ಚಿರತೆ,ಕಾಡು,ನದಿ,ಆ ಕಾಲಕ್ಕೆ ಕುತೂಹಲ ಕೆರಳಿಸಿದ್ದ 'ರುದ್ರಪ್ರಯಾಗ' ಚಿತ್ರವನ್ನು ನಿಲ್ಲಿಸಿದ್ದೇಕೆ ರಿಷಬ್ ಶೆಟ್ಟಿ...?
ಸದಾ ಹೊಸತನವನ್ನೇ ಪ್ರಯತ್ನಿಸುವ ರಿಷಬ್ ಶೆಟ್ಟಿ, ಚುರುಕುತನ, ವ್ಯಾವಹಾರಿಕ ಚತುರತೆ ಹೊಂದಿರುವ ಪ್ರತಿಭೆಯೂ ಹೌದು. ಕಲಾತ್ಮಕ ಚೌಕಟ್ಟಿನ ಸರ್ಕಾರಿ ಶಾಲೆಯಂತಾ ಸಿನಿಮಾವನ್ನೂ ಜನ ಮುಗಿಬಿದ್ದು ನೋಡುವಂತೆ ಮಾಡಿ ಗೆಲ್ಲಿಸಿದ ಹೆಗ್ಗಳಿಕೆಯನ್ನೂ ಹೊಂದಿರುವ ರಿಷಬ್ ಶೆಟ್ಟಿ, ಆರೇಳು ಕಿರುಚಿತ್ರಗಳನ್ನು ಜೋಡಿಸಿಟ್ಟು ಕಥಾ ಸಂಗಮವಾಗಿಸಿ ಜನ ಮನ ಗೆದ್ದವರು.
ಲಾಕ್ ಡೌನ್ ಸಂದರ್ಭದಲ್ಲಿ ಇಪ್ಪತ್ನಾಲ್ಕು ಜನರನ್ನು ಒಂದು ಕಡೆ ಗುಡ್ಡೆ ಹಾಕಿಕೊಂಡು ʻಹೀರೋʼ ಸಿನಿಮಾ ಮಾಡಿ ಸೈ ಅನಿಸಿಕೊಂಡ ಈ ಅಸಾಧಾರಣ ಬುದ್ಧಿಜೀವಿ ಈಗ ಕೇವಲ ನ್ಯಾಷನಲ್ ಸ್ಟಾರ್ ಮಾತ್ರ ಅಲ್ಲ, ನ್ಯಾಷನಲ್ ಡೈರೆಕ್ಟರ್ ಕೂಡ ಹೌದು. ಇಂಥ ರಿಷಬ್ ಶೆಟ್ಟಿ ''ಕಾಂತಾರ'' ದಂತಹ ಅದ್ಭುತ ಸೃಷ್ಟಿಸುವ ಮೊದಲು, ಇವತ್ತಿಗೆ ಸರಿಯಾಗಿ ಐದು ವರ್ಷದ ಹಿಂದೆ ರುದ್ರಪ್ರಯಾಗ ಎಂಬ ಚಿತ್ರವೊಂದನ್ನು ಘೋಷಿಸಿದ್ದರು. ಟೈಟಲ್ ಲಾಂಚ್ ಮಾಡಿ ಪೋಸ್ಟರನ್ನು ಕೂಡ ರಿಷಬ್ ಶೆಟ್ಟಿ ಆ ಕಾಲಕ್ಕೆ ರಿಲೀಸ್ ಮಾಡಿದ್ದರು ಎನ್ನುವುದು ಅನೇಕರಿಗೆ ಈಗ ನೆನಪಿಲ್ಲ.

ಇನ್ನೂ 'ರುದ್ರಪ್ರಯಾಗ' ಭಾರತದ ಉತ್ತರಾಖಂಡ ರಾಜ್ಯದ ಒಂದು ಜಿಲ್ಲಾ ಕೇಂದ್ರ. ಅಲಕನಂದಾ ಹಾಗೂ ಮಂದಾಕಿನಿ ನದಿಗಳ ಸಂಗಮಸ್ಥಾನ. ಇಷ್ಟೇ ಅಲ್ಲ ಹಿಮಾಲಯದ ಪವಿತ್ರ ನದಿಗಳ 5 ಸಂಗಮಕ್ಷೇತ್ರಗಳ ಪೈಕಿ ರುದ್ರಪ್ರಯಾಗ ಕೂಡ ಒಂದು. ಈ ಎಲ್ಲ ಕಾರಣಗಳಿಂದ ರಿಷಬ್ ಶೆಟ್ಟಿ ರುದ್ರಪ್ರಯಾಗ ಚಿತ್ರವನ್ನು ಅನೌನ್ಸ್ ಮಾಡಿದ್ದೇ ತಡ ಎಲ್ಲರಲ್ಲಿಯೂ ಕುತೂಹಲ ಗರಿಗೇದರಿತ್ತು. ಇದು ಸಾಲದು ಎಂಬಂತೆ ಪೋಸ್ಟರ್ ನಲ್ಲಿ ಚಿರತೆ, ಕಾಡು, ನದಿಯ ಚಿತ್ರಣದ ಜೊತೆ ರಾಣಿ ಚೆನ್ನಮ್ಮನ ಪ್ರತಿಮೆ, ವಿಧಾನ ಸೌಧದ ಚಿತ್ರವನ್ನೆಲ್ಲವೂ ಸೇರಿಸಿ ರಿಷಬ್ ಪ್ರೇಕ್ಷಕರ ತಲೆಗೆ ಹುಳ ಬಿಡುವ ಪ್ರಯತ್ನವನ್ನು ಮಾಡಿದ್ದರು.
ಇನ್ನೂ ರಿಷಬ್ ಶೆಟ್ಟಿ ಇಲ್ಲಿಯವರೆಗೂ ಮಾಡಿರುವ ಸಾಕಷ್ಟು ಸಿನಿಮಾಗಳೆಲ್ಲವೂ ಡಿಫರೆಂಟ್ ಜಾನರ್ ನದ್ದು. ಹೊಸ ಹೊಸ ಪ್ರಯತ್ನಗಳದ್ದೇ. ಈ ಎಲ್ಲ ಕಾರಣಗಳಿಂದ ರುದ್ರಪ್ರಯಾಗ ಭಾರೀ ಭಯಂಕರ ಸದ್ದು ಮಾಡುವ ಲಕ್ಷಣ ಆಗ ಕಂಡು ಬಂದಿದ್ದವು. ರುದ್ರಪ್ರಯಾಗ ಕುರಿತು ಹಲವು ಪ್ರಶ್ನೆ ಪ್ರೇಕ್ಷಕರ ವಲಯದಲ್ಲಿ ಗಿರಕಿ ಕೂಡ ಹೊಡೆಯುತ್ತಿದ್ದವು. ಆದರೆ, ಜಯಣ್ಣ - ಭೋಗೇಂದ್ರ ನಿರ್ಮಾಣದಲ್ಲಿ ಮೂಡಿ ಬರಬೇಕಿದ್ದ ಈ ಸಿನಿಮಾ, ಇನ್ನೇನು ಶುರುವಾಗಬೇಕು ಅನ್ನುವಷ್ಟರಲ್ಲಿ ಕೊರೊನಾ ವಕ್ಕರಿಸಿಕೊಂಡಿತು. ಹೀಗಾಗಿ ಚಿತ್ರವನ್ನು ಮುಂದೂಡಿದ ರಿಷಬ್ ಶೆಟ್ಟಿ, ಇದು ದೊಡ್ಡ ಬಜೆಟ್‌ನ ಸಿನಿಮಾ. ದಟ್ಟ ಕಾಡಿನ ಒಳಗೆ ಮತ್ತು ಸುತ್ತಮುತ್ತ ಚಿತ್ರೀಕರಣ ಮಾಡಬೇಕಾದ್ದು ಜಾಸ್ತಿ ಇದೆ. ಹಾಗಾಗಿ ತಮ್ಮ ಜೊತೆ ದೊಡ್ಡ ತಂಡವೇ ಇರಬೇಕಾಗುತ್ತದೆ. ಅಂಥ ಸ್ಥಳಗಳಲ್ಲಿ ಶೂಟಿಂಗ್ ಮಾಡಲು ತಕ್ಷಣಕ್ಕೆ ಅನುಮತಿ ಸಿಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್ ನಟಿಸಬೇಕು. ಅವರ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕಾದ್ದು ನಮ್ಮ ಕರ್ತವ್ಯ. ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ನೋಡಿಕೊಂಡು ಶೂಟಿಂಗ್ ಶುರುಮಾಡುವ ಬಗ್ಗೆ ಆಲೋಚಿಸುತ್ತೇವೆ ಎಂದು ಹೇಳಿದ್ದರು.
ಆದರೆ ಆ ನಂತರ ರಿಷಬ್ ರುದ್ರಪ್ರಯಾಗ ಕುರಿತು ಆಲೋಚನೆಯನ್ನೇ ಮಾಡಲಿಲ್ಲ ಎಂದು ಅನ್ಸುತ್ತೆ. ಇದಕ್ಕೆ ಪೂರಕವಾಗಿ ರಿಷಬ್ ಆ ನಂತರ ನಾಯಕನಾಗಿ ಹೀರೋ ಸಿನಿಮಾ ಮಾಡಿದರು. ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ಕಾಣಿಸಿಕೊಂಡರು. ಕಾಂತಾರ ಮೂಲಕ ಇತಿಹಾಸವನ್ನೂ ಸೃಷ್ಟಿಸಿದರು. ಸದ್ಯಕ್ಕೆ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಪ್ರಿಕ್ವೆಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮುಂದೊಂದು ದಿನ ರಿಷಬ್ ಶೆಟ್ಟಿ ''ರುದ್ರಪ್ರಯಾಗ'' ಚಿತ್ರಕ್ಕೆ ಮರುಜೀವ ನೀಡ್ತಾರಾ ..? ಉತ್ತರ ಅವರೇ ಕೊಡಬೇಕು. Any Ways ಹ್ಯಾಪಿ ಬರ್ತ್‌ಡೇ ಶೆಟ್ರೇ...


Click it and Unblock the Notifications











