ಸ್ಯಾಂಡಲ್‌ವುಡ್ 'ಬಾಸ್' ಯಾರು ಎನ್ನುವ ಪ್ರಶ್ನೆಗೆ ಯಶ್ ಉತ್ತರ ಏನು? ಹಳೇ ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೆ ಫ್ಯಾನ್ಸ್ ವಾರ್ ನಡೆಯುತ್ತಲೇ ಇರುತ್ತದೆ.ತಮ್ಮ ನೆಚ್ಚಿನ ನಟನ ಸಿನಿಮಾ ಹಿಟ್ ಆಗುತ್ತಿದ್ದಂತೆ ಅಭಿಮಾನಿಗಳು ಕಾಲರ್ ಎಗರಿಸುತ್ತಾರೆ. ನಮ್ಮ ಬಾಸ್ ಸೂಪರ್ ಎನ್ನುತ್ತಿರುತ್ತಾರೆ. ಕನ್ನಡ ಚಿತ್ರರಂಗಕ್ಕೆ ನಮ್ಮ ಹೀರೊನೆ ಬಾಸ್ (ನಂಬರ್ 1) ಎಂದು ಬೀಗುತ್ತಾರೆ. ಇದಕ್ಕೆ ಬೇರೆ ಕಲಾವಿದರ ಅಭಿಮಾನಿಗಳು ಚಕಾರ ಎತ್ತುತ್ತಾರೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ಬಾಸ್ ಎಂದೇ ಕರೆಯುತ್ತಾರೆ. ದರ್ಶನ್ ಅಭಿಮಾನಿಗಳು ಡಿಬಾಸ್ ಎಂದರೆ ಯಶ್ ಅಭಿಮಾನಿಗಳು ಯಶ್ ಬಾಸ್ ಎಂದು ಸುದೀಪ್ ಅಭಿಮಾನಿಗಳು ಕಿಚ್ಚ ಬಾಸ್ ಎಂದು ಹೀಗೆ ಅಭಿಮಾನಿಗಳಿಗೆ ತಮ್ಮ ಹೀರೊನೇ ಬಾಸ್. ಕೆಲ ವರ್ಷಗಳ ಹಿಂದೆ ಇದೇ ಚರ್ಚೆ ಬಗ್ಗೆ ನಟ ಯಶ್‌ಗೆ ಪ್ರಶ್ನೆ ಎದುರಾಗಿತ್ತು.

ಫಿಲ್ಮ್‌ಫೇರ್ ಕನ್ನಡಕ್ಕಾಗಿ ನಟಿ ಪ್ರಿಯಾಮಣಿ ನಡೆಸಿದ ಸಂದರ್ಶನದಲ್ಲಿ ನಟ ಯಶ್ ಭಾಗಿ ಆಗಿದ್ದರು. ಈ ವೇಳೆ ತಮ್ಮ ಸಿನಿ ಕರಿಯರ್ ಬಗ್ಗೆ ಸಾಕಷ್ಟು ವಿಚಾರಗಳ ಬಗ್ಗೆ ರಾಕಿಂಗ್ ಸ್ಟಾರ್ ಮಾತನಾಡಿದ್ದರು. ಈ ವೇಳೆ ಪ್ರಿಯಾಮಣಿ ನಿಮ್ಮ ಪ್ರಕಾರ ಕನ್ನಡ ಚಿತ್ರರಂಗದ ಬಾಸ್ ಯಾರು? ಎನ್ನುವ ಪ್ರಶ್ನೆಯನ್ನು ಯಶ್ ಮುಂದಿಟ್ಟಿದ್ದರು. ಇದಕ್ಕೆ ಉತ್ತರಿಸಿದ ಯಶ್, ಪ್ರತಿ ಶುಕ್ರವಾರ ನಿಮ್ಮ ಸಿನಿಮಾ ಚೆನ್ನಾಗಿದ್ದರೆ ನೀವು ಬಾಸು, ಇಲ್ಲ ಅಂದ್ರೆ ಪ್ರೊಡ್ಯೂಸರ್‌ಗೆ ಲಾಸ್ ಎಂದಿದ್ದರು. ಜೊತೆಗೆ ಅವರವರ ಜೀವನಕ್ಕೆ ಅವರೇ ಬಾಸ್ ಎಂದು ಯಶ್ ವಿವರಿಸಿದ್ದರು.
BOSS, ಈ ಪದ ನಿಮಗೆ ಇಂಪಾರ್ಟೆಂಟ್ ಎನಿಸುತ್ತಾ ಎಂದು ಪ್ರಿಯಾಮಣಿ ಯಶ್ ಬಳಿ ಕೇಳಿದ್ದರು. ಇದು ನಿಜಕ್ಕೂ ಫನ್ನಿ ಅನ್ನಿಸುತ್ತೆ. ಟಿವಿ, ಸೋಶಿಯಲ್ ಮೀಡಿಯಾದಲ್ಲಿ ಹೀಗೆ ಹಾಕುತ್ತಾರೆ ಅಷ್ಟೆ ಎಂದಿದ್ದರು. ಪ್ರಶ್ನೆ ಮುಂದುವರೆಸಿದ ಪ್ರಿಯಾಮಣಿ, ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಇವರು ಬಾಸ್, ಅವರು ಬಾಸ್ ಅಂತೆಲ್ಲಾ ಕಿತ್ತಾಡುತ್ತಿರುತ್ತಾರೆ. ನೀವೇಂತೀರಾ? ಎಂದಾಗ "ನಿಮ್ಮ ಲೈಫ್‌ಗೆ ನೀವು ಬಾಸ್, ನಿಮ್ಮ ಫ್ಯಾನ್ಸ್‌ಗೆ ನೀವು ಬಾಸ್, ನಿಮ್ಮ ಫ್ಯಾಮಿಲಿಗೆ ನೀವು ಬಾಸ್, ನಿಮ್ಮ ಆಫೀಸ್‌ಗೆ ನೀವು ಬಾಸ್, ಅದರಲ್ಲಿ ತಪ್ಪೇನಿದೆ. ನಾನೊಬ್ಬನೇ ಬಾಸ್ ಎಂದು ನಾನು ಯಾವತ್ತು ಹೇಳಿಲ್ಲ" ಎಂದು ಹೇಳಿದ್ದರು.

ಕನ್ನಡ ಚಿತ್ರರಂಗದಲ್ಲಿ ಯಾರು ಬಾಸ್ ಎಂದು ನಿಮ್ಮನ್ನು ಕೇಳಿದರೆ ನಿಮ್ಮ ಉತ್ತರ ಏನು? ಎನ್ನುವ ಪ್ರಶ್ನೆಗೆ "ನಾನು ಅದನ್ನೇ ಹೇಳಿದ್ದು. ಕನ್ನಡ ಇಂಡಸ್ಟ್ರಿ ಬಾಸ್ ಯಾರು ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರತಿ ಶುಕ್ರವಾರ ನೀವು ಬಾಸ್ ಹೌದೋ, ಅಲ್ವೋ ಗೊತ್ತಾಗುತ್ತೆ. ನಿಮ್ಮ ಸಿನಿಮಾ ಚೆನ್ನಾಗಿದ್ದರೆ ನೀವು ಬಾಸ್, ಇಲ್ಲ ಅಂದ್ರೆ ಪೊಡ್ಯೂಸರ್‌ಗೆ ಲಾಸ್" ಎಂದು ಯಶ್ ನಕ್ಕಿದ್ದರು. ಯಶ್ ಅಂದು ಮಾತನಾಡಿದ್ದ ವಿಡಿಯೋವನ್ನು ಅಭಿಮಾನಿಗಳು ಈಗ ವೈರಲ್ ಆಗುತ್ತಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಸದ್ಯ ನಟ ಯಶ್ 'ಟಾಕ್ಸಿಕ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಜೊತೆ ಸೇರಿ ಯಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮುಂದಿನ ವರ್ಷ ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಾರೆ ಎನ್ನುವ ಗುಸುಗುಸು ಕೂಡ ಕೇಳಿಬರ್ತಿದೆ. ಮತ್ತೊಂದು ಕಡೆ 'ಟಾಕ್ಸಿಕ್' ಚಿತ್ರದಲ್ಲಿ ಶಾರುಖ್ ಖಾನ್ ನಟಿಸುತ್ತಾರೆ ಎನ್ನುವ ವದಂತಿ ಹರಡಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಸಿಕ್ಕಿಲ್ಲ.


Click it and Unblock the Notifications











