ಎಸ್. ಎಸ್ ರಾಜಮೌಳಿ ನಿರ್ದೇಶನದ ಸಿನಿಮಾಗಳಲ್ಲಿ ಬೆಸ್ಟ್ ವಿಲನ್ ಯಾರು?
ಕಮರ್ಷಿಯಲ್ ಸಿನಿಮಾಗಳಲ್ಲಿ ಹೀರೊ ಎದುರು ವಿಲನ್ ಪಾತ್ರವೂ ಅಷ್ಟೇ ಪವರ್‌ಫುಲ್ ಆಗಿರಬೇಕು. ಆಗ ಮಾತ್ರ ಹೀರೊ ವರ್ಸಸ್ ವಿಲನ್ ಫೈಟ್ ಮಜಾ ಕೊಡುತ್ತದೆ. ಅದೇ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ ನಟರನ್ನೇ ನೆಗೆಟಿವ್ ರೋಲ್‌ಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ರಾಜಮೌಳಿ ಸಿನಿಮಾಗಳಲ್ಲಿ ಹೀರೊ- ವಿಲನ್ ಸಂಘರ್ಷ ಸಖತ್ ಇಂಟ್ರೆಸ್ಟಿಂಗ್ ಆಗಿ ಇರುತ್ತದೆ.
ಜಕ್ಕಣ್ಣ ಈವರೆಗೆ 12 ಸಿನಿಮಾಗಳನ್ನು ನಿರ್ದೇಶನದ ಮಾಡಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ತಮ್ಮ ಸ್ಟಾರ್‌ಡಮ್ ಹೆಚ್ಚಿಸಿಕೊಂಡು ಬಂದಿದ್ದಾರೆ. ಇನ್ನು ಮೌಳಿ ನಿರ್ದೇಶನದ ಡಜನ್ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಭಾರತೀಯ ಚಿತ್ರರಂಗದಲ್ಲಿ ಸೋಲಿಲ್ಲದ ಸರದಾರ ಎಂದೇ ಜಕ್ಕಣ್ಣ ಖ್ಯಾತರಾಗಿದ್ದಾರೆ.

'RRR' ಬಳಿಕ ಮೌಳಿ ಪ್ಯಾನ್ ವರ್ಲ್ಡ್ ಚಿತ್ರಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಸೂಪರ್ ಸ್ಟಾರ್ ಮಹೇಶ್ ಬಾಬು ಹೀರೊ ಆಗಿ ನಟಿಸುತ್ತಿದ್ದಾರೆ. ತೆರೆಮರೆಯಲ್ಲಿ ಚಿತ್ರಕ್ಕಾಗಿ ಭರ್ಜರಿ ಕಸರತ್ತು ನಡೆಯುತ್ತಿದೆ. ಹಾಲಿವುಡ್ ರೇಂಜ್‌ನಲ್ಲಿ SSMB29 ಸಿನಿಮಾ ನಿರ್ಮಾಣವಾಗಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ? ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಯಾರು ವಿಲನ್ ಆಗಬಹುದು? ಎನ್ನುವ ಲೆಕ್ಕಾಚಾರವೂ ಶುರುವಾಗಿದೆ.
ಇದೆಲ್ಲದರ ನಡುವೆ ಈವರೆಗೆ ಬಂದಿರುವ ರಾಜಮೌಳಿ ಸಿನಿಮಾಗಳನ್ನು ಬೆಸ್ಟ್ ವಿಲನ್ ಯಾರು? ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. 'ಸಿಂಹಾದ್ರಿ' ಚಿತ್ರದಲ್ಲಿ ಮುಖೇಶ್ ರಿಷಿ, 'ಸೈ' ಚಿತ್ರದಲ್ಲಿ ಪ್ರದೀಪ್ ರಾವತ್ ಅದೇ ರೀತಿ 'ಛತ್ರಪತಿ' ಚಿತ್ರದಲ್ಲಿ ಶಫಿ ಹಾಗೂ ಪ್ರದೀಪ್ ರಾವತ್ ವಿಲನ್‌ಗಳಾಗಿ ಅಬ್ಬರಿಸಿದ್ದರು.
'ವಿಕ್ರಮಾರ್ಕುಡು' ಚಿತ್ರದಲ್ಲಿ ರವಿತೇಜಾ ಎದುರು ವಿನೀತ್ ಕುಮಾರ್ ವಿನಲ್ ಆಗಿ ಕಾಣಿಸಿಕೊಂಡಿದ್ದರು. ಇನ್ನು ಬ್ಲಾಕ್‌ಬಸ್ಟರ್ ಹಿಟ್ 'ಮಗಧೀರ' ಚಿತ್ರದಲ್ಲಿ ದೇವ್ ಗಿಲ್ ಆರ್ಭಟ ಜೋರಾಗಿತ್ತು. ಇನ್ನು 'ಈಗ' ಚಿತ್ರದಲ್ಲಿ ಸುದೀಪ್ ಹಾಗೂ 'ಬಾಹುಬಲಿ' ಸರಣಿಯಲ್ಲಿ ರಾಣಾ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಬಲ್ಲಾಳದೇವ ಪಾತ್ರವನ್ನು ವಿಲನ್ ಅನ್ನೋದು ಕಷ್ಟ, ಬಾಹುಬಲಿಗೆ ಎದುರಾಳಿ ಎನ್ನಬಹುದು ಎಂದು ಸ್ವತಃ ರಾಜಮೌಳಿ ಹೇಳಿದ್ದರು.

ಒಟ್ಟಾರೆ ರಾಜಮೌಳಿ ಸಿನಿಮಾಗಳಲ್ಲಿ ಬೆಸ್ಟ್ ವಿಲನ್ ಯಾರು ಅಂದ್ರೆ ಸುದೀಪ್ ಎಂದು ಸಾಕಷ್ಟು ಜನ ಹೇಳುತ್ತಿದ್ದರು. ಸ್ವತಃ ಜಕ್ಕಣ್ಣ ಕೂಡ ಸಾಕಷ್ಟು ಬಾರಿ ಈ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಬಿಟ್ಟರೆ ಆ ಪಾತ್ರವನ್ನು ಮತ್ಯಾರೂ ಮಾಡೋಕೆ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದರು. ತಮ್ಮ ಸಿನಿಮಾಗಳಲ್ಲಿ ಸುದೀಪ್ ಬೆಸ್ಟ್ ವಿಲನ್ ಎಂದು 'RRR' ಸಿನಿಮಾ ಬಿಡುಗಡೆ ಸಮಯದಲ್ಲಿ ಮೌಳಿ ಹೇಳಿದ್ದರು.
'ಈಗ' ಚಿತ್ರದಲ್ಲಿ ಕಿಚ್ಚ ಸುದೀಪ್ ಮಾಡಿದ್ದ ಪಾತ್ರವನ್ನು ಯಾರೂ ಮರೆಯೋಕೆ ಸಾಧ್ಯವಿಲ್ಲ. ಕಣ್ಣಿಗೆ ಕಾಣದೇ ಇರುವ ನೊಣ ಇದೆ ಎಂದು ಊಹಿಸಿಕೊಂಡು ನಟಿಸುವುದು ನಿಜಕ್ಕೂ ಸವಾಲಿನ ಕೆಲಸ. ಈ ಪಾತ್ರ ಕಿಚ್ಚನ ಪಾಲಾದಾಗ ಕೆಲ ತೆಲುಗು ನಟರು ಕೈಕೈ ಹಿಸುಕಿಕೊಂಡಿದ್ದು ಸುಳ್ಳಲ್ಲ. ಆ ಪಾತ್ರಕ್ಕೆ ಅಂತಹ ಪವರ್ ಇತ್ತು. ತಮ್ಮ ಅಭಿನಯದಿಂದ ಅದನ್ನು ಮತ್ತೊಂದು ಹಂತಕ್ಕೆ ಕಿಚ್ಚ ಕೊಂಡೊಯ್ದಿದ್ದರು. ಕಿಚ್ಚನೊಳಗಿದ್ದ ಅದ್ಭುತ ನಟನನ್ನು ಭಾರತೀಯ ಚಿತ್ರರಂಗಕ್ಕೆ ಪರಿಚಯಿಸಿದ್ದು 'ಈಗ' ಸಿನಿಮಾ.
ಸಾಮಾನ್ಯವಾಗಿ ಹೀರೊ ಇಡೀ ಸಿನಿಮಾ ಆವರಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ವಿಲನ್ ಆಗಿ ಸುದೀಪ್ 'ಈಗ' ಚಿತ್ರದ ಮುಖ್ಯ ಭಾಗವಾಗಿದ್ದರು. ಶ್ರೀಮಂತ ಉದ್ಯಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಾನು ಮೋಹಿಸಿದ ಹುಡುಗಿಯನ್ನು ಪಡೆಯಲು ಮಾಡುವ ಸರ್ಕಸ್ ಬಳಿಕ ಅದರ ಪ್ರತಿಫಲ ಎದುರಿಸುವ ಪಾತ್ರದಲ್ಲಿ ಸುದೀಪ್ ಕಮಾಲ್ ಮಾಡಿದ್ದರು.


Click it and Unblock the Notifications











