ಯಶ್ ಕೂಡ ದರ್ಶನ್ ಭೇಟಿ ಮಾಡಿ ತಮ್ಮ ಮದುವೆ ಆಮಂತ್ರಣ ನೀಡಿರಲಿಲ್ಲವೇ?
ಸ್ಯಾಂಡಲ್‌ವುಡ್ ಅಂಗಳದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ನಾಲ್ಕು ದಿನಗಳ ಹಿಂದೆ ಒಂದೇ ದಿನ ಎರಡೆರಡು ಮದುವೆ ಸಮಾರಂಭಗಳಲ್ಲಿ ಕನ್ನಡ ಸಿನಿಮಾ ತಾರೆಯರು ಭಾಗಿ ಆಗಿ ಸಂಭ್ರಮಿಸಿದ್ದರು. ಹಿರಿಯ ನಟಿ ಜಯಮಾಲ ಪುತ್ರಿ ಸೌಂದರ್ಯ, ರುಷಬ್ ಎಂಬುವವರ ಜೊತೆ ಹಸೆಮಣೆ ಏರಿದ್ದರು. ರಕ್ಷಿತಾ ಪ್ರೇಮ್ ಸಹೋದರ ರಾಣಾ ಕೂಡ ಪ್ರೀತಿಸಿ ಹುಡುಗಿ ಜೊತೆ ಹೊಸ ಬಾಳಿಗೆ ಕಾಲಿಟ್ಟರು.
ನಟ ಸುದೀಪ್ ಹಾಗೂ ನಟ ಯಶ್ ದಂಪತಿ ಸಮೇತರಾಗಿ ಮದುವೆ ಸಮಾರಂಭಗಳಲ್ಲಿ ಭಾಗಿ ಆಗಿ ನವ ವಧು-ವರರಿಗೆ ಶುಭ ಹಾರೈಸಿದ್ದರು. ಈ ಶನಿವಾರ ಹಾಗೂ ಭಾನುವಾರ ನಟ ಡಾಲಿ ಧನಂಜಯ್ ತಾವು ಪ್ರೀತಿಸಿದ ಹುಡುಗಿ ಜೊತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಮೈಸೂರಿನಲ್ಲಿ ಧನು-ಧನ್ಯತಾ ಮದುವೆ ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ. ಎರಡು ತಿಂಗಳಿಂದ ನಟ ಧನಂಜಯ್ ರಾಜಕೀಯ ಮುಖಂಡರು, ಸಿನಿಮಾ ತಾರೆಯರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತು.

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ಧನಂಜಯ್ ಹಾಗೂ ಧನ್ಯತಾ ತಮ್ಮ ಮದುವೆ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ಎಲ್ಲರಿಗೂ ಮದುವೆ ಆಮಂತ್ರಣ ಕೊಟ್ಟು ಕರೆದಿದ್ದೀರಾ? ನಟ ದರ್ಶನ್ ಅವರಿಗೂ ಲಗ್ನ ಪತ್ರಿಕೆ ಕೊಟ್ರಾ? ಎನ್ನುವ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಧನಂಜಯ್ ಸ್ಪಷ್ಟನೆ ನೀಡಿದ್ದರು. ದರ್ಶನ್ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೆ, ಆದರೆ ಸಾಧ್ಯವಾಗಲಿಲ್ಲ, ಈ ಮೂಲಕ ಅವರನ್ನು ಕೂಡ ನಮ್ಮ ಮದುವೆಗೆ ಆಹ್ವಾನಿಸುತ್ತಿದ್ದೇನೆ ಎಂದಿದ್ದರು. ಈ ಬಗ್ಗೆ ಭಾರೀ ಚರ್ಚೆ ನಡೆಯಿತು.
ದರ್ಶನ್ ಹಾಗೂ ಧನಂಜಯ್ ಬಹಳ ಆಪ್ತರು. ಸಹೋದರರ ರೀತಿ ಇದ್ದಾರೆ. ಹಾಗಿರುವಾಗ ದರ್ಶನ್ ಅವರನ್ನು ಸಂಪರ್ಕಿಸುವುದು ಧನಂಜಯ್‌ಗೆ ಅಷ್ಟು ಕಷ್ಟವೇ? ಎಂದು ಕೆಲವರು ಕೇಳಿದ್ದರು. ದರ್ಶನ್ ಅಭಿಮಾನಿಗಳಂತೂ ಧನಂಜಯ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಯಶ್ ಕೂಡ ಖುದ್ದು ದರ್ಶನ್ ಅವರನ್ನು ಭೇಟಿ ಮಾಡಿ ತಮ್ಮ ಮದುವೆಗೆ ಆಮಂತ್ರಣ ನೀಡಿರಲಿಲ್ಲ. ಈ ಬಗ್ಗೆ ಸ್ವತಃ ಯಶ್ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದರು.

ಧನಂಜಯ್ ತಮ್ಮ ಮದುವೆಗೆ ಎಲ್ಲರನ್ನು ಕರೆದು ದರ್ಶನ್ ಅವರನ್ನು ಯಾಕೆ ಕರೆಯಲಿಲ್ಲ ಎನ್ನುವ ಚರ್ಚೆಯ ನಡುವೆ ಅಂದು ಯಶ್ ಸ್ಪಷ್ಟನೆ ನೀಡಿದ್ದ ವಿಚಾರ ಚರ್ಚೆಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಅಂದು ಅಭಿಮಾನಿಯ ನೆಟ್ಟಿಗರೊಬ್ಬರ ಪ್ರಶ್ನೆಗೆ ಯಶ್ ನೀಡಿದ್ದ ರಿಪ್ಲೇ ಸ್ಕ್ರೀನ್‌ಶಾಟ್ ಇದೀಗ ವೈರಲ್ ಆಗುತ್ತಿದೆ. ಅಂದಹಾಗೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಸೆಟ್ ಹಾಕಿ ಯಶ್-ರಾಧಿಕಾ ಪಂಡಿತ್ ಮದುವೆ ನಡೆದಿತ್ತು. ದರ್ಶನ್ ಮದುವೆಗೆ ಗೈರಾಗಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು.
ದರ್ಶನ್ ಹಾಗೂ ಯಶ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತು ಆಗ ಕೇಳಿಬರುತ್ತಿತ್ತು. ಇಬ್ಬರೂ ಅಭಿಮಾನಿಗಳ ನಡುವೆ ಪರಸ್ಪರ ಕೆಸರೆರಚಾಟ ನಡೆಯುತ್ತಿತ್ತು. ಇಬ್ಬರ ಸಿನಿಮಾಗಳಲ್ಲಿದ್ದ ಕೌಂಟರ್ ಡೈಲಾಗ್‌ಗಳು ಅದಕ್ಕೆ ಮತ್ತಷ್ಟು ತುಪ್ಪ ಸುರಿದಿತ್ತು. ಆದರೆ ಬಳಿಕ ಇಬ್ಬರೂ ಜೋಡೆತ್ತುಗಳಂತೆ ಒಂದಾಗಿದ್ದರು. ಅಂದು ಶಿವಣ್ಣ, ಸುದೀಪ್, ಅಪ್ಪು, ರವಿಚಂದ್ರನ್, ಅಂಬರೀಶ್, ಅನಂತ್ ನಾಗ್, ರವಿಚಂದ್ರನ್ ಹೀಗೆ ಚಿತ್ರರಂಗದ ಎಲ್ಲರನ್ನು ಯಶ್ ಮದುವೆಗೆ ಆಹ್ವಾನಿಸಿ ಪತ್ರಿಕೆ ನೀಡಿದ್ದರು. ಪತ್ರಿಕೆ ಜೊತೆಗೆ ಒಂದೊಂದು ಗಿಡವನ್ನು ಕೊಟ್ಟಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿತ್ತು. ಆದರೆ ದರ್ಶನ್ ಅವರಿಗೆ ಆಮಂತ್ರಣ ನೀಡಿದ್ದ ಫೋಟೊ ಸಿಗಲಿಲ್ಲ. ಇದನ್ನು ನೋಡಿ ಅವರಿಗೆ ಆಹ್ವಾನ ಇದ್ಯಾ? ಇಲ್ವಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡಿತ್ತು.
ಲೋಕೇಶ್ ಗೌಡ ಎಂಬುವವರು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ನೇರವಾಗಿ ಯಶ್ ಅವರ ಬಳಿ ಪ್ರಶ್ನೆ ಕೇಳಿದ್ದರು. "ದರ್ಶನ್ ಅವರಿಗೆ ಇನ್ವೈಟ್ ಮಾಡಿದ್ದೀರಾ? ನಾನು ತಿಳಿದುಕೊಳ್ಳಬೇಕು. ಪ್ಲೀಸ್ ಸತ್ಯ ಹೇಳಿ" ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಯಶ್ "ಹೌದು, ಅವರಿಗೆ ಫೋನ್ ಮಾಡಿದ್ದೀನಿ. ಅವರು ಮೈಸೂರಿನಲ್ಲಿ ಇದ್ದೀನಿ. ಸಿಗೋದೇನು ಬೇಡ. ಖಂಡಿತ ಮದುವೆಗೆ ಬರ್ತೀನಿ ಅಂದಿದ್ದಾರೆ" ಎಂದು ರಿಪ್ಲೇ ಮಾಡಿದ್ದರು.


Click it and Unblock the Notifications











