'ನಾಗರಹಾವು' ಬಳಿಕ ಪುಟ್ಟಣ್ಣ- ವಿಷ್ಣು ಯಾಕೆ ಸಿನಿಮಾ ಮಾಡ್ಲಿಲ್ಲ? ಆ ಕಾದಂಬರಿ ಸಿನಿಮಾ ನಿಂತಿದ್ದೇಕೆ?
ಭಾರತೀಯ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಅಸಂಖ್ಯಾತ ಅಭಿಮಾನಿಗಳ ಆರಾಧ್ಯ ದೈವ ಸಾಹಸಸಿಂಹ ವಿಷ್ಣುವರ್ಧನ್. 'ನಾಗರಹಾವು' ಚಿತ್ರದಲ್ಲಿ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. 'ವಂಶವೃಕ್ಷ' ಚಿತ್ರದಲ್ಲಿ ದಾದಾ ನಟಿಸಿದರೂ 'ನಾಗರಹಾವು' ಅವರ ಸಿನಿಜರ್ನಿಗೆ ಭದ್ರ ಬುನಾದಿಯಾಯಿತು.
ಬರೀ ವಿಷ್ಣುವರ್ಧನ್ ಅಲ್ಲ, ಅದೇ ಚಿತ್ರದಲ್ಲಿ ನಟಿಸಿದ್ದ ಅಂಬರೀಶ್ ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದರು. 1972ರಲ್ಲಿ ಬಂದ 'ನಾಗರಹಾವು' ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಟಿ. ಆರ್ ಸುಬ್ಬಾರಾವ್ ಬರೆದ 3 ನಾಗರಹಾವು, ಒಂದು ಗಂಡು ಎರಡು ಹೆಣ್ಣು ಹಾಗೂ ಸರ್ಪ ಮತ್ಸರ ಕಾದಂಬರಿಗಳನ್ನು ಸೇರಿಸಿ ಚಿತ್ರ ಕಟ್ಟಿಕೊಟ್ಟಿದ್ದರು. ಪುಟ್ಟಣ್ಣ ನಿರ್ದೇಶನ, ವಿಜಯ ಭಾಸ್ಕರ್ ಸಂಗೀತ, ವಿಷ್ಣು ನಟನೆ ಮರೆಯೋಕೆ ಸಾಧ್ಯವಿಲ್ಲ.

ವಿಷ್ಣುವರ್ಧನ್‌ಗೆ ದೊಡ್ಡ ಬ್ರೇಕ್ ಕೊಟ್ಟ ಗುರುಗಳು ಪುಟ್ಟಣ್ಣ ಕಣಗಾಲ್. ಆ ಬಳಿಕ ಕೂಡ ಹಲವು ಹಿಟ್ ಸಿನಿಮಾಗಳನ್ನು ಅವರು ನಿರ್ದೇಶಿಸಿದರು. ಕಾದಂಬರಿಗಳನ್ನು ತೆರೆಗೆ ತಂದರು. ಆದರೆ ಮತ್ತೆ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಯಾವುದೇ ಸಿನಿಮಾ ಮಾಡಲಿಲ್ಲ. ಸಾಮಾನ್ಯವಾಗಿ ಸಕ್ಸಸ್‌ಫುಲ್ ಕಾಂಬಿನೇಷನ್‌ನಲ್ಲಿ ಸಿನಿಮಾಗಳು ಬರುತ್ತವೆ. ನಿರ್ಮಾಪಕರು ಅಂತಹ ಸಿನಿಮಾ ಮಾಡಲು ಬಯಸುತ್ತಾರೆ. ನಟ- ನಿರ್ದೇಶಕ ಕೂಡ ಅದಕ್ಕೆ ಸಿದ್ಧರಿರುತ್ತಾರೆ.
ಪುಟ್ಟಣ್ಣ ಕೂಡ ಸಾಕಷ್ಟು ಬಾರಿ ವಿಷ್ಣು ಜೊತೆ ಮತ್ತೆ ಸಿನಿಮಾ ಮಾಡಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಖುದ್ದು ಈ ಬಗ್ಗೆ ಪುಟ್ಟಣ್ಣ ಬಳಿ ದಾದಾ ಈ ಬಗ್ಗೆ ಕೇಳಿದ್ದರಂತೆ. ಗುರುಗಳೇ ಯಾಕೆ ನನ್ನ ಜೊತೆ ಮತ್ತೆ ನೀವು ಸಿನಿಮಾ ಮಾಡುತ್ತಿಲ್ಲ ಎಂದು ಕೇಳಿದ್ದರು. ಅದಕ್ಕೆ ಪುಟ್ಟಣ್ಣ ನಿನ್ನ ಇಮೇಜ್ ಈಗ ಬೇರೆ ಆಗಿದೆ. ಬರೀ ನಿನಗಾಗಿ ಅಲ್ಲ, ನಿನ್ನ ಅಭಿಮಾನಿಗಳು ಮೆಚ್ಚುವಂತಹ ಸಿನಿಮಾ ಮಾಡಬೇಕು. ಆದರೆ ಅಂತಹ ಕಥೆಗಳು ಸಿಗುತ್ತಿಲ್ಲ. ನಾನು ಮಾಡುವುದು ಕಾದಂಬರಿ ಆಧರಿತ ಸಿನಿಮಾಗಳು ಎಂದು ಹೇಳಿದ್ದರಂತೆ.
ನಿನ್ನ ಅಭಿಮಾನಿಗಳಿಗೂ ಇಷ್ಟವಾಗುವಂತ ಕಥೆ, ನಾನು ಮಾಡುವಂತಹ ಒಂದು ಕಾದಂಬರಿ ಆಧರಿತ ಸಿನಿಮಾ ಇದೆ. ಅದು 'ಚಿಕವೀರ ರಾಜೇಂದ್ರ'. ಅದು ನಿನಗೆ ಹೊಂದಿಕೆ ಆಗುತ್ತದೆ, ಖಂಡಿತ ಮಾಡೋಣ ಎಂದಿದ್ದರಂತೆ. ಈ ವಿಚಾರವನ್ನು ಹಿರಿಯ ಪತ್ರಕರ್ತ ಎನ್.ಎಸ್ ಶ್ರೀಧರ್ ಮೂರ್ತಿ ಟೋಟಕ್ ಕನ್ನಡ ಮೀಡಿಯ ಯೂಟ್ಯೂಬ್ ವಾಹಿನಿಯಲ್ಲಿ ಬಿಚ್ಚಿಟ್ಟಿದ್ದರು. ಬಳಿಕ ಬೇರೆ ಬೇರೆ ಸಿನಿಮಾಗಳಲ್ಲಿ ಇಬ್ಬರು ಬ್ಯುಸಿಯಾದರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬರೆದ 'ಚಿಕವೀರ ರಾಜೇಂದ್ರ' ಕಾದಂಬರಿ ಮಾತ್ರ ಸಿನಿಮಾ ಆಗಲೇಯಿಲ್ಲ.

ಆಂಗ್ಲರ ವಿರುದ್ಧ ಹೋರಾಡಿದ ವೀರ ಈ ಚಿಕವೀರ ರಾಜೇಂದ್ರ. ಅವರ ವಿರುದ್ಧ ಸೆಣಸಿದ ಕೊಡಗಿನ ಕೊನೆಯ ರಾಜ ಈತ. ವಿಷ್ಣುವರ್ಧನ್ ಐತಿಹಾಸಿಕ ಪಾತ್ರಗಳಲ್ಲಿ ನಟಿಸಿದ್ದು ಕಮ್ಮಿ. ಆಗೊಮ್ಮೆ ಈಗೊಮ್ಮೆ ಅಂತಹ ಅವಕಾಶ ಸಿಕ್ಕಾಗ ಸೊಗಸಾಗಿ ನಟಿಸಿದ್ದರು. ಪುಟ್ಟಣ್ಣ ನಿರ್ದೇಶನದ ಚಿಕವೀರ ರಾಜೇಂದ್ರ ಆಗಿ ದಾದಾ ನಟಿಸಿದ್ದರೆ ಅದ್ಭುತ ಸಿನಿಮಾ ಆಗುತ್ತಿತ್ತು.
ಅಂದಹಾಗೆ ಪುಟ್ಟಣ್ಣ ಕಣಗಾಲ್ ತಮ್ಮ ಕೊನೆಯ ದಿನಗಳಲ್ಲಿ ಕೂಡ 'ಚಿಕವೀರ ರಾಜೇಂದ್ರ' ಕಾದಂಬರಿಯನ್ನು ಸಿನಿಮಾ ಮಾಡಲು ಆಸೆಪಟ್ಟಿದ್ದರು. ಪಾತ್ರಕ್ಕಾಗಿ ತಯಾರಿ ನಡೆಸುವಂತೆ ಶ್ರೀನಿವಾಸ್ ಮೂರ್ತಿಯವರಿಗೆ ಹೇಳಿದ್ದರಂತೆ. ಆದರೆ ಕೊನೆಗೂ ಆ ಸಿನಿಮಾ ಬರಲೇಯಿಲ್ಲ. ಖುದ್ದು ಶ್ರೀನಿವಾಸ್ ಮೂರ್ತಿ ಈ ವಿಚಾರವನ್ನು ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದರು.


Click it and Unblock the Notifications











