ಪರಮಾತ್ಮನ ಪ್ರೀತಿಯಲ್ಲಿ ಪರವಶಳಾದ, ಸಾರಥಿಯ ರುಕ್ಮಿಣಿ ದೀಪಾ ಸನ್ನಿಧಿ ಎಲ್ಲಿ ಹೋದರು..?
ದೀಪಾ ಸನ್ನಿಧಿ.. ಚಂದನವನದಲ್ಲಿ ನಾಯಕಿಯರಿಲ್ಲ ಅನ್ನುವ ಕೊರಗಿನ ಮಧ್ಯೆ ಹೊಸದೊಂದು ದೀಪವನ್ನ ಚಂದನವನದಲ್ಲಿ ಹಚ್ಚಿದ್ದ ನಟಿ. ಪರಮಾತ್ಮನ ಪ್ರೀತಿಯಲ್ಲಿ ಪರವಶಳಾಗ್ತಾ ಸ್ಯಾಂಡಲ್‌ವುಡ್ ಗೆ ಕಾಲಿಟ್ಟಿದ್ದ ಸನ್ನಿಧಿಗೆ, ಪ್ರೇಕ್ಷಕರ ಸಾಂಗತ್ಯ ಅದ್ಯಾವ ಮಟ್ಟಿಗೆ ದೊರೆಯಿತು ಅಂದರೆ ಕೊಡಗಿನ ಈ ಕುವರಿಯ ಜಾತಕ ಕಂಪ್ಲೀಟಾಗಿ ಬದಲಾಗಿ ಹೋಯಿತು
ಪರಮಾತ್ಮ.. ಹಿಟ್ಟಾಯ್ತೋ.. ಪ್ಲಾಫಾಯ್ತೋ.. ಆದ್ರೆ ಬೇಕಿದ್ದ ರಿಕಗ್ನೈಸೇಶನ್ ದೀಪಾ ಸನ್ನಿದಿಗೆ ಸಿಕ್ತು. ಹಾಗ್ ನೋಡಿದರೆ ಪರಮಾತ್ಮ, ದೀಪಾ ಸನ್ನಿದಿ ಅಭಿನಯದ ಮೊದಲ ಚಿತ್ರವಾದರೂ ತೆರೆಗೆ ಮೊದಲು ಬಂದ ಸಿನಿಮಾ ಸಾರಥಿ.

ಇನ್ನೂ ಸಾರಥಿ ಆ ಕಾಲಕ್ಕೆ ಬಹುದೊಡ್ಡ ದಾಖಲೆ ಬರೆದ ಸಿನಿಮಾ. ಹಾಗೋ ಹೀಗೋ ಇದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನಸಿನಲ್ಲಿ, ಪ್ರೀತಿಯ ಸ್ವರ ಮೂಡಿಸಿದ ಈ ಬೆಡಗಿಯ ಭಿನ್ನಾಣ ಮಿಣ ಮಿಣ ಅಂತ ಮಿಂಚ್ತಿದ್ದ ಆ ಕಾಲಕ್ಕೆ, ತಲೆದೂಗದ ಸಿನಿರಸಿಕರಿರಲಿಲ್ಲ. ಇವರನ್ನ ತಮ್ಮ ಸಿನಿಮಾದಲ್ಲಿ ನಾಯಕಿಯನ್ನಾಗಿ ಕಾಸ್ಟ್ ಮಾಡ್ಕೋಬೇಕು ಅನ್ನುವ ಹಂಬಲದಲ್ಲಿದ್ದ ನಿರ್ಮಾಪಕರಿಗೂ ಅಂದು ಬರ ಇರಲಿಲ್ಲ
ಸಾರಥಿ, ಪರಮಾತ್ಮ. ಹೀಗೆ ಬ್ಯಾಕ್ ಟು ಬ್ಯಾಕ್ ಸೂಪರ್ ಸ್ಟಾರ್‌ಗಳ ಸೂಪರ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದ ದೀಪಾರನ್ನ ಗಾಂಧಿನಗರ ಮುಕ್ತವಾಗಿಯೇ ಅಪ್ಪಿಕೊಂಡಿತ್ತು. ಪ್ರಾಮಿಸಿಂಗ್ ನ್ಯೂ ಕಮರ್ ಅನ್ನೋ ಅವಾರ್ಡ್ ಕೂಡ ಇವರಿಗೆ ನೀಡಲಾಗಿತ್ತು. ಇದೇ ಖುಷಿಯಲ್ಲಿ ಕುಸುಮ ಬಾಲೆ ಥರ ಕುಣಿದಾಡಿದ ಸನ್ನಿಧಿ, ಜಾನೂವಿನ ಜಾನ್ ಆಗಿ ತೆರೆ ಮೇಲೆ ಮತ್ತೊಂದು ಪ್ರೇಮ ಕಹಾನಿಗೆ ಸಾಕ್ಷಿಯಾದರು

ಮೂರು ಸಿನಿಮಾಗಳು ದೊಡ್ಡ ಬ್ಯಾನರಿನ ಸಿನಿಮಾಗಳು. ಜೊತೆಗೆ ದೊಡ್ಡ ನಾಯಕರ ಸಿನಿಮಾಗಳು, ಇಷ್ಟೇ ಸಾಕಿತ್ತು ನೆಲೆಯೂರಲು. ನೆಲೆಯೂರುತ್ತಾರೆ ಎಂದು ಎಲ್ಲರು ಅಂದುಕೊಂಡಿದ್ದರು ಕೂಡ. ಆದರೆ.. ಅದೇನಾಯ್ತೋ, ದೀಪಾ ಸನ್ನಿಧಿ ತಮ್ಮ ಸಂಭಾವನೆ ಹೆಚ್ಚಿಸಿಕೊಂಡು ಕುಂತುಕೊಂಡಿದ್ದಾರೆ ಅನ್ನುವ ಮಾತು ಗಾಂಧಿನಗರದೆಲ್ಲೆಡೆ ಕೇಳಿ ಬರಲು ಆರಂಭವಾಯಿತು. ದೀಪಾ ಸನ್ನಿಧಿಗೆ ಹತ್ತೊಂಬತ್ತು ಲಕ್ಷ ಕೊಟ್ಟು ಖಾತೆ ಬರಿದು ಮಾಡ್ಕೊಳ್ಳೋ ಬದಲು, ಹೊಸ ನಾಯಕಿಯನ್ನೋ ಅಥವಾ ಡಿಮ್ಯಾಂಡ್ ಮಾಡದ ನಾಯಕಿಯನ್ನೋ ಕರೆತರುವುದು ಉತ್ತಮ ಅನ್ನುವ ಅಭಿಪ್ರಾಯ ನಿರ್ಮಾಪಕರ ವಲಯದಲ್ಲಿ ವ್ಯಕ್ತವಾಯಿತು.
ಇದಕ್ಕೆ ಪೂರಕವಾಗಿ ಕಿಚ್ಚ ಸುದೀಪ್ ಅಭಿನಯದ ಬಚ್ಚನ್, ದೀಪಾ ಕೈ ತಪ್ಪಿತು. ಅಷ್ಟೇ ಯಾಕೆ.. ಉಪೇಂದ್ರ ಅಭಿನಯದ ಬ್ರಹ್ಮ ಚಿತ್ರಕ್ಕೆ ದೀಪಾ ನಿರ್ದೇಶಕರ ಫಸ್ಟ್ ಛಾಯ್ಸ್ ಆಗಿದ್ರು. ಆದರೆ ಅಲ್ಲೂ ಸಂಭಾವನೆಯ ಭಾವಗಳನ್ನ ಭರ್ಜರಿಯಾಗಿ ಪ್ರದರ್ಶಿಸಿದ್ದ ಪರಿಣಾಮ, ಬ್ರಹ್ಮ ಚಿತ್ರದಿಂದ ಕೂಡ ದೀಪಾ ಸನ್ನಿಧಿಗೆ ಗೇಟ್ ಪಾಸ್ ನೀಡಲಾಗಿದೆ ಅನ್ನುವ ಸುದ್ದಿ ಹಬ್ಬಿತು. ಭಜರಂಗಿಯಲ್ಲಿ ಕೂಡ ದೀಪಾ ಸನ್ನಿಧಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಅದು ಕೂಡ ಆಗಲಿಲ್ಲ.

ಇದೆಲ್ಲದರ ನಡುವೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸಕ್ಕರೆ ತಿಂದ ದೀಪಾ ಸನ್ನಿಧಿ ಎಂದೆಂದೂ ನಿನಗಾಗಿ ಎಂದು ಹೇಳಿ, ಮಾಂಜಾ ಕೊಡೋಕೆ ರೆಡಿಯಾಗಿದ್ದರು. ಆದರೆ.. 2016ರಲ್ಲಿ ಸೆಟ್ಟೇರಿದ್ದ ಅನೀಶ್ ತೇಜೇಶ್ವರ್ ನಾಯಕನಾಗಿದ್ದ ಚಿತ್ರ ಇಲ್ಲಿಯವರೆಗೆ ಬರಲೇ ಇಲ್ಲ. ಆ ನಂತರ ಕನ್ನಡದಿಂದ ಕಾಣೆಯಾದ ದೀಪಾ ಕಂಡಿದ್ದು ತಮಿಳುನಾಡಿನಲ್ಲಿ. ಆದರೆ ಅಲ್ಲಿಯೂ ದೀಪಾ ಮಾಡಿದ್ದು ಎರಡೇ ಸಿನಿಮಾ.
ಇಂಥ ದೀಪಾ ಕಾಲ ಕ್ರಮೇಣ ಕನ್ನಡ ಚಿತ್ರರಂಗದಲ್ಲಿ ಎರಡನೇ ಇನಿಂಗ್ಸ್ ಆರಂಭ ಮಾಡಿದರು. ಚೌಕಾ ಆಡಿದರು. ಚಕ್ರವರ್ತಿಯ ಮಹಾರಾಣಿಯೂ ಆದರು. ಆದರೆ.. ಆ ನಂತರ ಮತ್ತೆ ಅದೇನಾಯ್ತೋ.. ದೀಪಾ ಸನ್ನಿಧಿ ಕಾಲದ ಜೊತೆ ಹಾಗೇ ಕನ್ನಡ ಚಿತ್ರರಂಗದಿಂದ ದೂರ ಸರಿದರು. ದೀಪಾ ಜಾಗದಲ್ಲಿ ಹತ್ತಾರು ನಾಯಕಿಯರು ಬಂದು ವಿರಾಜಮಾನರಾದರು.
ಸದ್ಯಕ್ಕೆ ದೀಪಾ ಸನ್ನಿಧಿ ಎಲ್ಲಿದ್ದಾರೆ.. ಏನ್ಮಾಡ್ತಿದ್ದಾರೆ.. ಈ ಪ್ರಶ್ನೆಗೆ ಉತ್ತರ ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಭವಿಷ್ಯದಲ್ಲಿ ದೀಪಾ ಸನ್ನಿಧಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿ ಬರ್ತಾರಾ ಗೊತ್ತಿಲ್ಲ. ಆದರೆ ಮರಳಿ ಬರಲಿ ಅನ್ನುವ ಆಸೆ ಅನೇಕರಲ್ಲಿ ಇದ್ದೇ ಇದೆ


Click it and Unblock the Notifications










