ತೆರೆಮೇಲೆ ಅಣ್ಣಾವ್ರು, ವಿಷ್ಣು, ಅಂಬಿ, ಶಂಕ್ರಣ್ಣ ಮಧ್ಯೆ 'ಯುದ್ಧ' ನಡೆಯಬೇಕಿತ್ತು; ಕೊನೆಗೆ ಆಗಿದ್ದೇನು?
ಘೋಷಣೆಯಾದ ಚಿತ್ರಗಳು, ಮುಹೂರ್ತ ಮುಗಿಸಿದ ಚಿತ್ರಗಳು ಅಷ್ಟೇ ಯಾಕೆ ಒಂದಷ್ಟು ದಿನ ಚಿತ್ರೀಕರಣಗೊಂಡ ಸಿನಿಮಾಗಳು ಕೂಡ ಮುಂದುವರೆಯದೇ ನಿಂತ ಉದಾಹರಣೆಗಳಿವೆ. ಆದರೆ ಡಾ. ರಾಜ್, ವಿಷ್ಣು, ಅಂಬಿ, ಶಂಕರ್ ನಾಗ್ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ನಿಂತಿತ್ತು ಅಂದ್ರೆ ನಂಬ್ತೀರಾ?
ಮಲ್ಟಿಸ್ಟಾರರ್ ಸಿನಿಮಾಗಳನ್ನು ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಅದರಲ್ಲೂ ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿ ಸಮಾನ ತೂಕದ ಪಾತ್ರಗಳನ್ನು ಕಟ್ಟಿ ಸಿನಿಮಾ ಮಾಡಿ ಗೆಲ್ಲುವುದು ನಿರ್ಮಾಪಕ, ನಿರ್ದೇಶಕರಿಗೂ ಕಷ್ಟ. ಆದರೂ ಆಗೊಮ್ಮೆ ಈಗೊಮ್ಮೆ ಅಂತಹ ಪ್ರಯತ್ನ ನಡೆಯುತ್ತದೆ. ಡಾ. ರಾಜ್‌ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಕರಾಟೆ ಕಿಂಗ್ ಶಂಕರ್‌ನಾಗ್ ಕನ್ನಡ ಚಿತ್ರರಂಗದ ದಿಗ್ಗಜ ಕಲಾವಿದರು. ಈ ನಾಲ್ಕು ಜನರನ್ನು ಸೇರಿ ಒಟ್ಟಿಗೆ ಚಿತ್ರ ಮಾಡುವ ಪ್ರಯತ್ನ ನಡೆದಿತ್ತು.

ಖ್ಯಾತ ನಿರ್ದೇಶಕ ಡಿ. ರಾಜೇಂದ್ರ ಸಿಂಗ್ ಬಾಬು ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ವಿಷ್ಣುವರ್ಧನ್, ಅಂಬರೀಶ್‌ಗೆ ಬಹಳ ಆಪ್ತರಾಗಿದ್ದ ಬಾಬು ಇಬ್ಬರ ಜೊತೆಗೆ ಅದ್ಭುತ ಸಿನಿಮಾಗಳನ್ನು ತೆರೆಗೆ ತಂದವರು. ಆದರೆ ಅಣ್ಣಾವ್ರ ಜೊತೆ ಬಾಬು ಯಾಕೆ ಸಿನಿಮಾ ಮಾಡಲಿಲ್ಲ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತದೆ. ಆ ಬಗ್ಗೆ ಇದೀಗ ಸ್ವತಃ ಅವರೇ ಮಾತನಾಡಿದ್ದಾರೆ. ಒಂದು ಮೆಗಾ ಮಲ್ಟಿಸ್ಟಾರರ್ ಸಿನಿಮಾ ಮಾಡಲು ತಯಾರಿ ನಡೆಸಿದ್ದ ಬಗ್ಗೆ ಹೇಳಿದ್ದಾರೆ.
ಅಣ್ಣಾವ್ರ ಜೊತೆಗೆ ವಿಷ್ಣು, ಅಂಬಿ ಹಾಗೂ ಶಂಕ್ರಣ್ಣನನ್ನು ಒಟ್ಟಿಗೆ ಸೇರಿಸಿ 'ಯುದ್ಧ' ಚಿತ್ರ ಮಾಡಲು ಪ್ರಯತ್ನಿಸಿದ್ದಾಗಿ ರಾಜೇಂದ್ರ ಸಿಂಗ್ ಬಾಬು ವಿವರಿಸಿದ್ದಾರೆ. 'ಸುದ್ದಿಮನೆ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರುಮಾತನಾಡಿದ್ದಾರೆ. ಖ್ಯಾತ ಸಾಹಿತಿ ವಿಜಯ್ ಸಾಸನೂರ ಬರೆದ ಕಾದಂಬರಿಯನ್ನು ಸಿನಿಮಾ ಮಾಡಲು ಬಾಬು ಪ್ರಯತ್ನಿಸಿದ್ದರು. ಚಿತ್ರದಲ್ಲಿ ಬರುವ 3 ಪಾತ್ರಗಳಿಗೆ ವಿಷ್ಣುವರ್ಧನ್, ಅಂಬರೀಶ್ ಹಾಗೂ ಶಂಕರ್‌ನಾಗ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. 'ಯುದ್ಧ' ಸಿನಿಮಾ ಘೋಷಣೆ ಕೂಡ ಆಗಿತ್ತು.
ಅದೇ ಸಮಯದಲ್ಲಿ ಡಾ. ರಾಜ್‌ಕುಮಾರ್ ಸಹ 'ಯುದ್ಧ' ಸಿನಿಮಾ ಮಾಡಲು ಇಚ್ಛಿಸಿದ್ದರು. ರಾಜೇಂದ್ರ ಸಿಂಗ್ ಬಾಬು ಅವರನ್ನು ಕರೆದು ಕಥೆ ಕೂಡ ಕೇಳಿದ್ದರು. ಅಣ್ಣಾವ್ರು ನಟಿಸಲು ಒಪ್ಪಿದ್ದರಂತೆ. ಆದರೆ ಚಿತ್ರದಲ್ಲಿ ಮೂರು ಪಾತ್ರಗಳಿವೆ. ಈಗಾಗಲೇ ವಿಷ್ಣು, ಅಂಬಿ, ಶಂಕರ್ ಕಾಂಬಿನೇಷನ್‌ನಲ್ಲಿ ಸಿನಿಮಾ ಘೋಷಣೆ ಆಗಿದೆ. ಇದೀಗ ಅಣ್ಣಾವ್ರು ನಟಿಸಬೇಕು ಅಂದ್ರೆ ಯಾವ ಪಾತ್ರ? ಎನ್ನುವ ಗೊಂದಲ ಶುರುವಾಯಿತು.

ಕಾದಂಬರಿಯಲ್ಲಿದ್ದ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲು ಅಣ್ಣಾವ್ರು ಇಷ್ಟಪಟ್ಟಿದ್ದರು. ಹಾಗಾಗಿ ಯಾರನ್ನು ಕೈ ಬಿಡುವುದು ಎನ್ನುವ ಯಕ್ಷ ಪ್ರಶ್ನೆ ಎದುರಾಗಿತ್ತು. ಅದಾಗಲೇ ಸಿನಿಮಾ ಘೋಷಣೆ ಆಗಿದ್ದರಿಂದ ಯಾರೋ ಒಬ್ಬರು ನಟಿಸಲ್ಲ ಎನ್ನುವುದು ತಪ್ಪಾಗುತ್ತದೆ. ಸಾಲದ್ದಕ್ಕೆ ಮೂವರು ನನ್ನ ಆತ್ಮೀಯ ಸ್ನೇಹಿತರು. ಕೊನೆಗೆ ವಿಷ್ಣುಗಾಗಿ ಮತ್ತೊಂದು ಪಾತ್ರ ಬರೆಯಲು ನಾನು ಮುಂದಾಗಿದ್ದೆ. ಡಾ. ರಾಜ್, ವಿಷ್ಣು, ಅಂಬಿ, ಶಂಕ್ರಣ್ಣ ಹೀಗೆ 4 ಜನ 'ಯುದ್ಧ' ಚಿತ್ರದಲ್ಲಿರಬೇಕಿತ್ತು ಎಂದು ಬಾಬು ನೆನಪಿಸಿಕೊಂಡಿದ್ದಾರೆ.
ಎಲ್ಲಾ ಓಕೆ ಆಯಿತು ಸಿನಿಮಾ ಶುರು ಮಾಡಬೇಕು ಎನ್ನುವಷ್ಟರಲ್ಲಿ ಯಾರೋ ಅಣ್ಣಾವ್ರು- ವಿಷ್ಣು ಜೊತೆ ನಟಿಸುವುದು ಸಮಸ್ಯೆ ಆಗುತ್ತದೆ ಎಂದು ಚಕಾರ ಎತ್ತಿದ್ದರಂತೆ. ಹಾಗಾಗಿ ಅಣ್ಣಾವ್ರು ಚಿತ್ರದಿಂದ ಹಿಂದೆ ಸರಿಯಲು ಮುಂದಾಗಿದ್ದರು. ಡಾ. ರಾಜ್ ಕೂಡ ನಟಿಸುತ್ತಾರೆ ಎಂದು ಅದಾಗಲೇ ಸುದ್ದಿ ಆಗಿದ್ದರಿಂದ ಯಾರೊಬ್ಬರನ್ನು ಬಿಟ್ಟು ಸಿನಿಮಾ ಮಾಡುವಂತೆ ಇರಲಿಲ್ಲ. ಅದೇ ಕಾರಣಕ್ಕೆ ವಿವಾದವೇ ಬೇಡ ಎಂದು ನಾನು ಸುಮ್ಮನಾದೆ. ಕೊನೆಗೆ ಮಾತುಕತೆಯಲ್ಲೇ 'ಯುದ್ಧ' ಸಿನಿಮಾ ನಿಂತು ಹೋಯಿತು ಎಂದು ಬಾಬು ಬೇಸರ ವ್ಯಕ್ತಪಡಿಸಿದ್ದಾರೆ.
ಆಗ ಮಲ್ಟಿಸ್ಟಾರರ್ ಸಿನಿಮಾಗಳ ಪರ್ವ ಶುರುವಾಗಿತ್ತು. ಹಿಂದಿಯಲ್ಲಿ 'ಶೋಲೆ' ಸಿನಿಮಾ ಬಂದಿತ್ತು. ಕಮಲ್-ರಜನಿಕಾಂತ್ ಒಟ್ಟಿಗೆ ನಟಿಸುತ್ತಿದ್ದರು, ಅಮಿತಾಬ್ - ಧರ್ಮೇಂದ್ರ, ಮಮ್ಮುಟಿ- ಮೋಹನ್ ಲಾಲ್ ಒಟ್ಟಿಗೆ ನಟಿಸಿದ್ದರು. ಪ್ರೇಕ್ಷಕರಿಗೆ ಮಲ್ಟಿಸ್ಟಾರರ್ ಸಿನಿಮಾ ನೋಡುವುದು ಅದ್ಭುತ ಅನುಭವ. 'ಗಂಧದಗುಡಿ' ಬಳಿಕ ಅಣ್ಣಾವ್ರು- ವಿಷ್ಣು ನಟಿಸಿದರೆ ಚೆನ್ನಾಗಿರುತ್ತದೆ. ವಿಷ್ಣು ಇದ್ದರೆ ಬೇಡ ಎಂದರು. ನಾನು ಅದು ಸಾಧ್ಯವೇ ಇಲ್ಲ, ಆತ ನನ್ನ ಸ್ನೇಹಿತ ಎಂದೆ. ಕೊನೆಗೆ ಬಜೆಟ್ ಹೆಚ್ಚಾಗುತ್ತದೆ ಎಂದರು, ನಾನೇ ಸಿನಿಮಾ ನಿರ್ಮಿಸುತ್ತೇನೆ ಎಂದೆ. ಆದರೂ ಸಾಧ್ಯವಾಗಲಿಲ್ಲ ಎಂದು ಬಾಬು ವಿವರಿಸಿದ್ದಾರೆ.
ವಿಜಯ ಸಾಸನೂರ ಬರೆದ 'ಶಬ್ದವೇದಿ', 'ಧ್ರುವತಾರೆ', 'ಜ್ವಾಲಾಮುಖಿ' ಸೇರಿ ಕೆಲ ಕಾದಂಬರಿಗಳು ಸಿನಿಮಾ ರೂಪ ಪಡೆದಿವೆ. ಒಟ್ಟಾರೆ ಕನ್ನಡ ಚಿತ್ರರಂಗದ ದಿಗ್ಗಜ ನಟರು ಒಟ್ಟಿಗೆ ನಟಿಸಬೇಕಿದ್ದ 'ಯುದ್ಧ' ಸಿನಿಮಾ ನಿರ್ಮಾಣ ನಿಂತಿದ್ದು ಬೇಸರದ ಸಂಗತಿ. ಇಂತಾದೊಂದು ಅದ್ಭುತ ಕಾದಂಬರಿ ಆಧರಿತ ಚಿತ್ರವನ್ನು ಕನ್ನಡ ಸಿನಿರಸಿಕರು ಮಿಸ್ ಮಾಡಿಕೊಂಡರು ಎನ್ನಬಹುದು.


Click it and Unblock the Notifications











