ಕನ್ನಡ ಚಿತ್ರರಂಗದಿಂದ ದೂರವಾಗಿದ್ದೇಕೆ ಜಿಂಕೆ ಮರಿ ? ನಂದ ಲವ್ಸ್ ನಂದಿತಾ ನಂತರ 04 ವರ್ಷ ಖಾಲಿ ಕುಳಿತಿದ್ದೇಕೆ ಶ್ವೇತಾ..?
ಶ್ವೇತಾ ನಿಮಗೆ ನೆನಪಿರಬೇಕು.. ? ನಂದ ಲವ್ಸ್ ನಂದಿತಾ ಚಿತ್ರದ ಜಿಂಕೆ ಮರಿ. ಕೇವಲ ಒಂದು ಹಾಡಿನ ಮೂಲಕ ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ, ಕರುನಾಡಿನೆಲ್ಲೆಡೆ ಮನೆ ಮಾತಾದ ಶ್ವೇತಾ ಕನ್ನಡ ಚಿತ್ರರಂಗದಲ್ಲಿಯೇ ತಮ್ಮ ಕಲಾ ಸೇವೆ ಮುಂದುವರೆಸುತ್ತಾರೆ ಎಂದು ಎಲ್ಲರು ಅಂದುಕೊಂಡಿದ್ದರು.
ಆದರೆ.. ಬದುಕು ಅಂದುಕೊಂಡತೆ ಅಲ್ಲ. ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಶ್ವೇತಾಗೆ ಸಿಕ್ಕಿದ್ದು ಹೆಸರಷ್ಟೇ ಹೊರತು ಅವಕಾಶಗಳಲ್ಲ. ಇದಕ್ಕೆ ಕೈಗನ್ನಡಿ ಅನ್ನುವಂತೆ ನಂದ ಲವ್ಸ್ ನಂದಿತಾ ಚಿತ್ರದ ನಂತರ ನಾಲ್ಕು ವರ್ಷ ಖಾಲಿ ಕುಳಿತುಕೊಂಡಿದ್ದರು ಶ್ವೇತಾ.

ಅವಕಾಶದ ಬಾಗಿಲು ಇಂದಲ್ಲ, ನಾಳೆ ತೆರೆಯಬಹುದು ಎಂಬ ನಿರೀಕ್ಷೆಯಲ್ಲಿಯೇ ನಾಲ್ಕು ವರ್ಷ ತಳ್ಳಿದ ಶ್ವೇತಾ, ಆ ನಂತರ ಸೀದಾ ಹೋಗಿದ್ದು ಚೆನೈಗೆ. ತಮ್ಮ ಕನ್ನಡದ ಮೊದಲ ಮತ್ತು ಏಕೈಕ ಚಿತ್ರದಿಂದ ಸಿಕ್ಕ ಜನಪ್ರಿಯತೆಯಿಂದ ತಮ್ಮ ಹೆಸರಿನ ಮುಂದೆ ನಂದಿತಾ ಎಂದು ಸೇರಿಸಿಕೊಂಡ ಶ್ವೇತಾ ಅಟ್ಟಕತ್ತಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಆ ನಂತರ ಒಂದಾದ ಮೇಲೊಂದು ಸಿನಿಮಾಗಳನ್ನ ಮಾಡಿದರು.
ಇನ್ನೂ ದೊಡ್ಡ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡು ದೊಡ್ಡಸ್ತಿಕೆ ಪ್ರದರ್ಶನ ಮಾಡುವ ನಟಿಯರ ನಡುವೆ, ಆ ಕಾಲದಲ್ಲಿಯೇ ವಿಜಯ್ ಸೇತುಪತಿ, ನಿಖಿಲ್ ಸಿದ್ಧಾರ್ಥ್, ನಿತಿನ್ ಜೊತೆ ನಂದಿತಾ ಶ್ವೇತಾ ತೆರೆ ಹಂಚಿಕೊಂಡರು. ಇಳಯ ದಳಪತಿ ವಿಜಯ್, ಸುದೀಪ್, ಶ್ರೀದೇವಿ, ಅಭಿನಯದ ಪುಲಿ ಚಿತ್ರದಲ್ಲಿಯೂ ಕಾಣಿಸಿಕೊಂಡರು.

ಇಂಥ ಶ್ವೇತಾ ಈ ಹನ್ನೆರಡು ವರ್ಷದಲ್ಲಿ ಮೂವತ್ತು ಪ್ಲಸ್ ಸಿನಿಮಾ ಮಾಡಿದ್ದಾರೆ. ಆದರೆ ಆ ಮೂವತ್ತರಲ್ಲಿ ನಂದ ಲವ್ಸ್ ನಂದಿತಾ ಹೊರತು ಪಡಿಸಿದರೆ ಬೇರೆ ಯಾವ ಕನ್ನಡ ಸಿನಿಮಾ ಇಲ್ಲ. ಹಾಗಂಥ ಶ್ವೇತಾ ಕನ್ನಡ ಚಿತ್ರರಂಗಕ್ಕೆ ಮರಳಿ ಬರುವ ಪ್ರಯತ್ನವನ್ನ ಮಾಡಿಯೇ ಇಲ್ಲ ಅಂತೇನ್ ಇಲ್ಲ. ಮರಳಿ ಬರುವ ಪ್ರಯತ್ನವನ್ನ ಶ್ವೇತಾ ಮಾಡಿದ್ದರು ಕೂಡ. 2010ರಲ್ಲಿ ಚಾಮರಾಜಪೇಟೆ ಎಂಬ ಚಿತ್ರಕ್ಕೆ ನಂದಿತಾ ನಾಯಕಿಯಾಗಿ ಆಗಮಿಸಿದ್ದರು. ಆದರೆ ನಂದಿತಾ ಬಂದಿದ್ದೂ ಸುದ್ದಿಯಾಗಲಿಲ್ಲ. ಯಾಕೆಂದರೆ ಆ ಸಿನಿಮಾ ಪೂರ್ತಿಯಾಗಲೇ ಇಲ್ಲ.
ಇನ್ನೂ.. ಕೆ.ಜಿ.ಎಫ್ ಮೊದಲ ಭಾಗದ ಯಶಸ್ಸಿನ ನಂತರ, ಯಶ್ ಮೈ ನೇಮ್ ಇಸ್ ಕಿರಾತಕ ಚಿತ್ರವನ್ನ ಆರಂಭ ಮಾಡಿದ್ದರಲ್ಲ..? ಆ ಚಿತ್ರಕ್ಕೂ ಇದೇ ಶ್ವೇತಾ ನಂದಿತಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ. ದುರಾದೃಷ್ಟ.. ಶ್ವೇತಾ ನಂದಿತಾ ಅಭಿನಯದ ಈ ಚಿತ್ರದ ಚಿತ್ರೀಕರಣ ಹತ್ತು ಹದಿನೈದು ದಿನದ ಮೇಲೆ ಒಂದು ದಿನವೂ ನಡೆಯಲಿಲ್ಲ. ಚಿತ್ರ ಬರಲಿಲ್ಲ.

ಮೈ ನೇಮ್ ಇಸ್ ಕಿರಾತಕ ಅರ್ಧಕ್ಕೆ ನಿಂತ ನಂತರ ಕನ್ನಡ ಚಿತ್ರರಂಗದ ಕಡೆ ಮತ್ತೆ ಬಾರದ ಶ್ವೇತಾ ನಂದಿತಾ, ಇತ್ತೀಚೆಗಷ್ಟೇ ಬಿಡುಗಡೆಯಾದ ಮಂಗಳವಾರಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಅಭಿನಯ ಸಾಮರ್ಥ್ಯದ ಪ್ರದರ್ಶನವನ್ನು ಕೂಡ ಮಾಡಿದ್ದರು. ಸದ್ಯಕ್ಕೆ ಶ್ವೇತಾ ಕೈಯಲ್ಲಿ ಒಂದು ತೆಲುಗು ಮತ್ತೆ ಒಂದು ತಮಿಳು ಸಿನಿಮಾ ಇದೆ.
ಒಟ್ನಲ್ಲಿ ಪ್ರತಿಭಾ ಪಲಾಯನ ಅನ್ನೋದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು, ಪ್ರತಿಭೆ ಇದ್ದವರನ್ನ ಹುಡ್ಕಿ ಕರೆತಂದು ಅಪ್ಪಿ ಒಪ್ಪಿಕೊಳ್ಳುವುದು ನಡೀತಾನೆ ಇದೆ. ಇದಕ್ಕೆ ಕನ್ನಡದಿಂದ ವಲಸೆ ಹೋಗಿ ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ನೆಮ್ಮದಿಯನ್ನ ಕಂಡು ಕೊಂಡಿರುವ ಶ್ವೇತಾ ನಂದಿತಾ ಸದ್ಯಕ್ಕೆ ಅತ್ಯುತ್ತಮ ಉದಾಹರಣೆ'


Click it and Unblock the Notifications