ಪಾರ್ವತಮ್ಮ ಎಷ್ಟೇ ಕೇಳಿದ್ರು ಅನು ಪ್ರಭಾಕರ್ ಯಾಕೆ ತಮ್ಮ ಹೆಸರು ಬದಲಿಸಿಕೊಳ್ಳಲಿಲ್ಲ?
ಚಿತ್ರರಂಗದಲ್ಲಿ ನಟ, ನಟಿಯರು ಹೆಸರು ಬದಲಿಸಿಕೊಂಡು ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವುದು ಗೊತ್ತೇಯಿದೆ. ಹಲವರು ಹೆಸರು ಬದಲಿಸಿಕೊಂಡು ಸೂಪರ್ ಸಕ್ಸಸ್ ಕಂಡಿದ್ದಾರೆ. ಕೆಲವೊಮ್ಮೆ ನಿರ್ದೇಶಕ, ನಿರ್ಮಾಪಕರು ತಮ್ಮ ಚಿತ್ರದ ನಟ-ನಟಿಯರ ಹೆಸರು ಬದಲಿಸುವುದು ಇದೆ.
ಒಂದೇ ಹೆಸರಿನವರು ಇಬ್ಬರೂ ಮೂವರು ಇದ್ದಾಗ ಅಥವಾ ಮೊದಲಿನ ಹೆಸರು ಕರೆಯಲು ಅಷ್ಟು ಸುಲಭವಿಲ್ಲ ಎಂದಾಗ ಈ ರೀತಿ ಹೆಸರು ಬದಲಿಸಿಕೊಳ್ಳುತ್ತಾರೆ. ಕೆಲವರು ಜಾತಕ, ಸಂಖ್ಯಾಶಾಸ್ತ್ರ ಅಂತೆಲ್ಲಾ ತಡಕಾಡಿ ಹೆಸರು ಬದಲಿಸಿಕೊಂಡಿದ್ದಾರೆ. ಕನ್ನಡ ನಟಿ ಅನು ಪ್ರಭಾಕರ್ 'ಹೃದಯ ಹೃದಯ' ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಬಂದರು. ಆಗ ಪಾರ್ವತಮ್ಮ ಆಕೆಯ ಹೆಸರು ಬದಲಿಸಿಕೊಳ್ಳುವಂತೆ ಸಲಹೆ ನೀಡಿದ್ದರಂತೆ.

ಎಂ. ವಿ ಪ್ರಭಾಕರ್ ಹಾಗೂ ಗಾಯತ್ರಿ ಪ್ರಭಾಕರ್ ಪುತ್ರಿ ಅನು ಪ್ರಭಾಕರ್ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದರು. 'ಚಪಲ ಚೆನ್ನಿಗರಾಯ' ಚಿತ್ರದಲ್ಲಿ ಮೊದಲಿಗೆ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. 'ಹೃದಯ ಹೃದಯ' ಆಕೆ ನಾಯಕಿಯಾಗಿ ನಟಿಸಿದ ಚೊಚ್ಚಲ ಚಿತ್ರ. ಶ್ರೀ ವೈಷ್ಣವಿ ಕಂಬೈನ್ಸ್ ಬ್ಯಾನರ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಈ ಸಿನಿಮಾ ನಿರ್ಮಿಸಿದ್ದರು.
'ಹೃದಯ ಹೃದಯ' ಬಳಿಕ ಅನು ಪ್ರಭಾಕರ್ ಮತ್ತೆ ತಿರುಗಿ ನೋಡಲಿಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು. ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದರು. ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅನು ಮಾತನಾಡಿದ್ದಾರೆ. ತಮ್ಮ ಬಾಲ್ಯ, ಸಿನಿಮಾ ಹೀಗೆ ಸಾಕಷ್ಟು ಸಂಗತಿ ಹಂಚಿಕೊಂಡಿದ್ದಾರೆ.

"ಚಪಲ ಚೆನ್ನಿಗರಾಯ' ಚಿತ್ರದಲ್ಲಿ ನಟಿಸುವಾಗ ನನಗೆ 7 ವರ್ಷ. 'ಶಾಂತಿ ಕ್ರಾಂತಿ' ಸಿನಿಮಾ ಚಿತ್ರೀಕರಣವನ್ನು ಬಹಳ ಎಂಜಾಯ್ ಮಾಡಿದ್ದೆ. ಆಗ ನಟಿಯಾಗುವ ಬಗ್ಗೆ ಯೋಚನೆ ಇರಲಿಲ್ಲ. 'ರಥಸಪ್ತಮಿ' ಚಿತ್ರದ ಆಶಾರಾಣಿ ನನ್ನ ಕಸೀನ್. ನಾನು ಡಿಗ್ರಿ ಓದು ಬಿಟ್ಟು ನಟನೆಗೆ ಬಂದೆ. 'ಹೃದಯ ಹೃದಯ' ಚಿತ್ರಕ್ಕೆ ಹೊಸ ನಟಿಯ ಹುಡುಕಾಟ ನಡೆಯುತ್ತಿದ್ದಾಗ ನನ್ನ ಫೋಟೊಗಳನ್ನು ನೋಡಿ ಕೇಳಿದ್ದರು"
"ಗಗನ ಸಖಿ ಆಗುವ ಆಸೆ ಇತ್ತು. ನನ್ನ ಅಕ್ಕ ಆಶಾರಾಣಿ 'ರಥಸಪ್ತಮಿ' ಚಿತ್ರದಲ್ಲಿ ಲಾಂಚ್ ಆಗಿದ್ದಳು. ಅದೇ ತಂಡದ 'ಹೃದಯ ಹೃದಯ' ಚಿತ್ರದ ಮೂಲಕ ನಾನು ಬಂದೆ. ನನ್ನ ಅಕ್ಕನನ್ನು ಲಾಂಚ್ ಮಾಡಿದ ದೊಡ್ಮನೆ ಬ್ಯಾನರ್‌ನಲ್ಲೇ ನಾನು ಚಿತ್ರರಂಗಕ್ಕೆ ಬರುವಂತಾಯಿತು. ಆಗ ನನ್ನ ಹೆಸರು ಬದಲಿಸುವ ಚರ್ಚೆಯೂ ಆಯಿತು" ಎಂದು ಅನು ಪ್ರಭಾಕರ್ ನೆನಪಸಿಕೊಂಡಿದ್ದಾರೆ.
"ಪಾರ್ವತಮ್ಮ ನೋಡು ನಿಮ್ಮ ಅಕ್ಕ ನೀತುಗೆ ಆಶಾರಾಣಿ ಅಂತ ಹೆಸರಿಟ್ಟೆ. ಜಯಶ್ರೀಗೆ ಸುಧಾರಾಣಿ ಅಂತ ಇಟ್ಟೆ. ನಿನಗೆ ಅನುಶ್ರೀ ಅಂತ ಹೆಸರಿಡ್ತೀನಿ ಅಂದ್ರು. ಮಾಲಾಶ್ರೀ ಆಯ್ತು ಈಗ ಅನುಶ್ರೀ ಅಂದ್ರು. ಪ್ರೇಮಾ ಹೆಸರು ಚೇಂಜ್ ಮಾಡಿಕೊಳ್ಳಲಿಲ್ಲ. ನೀನು ಚೇಂಜ್ ಮಾಡ್ಕೊ ಅಂತ ಟೈಟಲ್ ಕಾರ್ಡ್ ಮಾಡಿಸುವ ದಿನ ಕೂಡ ಕೇಳಿದ್ರು"
"ನಾನು ಅಮ್ಮ ಪ್ಲೀಸ್ ಬೇಡ ಎಂದೆ. ಗಾಯತ್ರಿ ಪ್ರಭಾಕರ್ ಅಂತ್ಲೇ ನಮ್ಮಮ್ಮ ಪರಿಚಯ. ಹಾಗಾಗಿ ನಮ್ಮ ತಂದೆ ಹೆಸರು ಇರಲಿ, ಅನುಪ್ರಭಾಕರ್ ಅಂತ. ಬೇಡ್ವಾ? ಅಂತ ಪದೇ ಪದೇ ಕೇಳಿದ್ರು. ನಾನು ಬೇಡ ಎಂದು ಮನವಿ ಮಾಡಿಕೊಂಡೆ. 'ಹೃದಯ ಹೃದಯ' ಆದ್ಮೇಲೆ ಅನುಪ್ರಭಾಕರ್ ಅಂತ ಅಧಿಕೃತವಾಗಿ ಬದಲಿಸಿಕೊಂಡೆ. ನನ್ನ ಹೆಸರು ಅನ್ನಪೂರ್ಣ ಪ್ರಭಾಕರ್" ಎಂದು ಅನು ವಿವರಿಸಿದ್ದಾರೆ.


Click it and Unblock the Notifications











