Teja Sajja: 'ಹನುಮಾನ್' ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸುಂಟರಗಾಳಿ ಎಬ್ಬಿಸಿರುವ ಈ ತೇಜ ಸಜ್ಜಾ ಯಾರು?
ಪ್ರಶಾಂತ್ ವರ್ಮಾ ನಿರ್ದೇಶಿಸಿದ 'ಹನುಮಾನ್' ಬಾಕ್ಸಾಫೀಸ್ ಅನ್ನು ಕೊಳ್ಳೆ ಹೊಡೆಯುತ್ತಿದೆ. ಈ ಯಶಸ್ಸನ್ನು ಕಂಡು ಚಿತ್ರರಂಗ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇಂದು (ಜನವರಿ 18) ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ 'ಹನುಮಾನ್' ನಟ ತೇಜ ಸಜ್ಜಾರನ್ನು ದೆಹಲಿಯಲ್ಲಿ ಭೇಟಿ ಮಾಡಿ ಸನ್ಮಾನ ಮಾಡಿದ್ದಾರೆ. ಅಲ್ಲದೆ ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದಲ್ಲಿ ಈ ಸಿನಿಮಾ ಯಶಸ್ಸು ಸೇರಿಕೊಂಡಿದೆ ಎಂದಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಈ ವರ್ಷ ಹೆಚ್ಚು ಸದ್ದು ಮಾಡುತ್ತಿರುವ ಸಿನಿಮಾ 'ಹನುಮಾನ್'. ಭಾರತೀಯ ಸೂಪರ್ ಹೀರೋ ಕಾನ್ಸೆಪ್ಟ್ ಮೂಲಕ ಜನರನ್ನು ರಂಜಿಸುತ್ತಿರುವ ಈ ಸಿನಿಮಾದ ಹೀರೋ ಬಗ್ಗೆ ಸಕತ್ ಚರ್ಚೆಯಾಗುತ್ತಿದೆ. ತಮ್ಮ ನಟನೆಯಿಂದ ಮೋಡಿ ಮಾಡಿರುವ ಈ ಯುವ ನಟನ ಹೆಸರು ತೇಜ ಸಜ್ಜಾ. ಯಾರು ಈ ಯುವ ನಟ ತೇಜ ಸಜ್ಜಾ ಎಂಬ ಚರ್ಚೆಗಳು ಜೋರಾಗಿದ್ದು, ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಯುವ ನಟ ತೇಜ ಸಜ್ಜಾ ಆರಂಭಿಕ ಜೀವನ
ನಟ ತೇಜಾ ಸಜ್ಜಾ ಅವರು ಇಂದಿನ ತೆಲಂಗಾಣದ ಹೈದರಾಬಾದ್‌ನಲ್ಲಿ 23 ಆಗಸ್ಟ್ 1994 ರಂದು ಜನಿಸಿದರು. ತಮ್ಮ ಶಾಲಾ ಶಿಕ್ಷಣವನ್ನು ಬೇಗಂಪೇಟೆಯ ಹೈದರಾಬಾದ್ ಪಬ್ಲಿಕ್ ಸ್ಕೂಲ್‌ನಲ್ಲಿ ಮುಗಿಸಿದ್ದಾರೆ. ಮುಖ್ಯವಾಗಿ ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಅತೀ ಚಿಕ್ಕ ವಯಸ್ಸಿನಲ್ಲೇ ತೇಜಾ ಸಜ್ಜಾ ಚಿತ್ರರಂಗಕ್ಕೆ ಕಾಲಿಟ್ಟು, ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

ತೇಜಾ ಸಜ್ಜಾ ಅವರು ತಮ್ಮ ಎರಡನೆ ವಯಸ್ಸಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ 'ಚೂಡಾಲನಿ ವುಂದಿ' (1998) ಚಿತ್ರದಲ್ಲಿ ಬಾಲ ಕಲಾವಿದರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತೆಲುಗು ಉದ್ಯಮದ ಪ್ರಮುಖ ನಟರೊಂದಿಗೆ ಸುಮಾರು ಐವತ್ತು ಇತರ ಚಿತ್ರಗಳಲ್ಲಿ ನಟಿಸಿದರು.
ಚೂಡಾಲನಿ ವುಂದಿ ಸಿನಿಮಾ ಮೂಲಕ ಪ್ರಾರಂಭವಾದ ಇವರ ಜರ್ನಿ (2006) ಮತ್ತು ಇಂದ್ರ (2002) ಸಿನಿಮಾಗಳಲ್ಲಿಯೂ ಜಿರಂಜೀವಿ ಜೊತೆಗೆ ಕೆಲಸ ಮಾಡುವ ಅವಕಾಶ ಕಲ್ಪಿಸಿತ್ತು. ಪವನ್ ಕಲ್ಯಾಣ್, ಮಹೇಶ್ ಬಾಬು ಸೇರಿದಂತೆ ತೆಲುಗು ಸಿನಿರಂಗದ ಎಲ್ಲಾ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಈ ವರೆಗೂ ಬರೋಬ್ಬರಿ ಐವತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಾಲ ಕಲಾವಿದನಾಗಿ 50 ಸಿನಿಮಾ ಮಾಡಿರುವ ಹನುಮಾನ್ ನಟ
ತೇಜಾ ಸಜ್ಜಾ ಅವರು ವೆಂಕಟೇಶ್, ಚಿರಂಜೀವಿ, ಪ್ರಭಾಸ್, ಮಹೇಶ್ ಬಾಬು, ಅಲ್ಲು ಅರ್ಜುನ್, ಎನ್.ಟಿ.ರಾಮರಾವ್ ಜೂನಿಯರ್ ಮತ್ತು ಪವನ್ ಕಲ್ಯಾಣ್ ಮುಂತಾದ ನಟರೊಂದಿಗೆ ನಟಿಸಿದ್ದಾರೆ. ಕಲಿಸುಂದಂ ರಾ, ಇಂದ್ರ, ಟ್ಯಾಗೋರ್, ಯುವರಾಜು, ಗಂಗೋತ್ರಿ, ವಸಂತಂ, ಸಾಂಬಾ, ಛತ್ರಪತಿ, ಬಾಲು ಮುಂತಾದ ಇತರ ಚಿತ್ರಗಳನ್ನು ಮಾಡಿದ್ದಾರೆ.

ಬಾಲ ಕಲಾವಿದನಾಗಿ ಬಂದ ಅವರು ಸಮಂತಾ ರುತ್ ಪ್ರಭು ನಟನೆಯ ಓಹ್ ಬೇಬಿ (2019) ಸಿನಿಮಾದಿಂದ ಪ್ರಮುಖ ಪಾತ್ರ ನಿರ್ವಹಿಸಲು ಆರಂಭಿಸಿದರು. ಇದಾದ ನಂತರ 2021ರಲ್ಲಿ ಬಿಡುಗಡೆಯಾದ ಝಾಂಬಿ ರೆಡ್ಡಿ ಸಿನಿಮಾ ಮೂಲಕ ನಾಯಕನಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಪ್ರಿಯಾ ಪ್ರಕಾಶ್ ವಾರಿಯರ್ ಅವರೊಂದಿಗೆ ಇಷ್ಕ್: ನಾಟ್ ಎ ಲವ್ ಸ್ಟೋರಿಯಲ್ಲಿ ನಟಿಸಿದ್ದಾರೆ. ಇದು ಮಿಶ್ರ ವಿಮರ್ಶೆಗಳನ್ನು ಪಡೆಯಿತು.
ಇದಾದ ನಂತರ ಶಿವಾನಿ ರಾಜಶೇಖರ್ ಜೊತೆಗೆ ಅದ್ಭುತ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡರು. ಇದು ಹಾಟ್‌ಸ್ಟಾರ್‌ನಲ್ಲಿ ನೇರ ಬಿಡುಗಡೆಯಾಯಿತು. ಬಳಿಕ ಪ್ರಶಾಂತ್ ವರ್ಮಾ ಜೊತೆಗೆ ಹನುಮಾನ್ (2024) ಭಾರತೀಯ ಸೂಪರ್ ಹೀರೋ ಸಿನಿಮಾದಲ್ಲಿ ಕಾಣಿಸಿಕೊಂಡು ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ.
28 ವರ್ಷಕ್ಕೆ ಚಿತ್ರರಂಗದಲ್ಲಿ 25 ವರ್ಷದ ಪೂರೈಸಿದ ತೇಜಾ ಸಜ್ಜಾ!
ಯುವ ನಟ ತೇಜಾ ಸಜ್ಜಾ ತಮ್ಮ 28ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬಾಲ ಕಲಾವಿದನಾಗಿ ಕೆಲಸ ಮಾಡಲು ಪ್ರಾರಂಭಿಸಿದ ನಟ ಈಗಾಗಲೇ ಸಿನಿರಂಗದಲ್ಲಿ 25 ವರ್ಷಗಳನ್ನು ಕಳೆದಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅವರೇ ಮಾಹಿತಿ ಹಂಚಿಕೊಂಡಿದ್ದರು. ಹನುಮಾನ್ ಸಿನಿಮಾದಲ್ಲಿನ ಅವರ ನಟನೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.


Click it and Unblock the Notifications










