'ನಾಗರಹಾವು' ಬಳಿಕ ಪುಟ್ಟಣ್ಣ ನಿರ್ದೇಶನದಲ್ಲಿ ವಿಷ್ಣುವರ್ಧನ್ ನಟಿಸದಿರಲು ಕಾರಣ 'ಗಂಧದಗುಡಿ'
ವಿಷ್ಣುವರ್ಧನ್ ನಟನೆಯ 'ನಾಗರಹಾವು' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. 50 ವರ್ಷ ಕಳೆದರೂ ಕನ್ನಡ ಸಿನಿರಸಿಕರು ಈ ಸಿನಿಮಾ ಮರೆತಿಲ್ಲ. ವಿಷ್ಣುವರ್ಧನ್ ಹೀರೊ ಆಗಿ ದೊಡ್ಡ ಸಕ್ಸಸ್ ಕಂಡ ಸಿನಿಮಾ ಇದು. ಎನ್. ವೀರಸ್ವಾಮಿ ನಿರ್ಮಾಣದ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದರು.
ಡಾ. ರಾಜ್‌ಕುಮಾರ್ ಜೊತೆ 3 ಸಿನಿಮಾಗಳಲ್ಲಿ ಪುಟ್ಟಣ್ಣ ಕೆಲಸ ಮಾಡಿದ್ದರು. ಆದರೆ ದಿಢೀರನೆ 'ನಾಗರಹಾವು' ಚಿತ್ರದಲ್ಲಿ ಹೊಸ ನಟನಿಗೆ ಅವಕಾಶ ಕೊಟ್ಟಿದ್ದರು. ಸಂಪತ್‌ಕುಮಾರ್ ವಿಷ್ಣುವರ್ಧನ್ ಆಗಿ ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಲು ರಾಮಾಚಾರಿ ಪಾತ್ರ ಕಾರಣವಾಗಿತ್ತು. ತಾರಾಸು ಅವರ 3 ಕಾದಂಬರಿಗಳನ್ನು ಸೇರಿಸಿ ಚಿತ್ರಕ್ಕೆ ಕಥೆ ಸಿದ್ಧಪಡಿಸಲಾಗಿತ್ತು. ಚಿತ್ರದುರ್ಗದ ಕೋಟೆಯಲ್ಲಿ ಚಿತ್ರೀಕರಣ ನಡೆದಿತ್ತು. ಆ ಚಿತ್ರದಲ್ಲಿ ಪುಟ್ಟಣ್ಣ ಸಾಕಷ್ಟು ಪ್ರಯೋಗ ಮಾಡಿ ಗೆದ್ದಿದ್ದರು. ಇದೇ ಚಿತ್ರದ ಮೂಲಕ ಅಂಬರೀಶ್ ಕೂಡ ಚಿತ್ರರಂಗಕ್ಕೆ ಪರಿಚಿತರಾಗಿದ್ದರು.

ಸರಿಯಾಗಿ ಗಮನಿಸಿದರೆ 'ನಾಗರಹಾವು' ಬಳಿಕ ಪುಟ್ಟಣ್ಣ ಹಾಗೂ ವಿಷ್ಣು ಒಟ್ಟಿಗೆ ಯಾವುದೇ ಚಿತ್ರದಲ್ಲಿ ಕೆಲಸ ಮಾಡಲಿಲ್ಲ. ಅಚ್ಚರಿ ಎನಿಸಿದರೂ ಇದು ನಿಜ. ಅದಕ್ಕೆ ಕಾರಣ 'ಗಂಧದಗುಡಿ' ಎಂದು ರಮಣ ಕಣಗಾಲ್ ಹೇಳಿದ್ದಾರೆ. ಪುಟ್ಟಣ್ಣ ಸೋದರ ಸಂಬಂಧಿ ಆಗಿದ್ದ ಅವರು ಸಹಾಯಕ ನಿರ್ದೇಶಕರಾಗಿ ಚಿತ್ರರಂಗದಲ್ಲಿ ದುಡಿದವರು. ಚಿತ್ರಬ್ರಹ್ಮನ ಗರಡಿಯಲ್ಲಿ ಪಳಗಿದವರು. 'ಸಾಕ್ಷಾತ್ಕಾರ' ಚಿತ್ರದಿಂದ 'ಮಸಣದ ಹೂವು'ವರೆಗೆ ಪುಟ್ಟಣ್ಣ ನಿರ್ದೇಶಿಸಿದ ಎಲ್ಲಾ ಸಿನಿಮಾಗಳಲ್ಲಿ ರಮಣ ಕಣಗಾಲ್ ಕೆಲಸ ಮಾಡಿದ್ದರು. Beyond Limits ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿ ತಮ್ಮ ಸಿನಿಜರ್ನಿ ಮೆಲುಕು ಹಾಕಿದ್ದಾರೆ.
ಅದಾಗಲೇ ಹೀರೊ ಆಗಿ ಚಿತ್ರರಂಗ ಪ್ರವೇಶಿಸಿದ್ದ ವಿಷ್ಣುವರ್ಧನ್ 'ಗಂಧದಗುಡಿ' ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದರು. ತನ್ನನ್ನು ಒಂದು ಮಾತು ಕೇಳದೇ ವಿಲನ್ ಪಾತ್ರ ಮಾಡಿದ ಎನ್ನುವ ಮುನಿಸು ಪುಟ್ಟಣ್ಣ ಅವರಿಗಿತ್ತು. ಅದೇ ಕಾರಣಕ್ಕೆ ಮುಂದೆ ಆತನೊಟ್ಟಿಗೆ ಸಿನಿಮಾ ಮಾಡಲಿಲ್ಲ ಎಂದು ರಮಣ ಕಣಗಾಲ್ ಹೇಳಿದ್ದಾರೆ. "ನಾಗರಹಾವು ಚಿತ್ರ ಸೂಪರ್ ಹಿಟ್ ಆಗಿತ್ತು. ಹೊಸ ಕಲಾವಿದ ಆ ಚಿತ್ರದಿಂದ ಸ್ಟಾರ್ ಆಗಿಬಿಟ್ಟ. ಚಾಮಯ್ಯ ಮೇಷ್ಟ್ರು ನೀನು ಹಾವೋ, ಹಲ್ಲಿನೋ ಅಂದಾಗ ಬರೀ ಹಾವಲ್ಲ ಮೇಷ್ಟ್ರೆ ನಾಗರಹಾವು ಅಂತಾನೆ. ಅಷ್ಟು ಬಿಲ್ಡಪ್ ಕೊಟ್ಟು ಸಿನ್ಮಾ ಮಾಡಿದ್ರು. ನಾಗರಹಾವು ಚಿತ್ರದಲ್ಲಿ ಹೀರೊ ಆಗಿದ್ದವರು 'ಗಂಧದಗುಡಿ' ಚಿತ್ರದಲ್ಲಿ ವಿಲನ್ ಪಾತ್ರ ಯಾಕೆ ಮಾಡಬೇಕಿತ್ತು. ತಪ್ಪು ಅದು" ಎಂದಿದ್ದಾರೆ.

ವಿಷ್ಣುವರ್ಧನ್‌ಗೆ ಜನಪ್ರಿಯತೆ ಇದೆ ಎಂದು 'ಗಂಧದಗುಡಿ' ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ರು. ವಿಷ್ಣು ಆಗ ಬೇರೆ ಕಮರ್ಷಿಯಲ್ ಸಿನಿಮಾ ಮಾಡಿರಲಿಲ್ಲ. ಬಂದೂಕು, ಬಾಂಬ್ ಬಗ್ಗೆ ಗೊತ್ತಿರಲಿಲ್ಲ. ಆಪರೇಟ್ ಮಾಡೊಕು ಬರ್ತಿರ್ಲಿಲ್ಲ. ಆದರೆ 'ಗಂಧದಗುಡಿ' ಚಿತ್ರದಲ್ಲಿ ನಟಿಸುವಾಗ ಪುಟ್ಟಣ್ಣ ಬಳಿ ವಿಷ್ಣು ಒಂದು ಮಾತು ಕೇಳಲಿಲ್ಲ ಎಂದು ರಮಣ ಕಣಗಾಲ್ ಹೇಳಿದ್ದಾರೆ. ಅಣ್ಣಾವ್ರ ಜೊತೆ 3 ಸಿನಿಮಾ ಮಾಡಿ ಬಳಿಕ ಬೇರೆಯವರ ಜೊತೆ ಪುಟ್ಟಣ್ಣ ಸಿನಿಮಾ ಮಾಡಿದ್ರು. ಅದಕ್ಕೆ ಕಾರಣ ಕಥೆ ಬೇರೆ, ಹಾಗಾಗಿ ಕಲಾವಿದರನ್ನು ಬದಲಿಸಿದ್ದರು ಎಂದು ವಿವರಿಸಿದ್ದಾರೆ.
'ಗಂಧದಗುಡಿ' ಚಿತ್ರದಲ್ಲಿ ನಟಿಸುವ ಬಗ್ಗೆ ಪುಟ್ಟಣ್ಣ ಬಳಿ ವಿಷ್ಣುವರ್ಧನ್ ಅನುಮತಿ ಕೇಳಬಹುದಿತ್ತು. ಮಾಡಬೇಕೋ, ಬೇಡ್ವೋ ಅಂತ. ಆದ್ರೆ ಕೇಳಲಿಲ್ಲ. ರಾಜ್‌ಕುಮಾರ್ ಸಿನ್ಮಾ ಎನ್ನುವ ಆಸೆಗೆ ಹೋಗಿರಬಹುದು. ಅದೇ ಕಾರಣಕ್ಕೆ ಪುಟ್ಟಣ್ಣ ಮತ್ತೆ ಅವಕಾಶ ಕೊಡಲಿಲ್ಲ. ಬಳಿಕ ವಿಷ್ಣು ಬಂದ್ರು. ಕೇಳಿದ್ರು.. ಬೇರೆ ಸಿನಿಮಾಗಳಲ್ಲಿ ನಟಿಸುವಂತೆ ಹೇಳಿದ್ರು.. ಅಂಬರೀಷ್ ಜೊತೆ ನಟಿಸು ಅಂದ್ರು. ನನಗೆ ಸೋಲೊ ಹೀರೊ ಸಿನ್ಮಾ ಬೇಕು ಅಂತ ವಿಷ್ಣು ಕೇಳಿದ್ರು. ಕೊನೆಗೆ ವಿಷ್ಣುಗಾಗಿ ಸಿನಿಮಾ ಮಾಡೋಣ ಅಂದುಕೊಂಡ್ರು.. ಆದರೆ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದ್ರು. ಬಳಿಕ ಸಾಧ್ಯವಾಗಲಿಲ್ಲ ಎಂದು ರಮಣ ಕಣಗಾಲ್ ತಿಳಿಸಿದ್ದಾರೆ.


Click it and Unblock the Notifications