ರೇಣುಕಾಸ್ವಾಮಿಯನ್ನು ಹೀರೊ ಮಾಡಿದ್ದು ಯಾರು ಹೇಳಮ್ಮ ಹೇಮಲತಾ?
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದಾರೆ. ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಅಪಹರಿಸಿ, ಥಳಿಸಿದ ಆರೋಪ ದರ್ಶನ್ ಆಪ್ತರ ಮೇಲಿದೆ. ದರ್ಶನ್ ಸೂಚನೆಯಂತೆ ಅವರೆಲ್ಲಾ ಈ ಕೃತ್ಯ ಎಸಗಿದ್ದಾಗಿ ಪೊಲೀಸರ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸುಮನಹಳ್ಳಿ ರಿಂಗ್‌ರೋಡ್ ಬಳಿ ರೇಣುಕಾಸ್ವಾಮಿ ಶವ ಸಿಕ್ಕ ಬಳಿಕ ಪೊಲೀಸರು ದೂರ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರೋಪಿಗಳು ಕೊಟ್ಟ ಮಾಹಿತಿ ಆಧರಿಸಿ ಪೊಲೀಸರು 14 ಜನ ಆರೋಪಿಗಳನ್ನು ಬಂಧಿಸಿ 13 ದಿನಗಳ ಕಾಲ ತನಿಖೆ ನಡೆಸಿದರು. ಬಳಿಕ ಕೋರ್ಟ್ ಆರೋಪಿಗಳನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಸದ್ಯ ದರ್ಶನ್ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಆಪ್ತರು ಹಾಗೂ ಕೆಲ ಅಭಿಮಾನಿಗಳು ನಟ ದರ್ಶನ್ ಪರ ಬೆಂಬಲ ಸೂಚಿಸುತ್ತಿದ್ದಾರೆ. ನಟ ದರ್ಶನ್ ತಪ್ಪೇ ಮಾಡಿಲ್ಲ ಎಂದು ಕೆಲವರು, ರೇಣುಕಾಸ್ವಾಮಿ ಮಾಡಿದ ತಪ್ಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಭಾರೀ ಸದ್ದು ಮಾಡುತ್ತಿದೆ. ನಿರೂಪಕಿ ಹೇಮಲತಾ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ.
"ಅಂದಿಗೂ ಇಂದಿಗೂ ಎಂದೆಂದಿಗೂ ಮರೆಯುವುದಿಲ್ಲ, ಬಿಡುವುದಿಲ್ಲ, ಬಿಟ್ಟುಕೊಡುವುದಿಲ್ಲ. ಈ ಘಟನೆಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ, ಕಾನೂನಿನ ಮುಖಾಂತರ ಅಂತ್ಯವನ್ನಾಡಿ ಎಲ್ಲಾ ಕಳಂಕವನ್ನು ತೊಳೆದುಕೊಂಡು ಹೊರಗೆ ಬನ್ನಿ. ನಿಮ್ಮ ಮೇಲಿರುವ ಪ್ರೀತಿ ಗೌರವ ಎಂದಿಗೂ ಕಮ್ಮಿ ಆಗುವುದಿಲ್ಲ" ಎಂದು ನೆಚ್ಚಿನ ನಟನ ಬಗ್ಗೆ ಬರೆದುಕೊಂಡಿದ್ದಾರೆ. ಎಲ್ಲವೂ ಸರಿ ಆದರೆ "ದಯವಿಟ್ಟು ರೇಣುಕಾಸ್ವಾಮಿಯನ್ನು ಯಾರು ಹೀರೊ ಮಾಡಬೇಡಿ" ಎಂದು ಹೇಳಿದ್ದಾರೆ.

ಅಲ್ಲಮ್ಮ ಹೇಮಲತಾ, ರೇಣುಕಾಸ್ವಾಮಿಯನ್ನು ಹೀರೊ ಮಾಡಿದವರು ಯಾರು? ನಿನ್ನ ಕಣ್ಣಿಗೆ ಆ ರೀತಿ ಕಾಣಿಸುತ್ತಿರಬಹುದಷ್ಟೆ. ಇಲ್ಲಿ ಯಾರೂ ಕೂಡ ರೇಣುಕಾಸ್ವಾಮಿ ಮಾಡಿದ್ದು ಸರಿ ಎಂದು ಹೇಳುತ್ತಿಲ್ಲ. ಮಾಧ್ಯಮಗಳು ಹೇಳಲಿಲ್ಲ. ಆದರೆ ಆತನ ತಪ್ಪಿಗೆ ಸಿಕ್ಕ ಶಿಕ್ಷೆ ಇದೆಯಲ್ಲ, ಅದು ಘನಘೋರವಾಗಿದೆ. ಸಾರ್ವಜನಿಕರ ಜೀವನದಲ್ಲಿರುವ ಸ್ಟಾರ್ ನಟ ಈ ರೀತಿ ಒಬ್ಬ ವ್ಯಕ್ತಿಯನ್ನು ಅಪಹರಿಸಿ, ಆತನನ್ನು ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದು ಸರಿಯಲ್ಲ.(ಇನ್ನು ಕೂಡ ಆರೋಪ ಸಾಬೀತಾಗಿಲ್ಲ) ಆದರೆ ಪ್ರಕರಣದಲ್ಲಿ ಹೆಸರು ಇರುವುದಂತೂ ನಿಜ ಅಲ್ಲವೇ?
ರೇಣುಕಾಸ್ವಾಮಿ ಈ ರೀತಿ ಹಲವರಿಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾನೆ, ಆತನ ವಿರುದ್ಧ ದೂರು ಸಹ ದಾಖಲಾಗಿದೆ. ಸಾಕಷ್ಟು ಜನ ಮಹಿಳೆಯರು ಈಗ ಹೊರ ಬಂದು ಈ ಬಗ್ಗೆ ಮಾತನಾಡುತ್ತಿದ್ದಾರೆ. ನಮಗೂ ಆತ ಇಂತಹ ಮಸೇಜ್ ಮಾಡಿದ್ದ, ನಾವು ಆತನ ಅಕೌಂಟ್ ಬ್ಲಾಕ್ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆತನ ಬಗ್ಗೆಯೂ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಆತನನ್ನು ಕ್ರೂರವಾಗಿ ಹಿಂಸಿಸಿ ಕೊಂದ ಕ್ರೂರತ್ವದ ಮುಂದೆ ಆತ ಮಾಡಿದ ತಪ್ಪು ಚಿಕ್ಕದಾಗಿ ಬಿಟ್ಟಿದೆ ಅಷ್ಟೆ. ಇಲ್ಲಿ ಯಾರು ಕೂಡ ಆತನ್ನು ಹೀರೊ ಎಂದು ಹೇಳುತ್ತಿಲ್ಲ.
ಒಂದು ವೇಳೆ ಹತ್ಯೆ ಪ್ರಕರಣಕ್ಕೂ ನಟ ದರ್ಶನ್‌ಗೂ ಯಾವುದೇ ಸಂಬಂಧ ಇಲ್ಲದೇ ಇದ್ದಿದ್ದರೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರಲಿಲ್ಲ. ಅಥವಾ ತಾನು ಯಾವುದೇ ತಪ್ಪು ಮಾಡದಿದ್ದರೆ ನಟ ದರ್ಶನ್ ಆರೋಪಿ ಸ್ಥಾನದಲ್ಲಿ ಇರುತ್ತಲೇ ಇರಲಿಲ್ಲ. ಅವರು ಅಂತಹ ಅಮಾಯಕರೂ ಅಲ್ಲ ಅಲ್ಲವೇ? ಒಬ್ಬ ಪ್ರಭಾವಿ ವ್ಯಕ್ತಿಯನ್ನು ಪೊಲೀಸರು ಹೀಗೆ ಸುಖಾಸುಮ್ಮನೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರಲಿಲ್ಲ. ಎಲ್ಲರಿಗೂ ಕಾನೂನಿದೆ. ತನ್ನ ತಪ್ಪು ಇಲ್ಲದಿದ್ದರೆ ಅದನ್ನು ಸಾಬೀತು ಮಾಡಿ ದರ್ಶನ್ ನಿರಪರಾಧಿಯಾಗಿ ಹೊರಬರುತ್ತಾರೆ ಬಿಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಹೇಮಲತಾ ನೀವು ದರ್ಶನ್ ಪರ ಮಾತಾಡಿ ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ರೇಣುಕಾಸ್ವಾಮಿಯನ್ನು ಹೀರೋ ಮಾಡಬೇಡಿ ಎಂದು ಸಲಹೆ ನೀಡಬೇಡಿ. ಇಲ್ಲಿ ಯಾರು ಕೂಡ ರೇಣುಕಾಸ್ವಾಮಿಯನ್ನು ಬೆಂಬಲಿಸುತ್ತಿಲ್ಲ. ಆತನದ್ದು ಶಿಕ್ಷಾರ್ಹ ಅಪರಾಧ. ಆದರೆ ಅದಕ್ಕೆ ಶಿಕ್ಷೆ ನೀಡಲು ಕಾನೂನಿದೆ. ಯಾರೋ ತಪ್ಪು ಮಾಡಿದರು ಎಂದು ಮತ್ತೊಬ್ಬರು ಕಾನೂನು ಕೈಗೆ ತೆಗೆದುಕೊಳ್ಳಬಾರದು ಅಲ್ಲವೇ? ಯಾರೇ ತಪ್ಪು ಮಾಡಿದರೂ ನಾವೇ ಶಿಕ್ಷೆ ಕೊಡುತ್ತೇವೆ ಎಂದು ನಿರ್ಧರಿಸಿದರೆ ಈ ಸಮಾಜದಲ್ಲಿ ಕೋರ್ಟ್, ಕಾನೂನು ಯಾಕೆ ಬೇಕು ಅಲ್ಲವೇ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ತನ್ನ ನಡೆಯ ಮೂಲಕ ನಾಲ್ಕು ಜನರಿಗೆ ಮಾದರಿ ಆಗಬೇಕು. ಕೊನೆ ಪಕ್ಷ ತನ್ನ ಅಭಿಮಾನಿಗಳಿಗೆ ಆದರ್ಶವಾಗಬೇಕು. ಯಾರೇ ಆಗಲಿ ಈ ರೀತಿಯ ಕೃತ್ಯಗಳಿಗೆ ಪ್ರೇರಣೆ ನೀಡುವಂತೆ ನಡೆದುಕೊಳ್ಳಬಾರದು, ನಾಳೆ ಎಲ್ಲರೂ ಇದನ್ನೇ ಅನುಸರಿಸಿದರೇ ಏನು ಮಾಡೋದು? ಎಂದು ಕಿವಿಮಾತು ಹೇಳುತ್ತಿದ್ದಾರೆ.
ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದಾಗ ಅದಕ್ಕೆ ದರ್ಶನ್ ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದರೆ ಸಾಕಿತ್ತು. ಪೊಲೀಸರು ಆತನಿಗೆ ಬುದ್ಧಿ ಕಲಿಸುತ್ತಿದ್ದರು. ಇಷ್ಟೆಲ್ಲಾ ರಾದ್ಧಾಂತವೇ ಇರುತ್ತಿರಲಿಲ್ಲ ಎಂದು ಬಹುತೇಕ ಹೇಳುತ್ತಿದ್ದಾರೆ. ದರ್ಶನ್ ಈ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆ ಜೈಲು ಸೇರುವಂತಾಗಿತ್ತು. ಬಳಿಕ ಬದಲಾಗಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎನ್ನುವ ವಾದವನ್ನು ಕೆಲವರು ಮುಂದಿಡುತ್ತಿದ್ದಾರೆ.


Click it and Unblock the Notifications











