'ಸಾಹಸಸಿಂಹ' ಬಿರುದು ಸಿಗಲು ಬರೀ ಆ ಸಿನಿಮಾ ಕಾರಣ ಅಲ್ಲ: ಸ್ವತಃ ವಿಷ್ಣು ಈ ಬಗ್ಗೆ ಹೇಳಿದಿದ್ದು ಏನು?
ಡಾ. ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಮೈಸೂರಿನ ಎಚ್. ಡಿ. ಕೋಟೆ ರಸ್ತೆಯ ಹಾಲಾಳು ಸಮೀಪದಲ್ಲಿ ದಾದಾನ ಭವ್ಯ ಸ್ಮಾರಕ ನಿರ್ಮಾಣವಾಗಿದೆ. ಸಿಎಂ ಬೊಮ್ಮಾಯಿ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಈ ಸುಂದರ ಕ್ಷಣಕ್ಕೆ ಸಾಕ್ಷಿ ಆಗಲಿದ್ದಾರೆ.
ಅಭಿಮಾನಿಗಳು ಈ ಸುಸಂದರ್ಭದಲ್ಲಿ ಮತ್ತೊಮ್ಮೆ ನೆಚ್ಚಿನ ನಟನನ್ನು ನೆನೆಯುತ್ತಿದ್ದಾರೆ. ಡಾ. ವಿಷ್ಣುವರ್ಧನ್ ಜೊತೆಗೆ ಸಾಹಸ ಸಿಂಹ ಬಿರುದು ಸೇರಿಕೊಂಡಿತ್ತು. ಅಭಿಮಾನಿಗಳು ಇಂದಿಗೂ ಸಾಹಸ ಸಿಂಹ ವಿಷ್ಣುವರ್ಧನ್ ಎಂದೇ ಕರೆಯುತ್ತಾರೆ. ಅಭಿಮಾನಿಗಳು ಈ ಬಿರುದನ್ನು ದಾದಾಗೆ ಕೊಟ್ಟಿದ್ದೇನೋ ನಿಜ. ಆದರೆ ದಾದಾ ಸಿನಿಮಾಗಳಲ್ಲಿ ಸಿಂಹದ ರೀತಿ ಘರ್ಜಿಸುತ್ತಿದ್ದರು ಎನ್ನುವ ಕಾರಣಕ್ಕೆ ಈ ಬಿರುದನ್ನು ಅಭಿಮಾನಿಗಳು ಕೊಟ್ಟಿಲ್ಲವಂತೆ. ಅದಕ್ಕೆ ಅಭಿಮಾನಿಗಳು ಕೊಟ್ಟ 2 ಕಾರಣಗಳು ಏನು? ಎನ್ನುವುದನ್ನು ದಶಕಗಳ ಹಿಂದೆ ಸಂದರ್ಶನವೊಂದರಲ್ಲಿ ಸ್ವತಃ ವಿಷ್ಣುವರ್ಧನ್ ಹಂಚಿಕೊಂಡಿದ್ದರು.
'ಸಾಹಸ ಸಿಂಹ' ಚಿತ್ರದಲ್ಲಿ ನಟಿಸಿದ ಕಾರಣಕ್ಕೆ ವಿಷ್ಣುಗೆ ಈ ಬಿರುದು ಬಂತು ಎಂದು ಸಾಕಷ್ಟು ಜನ ಅಂದುಕೊಂಡಿದ್ದಾರೆ. ಆದರೆ ಅಂದು ಈ ಬಗ್ಗೆ ದಾದಾ ಹೇಳಿದ್ದು ಏನು ಗೊತ್ತಾ? ಮುಂದೆ ಓದಿ..

ಅಭಿಮಾನಿಗಳು ಹೇಗೆ ಕರೆದರೂ ಚೆಂದ
'ಕದಂಬ' ಸಿನಿಮಾ ಬಿಡುಗಡೆಗೂ ಮುನ್ನ ಡಾ. ವಿಷ್ಣುವರ್ಧನ್ ಕಿರುತೆರೆ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಆ ಸಂದರ್ಶನದಲ್ಲಿ ತಮಗೆ ಸಿಕ್ಕಿದ್ದ ಸಾಹಸಸಿಂಹ ಬಿರುದಿನ ಬಗ್ಗೆ ಮಾತನಾಡಿದ್ದರು. "ಕಲಾವಿದರು ಅಭಿಮಾನಿಗಳ ಪಾಲಿಗೆ ಒಂದು ಮಗು ಅಥವಾ ಬೊಂಬೆ ತರಹ. ಅದಕ್ಕೆ ಅಲಂಕಾರಗಳನ್ನು ಮಾಡುತ್ತಾರೆ. ಅಲಂಕಾರ ಮಾಡಿ ಅವರು ಏನು ಬೇಕಾದರೂ ಕರೆಯಬಹುದು. ಆ ಬೊಂಬೆನೋ ಮಗುನೋ ಅವರದ್ದಾದಾಗ ಅವರು ಸಾಹಸ ಸಿಂಹ ಅಂಥಾದರೂ ಕರೆಯಲಿ, ಅಭಿನವ ಭಾರ್ಗವ ಎಂದು ಬೇಕಾದರೂ ಕರೆಯಲಿ. ಎಲ್ಲಾ ಅವರ ಮನಸ್ಸಿನ ಪ್ರೀತಿಯ ಪ್ರಶಂಸೆ"

ವಿಷ್ಣುವರ್ಧನ್ ಅಂದು ಹೇಳಿದ್ದೇನು?
ಸಾಹಸಸಿಂಹ ಎನ್ನುವ ಬಿರುದು ಯಾಕೆ ಎಂದಾಗ ಅಭಿಮಾನಿಗಳು ಹೇಳಿದರು. "ಚಿತ್ರರಂಗದಲ್ಲಿ ನಾನು ಎದುರಿಸಿದ ಸಮಸ್ಯೆಗಳನ್ನು ಬೇರೆ ಯಾರು ಎದುರಿಸಲಿಲ್ಲ. ಆ ವಾತಾವರಣ ಯಾರಿಗೂ ಎದುರಾಗಿರಲಿಲ್ಲ. ಅದನ್ನೆಲ್ಲಾ ಮೀರಿ ನೀವು ಗೆದ್ದಿದ್ದೀರಾ. ಅದು ಬರೀ ಸಿಂಹಕ್ಕೆ ಮಾತ್ರ ಸಾಧ್ಯ. ಅದಕ್ಕಾಗಿ ನಿಮ್ಮನ್ನು ಸಾಹಸಸಿಂಹ ಎಂದು ಕರೆಯುತ್ತೇವೆ ಎಂದಿದ್ದರು. ಅಂದು ಅದನ್ನೆಲ್ಲಾ ಎದುರಿಸಿದ್ದು, ಎದುರಿಸುವಂತಾಗಿದ್ದು, ಎದುರಿಸಿ ಉಳಿಯುವಂತೆ ಆಗಿದ್ದು ನೋಡಿ ಅಭಿಮಾನಿಗಳು ಇದೆಲ್ಲಾ ಸಿಂಹಕ್ಕೆ ಮಾತ್ರ ಸಾಧ್ಯ ಎಂದರು."

70ರಷ್ಟು ಜನ ನಿಮ್ಮನ್ನು ನೋಡೇಯಿಲ್ಲ!
ಎರಡನೆಯದು ಏನು ಹೇಳಿದರು ಅಂದ್ರೆ, "ಸರ್ ಇಂಡಸ್ಟ್ರಿಯಲ್ಲಿ ಎಲ್ಲಾ ಕಲಾವಿದರು ನಮಗೆ ಸಿಗ್ತಾರೆ. ಯಾವುದಾದ್ರು ಕಾರ್ಯಕ್ರಮದಲ್ಲಿ ಅಥವಾ ಅಲ್ಲಿ ಇಲ್ಲಿ ಸಿಗುತ್ತಾರೆ. ಆದರೆ ನಿಮ್ಮನ್ನು ಎಲ್ಲೂ ನೋಡಿಲ್ಲ. ರಾಜ್ಯದಲ್ಲಿ 70ರಷ್ಟು ಜನ ನಿಮ್ಮನ್ನು ನೋಡೇಯಿಲ್ಲ. ಯಾಕೆ ನೋಡಲು ಸಿಕ್ಕಿಲ್ಲ ಎಂದು ನೋಡಿದ್ವಿ. ಕಾಡಿಗೆ ಹೋದರೆ ಏನೇನು ಪ್ರಾಣಿ ನೋಡ್ತೀವಿ, ಆನೆ, ಜಿಂಕೆ, ಚಿರತೆ, ಕಾಡೆಮ್ಮೆ ನೋಡಬಹುದು. ಆದರೆ ಸಿಂಹ ನೋಡೋಕೆ ಸಿಕ್ತಾ ಅಂದ್ರೆ ಇಲ್ಲ. ಕಾಣಿಸಲ್ಲ ಅದು. ಎಲ್ಲರಿಗೂ ಸಿಗಲ್ಲ ಅದು, ನೀವು ಕೂಡ ಸಿಂಹದ ರೀತಿ ಎಲ್ಲರಿಗೂ ಸಿಗಲ್ಲ. ಅದಕ್ಕೆ ನಾವು ನಿಮ್ಮನ್ನು ಆ ರೀತಿ ಕರೀತಿವಿ ಎಂದರು. ಅಭಿಮಾನಿಗಳ ವಿಶ್ಲೇಷಣೆ ಇಷ್ಟ ಆಯ್ತು. ನನ್ನನ್ನು ಕೇಳಿದ್ರು, ನಾನು ಹೇಳಿದೆ ನೀವು ಹೇಗೆ ಕರೆದರೂ ಚೆಂದ, ಅದನ್ನು ಅನುಭವಿಸುತ್ತೇವೆ" ಎಂದು ಅಭಿಮಾನಿಗಳ ಜೊತೆಗಿನ ಮಾತುಕತೆಯನ್ನು ವಿಷ್ಣುವರ್ಧನ್ ನೆನಪಿಸಿಕೊಂಡಿದ್ದರು.


Click it and Unblock the Notifications