'ಕಿಂದರಿ ಜೋಗಿ' ಸಮಯದಲ್ಲೇ ರವಿಚಂದ್ರನ್ ಮೇಲೆ ಹಂಸಲೇಖ ಬೇಸರಗೊಂಡಿದ್ದೇಕೆ?
ವಿ. ರವಿಚಂದ್ರನ್ ಹಾಗೂ ಹಂಸಲೇಖ ಕನ್ನಡ ಚಿತ್ರರಂಗದ ಅಪರೂಪದ ಜೋಡಿ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದಿರುವ ಎಲ್ಲಾ ಸಿನಿಮಾ ಆಲ್ಬಮ್‌ಗಳು ಸೂಪರ್ ಹಿಟ್. ಎಲ್ಲಾ ಹಾಡುಗಳು ಇವತ್ತಿಗೂ ಸಿನಿರಸಿಕರ ಫೇವರಿಟ್. ಬಹಳ ಆತ್ಮೀಯರಾಗಿದ್ದವರು ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು ಗೊತ್ತೇಯಿದೆ.
'ಪ್ರೇಮಲೋಕ' ಚಿತ್ರದಿಂದ ಶುರುವಾದ ಇವರಿಬ್ಬರು ಕಾಂಬಿನೇಷನ್ ದಶಕದ ಕಾಲ ಮುಂದುವರೆದಿತ್ತು. 'ಪ್ರೀತ್ಸೋದ್ ತಪ್ಪಾ?' ಸಿನಿಮಾಗಳ ಟ್ಯೂನ್ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಆ ಬಳಿಕ ಇಬ್ಬರೂ ದೂರಾಗಲು ಪ್ರಾರಂಭಿಸಿದರು. ಕೊನೆಗೆ ದೂರಾಗಿಯೇ ಬಿಟ್ಟರು. ಬಳಿಕ ಒಂದಾಗಿದ್ದು ಗೊತ್ತೇಯಿದೆ. ಆದರೆ ನಿಮಗೆ ಗೊತ್ತಾ ಬಹಳ ಹಿಂದೆಯೇ ರವಿ ಹಾಗೂ ಹಂಸಲೇಖ ನಡುವೆ ಅದೊಂದು ಕಾರಣಕ್ಕೆ ಭಿನ್ನಾಭಿಪ್ರಾಯ ಮೂಡಿತ್ತು. ಅದು ಸಿನಿಮಾ ಸಂಗೀತಕ್ಕೆ ಸಂಬಂಧಿಸಿದ ವಿಚಾರಕ್ಕಲ್ಲ. ಬದಲಿಗೆ 'ಕಿಂದರಿ ಜೋಗಿ' ಚಿತ್ರದ ಟೈಟಲ್ ವಿಚಾರಕ್ಕೆ.

ಹಿರಿಯ ಸಿನಿಮಾ ಪತ್ರಕರ್ತರಾದ ಎನ್ ಎಸ್ ಶ್ರೀಧರ ಮೂರ್ತಿ ಅವರು ಹಂಸಲೇಖ ಅವರ ಆತ್ಮಕಥೆ ಬರೆಯುವ ಪ್ರಯತ್ನದಲ್ಲಿದ್ದಾರೆ. ಹಾಗಾಗಿ ಹಂಸಲೇಖ ಜೊತೆಗಿನ ಒಡನಾಟದಲ್ಲಿ ಅವರಿಂದಲೇ ತಿಳಿದುಕೊಂಡ ಸಂಗತಿಗಳನ್ನು ಟೋಟಲ್ ಕನ್ನಡ ಯೂಟ್ಯೂಬ್ ಚಾನಲ್‌ನಲ್ಲಿ ವಿವರಿಸುತ್ತಾ ಬರುತ್ತಿದ್ದಾರೆ. ಅದೇ ರೀತಿ 'ಕಿಂದರಿ ಜೋಗಿ' ಚಿತ್ರದ ಸಮಯದಲ್ಲಿ ರವಿಚಂದ್ರನ್ ನಡೆಗೆ ಹಂಸಲೇಖ ಯಾಕೆ ಬೇಸರಗೊಂಡಿದ್ದರು ಎನ್ನುವುದನ್ನು ಶ್ರೀಧರ ಮೂರ್ತಿ ತಿಳಿಸಿದ್ದಾರೆ.
ರವಿಚಂದ್ರನ್ ನಿರ್ಮಿಸಿ, ನಿರ್ದೇಶಿಸಿ ನಟಿಸಿದ್ದ ಸಿನಿಮಾ 'ಕಿಂದರಿಜೋಗಿ'. ರೇಣುಕಾಶರ್ಮಾ ಅವರ ಜೊತೆ ಸೇರಿ ಕ್ರೇಜಿಸ್ಟಾರ್ ಕಥೆ ಮಾಡಿದ್ದರು. ಹಂಸಲೇಖ ಸಂಗೀತದಲ್ಲಿ ಹಾಡುಗಳು ಹಿಟ್ ಆಗಿ ಚಿತ್ರಕ್ಕೆ ಒಳ್ಳೆ ಮೈಲೇಜ್ ತಂದುಕೊಟ್ಟಿತ್ತು. ಅಂದಹಾಗೆ 'ಕಿಂದರಿಜೋಗಿ' ಟೈಟಲ್ ಹಂಸಲೇಖ ಅವರದ್ದಾಗಿತ್ತು. ಇದೇ ಕಾರಣಕ್ಕೆ ಹಂಸಲೇಖ ಕೊಂಚಮಟ್ಟಿಗೆ ಬೇಸರಗೊಂಡಿದ್ದರು ಎಂದು ಶ್ರೀಧರ ಮೂರ್ತಿ ಹೇಳಿದ್ದಾರೆ.
"ರವಿಚಂದ್ರನ್ ಹಾಗೂ ಹಂಸಲೇಖ ನಡುವೆ ಬಹಳ ತಡವಾಗಿ ಬಿರುಕು ಮೂಡಿತ್ತು. ಆದರೆ ಅದಕ್ಕೂ ಮುನ್ನ 'ಕಿಂದರಿಜೋಗಿ' ಸಣ್ಣ ಮನಸ್ತಾಪವಾಗಿತ್ತು. ಸ್ವತಃ ಹಂಸಲೇಖ ಸರ್ ಹೇಳುವಂತೆ ಬಹಳ ಕ್ರಿಯೇಟಿವ್ ಆಗಿರುವ ಇಬ್ಬರ ವ್ಯಕ್ತಿಗಳ ನಡುವೆ ಭಿನ್ನಾಭಿಪ್ರಾಯ ಸಹಜ. 'ಕಿಂದರಿಜೋಗಿ' ಹಂಸಲೇಖ ಅವರ ಮಹತ್ವಾಕಾಂಕ್ಷೆಯ ಸಿನಿಮಾ ಆಗಿತ್ತು. ಫ್ಯಾಂಟಸಿಯಾಗಿ ಕಥೆ ಬರೆದಿದ್ದರು. ಹಾಲಿವುಡ್ ರೇಂಜ್ ಸಿನಿಮಾ ಆಗಬೇಕಿತ್ತು" ಎಂದು ಹಂಸಲೇಖ ಹೇಳಿದ ಆ ಘಟನೆಯನ್ನು ಶ್ರೀಧರ್ ಮೂರ್ತಿ ನೆನಪಿಸಿಕೊಂಡಿದ್ದಾರೆ.
"ಆಗಾಗ್ಗೆ ಹಂಸಲೇಖ ಅವರು ಮ್ಯೂಸಿಕ್ ಮಾಡುತ್ತಿದ್ದ ಜಾಗಕ್ಕೆ ರವಿಚಂದ್ರನ್ ಬರುತ್ತಿದ್ದರು. ಒಮ್ಮೆ ಟೇಬಲ್ ಮೇಲೆ 'ಕಿಂದರಿಜೋಗಿ' ಎಂದು ಟೈಟಲ್ ಬರೆದ ಪುಸ್ತಕ ನೋಡಿದ್ದರು. ಕಥೆ ಓದಿ ಇಷ್ಟವಾಗಲಿಲ್ಲ, ಆದರೆ ಟೈಟಲ್ ಬಹಳ ಚೆನ್ನಾಗಿದೆ ರಿಜಿಸ್ಟರ್ ಮಾಡಿಸ್ತೀನಿ ಎಂದರಂತೆ. ಸರ್ ಬೇಡ ನಾನು ಹೇಳುವ ಕಥೆ ಪೂರ್ತಿ ಕೇಳಿ, ಇದು ಬೇರೆಯದ್ದೇ ಸಿನಿಮಾ ಆಗುತ್ತದೆ ಎಂದು ಹಂಸಲೇಖ ಹೇಳಿದರೂ ಕೇಳದೇ, ಟೈಟಲ್ ರಿಜಿಸ್ಟರ್ ಮಾಡಿಸಿ ಸಿನಿಮಾ ಮಾಡಿಬಿಟ್ಟರು. ಹಾಗಾಗಿ ಹಂಸಲೇಖ ಅವರಿಗೆ ನಿರಾಸೆಯಾಗಿತ್ತು. ನನ್ನ ಕನಸ್ಸಿನ ಸಿನಿಮಾ ಕಥೆ ಪೂರ್ಣ ಆಗುವ ಮುನ್ನ ಆ ಟೈಟಲ್ ಬಳಸಿ ಸಿನಿಮಾ ಮಾಡಿಬಿಟ್ಟರಲ್ಲ, ಎಂದು ಬೇಸರಗೊಂಡಿದ್ದರಂತೆ" ಎಂದು ವಿವರಿಸಿದ್ದಾರೆ.
ಅದೇ ಕಥೆಯನ್ನು ಇಟ್ಟುಕೊಂಡು ಮುಂದೆ 'ಗಿಟಾರ್' ಎಂಬ ಸಿನಿಮಾ ಮಾಡಲು ಹಂಸಲೇಖ ಯತ್ನಿಸಿದ್ದರು. ಆದರೆ ಅದು ಮುಂದುವರೆಯಲೇ ಇಲ್ಲ. 'ಶಕುಂತಲೆ' ಹಾಗೂ 'ಗಿಟಾರ್' ಎಂಬ ಎರಡು ಸಿನಿಮಾ ಮಾಡುವ ಕನಸು ಹಂಸಲೇಖ ಅವರಿಗೆ ಇಂದಿಗೂ ಇದೆ. 'ಕಿಂದರಿಜೋಗಿ' ಕೊಂಚಮಟ್ಟಿಗೆ ರವಿ ಹಾಗೂ ಹಂಸಲೇಖ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು.
ಇನ್ನು ರವಿಚಂದ್ರನ್ ಹಾಗು ಹಂಸಲೇಖ ದೂರಾಗುವುದಕ್ಕೆ ಕಾರಣ ಏನು? ಎನ್ನುವ ಬಗ್ಗೆ ಇಬ್ಬರೂ ಕೆಲ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. 13 ವರ್ಷಗಳ ಹಿಂದೆ ಖುದ್ದು ಇವರಿಬ್ಬರು ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಒಟ್ಟಿಗೆ ಕೂತು ಸಂದರ್ಶನದಲ್ಲಿ ಮಾತನಾಡಿದ್ದರು. "ಟ್ಯೂನ್ ವಿಚಾರದಲ್ಲಿ ನಮ್ಮಬ್ಬರ ನಡುವೆ ಬಹಳ ಹೊಂದಾಣಿಕೆ ಇತ್ತು. ನನಗೆ ಏನು ಬೇಕು ಎನ್ನುವುದು ಅವ್ರಿಗೆ ಗೊತ್ತಿತ್ತು. ಅವ್ರು ನನಗೆ ಏನು ಬೇಕು ಎನ್ನುವುದನ್ನು ಕೊಡುತ್ತಾರೆ ಎಂದು ನನಗೂ ಅರಿವಿತ್ತು. ಆದರೆ 'ಪ್ರೀತ್ಸೋದ್ ತಪ್ಪಾ' ಸಿನಿಮಾ ಟ್ಯೂನ್ ಹಾಕುವ ವೇಳೆ ಭಿನ್ನಾಭಿಪ್ರಾಯ ಮೂಡಿತ್ತು. ಆಗ ಟ್ರೆಂಡ್ ಬದಲಾಗುತ್ತಿತ್ತು. ಟ್ಯೂನ್, ಸೌಂಡಿಂಗ್ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು" ಎಂದು ಇಬ್ಬರು ಹೇಳಿದ್ದರು.
ಅಲ್ಲಿಯವರೆಗೂ ಹಂಸಲೇಖ ಹಾಡಿದ ಟ್ಯೂನ್‌ಗಳನ್ನು ನಾನು ಓಕೆ ಮಾಡುತ್ತಿದ್ದೆ. ಅದೇ ಮೊದಲ ಬಾರಿಗೆ ಆ ಚಿತ್ರಕ್ಕೆ ಹಾಕಿದ 12 ಟ್ಯೂನ್‌ಗಳನ್ನು ನಾನು ಬೇಡ ಎಂದು ತಿರಸ್ಕರಿಸಿದ್ದೆ. ಅದಕ್ಕೂ ಮುನ್ನ ಹಂಸಲೇಖ ನನಗಾಗಿ ಎರಡನೇ ಟ್ಯೂನ್ ಹಾಕಿದ್ದೇ ಇಲ್ಲ. ನನ್ನ ಕೆಲಸಕ್ಕೆ ಅವ್ರ ಬೆಂಬಲ, ಅವ್ರ ಕೆಲಸಕ್ಕೆ ನನ್ನ ಬೆಂಬಲ ಸದಾ ಇರುತ್ತಿತ್ತು" ಎಂದು ರವಿಚಂದ್ರನ್ ಹೇಳಿದ್ದರು.
ನಾವಿಬ್ಬರೂ ದೂರಾಗಿದ್ದು ಒಳ್ಳೆ ಕಾರಣಕ್ಕೆ ಅನಿಸುತ್ತದೆ. ದೂರಾದಾಗಲೇ ವಿರಹ, ಪ್ರೀತಿ ಗೊತ್ತಾಗೋದು. ನಾವಿಬ್ಬರೂ ಹೀಗೆ ದೂರಾಗಿದ್ದಕ್ಕೆ ಅವ್ರು ಹಂಸಲೇಖ ದೇಸಿ ವಿದ್ಯಾ ಸಂಸ್ಥೆ ಮಾಡ್ತಿರಲಿಲ್ಲ, ನಾನು 'ಏಕಾಂಗಿ' ಆಗುತ್ತಿರಲಿಲ್ಲ ಎಂದು ಕ್ರೇಜಿಸ್ಟಾರ್ ವಿಶ್ಲೇಷಿಸಿದ್ದರು.
ತಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಲು ಕಾರಣ ಏನು ಎನ್ನುವ ಮತ್ತೊಂದು ಸಂಗತಿಯನ್ನು ರವಿಚಂದ್ರನ್ ಟಿವಿ ವಿಕ್ರಮ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. "ಯಾರೇ ನೀನು ಚೆಲುವೆ ಚಿತ್ರಕ್ಕೆ ಹಂಸಲೇಖ ಸಂಗೀತ ಬೇಡ, ವಿ. ಮನೋಹರ್ ಮಾಡಲಿ ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದ್ದರು. ಹಂಸಲೇಖ ಇಲ್ಲದೇ ನಾನು ಸಿನಿಮಾನೇ ಮಾಡಲ್ಲ, ನಿಮ್ಮ ಹಣ ವಾಪಸ್ ಕೊಡ್ತೀನಿ ಎಂದಿದ್ದೆ" ಎಂದು ಮೆಲುಕು ಹಾಕಿದ್ದರು.
'ಯಾರೇ ನೀನು ಚೆಲುವೆ' ಸಕ್ಸಸ್ ಬಳಿಕ ಸಂಭ್ರಮಾಚರಣೆ ಕಾರ್ಯಕ್ರಮದ ಪತ್ರಿಕೆ ವಿಚಾರದಲ್ಲಿ ಹೇಗೆ ಭಿನ್ನಾಭಿಪ್ರಾಯ ಮೂಡಿತ್ತು ಎಂದು ಕ್ರೇಜಿಸ್ಟಾರ್ ಹೇಳಿದ್ದರು. "ಸಿನ್ಮಾ ಸಕ್ಸಸ್ ಆಯಿತು. ಸಕ್ಸಸ್ ಕಾರ್ಯಕ್ರಮಕ್ಕೆ ಇನ್ವಿಟೇಷನ್ ಮಾಡಿಸಬೇಕಿತ್ತು. ರಾಕ್‌ಲೈನ್ ಆಗ ಇಂಡಸ್ಟ್ರಿಗೆ ಹೊಸಬರು. ಅವ್ರಿಗೆ ಇನ್ವಿಟೇಷನ್ ಐಡಿಯಾ ಇರಲಿಲ್ಲ. ಸರಿ ನನಗೆ ಡಿಸೈನ್ ಮಾಡೋಕೆ ಹೇಳಿದರು. ನಾನು ಹೇಗೆ ಇರಬೇಕು ಎಂದು ಐಡಿಯಾ ಕೊಟ್ಟೆ. ಆದರೆ ಇನ್ವಿಟೇಷನ್‌ನಲ್ಲಿ ಹಂಸಲೇಖ ಹೆಸರು ಹಾಕುವುದನ್ನು ಅವ್ರು ಮರೆತ್ತಿದ್ದರು. ಆದರೆ ಬೇಕಂತಲೇ ರವಿಚಂದ್ರನ್ ನನ್ನ ಹೆಸರು ಹಾಕಿಸಿಲ್ಲ ಎಂದು ಹಂಸಲೇಖ ಭಾವಿಸಿದ್ದರು. ಅದು ನನಗೆ ಕೋಪ ತಂದಿತ್ತು. ಅಲ್ಲಿಂದ ಮುಂದೆ ಸಣ್ಣ ಸಣ್ಣದಾಗಿ ಮನಸ್ತಾಪ ಮೂಡಿ, ದೊಡ್ಡದಾಗುತ್ತಾ ಹೋಯಿತು" ಎಂದು ರವಿಚಂದ್ರನ್ ಸ್ಪಷ್ಟನೆ ಕೊಟ್ಟಿದ್ದರು.
ಹಂಸಲೇಖ ಇಲ್ಲದೇ ಸಿನ್ಮಾ ಮಾಡಲ್ಲ ಎಂದಿದ್ದ ನಾನು ಇನ್ವಿಟೇಷನ್‌ನಲ್ಲಿ ಅವ್ರ ಹೆಸರು ಯಾಕೆ ಹಾಕಿಸಲ್ಲ? ಅವ್ರ ಹೆಸರು ಹಾಕಿಸುವುದರಿಂದ ನನಗೇನು ನಷ್ಟ? ಆದರೆ ಅವ್ರು ಯಾಕೆ ಆ ರೀತಿ ಅಂದುಕೊಂಡರೋ ನನಗಂತೂ ಗೊತ್ತಿಲ್ಲ. ಹಾಗಂತ ನಾವು ಯಾವತ್ತೂ ಕಿತ್ತಾಡಲಿಲ್ಲ. ನಾನೇ ಹಂಸಲೇಖ ಅವ್ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರೂ ಅವ್ರ ಸಾಧನೆಗೆ ಕ್ರೆಡಿಟ್ಟು ಅವ್ರಿಗೆ ಸಲ್ಲಬೇಕು. ನಾವಿಬ್ಬರೂ ಯಾವತ್ತೂ ಒಟ್ಟಿಗೆ ಕೆಲಸ ಮಾಡಲಿಲ್ಲ, ನಾವು ಒಬ್ಬರಿಗೊಬ್ಬರು ಒಳಗೆ ಸವಾಲು ಹಾಕಿಕೊಂಡು ಕೆಲಸ ಮಾಡಿದ್ದೆವು. ಹಾಗಾಗಿ ಎಲ್ಲಾ ಹಾಡುಗಳು ಹಿಟ್ ಆಗಿತ್ತು ಎಂದು ರವಿಚಂದ್ರನ್ ವಿವರಿಸಿದ್ದರು. ಒಟ್ಟಾರೆ ಇವರಿಬ್ಬರ ಕಾಂಬಿನೇಷನ್ ಅನ್ನು ಕನ್ನಡ ಸಿನಿರಸಿಕರು ಮಿಸ್ ಮಾಡಿಕೊಳ್ಳುತ್ತಾರೆ.


Click it and Unblock the Notifications











