಕೊಂಡು ಹೋಗುತ್ತಾರೆ. ಅಲ್ಲೊಂದು ದೊಡ್ಡ ಅನಾಹುತವಾಗಿದೆ ಮನುಷ್ಯರ ಛಿದ್ರ ದೇಹಗಳು ಎಲ್ಲೆಂದರಲ್ಲಿ ಬಿದ್ದಿವೆ. ಮೂಲತಃ ಸೂಕ್ಷ್ಮ ಮನಸ್ಸಿನ ವ್ಯಕ್ತಿಯಾದ ಅಕಿರಾಗೆ ಅದನ್ನು ನೋಡಲು ಆಗುವುದಿಲ್ಲ. ಅಲ್ಲಿಂದ ದೂರ ಓಡಲು ಯತ್ನಿಸುತ್ತಾರೆ. ಆದರೆ ಅಣ್ಣ ಹ್ಯೂಗೊ ಬಿಡುವುದಿಲ್ಲ. ನಿನಗೆ ಯಾವುದರ ಬಗ್ಗೆ ಭಯವಿದೆಯೋ ಅದನ್ನೇ ಮೊದಲು ಎದುರಿಸು ಎಂದು ಧೈರ್ಯ ತುಂಬುತ್ತಾರೆ. ಆ ಘಟನೆ ಅಕಿರಾ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಛಿದ್ರವಾದ ದೇಹಗಳ ಚಿತ್ರಣದ ಜೊತೆಗೆ ಮನುಷ್ಯರ ವರ್ತನೆಗಳ ಬಗ್ಗೆ ಪ್ರಶ್ನೆಯನ್ನೂ ಮೂಡಿಸುತ್ತದೆ.

  ಅಣ್ಣನ ಅಕಾಲಿಕ ಮರಣ

  ಅಣ್ಣನ ಅಕಾಲಿಕ ಮರಣ

  ಅಕಿರಾರ ಅಣ್ಣ ಹ್ಯೂಗೊ ಸಹ ಸೂಕ್ಷ್ಮ ಮನಸ್ಸಿನ ಕಲಾ ಪ್ರವೃತ್ತಿಯುಳ್ಳ ವ್ಯಕ್ತಿ ಆದರೆ ದುರಾದೃಷ್ಟವಶಾತ್ ಜೀವನದಲ್ಲಿ ಸಾಕಷ್ಟು ಹಿನ್ನಡೆಗಳನ್ನು ಅನುಭವಿಸಿದವರು. ಆದರೆ ತಮ್ಮನ ಬಗ್ಗೆ ಕಾಳಜಿ ಇದ್ದ, ತನ್ನಂತಲ್ಲದೆ ಅಕಿರಾ ದೊಡ್ಡ ವ್ಯಕ್ತಿಯಾಗಬೇಕೆಂಬ ಕನಸು ಕಂಡಿದ್ದಾತ. ಬುದ್ಧಿವಂತ ವಿದ್ಯಾರ್ಥಿಯಾಗಿದ್ದರೂ ಉತ್ತಮ ಉದ್ಯೋಗಾವಕಾಶ ವಂಚಿತನಾದ ಹ್ಯೂಗೊ ಕುಟುಂಬದಿಂದ ನಿಧಾನಕ್ಕೆ ವಿಮುಖನಾದ ಎಂದು ಅಕಿರಾ ತಮ್ಮ ಆತ್ಮಕತೆಯನ್ನು ಹೇಳಿದ್ದಾರೆ. ಚಿತ್ರಮಂದಿರದಲ್ಲಿ ಮೂಕಿ ಸಿನಿಮಾಗಳಿಗೆ ವಿಶ್ಲೇಷಕ (ಕಮೆಂಟೇಟರ್) ಆಗಿ ಕೆಲಸ ಮಾಡುತ್ತಿದ್ದ. ಆದರೆ 1930 ರ ವಾಕಿ ಚಿತ್ರಗಳು ಹೆಚ್ಚಾಗಿ ಅಲ್ಲಿಯೂ ಅವಕಾಶ ಕಳೆದುಕೊಂಡ ಬಳಿಕ ಆತ್ಮಹತ್ಯೆಗೆ ಶರಣಾದ. ಅಣ್ಣನನ್ನು ಆದರ್ಶವಾಗಿರಿಸಿಕೊಂಡಿದ್ದ ಅಕಿರಾ ಮನಸ್ಸಿನ ಮೇಲೆ ಇದು ಬಹಳ ಗಾಢ ಪರಿಣಾಮ ಬೀರಿತು. ತಮ್ಮ ಆತ್ಮಕತೆಯಲ್ಲಿ ಅಣ್ಣನಿಗಾಗಿ ಒಂದು ಅಧ್ಯಾಯ ಮೀಸಲಿಟ್ಟಿದ್ದಾರೆ ಅದಕ್ಕೆ 'ಹೇಳಬಾರದಾಗಿದ್ದ ಕತೆ' ಎಂದು ಹೆಸರಿಟ್ಟಿದ್ದಾರೆ.

  ಚಿತ್ರಕತೆ ತ್ಯಜಿಸುವ ಅಕಿರಾ ಕುರೊಸೋವಾ

  ಚಿತ್ರಕತೆ ತ್ಯಜಿಸುವ ಅಕಿರಾ ಕುರೊಸೋವಾ

  ಅಣ್ಣನ ಸಾವಿನ ಬಳಿಕ ಅಕಿರಾಗೆ ಚಿತ್ರಕಲೆಯ ಬಗ್ಗೆ ಇದ್ದ ಆಸಕ್ತಿಯೇ ಕುಸಿಯುತ್ತದೆ. ಆ ವರೆಗೆ ಚಿತ್ರಕಾರನಾಗಬೇಕು ಎಂಬ ಕನಸು ಕಂಡಿದ್ದ ಅಕಿರಾ ಚಿತ್ರಕಲೆಯನ್ನು ಒಮ್ಮೆಲೆ ತ್ಯಜಿಸುತ್ತಾರೆ. ಕುಟುಂಬದ ಜವಾಬ್ದಾರಿಯೂ ತಮ್ಮ ಮೇಲೆ ಬಿದ್ದ ಕಾರಣ ಮನಸಿಲ್ಲದ ಮನಸ್ಸಿನಿಂದ ನಿರ್ಮಾಣ ಸಂಸ್ಥೆಯೊಂದಕ್ಕೆ ಸಹಾಯಕ ನಿರ್ದೇಶಕನ ಕೆಲಸಕ್ಕೆ ಅರ್ಜಿ ಹಾಕಿ ಕೆಲಸ ಸಹ ಗಿಟ್ಟಿಸಿಕೊಳ್ಳುತ್ತಾರೆ.

  ಹಲವು ವರ್ಷ ಸಹಾಯಕ ನಿರ್ದೇಶಕನಾಗಿ ವೃತ್ತಿ

  ಹಲವು ವರ್ಷ ಸಹಾಯಕ ನಿರ್ದೇಶಕನಾಗಿ ವೃತ್ತಿ

  1936 ರಲ್ಲಿ ಸಹಾಯಕ ನಿರ್ದೇಶಕರಾಗಿ ಸೇರಿದ ಅಕಿರಾ ಕುರುಸೋವಾ ಒಂದೇ ವರ್ಷದಲ್ಲಿ ಎರಡು ಹಂತ ಮೇಲೆ ಏರಿ ಕಜೀರೋ ಯಮಾಮೊಟೊ ಅವರ ಆಪ್ತ ಸಹಾಯಕ ನಿರ್ದೇಶಕರಾದರು. ಹಲವು ವರ್ಷಗಳ ಕಾಲ ಸಿನಿಮಾದ ಚಿತ್ರಕತೆ ತಿದ್ದುವುದು, ಕಲಾವಿದರ ಆಯ್ಕೆ, ಕಲವಿದರಿಗೆ ತರಬೇತಿ, ಲೈಟಿಂಗ್, ಸ್ಟೇಜ್, ಲೊಕೇಶನ್ ಇನ್ನೂ ಹತ್ತಾರು ಕಾರ್ಯಗಳನ್ನು ನೋಡಿಕೊಂಡರು ಅಕಿರಾ. ಈ ಅವಧಿಯಲ್ಲಿ ಸಿನಿಮಾದ ಎಲ್ಲ ವಿಭಾಗಗಳ ಪರಿಚಯ ಸಾಧಿಸುವ ಜೊತೆಗೆ ಆಳ ಜ್ಞಾನವನ್ನೂ ಪಡೆದುಕೊಂಡರು. ಆ ನಂತರ ಸ್ವತಂತ್ರ್ಯ ಸಿನಿಮಾ ನಿರ್ದೇಶಕರಾಗಲು ಹೊರಟಾಗ ಮೊದಲಿಗೆ ಚಿತ್ರಕತೆಯ ಮೇಲೆ ಹಿಡಿತ ಸಾಧಿಸುವಂತೆ ಅವರ ಮಾರ್ಗದರ್ಶಿ ನಿರ್ದೇಶಕ ಕಜೀರೋ ಯಮಾಮೊಟೊ ಸಲಹೆ ನೀಡಿದರು.

  ಸವಾಲುಗಳ ನಡುವೆ ಮೊದಲ ಸಿನಿಮಾ

  ಸವಾಲುಗಳ ನಡುವೆ ಮೊದಲ ಸಿನಿಮಾ

  ಅಂತೆಯೇ ಅಕಿರಾ, ಚಿತ್ರಕತೆ ಬರೆಯಲು ಆರಂಭಿಸಿದರು. ಹಲವರ ಸಿನಿಮಾಗಳಿಗೆ ಅಕಿರಾ ಚಿತ್ರಕತೆ ಬರೆದರು. ಸಹಾಯಕ ನಿರ್ದೇಶಕನಾಗಿದ್ದ ಸಮಯದಲ್ಲಿ ಸಂಪಾದಿಸಿದ್ದಕ್ಕಿಂತಲೂ ಹೆಚ್ಚು ಸಂಭಾವನೆಯನ್ನೂ ಪಡೆಯುತ್ತಿದ್ದರು ಅಕಿರಾ, ಸಹಾಯಕ ನಿರ್ದೇಶನದಿಂದ ಚಿತ್ರಕತೆ ರಚನೆ ಕಡೆ ವಾಲಲು ಇದೂ ಸಹ ಮುಖ್ಯ ಕಾರಣವೇ ಆಗಿತ್ತು. 1942 ರಲ್ಲಿ ಮೊದಲ ಸಿನಿಮಾಕ್ಕಾಗಿ ಕತೆ ಹುಡುಕಾಟದಲ್ಲಿದ್ದಾಗ ಅವರಿಗೆ ದೊರಕಿದ್ದು ಆಗಷ್ಟೆ ಬಿಡುಗಡೆ ಆಗಿದ್ದ ಆ ನಂತರ ಜನಪ್ರಿಯವಾದ ಜಪಾನಿನ ಕಾದಂಬರಿ 'ಮುಶಾಷಿ ಮಿಯಾಮೋಟೊ' ಬಿಡುಗಡೆ ಮಾಡಿದ್ದರು. ಅದರ ಹಕ್ಕುಗಳನ್ನು ಖರೀದಿಸಿ 'ಸಾಂಶೀರೊ ಸುಗಾತಾ' ಹೆಸರಿನ ಸಿನಿಮಾ ಆರಂಭಿಸಿದರು. ಆದರೆ ಮಹಾಯುದ್ಧದ ಸಮಯವಾದ್ದರಿಂದ ಚಿತ್ರೀಕರಣ ಹಾಗೂ ಸೆನ್ಸಾರ್‌ನಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿ ಕೊನೆಗೆ 1943 ರಲ್ಲಿ ಸಿನಿಮಾ ಬಿಡುಗಡೆ ಆಗಿ ಹಿಟ್ ಆಯಿತು. ಆದರೂ ಆ ಸಿನಿಮಾದ 18 ನಿಮಿಷದ ದೃಶ್ಯಗಳನ್ನು ಕತ್ತರಿಸಿ ತೆಗೆಯಲಾಗಿತ್ತು.

  ಅಕಿರಾ ಮನಸ್ಸಿನ ಮೇಲೆ ಯುದ್ಧದ ಪ್ರಭಾವ

  ಅಕಿರಾ ಮನಸ್ಸಿನ ಮೇಲೆ ಯುದ್ಧದ ಪ್ರಭಾವ

  ವಿಶ್ವಯುದ್ಧದ ಸಮಯದಲ್ಲಿ ಯುದ್ಧ ಕುರಿತ ಸಾಕ್ಷ್ಯಚಿತ್ರ ಮಾದರಿಯ 'ದಿ ಮೋಸ್ಟ್ ಬ್ಯೂಟಿಫುಲ್' ಸಿನಿಮಾ ಮಾಡಿದರು. ಆ ಸಿನಿಮಾ ಹಾಗೂ ಯುದ್ಧದ ಅವಧಿ ಸಹ ಅಕಿರಾ ಮೇಲೆ ದೊಡ್ಡ ಪರಿಣಾಮ ಬೀರಿತು ಎನ್ನಲಾಗುತ್ತದೆ. ಯುದ್ಧದ ಬಳಿಕ ಅವರ ಸಿನಿಮಾಗಳ ದಿಕ್ಕು ಬದಲಾಯ್ತು. ವಿಶ್ವಯುದ್ಧದ ಬಳಿಕ ಅವರು ಹೆಚ್ಚು ಡೆಮಾಕ್ರಟಿಕ್, ವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಗೌರವದ ಕುರಿತಾದ ವಿಷಯಗಳುಳ್ಳ ಸಿನಿಮಾಗಳನ್ನು ನಿರ್ದೇಶಿಸಿದರು.

  ಮನುಷ್ಯನ ವರ್ತನೆಯೇ ಅಕಿರಾ ಮೂಲ ವಸ್ತು

  ಮನುಷ್ಯನ ವರ್ತನೆಯೇ ಅಕಿರಾ ಮೂಲ ವಸ್ತು

  ಸ್ವತಃ ಕುರೊಸೋವಾ ಹೇಳಿಕೊಂಡಿರುವಂತೆ ಅವರ ಎಲ್ಲ ಸಿನಿಮಾಗಳ ಮೂಲ ಒಂದೇ ಪ್ರಶ್ನೆ; 'ಮನುಷ್ಯರಿಗೇಕೆ ಒಟ್ಟಿಗೆ ಸಂತೋಶದಿಂದ ಬದುಕಲು ಸಾಧ್ಯವಾಗುತ್ತಿಲ್ಲ' ಎಂಬುದು. ಮನುಷ್ಯ-ಮನುಷ್ಯ ನಡುವಿನ ಭಿನ್ನತ್ವವನ್ನು, ಬೇಗುದಿಯನ್ನು, ಕುಯುಕ್ತಿ, ಹಪ-ಹಪಿಗಳನ್ನೇ ಆಧರಿಸಿ ಅಕಿರಾ ಕುರೊಸೋವಾ ಸಿನಿಮಾ ಮಾಡಿದ್ದಾರೆ. ತಂತ್ರಜ್ಞಾನ ತೀರ ಶಿಶು ಸ್ಥಿತಿಯಲ್ಲಿದ್ದಾಗಲೇ ಅದ್ಭುತ ದೃಶ್ಯ ಸಂಯೋಜನೆ, ನೆರಳು ಬೆಳಕಿನ ಸಂಯೋಜನೆಗಳನ್ನು ನೀಡಿದ ಅಕಿರಾ, ತಮ್ಮ ಸಿನಿಮಾಗಳ ಕತೆಗಳಲ್ಲೂ ಮನುಷ್ಯನ ಒಳಮನಸ್ಸಿನ ಕಲೆಗಳನ್ನು ಹೊರಗೆಳೆದರು. ಅಕಿರಾ ಕುರೊಸೋವಾ ನಿರ್ದೇಶನದ 'ರೋಶೊಮನ್', 'ಸೆವೆನ್ ಸಮುರಾಯ್', 'ಇಕಿರು', 'ಥ್ರೋನ್ ಆಫ್ ಬ್ಲಡ್', 'ದಿ ಹಿಡನ್ ಫಾರೆಸ್ಟ್', 'ರೆಡ್ ಬಿಯರ್ಡ್' ಸಿನಿಮಾಗಳನ್ನು ವಿಶ್ವದ ಅತ್ಯುತ್ತಮ ಸಿನಿಮಾ ಎನ್ನಲಾಗುತ್ತದೆ. ಅದರಲ್ಲಿಯೂ 'ರೋಶೊಮನ್', 'ಸೆವೆನ್ ಸಮುರಾಯ್', 'ಇಕಿರು', 'ಥ್ರೋನ್ ಆಫ್ ಬ್ಲಡ್' ಸಿನಿಮಾಗಳು ವಿಶ್ವದಾದ್ಯಂತ ಸಿನಿಮಾ ಕರ್ಮಿಗಳಿಂದ ಅತಿ ಹೆಚ್ಚು ಅಧ್ಯಯನಕ್ಕೆ ಒಳಪಟ್ಟಿವೆ. ಅಕಿರಾ ತಮ್ಮ 88 ನೇ ವಯಸ್ಸಿನಲ್ಲಿ 1998 , ಸೆಪ್ಟೆಂಬರ್ 06 ರಂದು ನಿಧನರಾದರು.

  English summary
  Who is Akira Kurosova. How he became worlds greatest movie director of all time. Here is life story of Akira Kurosova.
  Wednesday, August 3, 2022, 20:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X